Saturday, August 5, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೫ *ಜಲಮಧ್ಯೇ ಡುಬುಕ್ ಡುಬುಕ್*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೫


*ಜಲಮಧ್ಯೇ ಡುಬುಕ್ ಡುಬುಕ್*


ಭೋಜರಾಜ ಪಂಡಿತರನ್ನು ಗೌರವಾದರಗಳಿಂದ ಕಾಣುತ್ತಾನೆ ಎಂಬುದನ್ನು ತಿಳಿದ ನಾಲ್ವರು ಪಂಡಿತಂಮನ್ಯರು (ತಮ್ಮನ್ನು ತಾವೇ ಪಂಡಿತರೆಂದು ತಿಳಿದುಕೊಂಡವರು) ಧಾರಾನಗರಿಗೆ ಹೊರಟರು. ರಾಜನನ್ನು ಸುಪ್ರೀತಗೊಳಿಸಲು ಪದ್ಯವೊಂದನ್ನು ಬರೆಯಬೇಕಾಗಿತ್ತು. ದಾರಿಯುದ್ದಕ್ಕೂ ಯೋಚಿಸಿದರೂ ಯಾವುದೇ ಕವಿತಾಕಾಮಿನಿ ಅವರಿಗೆ ಒಲಿಯಲಿಲ್ಲ. ಪ್ರಯಾಣದಿಂದ ದಣಿದ ಅವರು ವಿಶ್ರಾಂತಿಗಾಗಿ ಸರೋವರವೊಂದರ ತೀರದಲ್ಲಿ ಮರದ ನೆರಳನ್ನಾಶ್ರಯಿಸಿದರು. ಅದು ಜಂಬೂಫಲದ ಮರವಾಗಿತ್ತು. ಮರದಲ್ಲಿ ಕಳಿತ ಹಣ್ಣುಗಳನ್ನು ನೋಡಿದ ಅವರಲ್ಲೊಬ್ಬ ಶ್ಲೋಕದ ಒಂದು ಪಾದವನ್ನು ರಚಿಸಿದ –’ಜಂಬೂಫಲಾನಿ ಪಕ್ವಾನಿ’. ಅವು ಸರೋವರದ ನೀರಿನಲ್ಲಿ ಬೀಳುತ್ತಿರುವುದನ್ನು ನೋಡಿದ ಇನ್ನೊಬ್ಬ ಎಂದ ಪತಂತಿ ವಿಮಲೇ ಜಲೇ’ ಮತ್ತೊಬ್ಬ ಸರೋವರದಲ್ಲಿ ಇಣುಕಿ ಹಾಕಿದ. ಅದರಲ್ಲಿರುವ ಮೀನುಗಳು ಹಣ್ಣುಗಳನ್ನು ತಿನ್ನದೇ ದೂರ ಓಡಿ ಹೋಗುತ್ತಿದ್ದುದನ್ನು ನೋಡಿ ’ತಾನಿ ಮತ್ಸ್ಯಾ ನ ಖಾದಂತಿ’ ಎಂದ. ನಾಲ್ಕನೆಯವನು ಕೊನೆಯ ಚರಣವನ್ನು ಕಟ್ಟಲು ಕಷ್ಟಪಟ್ಟ. ಹಣ್ಣುಗಳು ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಕಂಡು ಹೇಳಿದ – ’ಜಲಮಧ್ಯೇ ಡುಬುಕ್ ಡುಬುಕ್’. ನಾಲ್ವರಿಗೂ ಸಮಾಧಾನವಾಯಿತು. ಎಲ್ಲರೂ ಸೇರಿ ರಚಿಸಿದ ನಾಲ್ಕು ಸಾಲುಗಳನ್ನು ರಾಜನ ಮುಂದೆ ವಾಚಿಸಿದರು.

ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಲಮಧ್ಯೇ ಡುಬುಕ್ ಡುಬುಕ್ ||


ಸ್ವತ: ಕವಿಯಾಗಿದ್ದ ಭೋಜರಾಜ ಪ್ರತಿಭಾಶೂನ್ಯವಾದ ಈ ಕವಿತೆಯನ್ನು ಕೇಳಿ ನಾಲ್ವರಿಗೂ ಛೀಮಾರಿ ಹಾಕಿ ಕಳಿಸಿದ. ಹಣದಾಸೆಯಿಂದ ಬಂದಿದ್ದ ಅವರು ಕಂದಿದ ಮುಖವನ್ನು ಹೊತ್ತು ಹೊರಬಿದ್ದರು. ದಾರಿಯಲ್ಲಿ ಭೇಟಿಯಾದ ಕಾಳಿದಾಸ ಏನಾಯ್ತೆಂದು ಕೇಳಿದ. ಅವರು ಕಾಳಿದಾಸನಿಗೆ ಎಲ್ಲವನ್ನೂ ಹೇಳಿದರು. ಅವನು ಅವರ ಪದ್ಯವನ್ನು ನೋಡಿ ನಸುನಕ್ಕು ಕೊನೆಯ ಚರಣವೊಂದನ್ನು ಬದಲಿಸಿದ.


ಜಂಬೂಫಲಾನಿ ಪಕ್ವಾನಿ
ಪತಂತಿ ವಿಮಲೇ ಜಲೇ |
ತಾನಿ ಮತ್ಸ್ಯಾ ನ ಖಾದಂತಿ
ಜಾಲಗೋಲಕಶಂಕಯಾ ||


ಪಕ್ವವಾದ ಜಂಬೂ ಫಲಗಳು ನೀರಿನಲ್ಲಿ ಬೀಳುತ್ತಿವೆ. ಆದರೆ ಅವು ತಮ್ಮನ್ನು ಹಿಡಿಯಲು ಹಾಕಿರುವ ಬಲೆಯ ಚೆಂಡುಗಳೋ (ಬಲೆ ಮುಳುಗದಿರಲೆಂದು ಕಟ್ಟಿರುವ) ಎಂಬ ಸಂಶಯದಿಂದ ಮೀನುಗಳು ಅವನ್ನು ತಿನ್ನುತ್ತಿಲ್ಲ.


ಆ ಕೊನೆಯ ಪಾದ ಕವಿತೆಯ ಭಾಗ್ಯವನ್ನೇ ಬದಲಿಸಿಬಿಟ್ಟಿತು. ಅಪೂರ್ವವಾದ ಸೌಂದರ್ಯ ಆ ಕವಿತೆಗೊದಗಿತು. ಪಂಡಿತರು ಮತ್ತೆ ಒಳಹೋಗಿ ರಾಜನ ಮುಂದೆ ಬದಲಾವಣೆಯೊಂದಿಗೆ ವಾಚಿಸಿದರು. ಭೋಜನಿಗೆ ಇದು ಕಾಳಿದಾಸನ ಕೈವಾಡ ಎಂದು ಅರಿವಾದರೂ ಮುಗುಳ್ನಕ್ಕು ಆ ಪಂಡಿತಪುತ್ರರನ್ನು ಸತ್ಕರಿಸಿ ಕಳಿಸಿಕೊಟ್ಟ.

📝 *ಮಹಾಬಲ ಭಟ್, ಗೋವಾ*

#ಸಂಸ್ಕೃತ ಕಲಿಯಿರಿ, ಸಂಸ್ಕತಿ ತಿಳಿಯಿರಿ.

Friday, August 4, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಜೀವವನ್ನುಳಿಸಿದ ಕವಿತೆ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೪


*ಜೀವವನ್ನುಳಿಸಿದ ಕವಿತೆ......*


ಭರತಭೂಮಿಯ ಶಿಖರವಾದ ಕಾಶ್ಮೀರ ಸರಸ್ವತಿಯ ತವರೂರಾಗಿತ್ತು. ಹಾಗಾಗಿಯೇ ಆಚಾರ್ಯ ಶಂಕರರು ಸರಸ್ವತಿಯನ್ನು ಕಾಶ್ಮೀರಪುರವಾಸಿನಿ ಎಂದು ಸ್ತುತಿಸಿದ್ದಾರೆ. ಅಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದ ಬಿಲ್ಹಣನೆಂಬ ಕವಿ ಗುಜರಾತ ಪ್ರಾಂತದ ರಾಜನ ಕುವರಿಗೆ ಸಂಸ್ಕೃತ ಕಲಿಸುತ್ತಿದ್ದ. ಕ್ರಮೇಣ ಅವನು ರಾಜಕುಮಾರಿಯ ಪ್ರೇಮಪಾಶಕ್ಕೆ ಸಿಲುಕಿದ. ಇದನ್ನು ತಿಳಿದ ರಾಜ ತನ್ನ ಪ್ರತಿಷ್ಠೆಗೆ ಕುಂದೆಂದು ಭಾವಿಸಿ ಬಿಲ್ಹಣನಿಗೆ ಮರಣದಂಡನೆಯನ್ನು ವಿಧಿಸಿದ. ವಧಸ್ಥಾನಕ್ಕೆ ಒಯ್ಯುವಾಗ ಬಿಲ್ಹಣನು ಸುಂದರವಾದ ವಿರಹಪದ್ಯಗಳನ್ನು ರಚಿಸಿ ಹಾಡತೊಡಗಿದ. ಈ ಪದ್ಯಗಳ ಸಂಗ್ರಹ ಮುಂದೆ ’ಚೋರ ಪಂಚಾಶಿಕಾ’ ಎಂದು ಪ್ರಸಿದ್ಧವಾಗಿದೆ. ಆಗಲೇ ಒಂದು ಪದ್ಯದ ಮೂಲಕ ರಾಜನಿಗೊಂದು ಸಂದೇಶವನ್ನು ಕಳಿಸಿದ.


ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ
ಭಿಕ್ಷುರ್ನಷ್ಟೋ ಭೀಮಸೇನೋಽಪಿ ನಷ್ಟಃ |
ಭುಕ್ಕುಂಡೋಽಹಂ ಭೂಪತಿಸ್ತ್ವಂ ಚ ರಾಜನ್
ಭಂಭಾವಲ್ಯಾಮಂತಕಃ ಸನ್ನಿವಿಷ್ಟಃ ||


ಭಟ್ಟಿ(ಕವಿ), ಭಾರವಿ(ಕವಿ), ಭಿಕ್ಷು(ಬುದ್ಧ), ಭೀಮಸೇನ ಇವರೆಲ್ಲ ಯಮನ ವಶರಾಗಿದ್ದಾರೆ. ಈಗ ಭುಕ್ಕುಂಡ(ಬಿಲ್ಹಣನ ಇನ್ನೊಂದು ಹೆಸರು)ನಾದ ನನ್ನವರೆಗೆ ಯಮ ತಲುಪಿದ್ದಾನೆ. ಭಕಾರದ ವರ್ಣಮಾಲೆಯನ್ನು ಪ್ರವೇಶಿಸಿದ ಯಮ ಭ, ಭಾ, ಭಿ, ಭೀ ಗಳನ್ನು ಮುಗಿಸಿ ’ಭು’ವನ್ನು ತಲುಪಿದ್ದಾನೆ. ನೀನು ಭೂಪತಿ. ಮುಂದಿನ ಸರದಿ ನಿನ್ನದು. ನನ್ನ ಮರಣ ತಡವಾದಷ್ಟು ನಿನ್ನ ಮರಣ ಮುಂದೂಡಲ್ಪಡುತ್ತದೆ. ಎಂಬುದು ಈ ಪದ್ಯದ ತಾತ್ಪರ್ಯ. ಅದನ್ನು ಅರಿತ ರಾಜ ಕವಿಯ ಚಾತುರ್ಯವನ್ನು ಮೆಚ್ಚಿ ಅವನಿಗೇ ತನ್ನ ಮಗಳನ್ನು ಧಾರೆಯೆರೆದು ಕೊಟ್ಟ.


📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Thursday, August 3, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಕ ಖ ಗ ಘ

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - 3

*ಕ ಖ ಗ ಘ*

ಒಮ್ಮೆ ಭೋಜರಾಜನ ಆಸ್ಥಾನಕ್ಕೊಬ್ಬ ಪಂಡಿತ ಆಗಮಿಸಿದ. ರಾಜನಿಂದ ಯಥೋಚಿತ ಸತ್ಕಾರ ಪಡೆದು ಪಂಡಿತರ ಮುಂದೆ ಸಮಸ್ಯಾಪೂರ್ತಿಯ ವಾಕ್ಯವನ್ನುಸುರಿದ. ’ಕಖಗಘ’ ಎಂಬುದನ್ನು ಕೊನೆಯ ಪಾದದ ಅಂತಿಮ ಭಾಗವನ್ನಾಗಿರಿಸಿಕೊಂಡು ಕವಿತೆಯೊಂದನ್ನು ರಚಿಸಬೇಕೆಂಬುದೇ ಅವನ ಪಂಥಾಹ್ವಾನವಾಗಿತ್ತು. ನವಮಣಿಗಳು ತಿಣುಕಾಡಿದರೂ ಮಾಡಲಾಗದೆ ತಲೆಯನ್ನು ಕೆಳಗೆ ಹಾಕಿದರು. ನವ ನವೋನ್ಮೇಷಶಾಲಿ ಪ್ರತಿಭೆಯ ಕಾಳಿದಾಸನೂ ಅಪ್ರತಿಭನಾದ. ಒಂದು ದಿನದ ಸಮಾಯಾವಕಾಶ ಕೇಳಿ ಹೊರಬಿದ್ದ.

ತಲೆಯನ್ನು ಕಖಗಘ ಹುಳು ಕೊರೆಯುತ್ತಿತ್ತು. ದಾರಿಯಲ್ಲಿ ಸಾಗುತ್ತಿರುವಾಗ ಮುಗ್ಧ ಬಾಲಿಕೆಯೊಬ್ಬಳನ್ನು ನೋಡಿ ಆಕರ್ಷಿತನಾದ. ಅವಳೊಂದಿಗೆ ಸಂಭಾಷಣೆಗಿಳಿದ. ಅವರ ಸಂಭಾಷಣೆ ಹೀಗಿತ್ತು....

ಕಾಳಿದಾಸ – ಕಾ ತ್ವಂ ಬಾಲೇ? (ಎಲೈ ಬಾಲೆಯೇ ನೀನಾರು?)

ಬಾಲೆ – ಕಾಂಚನಮಾಲಾ

ಕಾಳಿದಾಸ – ಕಸ್ಯಾಃ ಪುತ್ರೀ? (ಯಾವಳ ಮಗಳು?)

ಬಾಲೆ – ಕನಕಲತಾಯಾಃ | (ಕನಕಲತೆಯ ಮಗಳು.)

ಕಾಳಿದಾಸ – ಹಸ್ತೇ ಕಿಂ ತೇ? (ನಿನ್ನ ಕೈಯಲ್ಲೇನಿದೆ?)

ಬಾಲೆ – ತಾಲೀಪತ್ರಮ್ | (ತಾಳೆಯ ಗರಿಗಳು.)

ಕಾಳಿದಾಸ – ಕಾ ವಾ ರೇಖಾ? (ಏನು ಬರೆದಿದೆ ಅದರಲ್ಲಿ?)

ಬಾಲೆ – ಕ ಖ ಗ ಘ


ತಾನು ಯೋಚಿಸುತ್ತಿರುವುದೇ ಅವಳ ಬಾಯಿಂದ ಬಂದಾಗ ಸಾವಿರ ದೀಪಗಳು ಹೊತ್ತಿದಂತಾಯ್ತು ಕಾಳಿದಾಸನ ಮಿದುಳಲ್ಲಿ. ಅವನ ಕವನ ಸಿದ್ಧವಾಗಿ ಹೋಯ್ತು.

ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ |
ಹಸ್ತೇ ಕಿಂ ತೇ? ತಾಲೀಪತ್ರಂ
ಕಾ ವಾ ರೇಖಾ? ಕಖಗಘ ||


ಸರಳ ಸುಂದರ ಪದ್ಯಕ್ಕೆ ಬೇರೆ ಉದಾಹರಣೆ ಬೇಕೆ ?!

📝 *ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Wednesday, August 2, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು-ವಿದ್ಯಾಹೀನಾ ನ ಶೋಭಂತೇ…...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು

ಪ್ರಸಂಗ - ೨

ವಿದ್ಯಾಹೀನಾ ನ ಶೋಭಂತೇ…...


ಆಂಧ್ರಪ್ರದೇಶದ ಒಂದು ಅಗ್ರಹಾರ. ಅಲ್ಲಿ ದೇವಶರ್ಮಾ ಎಂಬ ಪಂಡಿತನಿದ್ದ. ಅವನಿಗೊಬ್ಬ ಮಗ ಜನಿಸಿದ. ಅವನ ಹೆಸರು ಮಲ್ಲೀನಾಥ. ಆಲಸಿಯಾಗಿದ್ದ ಮಗನನ್ನು ವಿದ್ಯಾಸಂಪನ್ನನನ್ನಾಗಿ ಮಾಡುವ ತಂದೆಯ ಪ್ರಯತ್ನ ಫಲಿಸದೆ ಮಗ ನಿರಕ್ಷರಿಯಾಗಿಯೇ ಉಳಿದ. ಮದುವೆಯ ವಯಸ್ಸು ಬಂದಾಗ ಮಲ್ಲೀನಾಥನಿಗೆ ಮದುವೆಯೂ ಆಯಿತು. ಅವನ ಪತ್ನಿ ಹಾಗೂ ಅವಳ ಅಣ್ಣತಮ್ಮಂದಿರೆಲ್ಲ ವಿದ್ಯಾವಂತರಾಗಿದ್ದರು. ಅವರೆಲ್ಲ ಇವನನ್ನು ಮೂದಲಿಸುತ್ತಿದ್ದರು. ಒಮ್ಮೆ ಮಲ್ಲೀನಾಥ ಮಾವನ ಮನೆಗೆ ಹೋದಾಗ ಅವನ ಬಾವ ಮೈದುನರು ಅವನ ಅಜ್ಞಾನವನ್ನು ನೋಡಿ ಗೇಲಿ ಮಾಡಿದರು. ಅದರಿಂದ ಮಲ್ಲೀನಾಥನಿಗಿಂತ ಅವನ ಮಡದಿಗೆ ಹೆಚ್ಚು ಅವಮಾನವಾಯಿತು. ಅವನನ್ನು ಕರೆದುಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಮಲ್ಲೀನಾಥ ಪಲಾಶ(ಮುತ್ತುಗ) ವೃಕ್ಷವೊಂದರಲ್ಲಿ ಅರಳಿದ ಸುಂದರವಾದ ಹೂವಗಳನ್ನು ಪತ್ನಿಗೆ ತೋರಿಸಿದ. ಆಗ ಪತ್ನಿಯು ಚಾಣಕ್ಯನ ಸೂಕ್ತಿಯೊಂದನ್ನು ಅವನಿಗೆ ಹೇಳಿದಳು.

ರೂಪಯೌವನಸಂಪನ್ನಾ
ವಿಶಾಲಕುಲಸಂಭವಾಃ |
ವಿದ್ಯಾಹೀನಾ ನ ಶೋಭಂತೇ
ನಿರ್ಗಂಧಾ ಇವ ಕಿಂಶುಕಾಃ||

ಶ್ರೇಷ್ಠವಾದ ಕುಲದಲ್ಲಿ ಹುಟ್ಟಿ ರೂಪ, ಯೌವ್ವನಗಳಿಂದ ಕೂಡಿದ್ದರೂ ವಿದ್ಯೆಯಿಲ್ಲದವರು ಸುಗಂಧವಿಲ್ಲದ ಸುಂದರ ಪಾಲಾಶಕುಸುಮದಂತೆ ಜೀವನವನ್ನು ವ್ಯರ್ಥವಾಗಿ ಕಳೆಯುವರು.

ವಿದುಷಿ ಪತ್ನಿಯ ಮಾತು ಅವಮಾನದಿಂದ ಜರ್ಜರಿತನಾಗಿದ್ದ ಮಲ್ಲೀನಾಥನ ಹೃದಯಕ್ಕೆ ನಾಟಿತು. ಮನೆಗೆ ಹೋಗದೆ ನೇರವಾಗಿ ಗುರುಕುಲವನ್ನು ತಲುಪಿದ. ಗುರುಗಳು ಕನಿಕರದಿಂದ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರದ್ಧೆಯಿಂದ ಅಧ್ಯಯನ ಮಾಡಿದ ಮಲ್ಲೀನಾಥ ಜ್ಞಾನಸಂಪನ್ನನಾದ.


ಅನೇಕ ವರ್ಷಗಳ ಅಧ್ಯಯನದ ನಂತರ ಒಂದಿನ ಗುರುಮಾತೆ ನೀಡಿದ ಭೋಜನವನ್ನು ಸ್ವೀಕರಿಸುವಾಗ ಮಲ್ಲೀನಾಥ ಕೇಳಿದ ’ಅಮ್ಮಾ! ಇಂದೇಕೋ ಊಟ ಕಹಿಯಾಗಿದೆಯಲ್ಲ. ಏನಾದರೂ ಕಹಿ ಪದಾರ್ಥ ಬಿದ್ದಿರಬಹುದೆ?’ ಆಗ ಗುರುಗಳು ಹೇಳಿದರು – ’ಮಲ್ಲೀನಾಥ! ಇಂದಿಗೆ ನಿನ್ನ ವಿದ್ಯಾಭ್ಯಾಸ ಮುಗಿಯಿತು. ಪ್ರತಿದಿನವೂ ನಿನ್ನ ಊಟದಲ್ಲಿ ಬೇವಿನ ಎಣ್ಣೆಯನ್ನು ಬೆರೆಸಲು ನಾನೇ ಸೂಚಿಸಿದ್ದೆ. ಆದರೆ ಅಧ್ಯಯನದಲ್ಲಿ ಮುಳುಗಿಹೋಗಿದ್ದ ನಿನಗೆ ಇನ್ನ್ಯಾವ ಪರಿವೆಯೂ ಇರಲಿಲ್ಲ. ಇಂದು ನಿನಗೆ ಕಹಿ ತಿಳಿಯಿತು. ಇದು ನಿನ್ನ ವಿದ್ಯಾಭ್ಯಾಸ ಪೂರ್ತಿಯಾದ ಲಕ್ಷಣ’ ಎಂದರು. ಗುರುವಿಗೆ ಯಥಾಶಕ್ತಿ ಗುರುದಕ್ಷಿಣೆಯನ್ನು ಅರ್ಪಿಸಿ ಮಲ್ಲೀನಾಥ ಮನೆಗೆ ಬಂದ. ತಾನು ಗಳಿಸಿದ ವಿದ್ವತ್ತಿನಿಂದ ಭರತಖಂಡದ ಅನೇಕ ಪಂಡಿತರನ್ನು ವಾದದಲ್ಲಿ ಸೋಲಿಸಿ ಮಹಾಮಹೋಪಾಧ್ಯಾಯ ಎಂಬ ಬಿರುದನ್ನು ಸಂಪಾದಿಸಿದ. ಮಲ್ಲಿನಾಥ ಸೂರಿ ಎಂದು ಖ್ಯಾತನಾಗಿ ಸಂಸ್ಕೃತದ ಪಂಚ ಮಹಾಕಾವ್ಯಗಳಿಗೆ ಪಾಂಡಿತ್ಯಪೂರ್ಣ ಟೀಕೆಯನ್ನು ಬರೆದುದಲ್ಲದೆ ಅನೇಕ ಸ್ವತಂತ್ರ ಕೃತಿಗಳನ್ನೂ ರಚಿಸಿ ಅಜರಾಮರ ಕೀರ್ತಿಯನ್ನು ಗಳಿಸಿದ. ಇಂದಿಗೂ ಮಹಾಕಾವ್ಯಗಳ ಅಧ್ಯಯನಕ್ಕೆ ಮಲ್ಲಿನಾಥನ ಟೀಕೆ ಅತ್ಯುತ್ತಮ ಮಾಧ್ಯಮವಾಗಿದೆ.

📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Tuesday, August 1, 2017

ಅದ್ಯ ಧಾರಾ ನಿರಾಧಾರಾ.......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - ೧

*ಅದ್ಯ ಧಾರಾ ನಿರಾಧಾರಾ.......*

ಕಾಳಿದಾಸನನ್ನು ತಿಳಿಯದಿರುವವರಾರು? ಕವಿಕುಲಗುರುವೆಂಬ ಕೀರ್ತಿ ಹೊತ್ತ ಅಪ್ರತಿಮ ಶೃಂಗಾರ ಕವಿ. ಪ್ರತ್ಯುತ್ಪನ್ನ ಮತಿಯೂ ಆಗಿದ್ದ ಅವನು ಕ್ಷಣಾರ್ಧದಲ್ಲಿ ಕವಿತೆಯನ್ನು ರಚಿಸಬಲ್ಲವನಾಗಿದ್ದ. ಅವನು ಭೋಜರಾನ ಆಸ್ಥಾನದ ನವಮಣಿಗಳಲ್ಲಿ ಒಬ್ಬನಾಗಿದ್ದ ಎಂದು ಭೋಜ ಪ್ರಬಂಧದಲ್ಲಿ ಹೇಳಲಾಗಿದೆ.

ಸ್ವತ: ಕವಿಯೂ, ಪಂಡಿತರಿಗೆ ಆಶ್ರಯದಾತನೂ ಆಗಿದ್ದ ಭೋಜರಾಜ ಕಾಳಿದಾಸನ ಪರಮಮಿತ್ರನೂ ಆಗಿದ್ದ. ಅಂತಹ ಭೋಜರಾಜನಿಗೆ ಒಮ್ಮೆ ಒಂದು ವಿಚಿತ್ರ ಕೋರಿಕೆಯುಂಟಾಯಿತು. ತಾನು ಸತ್ತಾಗ ಕಾಳಿದಾಸ ಯಾವ ರೀತಿಯಲ್ಲಿ ಚರಮಗೀತೆಯನ್ನು ಬರೆಯಬಹುದು ಎಂಬ ಜಿಜ್ಞಾಸೆ ಕಾಡಹತ್ತಿತು. ಅದನ್ನು ಕಾಳಿದಾಸನಲ್ಲಿ ತೋಡಿಕೊಂಡ. ದಿಗ್ಭ್ರಾಂತನಾದ ಕಾಳಿದಾಸ ಅದಕ್ಕೆ ಒಪ್ಪಲಿಲ್ಲ. ವಾಗ್ದೇವಿಯ ವರಪುತ್ರನಾದ ತನ್ನ ಶಬ್ದಗಳ ಶಕ್ತಿಯ ಅರಿವು ಅವನಿಗಿತ್ತು. ಎಷ್ಟು ಹೇಳಿದರೂ ಒಪ್ಪದ ಅವನ ಮೇಲೆ ಸಿಟ್ಟುಗೊಂಡ ಭೋಜ ತನ್ನ ಆಸ್ಥಾನವನ್ನು ಬಿಟ್ಟು ತೊಲಗುವಂತೆ ಆಜ್ಞಾಪಿಸಿದ.

ಕಾಳಿದಾಸನಿಲ್ಲದ ಭೋಜರಾಜನ ಆಸ್ಥಾನ ಚಂದ್ರನಿಲ್ಲದ ರಾತ್ರಿಯಂತಾಗಿತ್ತು. ಬೇಸರಗೊಂಡ ಅರಸ ಕವಿಯನ್ನರಸಿ ಮಾರುವೇಷದಲ್ಲಿ ಹೊರಟೇ ಬಿಟ್ಟ. ಬಲುದಿನಗಳ ಅನ್ವೇಷಣೆಯ ನಂತರ ಕಾಳಿದಾಸನನ್ನು ಸಂಧಿಸಿ ಭೋಜರಾಜ ದಿವಂಗತನಾದ ಎಂದು ಸುಳ್ಳನ್ನು ಹೇಳಿದ. ಕವಿಚಕ್ರವರ್ತಿಯು ಕಂಬನಿ ತುಂಬಿ ಅಗಲಿದ ಮಿತ್ರನಿಗಾಗಿ ಚರಮಗೀತೆಯನ್ನು ಹಾಡಿದ.

ಅದ್ಯ ಧಾರಾ ನಿರಾಧಾರಾ
ನಿರಾಲಂಬಾ ಸರಸ್ವತೀ |
ಪಂಡಿತಾ: ಖಂಡಿತಾ: ಸರ್ವೇ
ಭೋಜರಾಜೇ ದಿವಂಗತೇ ||

(ಭೋಜರಾಜ ಸ್ವರ್ಗಸ್ಥನಾದ್ದರಿಂದ ಇಂದು ಧಾರಾನಗರಿಯು ಆಧಾರವನ್ನು ಕಳೆದುಕೊಂಡಿತು. ಸರಸ್ವತಿಯು ಆಶ್ರಯವನ್ನು ಕಳೆದುಕೊಂಡಳು. ಪಂಡಿತರು ಗೌರವವನ್ನು ಕಳೆದುಕೊಂಡರು.)

ಋಷಿತುಲ್ಯನಾದ ಕವಿಯ ಮಾತುಗಳು ಸುಳ್ಳಾಗಲು ಸಾಧ್ಯವೇ. ಮಾರುವೇಷದಲ್ಲಿದ್ದ ಭೋಜರಾಜ ನಿಶ್ಚೇಷ್ಟಿತನಾಗಿ ಬಿದ್ದ. ಕಾಳಿದಾಸನಿಗೆ ಪರಿಸ್ಥಿತಿಯ ಅರಿವಾಯಿತು; ದುಃಖ ಇಮ್ಮಡಿಸಿತು. ತಕ್ಷಣ ಶ್ಲೋಕವನ್ನು ಮಾರ್ಪಡಿಸಿ ಪಠಿಸಿದ.

ಅದ್ಯ ಧಾರಾ ಸದಾಧಾರಾ
ಸದಾಲಂಬಾ ಸರಸ್ವತೀ |
ಪಂಡಿತಾ ಮಂಡಿತಾ ಸರ್ವೇ
ಭೋಜರಾಜೇ ಭುವಂ ಗತೇ ||

(ಭೋಜರಾಜ ಈ ಭೂಮಿಯಲ್ಲಿರಲು ಧಾರಾ ನಗರವಿಂದು ಉತ್ತಮ ಆಧಾರವನ್ನು ಹೊಂದಿತು. ಸರಸ್ವತಿಗೆ ಒಳ್ಳೆಯ ಆಶ್ರಯ ಸಿಕ್ಕಿತು. ಪಂಡಿತರೆಲ್ಲರೂ ಸಮ್ಮಾನಿತರಾದರು.)

ಭೋಜರಾಜ ನಿದ್ದೆಯಿಂದೆಂಬಂತೆ ಎದ್ದು ಕುಳಿತ. ಕವಿಕುಲಗುರುವಿನ ವಾಕ್ ಶಕ್ತಿಯನ್ನರಿತು ಆದರಿಸಿದ.

ಕಾಳಿದಾಸನಿಗೆ ಕಾಳಿದಾಸನೇ ಸಾಟಿ.!

📝 ಮಹಾಬಲ ಭಟ್, ಗೋವಾ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸ್ತಾವನೆ

ಆತ್ಮೀಯ ಸ್ನೇಹಿತರೇ,
’ಸನಾತನ ಭಾರತದ ಸ್ತ್ರೀರತ್ನಗಳು’ ಎಂಬ ಲೇಖನ ಸರಣಿಗೆ ನೀವು ಕೊಟ್ಟ ಆತ್ಮೀಯ ಸ್ಪಂದನೆಯಿಂದ ಪ್ರೇರಿತನಾಗಿ ಎರಡನೆಯ ಲೇಖನ ಸರಣಿಯನ್ನು ಆರಂಭಿಸುತ್ತಿದ್ದೇನೆ.
ಸಂಸ್ಕೃತ ಸಾಹಿತ್ಯ ಎಂಬುದು ಹಲವು ಕುತೂಹಲಗಳ ಅನೇಕ ಚಮತ್ಕಾರಗಳ ಆಗರ. ಮೊಗೆದಷ್ಟೂ ಹೊರಚಿಮ್ಮುವ ಈ ರಸಸಾಗರದ ಕೆಲವು ಮುತ್ತುಗಳನ್ನು ನಿಮ್ಮ ಮುಂದಿಡುವ ನನ್ನ ಸವಿನಯ ಪ್ರಯತ್ನವಿದು. ಸಂಸ್ಕೃತ ಕವಿಗಳನೇಕರ ಜೀವನದಲ್ಲಿ ಆಗಿ ಹೋದ ಒಂದೊಂದು ಘಟನೆಗಳೂ ಒಂದೊಂದು ರಸಪ್ರಸಂಗಗಳು. ಅಂತಹ ಪ್ರಸಂಗಗಳನ್ನು ಕಲೆ ಹಾಕಿ ಇಲ್ಲಿ ಹೊರಹೊಮ್ಮಿದ ಚಮತ್ಕಾರಪೂರ್ಣ ಕವಿತೆಗಳನ್ನು ನಿಮ್ಮ ಮುಂದಿಡುವ ಪ್ರಾಮಾಣಿಕ ಯತ್ನ ಮಾಡುತ್ತಿದ್ದೇನೆ. ಈ ಪ್ರಸಂಗಗಳೆಲ್ಲ ಬೇರೆ ಬೇರೆ ಹೊತ್ತಿಗೆಗಳಲ್ಲಿ ಓದಿದ್ದು ಹಾಗೂ ವಿದ್ವನ್ಮಣಿಗಳ ಭಾಷಣಗಳಲ್ಲಿ ಕೇಳಿದ್ದು. ಹಾಗಾಗಿ ಈ ಲೇಖನಗಳ ಮೂಲವಸ್ತು ನನ್ನದಲ್ಲ. ಮಧುಕರವೃತ್ತಿಯಿಂದ ಸಂಗ್ರಹಿಸಿದ ಮಕರಂದವನ್ನು ನನ್ನ ಭಾಷೆಯಲ್ಲಿ ಜೇನಾಗಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಅದು ಸಹೃದಯರಾದ ನಿಮಗೆಷ್ಟು ರುಚಿಸುವುದೋ ನಾಕಾಣೆ. ಏನೇ ಇರಲಿ, ನಿಮ್ಮವನೀತ. ಓದಿ, ತಪ್ಪಿದ್ದರೆ ತಿದ್ದಿ, ಮೆಚ್ಚಿದರೆ ಬೆನ್ನುತಟ್ಟಿ.
ಈ ಲೇಖನಗಳಲ್ಲಿರುವ ಘಟನೆಗಳಿಗೆ ಐತಿಹಾಸಿಕ ಮಹತ್ತ್ವವಿಲ್ಲ. ಅನೇಕ ಪ್ರಸಂಗಗಳು ಕಲ್ಪಿತ ಪ್ರಸಂಗಗಳು. ಬಲ್ಲಾಳ ಸೇನನೆಂಬ ಕವಿ ರಚಿಸಿದ್ದ ಭೋಜ ಪ್ರಬಂಧ ಎಂಬ ಕಾವ್ಯದಲ್ಲಿ ಕಾಳಿದಾಸ ಭೋಜರಾಜನ ಆಸ್ಥಾನದಲ್ಲಿದ್ದ ಎಂದು ವರ್ಣಿಸಲಾಗಿದೆ. ಅದು ಇತಿಹಾಸಕಾರರಿಂದ ತಿರಸ್ಕರಿಸಲ್ಪಟ್ಟಿದೆ. ಅದರಂತೆ ಈ ಸರಣಿಯಲ್ಲಿ ವರ್ಣಿಸಲಾದ ಪ್ರಸಂಗಗಳೂ ಐತಿಹ್ಯಗಳೇ ಹೊರತು ಇತಿಹಾಸವಲ್ಲ. ರಸಾಸ್ವಾದನೆಯೇ ಈ ಲೇಖನಗಳ ಪರಮೋದ್ದೇಶವೇ ವಿನಾ ಸತ್ಯಾನ್ವೇಷಣೆಯಲ್ಲ.
ಶ್ರಾವಣ ಪೂರ್ಣಿಮೆಯನ್ನು ’ಸಂಸ್ಕೃತದಿನ’ ಎಂದು ಕೇಂದ್ರ ಸರಕಾರ ಘೋಷಿಸಿದೆ. ಆ ದಿನ, ಹಿಂದಿನ ಮೂರು ದಿನ ಹಾಗೂ ಮುಂದಿನ ಮೂರು ದಿನ ಹೀಗೆ ಏಳು ದಿನಗಳ ಕಾಲ ಸಂಸ್ಕೃತ ಸಪ್ತಾಹ ನಡೆಯುತ್ತದೆ. ಸಂಸ್ಕೃತ ಭಾಷೆಯ ಪ್ರಸಾರದ ಪ್ರಯತ್ನ ಈ ಸಪ್ತಾಹದಲ್ಲಿ ತನ್ನ ವೇಗವನ್ನು ವರ್ಧಿಸಿಕೊಳ್ಳುತ್ತದೆ. ಈ ವರ್ಷ ಅಗಸ್ಟ್ ೪ ರಿಂದ ೧೦ರವರೆಗೆ ಸಂಸ್ಕೃತ ಸಪ್ತಾಹವಿದೆ. ೭ ನೇ ತಾರೀಖಿಗೆ ಸಂಸ್ಕೃತದಿನ. ಈ ಸಂದರ್ಭದಲ್ಲಿ ಸಂಸ್ಕೃತದ ಅನ್ನ ತಿನ್ನುತ್ತಿರುವ ನನ್ನ ಒಂದು ಅಳಿಲು ಸೇವೆ ಈ ಲೇಖನ ಸರಣಿ. ಅಗಸ್ಟ್ ತಿಂಗಳು ಪೂರ್ತಿ ಈ ಸರಣಿಯು ಪ್ರಸಾರವಾಗಲಿದೆ.
ತಮ್ಮ ಸಹಕಾರ, ಪ್ರೋತ್ಸಾಹ ಇರಲಿ
ನಿಮ್ಮವ
ಮಹಾಬಲ ಭಟ್, ಗೋವಾ

Monday, June 12, 2017

ನಾಟಕವ ನೋಡ್ ಬ್ರಹ್ಮಾಂಡ ರಂಗಸ್ಥಳದಿ

ಜಗತ್ತು ಒಂದು ನಾಟಕರಂಗ ಅದರಲ್ಲಿ ಅವನು ಸೂತ್ರಧಾರಿ ನಾನು ಪಾತ್ರಧಾರಿ ಎಂಬ ವಿಚಾರ ಇಂದು ನಿನ್ನೆಯದಲ್ಲ. ನಾಟಕದಲ್ಲಿ ನಟನೊಬ್ಬ ತನ್ನಿಚ್ಛೆಯಂತೆ ನಟಿಸಬಹುದು. ಬೇಡವೆಂದರೆ ಬಿಡಬಹುದು. ಸೂತ್ರಧಾರನ ನಿರ್ದೇಶನವಿದ್ದರೂ ಸಹ ನಟನೆಯಲ್ಲಿ ಸ್ವಾತಂತ್ರ್ಯವಿದೆ. ದೃಶ್ಯಗಳ ಮಧ್ಯೆ ವಿಶ್ರಾಂತಿ ಸಿಗುತ್ತದೆ. ಆದರೆ ಈ ಜಗವೆಂಬ ನಾಟಕರಂಗವನ್ನು ಪ್ರವೇಶಿಸಿದ ಜೀವಿ ನಟನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಒಮ್ಮೆ ರಂಗಸ್ಥಳದಿಂದ ಕಾಲ್ತೆಗೆದರೆ ಮತ್ತೆ ಪ್ರವೇಶವಿಲ್ಲ. ಅಥವಾ ಮತ್ತಾವುದೋ ಪಾತ್ರವಾಗಿ ಮತ್ತೆ ಪ್ರವೇಶ. ಸೂತ್ರಧಾರಿಯ ಆಜ್ಞೆಯನ್ನು ಅತಿಕ್ರಮಿಸಲಾಗದು. ಕುಣಿಕುಣಿದು ಸುಸ್ತಾದರೂ ಸೂತ್ರಧಾರಿ ಇಚ್ಛಿಸದಿದ್ದರೆ ವಿರಮಿಸಲಾರೆವು.

ಈ ನಾಟಕರಂಗದ ಪಾತ್ರಗಳಲ್ಲಿ ಅದೇನು ವೈವಿಧ್ಯತೆ! ಭಿಕ್ಷುಕನಿಂದ ಮುಮುಕ್ಷುವಿನವರೆಗೆ ವಿವಿಧ ರಸಭಾವಗಳ ಪಾತ್ರಗಳು. ದಿನಕ್ಕೆ ಸಾವಿರಾರು ರೂಪಾಯಿಗಳನ್ನು ಸಂಪಾದಿಸುವ ಶ್ರೀಮಂತ ಭಿಕ್ಷುಕನೂ, ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಸಾಲಹೊಂದಿರುವ ಬಡ ಉದ್ಯಮಿಯೂ ಇಲ್ಲಿನ ವಿಚಿತ್ರ ಪಾತ್ರಧಾರಿಗಳು. ಒಂದೆಡೆ ನಾಗರೀಕತೆಯನ್ನು ಮೈಗೂಡಿಕೊಂಡು ಸುಸಂಸ್ಕೃತರಂತೆ ಬಾಳಲಿಚ್ಛಿಸುವ ಅವಿದ್ಯಾವಂತರಿದ್ದರೆ ಇನ್ನೊಂದೆಡೆ ಪ್ರಾಣಿಗಳಂತೆ ಆಹಾರ ನಿದ್ರಾ ಮೈಥುನಗಳನ್ನಷ್ಟೇ ಜೀವನಕ್ರಮವನ್ನಾಗಿರಿಸಿಕೊಂಡ ವಿದ್ಯಾವಂತರು ಕಾಣಸಿಗುತ್ತಾರೆ. ಬೆಳಿಗ್ಗೆ ೮ ಗಂಟೆಯ ಹೊತ್ತಿಗೆ ಮಾಪುಸಾ ಪಟ್ಟಣವನ್ನು ಪ್ರವೇಶಿಸಿದರೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಲ್ಲಿನಲ್ಲಿ ಜನಸಂಮರ್ದದಿಂದ ಕೂಡಿದ ’ಕೂಲಿಕಾರ ಮಾರುಕಟ್ಟೆ’ ಕಾಣಿಸುತ್ತದೆ. ಗೋವಾದ ಪ್ರಮುಖ ಪಟ್ಟಣಗಳಲ್ಲೆಲ್ಲ ಈ (ಅ)ವ್ಯವಸ್ಥೆ ಇದೆ. ತಮ್ಮ ದಿನದ ಶ್ರಮವನ್ನು ಮಾರಾಟಮಾಡಲು ತುದಿಗಾಲಲ್ಲಿ ನಿಂತಿರುವ ಶ್ರಮಿಕರನ್ನು ನೋಡಿದರೆ ಹರಿಶ್ಚಂದ್ರ ನೆನಪಾಗುತ್ತಾನೆ. ಬೆಳಿಗ್ಗೆ ಎಂಟಕ್ಕೆ ಮಧ್ಯಾಹ್ನದ ಊಟವನ್ನೂ ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ತಮ್ಮ ಶ್ರಮವನ್ನು ಕೊಳ್ಳುವ ಗಿರಾಕಿಗಾಗಿ ಅವರು ಕಾಯುತ್ತಿರುತ್ತಾರೆ. ನೂರಾರು ಜನರಲ್ಲಿ ತಾವೂ ಒಬ್ಬರಾಗಿ ನಿಂತು ಯಾರಾದರೂ ಇವತ್ತಿನ ಅನ್ನ ನೀಡಬಲ್ಲರೆ ಎಂಬ ಕಾತರದ ಕಾಯುವಿಕೆಯದು. ಅಲ್ಲಿಯೇ ಒಂದೆರಡು ತಾಸು ಕಳೆದರೆ ಅಂದಿನ ದಿನದ ಉಪವಾಸದ ಕರಿಛಾಯೆ ಮುಖದ ಮೇಲೆ ಮೂಡಲಾರಂಭಿಸುತ್ತದೆ. ನಿನ್ನೆಯ ಹಣ ಖರ್ಚಾಗಿದೆ, ಇಂದು ಸಂಪಾದನೆಯಿಲ್ಲ, ನಾಳೆ ದೇವರೇ ಗತಿ.

ಇವನ್ನೆಲ್ಲ ನೋಡುತ್ತಿದ್ದರೆ ದೇವರು ನಮಗೆ ಎಂತಹ ಅದ್ಭುತ ಭಾಗ್ಯವನ್ನು ಕರುಣಿಸಿದ್ದಾನೆ ಎನ್ನಿಸದಿರದು. ಸುಸಂಸ್ಕೃತ ಕುಟುಂಬ, ಮನೋಲ್ಲಾಸಕರ ವಿದ್ಯೆ, ಉದ್ಯೋಗ ಮಾಡಿ ಬಂದ ನಂತರವೂನಮ್ಮಿಚ್ಛೆಯಂತೆ ಕೆಲಸ ಮಾಡಲು ಸಾಕಷ್ಟು ಸಮಯ, ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು..... ಮತ್ತೇನು ಬೇಕು?

ಆಹಾರ ವಿದ್ಯಾ ಭಯ ಮೈಥುನಗಳು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನವಾಗಿರುವ ಗುಣಗಳು. ಮನುಷ್ಯ ತನ್ನ ಜೀವನವನ್ನು ಇಷ್ಟಕ್ಕೇ ಸೀಮಿತ ಮಾಡಿಕೊಂಡರೆ ಬಾಲ ಕೋಡುಗಳಿಲ್ಲದ ಪ್ರಾಣಿಯಾಗುತ್ತಾನೆ. ಇಂದು ಮನುಷ್ಯ ಪಾಣಿಗಳೇ ಹೆಚ್ಚಾಗಿದ್ದಾರೆ. ಕೆಲವರು ಅನ್ಯ ವಿಧಿಯಿಲ್ಲದೆ, ಇನ್ನು ಕೆಲವರು ಬುದ್ಧಿ ಹೆಚ್ಚಾಗಿ. ದಿನಕ ಕೋಳಿಗಾಗಿ ದುಡಿಯುವ ಕಾರ್ಮಿಕರು ಇನ್ನೇನು ಮಾಡಬಹುದು? ಹೊಟ್ಟೆ ತುಂಬಿಸಿಕೊಳ್ಳಲೇ ಸಮಯವಿರದ ಅವರಿಗೆ ಉಳಿದ ವಿಷಯಗಳ ಕಡೆಗೆ ಗಮನ ಹೋದೀತೆ? ವಿದ್ಯಾಭ್ಯಾಸವೂ ಇಲ್ಲದೆ, ಜ್ಞಾನವೆಂಬ ಕಣ್ಣುಗಳಿಂದ ವಂಚಿತರಾಗಿ ಕುರುಡರಂತೆ ಅಧಾನುಕರಣದ ಯಾಂತ್ರಿಕ ಜೀವನವನ್ನು ನದೆಸುತ್ತಾರೆ. ಒಂದು ರೀತಿಯಲ್ಲಿ ನೋಡುತ್ತ ಹೋದರೆ ನಮ್ಮ ದೇಶದ ಏಳು ಬೀಳುಗಳಿಗೆ ಇವರ ಕೊಡುಗೆ ಗೌಣ. ಆಗಿನ ಕಾಲದಲ್ಲಿ ರಾಮ ಮನೋಹರ ಲೋಹಿಯಾ ಹೇಳಿದ ಮಾತು ಗಮನಾರ್ಹ. ಸುಮಾರು ೧೫% ನಷ್ಟಿರುವ ವಿದ್ಯಾವಂತರೇ ಈ ದೇಶದ ಏಳ್ಗೆಗೂ ಅವ್ಯವಸ್ಥೆಗೂ ಕಾರಣ. ಇವರು ಬುದ್ಧಿ ಹೆಚ್ಚಾಗಿರುವ ಮನುಷ್ಯ ಪ್ರಾಣಿಗಳು.

ಹೀಗೆ ಯಾವ ಪಾತ್ರ ನಾಯಕ, ಯಾವ ಪಾತ್ರ ಖಳನಾಯಕ, ಯಾರು ಕಳ್ಳ , ಯಾರು ಸುಳ್ಳ, ಯಾರು ಸತ್ಯವಾದಿ ಎಂಬ ಗುಟ್ಟನ್ನು ಬಿಟ್ಟುಕೊಡದ ಈ ನಾಟಕದ ಸೂತ್ರಧಾರಿ ನಿಜಕ್ಕೂ ಅದ್ಭುತ ವ್ಯಕ್ತಿ ಅಲ್ಲ ಶಕ್ತಿ.

೨೮.೦೨.೨೦೦೬ ರಂದು ಬರೆದಿದ್ದು.

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...