Thursday, March 30, 2017

ಸುಲಭಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೩೧

ಸುಲಭಾ

ಮಹಾಭಾರತದಲ್ಲಿ ಶ್ರುತಾವತೀ, ಸಿದ್ಧಾ, ಸುಲಭಾ ಮುಂತಾದ ಅನೇಕ ಬ್ರಹ್ಮವಾದಿನಿಯರ ಉಲ್ಲೇಖವಿದೆ. ಸ್ಥಾಲೀಪುಲಾಕ ನ್ಯಾಯದಿಂದ ಅವರಲ್ಲಿ ಒಬ್ಬಳಾದ ಸುಲಭಾ ಎಂಬ ಯೋಗಿನಿಯ ಸಾಧನೆಯನ್ನು ನಿಮ್ಮ ಮುಂದಿಡುತ್ತೇನೆ. ಶಾಂತಿಪರ್ವದ ೩೨೦ನೇ ಅಧ್ಯಾಯದಲ್ಲಿ ಇವಳ ಕಥೆಯಿದೆ.

ಪ್ರಧಾನ ಎಂಬ ರಾಜರ್ಷಿಯ ಮಗಳು ಮಗಳು ಸುಲಭಾ. ವೇದಶಾಸ್ತ್ರಾದಿಪಾರಂಗತೆಯಾಗಿದ್ದ ಅವಳು ಒಬ್ಬಳು ಶ್ರೇಷ್ಠವಾದ ಯೋಗಿನಿಯಾಗಿದ್ದಳು. ಅವಳೇ ಹೇಳಿಕೊಂಡಂತೆ ತನ್ನ ವಿದ್ಯೆ, ಜ್ಞಾನಗಳಿಗೆ ಅನುರೂಪನಾದ ವರ ಸಿಗದೆ ವೈರಾಗ್ಯವೇ ಮೋಕ್ಷಸಾಧನೆಯೆಂದು ಅರಿತು ಸಂನ್ಯಾಸತ್ವವನ್ನು ಸ್ವೀಕರಿಸಿದ್ದಳು. ಪರಿವ್ರಾಜಕಳಾಗಿ ಸಂತರನ್ನೂ ಬ್ರಹ್ಮಜ್ಞಾನಿಗಳನ್ನೂ ಸಂದರ್ಶಿಸುತ್ತ ಆತ್ಮವಿಚಾರವನ್ನು ಚರ್ಚಿಸುತ್ತಿದ್ದಳು. ಒಮ್ಮೆ ರಾಜರ್ಷಿ ಜನಕನ ವಿಚಾರ ಅವಳ ಕಿವಿಗೆ ಬಿತ್ತು. ಅವನೊಂದಿಗೆ ವಾಕ್ಯಾರ್ಥವನ್ನು ಮಾಡುವ ಮನಸ್ಸಾಯಿತು. ಸುಂದರ ಯುವತಿಯ ರೂಪದಲ್ಲಿ ಮಿಥಿಲೆಗೆ ಬಂದು ಜನಕನ ಮುಂದೆ ನಿಂತಳು. ಜನಕ ಮಹಾರಾಜ ಅವಳನ್ನು ಗೌರವದಿಂದ ಸ್ವಾಗತಿಸಿದ. ಜನಕನ ಆಧ್ಯಾತ್ಮ ಸಾಧನೆಯನ್ನು ಪರೀಕ್ಷಿಸಲೋಸುಗ ಯೋಗಮಾರ್ಗದ ಮೂಲಕ ಅವನ ಮನಸ್ಸನ್ನು ಪ್ರವೇಶಿಸಿದಳು. ಜನಕನಿಗೆ ಅದು ಅರಿವಾಗಿ ಕಸಿವಿಸಿಯಾಯಿತು. ಅವನು ಅವಳನ್ನು ಪ್ರಶ್ನಿಸಿದ – “ಹೇ ಯುವತಿ! ಯಾರು ನೀನು? ಯಾರಿಗೆ ಸೇರಿದವಳು? ನೀನು ಹೀಗೆ ಪರಪುರುಷನ ಮನಸ್ಸನ್ನು ಪ್ರವೇಶಿಸುವುದು ತರವಲ್ಲ. ನನ್ನ ಅರಿವಿನೊಂದಿಗೆ ನಿನ್ನ ಅರಿವನ್ನು ಜೋಡಿಸಿ ನೀನು ವ್ಯಭಿಚಾರವನ್ನೆಸಗುತ್ತಿದ್ದೀಯಾ”.

ಸುಲಭಾ ಮುಗುಳ್ನಕ್ಕಳು. ಈ ಮಾತನ್ನು ಅವಳು ನಿರೀಕ್ಷಿಸಿದ್ದಳು. ಅವಳು ಮಾತನಾಡತೊಡಗಿದಳು – “ನಮ್ಮೆಲ್ಲರ ಶರೀರ ಪಾಂಚಭೌತಿಕವಾದದ್ದು. ಎಲ್ಲರ ದೇಹದಲ್ಲಿಯೂ ಇರುವ ದೇಹೀ ಒಬ್ಬನೇ. ಆಧ್ಯಾತ್ಮಿಕವಾಗಿ ಎಲ್ಲರೂ ಒಂದೇ. ನಮ್ಮಲ್ಲಿರುವ ವ್ಯತ್ಯಾಸ ಪ್ರಾಕೃತಿಕವಾದದ್ದು.  ಹಾಗಿರುವಾಗ ನಿನ್ನ ಆತ್ಮವನ್ನು ನನ್ನ ಆತ್ಮದಲ್ಲೂ ನಿನ್ನ ದೇಹವನ್ನು ನನ್ನ ದೇಹದಲ್ಲೂ ಯಾಕೆ ಕಾಣಲಾರೆ? ನೀನಿನ್ನೂ ದ್ವೈತವನ್ನು ದಾಟಿ ಅದ್ವೈತವನ್ನು ತಲುಪಿಲ್ಲ. ಜೀವನ್ಮುಕ್ತತೆಯ ಸ್ತರವನ್ನು ಇನ್ನೂ ಮುಟ್ಟಿಲ್ಲ. ಹಾಗಾಗಿಯೇ ನೀನು ಯಾರು? ನೀನು ಯಾರವಳು? ಎಂಬ ಅರ್ಥಹೀನ ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ. ನನಗೆ ನನ್ನ ದೇಹದ ಜೊತೆಗೇ ನಿಜವಾದ ಸಂಬಂಧವಿಲ್ಲದಿರುವಾಗ ನಿನ್ನನ್ನು ಪ್ರವೇಶಿಸಿರುವುದು ವ್ಯಭಿಚಾರ ಹೇಗೆ? ಪಂಚಶಿಖರು ನಿನಗೆ ಬೋಧಿಸಿದ ತತ್ತ್ವವನ್ನು ಅರ್ಥೈಸಿಕೊಳ್ಳದೆ ಆತ್ಮವನ್ನೂ ದೇಹವನ್ನೂ ಒಂದೇ ಎಂದು ತಿಳಿದು ಇಂತಹ ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ. ನೀನಿನ್ನೂ ಬ್ರಹ್ಮಜ್ಞಾನಕ್ಕೆ ಬಲು ದೂರ ಇದ್ದೀಯಾ.”

ಸುಲಭಾಳ ವಾದವನ್ನು ಕೇಳಿ ಜನಕ ಸ್ತಂಭೀಭೂತನಾದ. ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ. ತನ್ನ ತಪ್ಪನ್ನು ಅರಿತ. ಯೋಗಿನಿಗೆ ಶರಣಾದ.


ಬ್ರಹ್ಮಜಿಜ್ಞಾಸುಗಳ ಗಡಣದಲ್ಲಿ ’ರಾಜರ್ಷಿ’ ಎಂಬ ಬಿರುದನ್ನು ಪಡೆದಿದ್ದ ಜನಕನಿಗೆ ಸವಾಲೆಸೆಯುವುದು, ಅವನನ್ನು ವಾದದಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಆದರೆ ಸುಲಭಾ ಅದನ್ನು ಸುಗಮವಾಗಿ ಮಾಡಿ ಮುಗಿಸಿದ್ದಳು. ಅವಳ ಧೈರ್ಯ, ಆತ್ಮವಿಶ್ವಾಸಗಳಿಗೆ ಎಣೆಯಿಲ್ಲ. ಮಹಿಳೆಯೊಬ್ಬಳು ತನ್ನ ವಿಚಾರಶೀಲತೆಯಿಂದ ಒಬ್ಬಂಟಿಯಾಗಿ ಯಾವ ಮಟ್ಟವನ್ನು ತಲುಪಬಲ್ಲಳು ಎಂಬುದಕ್ಕೆ ಸುಲಭಳು ದೃಷ್ಟಾಂತವಾಗಬಲ್ಲಳು. 

ಮಹಾಬಲ ಭಟ್, ಗೋವಾ

ಸಾವಿತ್ರೀ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೩೦

ಸಾವಿತ್ರೀ

ಸತ್ಯವಾನ್-ಸಾವಿತ್ರಿಯ ಕಥೆ ಯಾರಿಗೆ ಗೊತ್ತಿಲ್ಲ. ಮೃತ್ಯುವನ್ನೇ ಗೆದ್ದ ಸಾವಿತ್ರಿ ಧೈರ್ಯಶಾಲಿನಿ ಸತಿಯರ ಪಂಕ್ತಿಯಲ್ಲಿ ಅಗ್ರಗಣ್ಯಳಾಗಿ ನಿಲ್ಲುತ್ತಾಳೆ.

ಮದ್ರದೇಶದ ಅಧಿಪತಿ ಅಶ್ವಪತಿಯ ಮಗಳು ಇವಳು. ಸಕಲವಿದ್ಯಾಸಂಪನ್ನೆ. ರೂಪಯೌವನಗಳು ಅನರ್ಥಕಾರಿಗಳಾಗದಂತೆ ವಿದ್ಯೆಯು ಇವಳಿಗೆ ವಿನಯವನ್ನಿತ್ತಿತ್ತು. ಅವಳಿಗೆ ತಕ್ಕನಾದ ವರನನ್ನು ಹುಡುಕುವುದು ಅಶ್ವಪತಿಗೆ ಸಮಸ್ಯೆಯಾಗಿತ್ತು. ತಂದೆಯ ಅನುಜ್ಞೆಯಂತೆ ವರಾನ್ವೇಷಣೆಗೆ ಹೊರಟ ಸಾವಿತ್ರಿ ಅನೇಕ ರಾಜರ್ಷಿಗಳನ್ನು ತನ್ನ ಒರೆಗಲ್ಲಿಗೆ ಹಚ್ಚಿದಳು. ಕೊನೆಗೆ ಅವಳ ಮನಸ್ಸನ್ನು ಗೆದ್ದ ಯುವಕ ಶಾಲ್ವದೇಶದ ದ್ಯುಮತ್ಸೇನನ ಮಗನಾಗಿದ್ದ ’ಸತ್ಯವಾನ”. ಅವನು ಸಣ್ಣವನಾಗಿದ್ದಾಗಲೇ ರಾಜನ ವಯೋಸಹಜ ದೃಷ್ಟಿಹೀನತೆಯ ಲಾಭ ಪಡೆದಿದ್ದ ಶತ್ರುಗಳು ರಾಜ್ಯವನ್ನು ಅಪಹರಿಸಿದ್ದರು. ಸಾವಿತ್ರಿಗೆ ಅವನ ರಾಜ್ಯಹೀನತೆಯಾಗಲೀ ಬಡತನವಾಗಲೀ ಅವನನ್ನು ವರನನ್ನಾಗಿ ಆರಿಸುವಲ್ಲಿ ಪ್ರತಿಬಂಧಕಗಳಾಗಲಿಲ್ಲ. ಸತ್ಯವಾನನ ಗುಣಶೀಲ, ವಿದ್ಯಾ, ವಿನಯತೆಗೆ ತಲೆ ಬಾಗಿದಳು.
ಅಶ್ವಪತಿ ವಿರೋಧಿಸಲಿಲ್ಲ. ಆದರೆ ನಾರದರು ಬಂದು ಸತ್ಯವಾನನ ಆಯಸ್ಸು ಇನ್ನು ಒಂದೇ ವರ್ಷ ಎಂದಾಗ ದಿಗಿಲುಗೊಂಡು ನಿರ್ಧಾರವನ್ನು ಬದಲಿಸುವಂತೆ ಸಾವಿತ್ರಿಯನ್ನು ಕೇಳಿಕೊಂಡ. ’ಸಕೃತ್ ಕನ್ಯಾ ಪ್ರದೀಯತೇ’ ಎಂಬ ವಚನವನ್ನು ಮುಂದಿಟ್ಟುಕೊಂಡು ಸಾವಿತ್ರಿ ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ಮದುವೆಯಾಯಿತು. ದಂಪತಿಗಳು ಕಷ್ಟ-ಸುಖಗಳನ್ನು ಹಂಚಿಕೊಂಡು ಒಂದು ವರ್ಷ ಕಳೆದರು. ’ಆ ದಿನ’ ಸಮೀಪಿಸಿತು. ಸಾವಿತ್ರಿಗೆ ಗಂಡನನ್ನು ಉಳಿಸಿಕೊಳ್ಳುವ ಛಲ ಇತ್ತು. ಕಾಡಿಗೆ ಕಟ್ಟಿಗೆ ತರಲು ಹೊರಟ ಅವನನ್ನು ತಾನೂ ಅನುಸರಿಸಿದಳು. ’ಆ ಕ್ಷಣ’ ವೂ ಬಂದೇ ಬಿಟ್ಟಿತ್ತು. ಸತ್ಯವಾನನ ದೇಹ ನಿಶ್ಚೇಷ್ಟಿತವಾಗಿ ಬಿದ್ದಿತ್ತು. ಅಂತಹ ಧರ್ಮಾತ್ಮನ ಆತ್ಮವನ್ನು ತೆಗೆದುಕೊಂಡು ಹೋಗಲು ಸ್ವತ: ಯಮಧರ್ಮರಾಜನೇ ಆಗಮಿಸಿದ್ದ. ಸಾವಿತ್ರಿ ಅವನನ್ನು ಹಿಂಬಾಲಿಸಿದಳು. ಯಮನಿಗೆ ಕರುಣೆ ಉಕ್ಕಿತು. ಅವಳ ಜೊತೆ ಮಾತಿಗಾರಂಭಿಸಿದ. ಅವಳ ಯುಕ್ತಿಯುಕ್ತ ಮಾತಿಗೆ ಮರುಳಾಗಿ ಸತ್ಯವಾನನ ಜೀವವೊಂದನ್ನು ಬಿಟ್ಟು ಮತ್ಯಾವುದೇ ವರ ಬೇಡು ಅಂದ. ಸಾವಿತ್ರಿ ಚತುರೆ. ಅಂತಹ ಕಷ್ಟಮಯ ಸಮಯದಲ್ಲೂ ಅವಳ ಚಾಕಚಕ್ಯತೆ ಕೆಲಸ ಮಾಡಿತು. ತನ್ನ ವಾಕ್ಚಾತುರ್ಯದಿಂದ ಯಮನನ್ನು ಮರುಳಾಗಿಸಿ ಒಟ್ಟು ನಾಲ್ಕು ವರಗಳನ್ನು ಪಡೆದಳು. ಮಾವನ ದೃಷ್ಟಿ ಮತ್ತು ರಾಜ್ಯವನ್ನು ಮೊದಲೆರಡು ವರಗಳಿಂದಲೂ, ತಂದೆಗೆ ನೂರು ಗಂಡುಮಕ್ಕಳನ್ನು ಮೂರನೆಯ ವರದಿಂದಲೂ ದೊರಕಿಸಿದ ಸಾವಿತ್ರಿ ನಾಲ್ಕನೆಯ ವರದಿಂದ ತನಗೆ ನೂರು ಮಕ್ಕಳು ಹುಟ್ಟುವಂತೆ ವರ ಪಡೆದಳು. ಈ ವರವನ್ನು ದಯಪಾಲಿಸಿ ಯಮ ತನ್ನ ಮಾತಿನಿಂದಲೇ ಬದ್ಧನಾದ. ಪತಿಯಿಲ್ಲದೆ ಪತಿವ್ರತೆಗೆ ಸಂತಾನವಾಗಲು ಸಾಧ್ಯವೆ? ಸಂತಾನ ಪಡೆಯುವ ಪರ್ಯಾಯ ಮಾರ್ಗವನ್ನು ಸೂಚಿಸುವ ದುಸ್ಸಾಹಸವನ್ನು ಯಮ ಮಾಡಲಿಲ್ಲ. ಸತ್ಯವಾನನ ಜೀವವನ್ನು ಹಿಂತಿರುಗಿಸಿದ.

ಕಷ್ಟವನ್ನೇ ಮೆಟ್ಟಿಲಾಗಿಸಿಕೊಂಡು ಗಂಡನನ್ನು ಉಳಿಸಿಕೊಂಡದ್ದೇ ಅಲ್ಲದೆ ಸೇರಿದ ಮನೆಗೂ, ತವರು ಮನೆಗೂ ಶ್ರೇಯಸ್ಸನ್ನುಂಟುಮಾಡಿದ ಸಾವಿತ್ರಿ ಲೋಕವಿಖ್ಯಾತವಾದುದರಲ್ಲಿ ಆಶ್ಚರ್ಯವೇನಿದೆ?


ಮಹಾಬಲ ಭಟ್, ಗೋವಾ

Tuesday, March 28, 2017

ಮಮತಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೨೯

ಮಮತಾ

ಬೃಹಸ್ಪತಿಯ ಸೋದರನ ಹೆಸರು ಉಚ್ಯಥ. ಅವನ ಪತ್ನಿಯೇ ಮಮತಾ. ವಿದ್ಯಾಸಂಪನ್ನೆ, ಗುಣವತಿ ಹಾಗೂ ರೂಪವತಿಯಾಗಿದ್ದಳು. ಅವಳು ಗರ್ಭಿಣಿಯಾಗಿದ್ದಾಗ ಬೃಹಸ್ಪತಿಯ ಕಾಮ ದೃಷ್ಟಿ ಅವಳ ಮೇಲೆ ಬಿತ್ತು. ಸೋದರನ ಪತ್ನಿಯು ಪಂಚಮಾತೆಯರಲ್ಲಿ ಒಬ್ಬಳು ಎಂಬುದನ್ನು ಮರೆತ. (ಮಿತ್ರಪತ್ನೀ ಗುರೋರ್ಪತ್ನೀ ಭ್ರಾತೃಪತ್ನೀ ತಥೈವ ಚ | ಪತ್ನೀಮಾತಾ ಸ್ವಮಾತಾ ಚ ಪಂಚೈತೇ ಮಾತರ: ಸ್ಮೃತಾ:||) ಕಾಮಕೇಳಿಗೆ ಕರೆದ. ಮಮತಾ ದಿಗ್ಭ್ರಾಂತಳಾದಳು. ತಿಳಿ ಹೇಳಿದಳು. ಕೇಳಲಿಲ್ಲ;ಕಾಮ ಅವನನ್ನು ಕಿವುಡಾಗಿಸಿತ್ತು. ಕೈಮುಗಿದು ಅಂಗಲಾಚಿದಳು. ಕಾಣಲಿಲ್ಲ; ಕಾಮಾಂಧನಾಗಿದ್ದ. ಆಕ್ರಮಿಸಿದ. ಆದರೆ ಮಮತಾಳ ಹೊಟ್ಟೆಯಲ್ಲಿದ್ದ ಗರ್ಭ ಅವನನ್ನು ತಡೆಯಿತು. ಕಾಮ ತಣಿಯದೆ ಕೋಪದ ರೂಪವನ್ನು ತಾಳಿತು. ’ಕಾಮಾತ್ ಕ್ರೋಧೋಭಿಜಾಯತೇ’ ಎನ್ನುವುದು ನಿಜವಾಯಿತು. ಸಿಟ್ಟಿನಿಂದ ’ನೀನು ಜನ್ಮಾಂಧನಾಗು’ ಎಂದು ಆ ಭ್ರೂಣಕ್ಕೆ ಶಾಪಕೊಟ್ಟ. ಆ ತಾಯಿ ಕಣ್ಣೀರು ಹಾಕಿದಳು. ತನ್ನದಲ್ಲದ ತಪ್ಪಿಗೆ ಆ ಮಗುವಿಗೆ ಈ ಶಿಕ್ಷೆ!

ಹುಟ್ಟಿದ ಮಗು ಸುಂದರವಾಗಿತ್ತು. ಆದರೆ ದೃಷ್ಟಿಹೀನವಾಗಿತ್ತು. ಮಮತಾ ಮರುಗಿದಳು. ಆದರೆ ಮಗುವಿನ ಮೇಲಿನ ಮಮತೆ ಕಡಿಮೆಯಾಗಲು ಸಾಧ್ಯವೆ? ಅವನಿಗೆ ತಾನೇ ದೃಷ್ಟಿಯಾದಳು. ಅವನ ಅಂತರ್ದೃಷ್ಟಿಯನ್ನು ತೆರೆಸಿದಳು. ಕೊಡಬೇಕಾದ ಸಂಸ್ಕಾರದಲ್ಲಿ ಎಳ್ಳಿನಿತೂ ಲೋಪ ಮಾಡಲಿಲ್ಲ. ಅದು ಶ್ರುತಿಕಾಲ. ಅಧ್ಯಯನಕ್ಕೆ ಕಣ್ಣಿಗಿಂತ ಕಿವಿ ಮುಖ್ಯವಾಗಿತ್ತು. ಹಾಗಾಗಿ ಮಗು ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳಲಿಲ್ಲ. ತಾಯಿಯ ಬೆಂಗಾವಲಿತ್ತು. ತಪಸ್ಸು ಮಾಡಿದ ಕೊನೆಗೆ ದೃಷ್ಟಿಹೀನನಾಗಿದ್ದರೂ ವೇದದೃಷ್ಟಾರನಾದ. ಅವನೇ ದೀರ್ಘತಮನೆಂಬ ಮಹರ್ಷಿ.


ವಿಕಲಚೇತನಮಗುವಿನ ತಾಯಿಯಾಗಿ ಮಮತಾಮಯಿ ಮಮತಾ ಮಾಡಿದ ಕಾರ್ಯ ಅಂತಹ ನೂರಾರು ತಾಯಿಯರಿಗೆ ಪ್ರೇರಣಾಸ್ಥಾನ.

ಮಹಾಬಲ ಭಟ್, ಗೋವಾ

Monday, March 27, 2017

ಸುಕನ್ಯಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೨೮
ಸುಕನ್ಯಾ

ಮನುವಂಶದ ಶರ್ಯಾತನೆಂಬ ರಾಜ ಭರತಖಂಡದಲ್ಲಿ ರಾಜ್ಯವಾಳುತ್ತಿದ್ದ. ಅವನ ಮಗಳು ಸುಕನ್ಯಾ. ರೂಪದಲ್ಲಿ ಚೆಲುವೆ, ಸಂಸ್ಕಾರವಂತೆ ಹಾಗೂ ವಿದ್ಯಾಸಂಪನ್ನೆಯಾಗಿದ್ದಳು. ಚ್ಯವನನೆಂಬ ಮಹರ್ಷಿ ರಸವಿದ್ಯೆಯಲ್ಲಿ ಖ್ಯಾತನಾಗಿದ್ದ. ಮುದುಕನಾದರೂ ಯೌವನವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಪ್ರಯೋಗನಿರತನಾಗಿದ್ದ. ಕಾಡಿನಲ್ಲಿ ಒಮ್ಮೆ ಸಂಚರಿಸುವಾಗ ಒಂದು ಕಂದರದಲ್ಲಿ ಬಿದ್ದುಬಿಟ್ಟ. ಅವನ ಮೇಲೆ ತರಗೆಲೆಗಳು, ಮಣ್ಣು ಬಿದ್ದು ಯಾರಿಗೂ ಸ್ಪಷ್ಟವಾಗಿ ಕಾಣದಂತಾದ.
ಅದೇ ಸಮಯಕ್ಕೆ ಶರ್ಯಾತ ರಾಜ ತನ್ನ ಪರಿವಾರದೊಂದಿಗೆ ಮೃಗಯಾ ವಿಹಾರಕ್ಕೆಂದು ಆ ಕಾಡಿಗೆ ಬಂದು ಬಿಡಾರ ಹೂಡಿದ್ದ. ಸುಕನ್ಯೆಯೂ ಅವನೊಂದಿಗೆ ಬಂದಿದ್ದಳು. ಪರಿವಾರದ ಜನರು ಆ ಅಸ್ಪಷ್ಟ ಮಾನವಾಕೃತಿಯನ್ನು ಕಂಡು ಕುತೂಹಲದಿಂದ ಕಲ್ಲುಮಣ್ಣುಗಳನ್ನು ಎರಚಿದರು. ಸುಕನ್ಯೆ ಹೊಳೆಯುವ ಕಣ್ಣಿಗೆ ಕಡ್ಡಿಯಿಂದ ಚುಚ್ಚಿದಳು. ಚ್ಯವನ ನೋವಿನಿಂದ ಮುಲುಗಿದ.

ಇತ್ತ ರಾಜನ ಬಿಡಾರದಲ್ಲಿ ಆಶ್ಚರ್ಯಕರ ಘಟನೆಗಳು ನಡೆದವು. ವಿನಾಕಾರಣ ಎಲ್ಲರೂ ಪರಸ್ಪರ ಜಗಳವಾಡಹತ್ತಿದರು. ಚೀರತೊಡಗಿದರು. ರಾಜನಿಗೆ ಒಮ್ಮೆಲೇ ನಡೆದ ಈ ವಿದ್ಯಮಾನ ಸೋಜಿಗವನ್ನು ತಂದಿತು. ಆಗ ಅವನ ಮಂತ್ರಿಗಳು ಚ್ಯವನನಿಗೆ ಸೇವಕರು ಕೊಟ್ಟ ತೊಂದರೆಗಳನ್ನು ತಿಳಿಸಿದರು. ರಾಜ ಅಲ್ಲಿಗೆ ಧಾವಿಸಿದ. ಚ್ಯವನನನ್ನು ಪ್ರಾರ್ಥಿಸಿದ. ರಾಜನ ವಿನಯತೆ ಚ್ಯವನನಿಗೆ ಇಷ್ಟವಾಯಿತು. ಅಕಸ್ಮಾತ್ ಅವನ ದೃಷ್ಟಿ ರಾಜನ ಪಕ್ಕದಲ್ಲಿ ನಿಂತಿದ್ದ ಸುಕನ್ಯೆಯ ಮೆಲೆ ಬಿತ್ತು. ಅವಳ ಯೌವನ ಅವನನ್ನು ಆಕರ್ಷಿಸಿತು. ಅವಳನ್ನು ತನಗೆ ಮದುವೆ ಮಾಡಿಕೊಟ್ಟರೆ ತೊಂದರೆಯನ್ನು ನಿವಾರಿಸುವುದಾಗಿ ಹೇಳಿದ. ರಾಜ ದಿಗ್ಭ್ರಾಂತನಾದ. ಆದರೆ ಅನಿವಾರ್ಯವಾಗಿತ್ತು. ಸುಕನ್ಯೆಯ ಮನದಲ್ಲೂ ಅಪರಾಧಿ ಭಾವ ಮೊಳೆದಿತ್ತು. ಒಟ್ಟಿನಲ್ಲಿ ಮುದುಕನನ್ನು ಮದುವೆಯಾಗುವ ಭಾಗ್ಯ ಅವಳ ಹಣೆಯಲ್ಲಿ ಬರೆದಿತ್ತು. ಅವಳದನ್ನು ಸ್ವೀಕರಿಸಿದಳು. ಶ್ರದ್ಧೆಯಿಂದ ಗಂಡನ ಸೇವೆ ಮಾಡುತ್ತಿದ್ದಳು.

ದೇವವೈದ್ಯರಾದ ಅಶ್ವಿನೀಕುಮಾರರು ಒಮ್ಮೆ ಅವಳನ್ನು ನೋಡಿದರು. ಹಣ್ಣು ಹಣ್ಣು ಮುದುಕನಿಗೆ ನವತಾರುಣ್ಯದ ಹೆಂಡತಿ. ಯಮಳರು ಸುಕನ್ಯೆಯಲ್ಲಿಗೆ ಬಂದು ಮುದುಕನನ್ನು ಬಿಟ್ಟು ತಮ್ಮೊಂದಿಗೆ ಬಂದು ಬಿಡು ಎಂದರು. ಸುಕನ್ಯೆ ನಿತ್ಯರುಣರಾದ ಅವರ ರೂಪದ ಬಲೆಗೆ ಬೀಳಲಿಲ್ಲ. ಸರಿಯಾಗಿ ಮಂಗಳಾರತಿ ಮಾಡಿ ಕಳುಹಿದಳು. ಚ್ಯವನನಿಗೆ ಇದು ಗೊತ್ತಾಯಿತು. ತನ್ನ ಹೆಂಡತಿಯ ಮೇಲೆ ಅಭಿಮಾನ ಮೂಡಿತು. ಈ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಯೋಚಿಸಿ ಮರುದಿನ ಮತ್ತೆ ಅವರು ಬಂದರೆ ಏನು ಹೇಳಬೇಕೆಂದು ತನ್ನ ಹೆಂಡತಿಗೆ ಸೂಚಿಸಿದನು.

ಮರುದಿನ ಅವಳಿಕುಮಾರರು ಮತ್ತೆ ಸುಕನ್ಯೆಯಲ್ಲಿಗೆ ಬಂದಳು. ಆಗ ಅವಳು ’ ನೀವು ನನ್ನ ಗಂಡನಷ್ಟು ಶ್ರೇಷ್ಠರಲ್ಲ. ನಿಮಗೆ ಯಜ್ಞದಲ್ಲಿ ಹವಿರ್ಭಾಗವಿಲ್ಲ. ದೇವತೆಗಳು ನಿಮ್ಮನ್ನು ಹೊರಗಿಟ್ಟಿರುವರು’ ಅಂದಳು. ’ನನ್ನ ಗಂಡ ನಿಮಗೆ ಸೋಮರಸ ಪಾನ ಮಾಡಿಸಬಲ್ಲರು’ ಎಂದೂ ಸೂಚಿಸಿದಳು. ಅಶ್ವಿನೀಕುಮಾರರಿಗೆ ಆಸೆಯಾಯಿತು. ಅವರು ಚ್ಯವನನಲ್ಲಿಗೆ ಬಂದು ವಿನಂತಿಸಿಕೊಂಡರು. ಆಗ ತನ್ನನ್ನು ನವಯುವಕನನ್ನಾಗಿ ಮಾಡಿದರೆ ತಾನು ಅವರಿಗೆ ಸ್ಥಾನಮಾನ ಕೊಡಿಸುವುದಾಗಿ ಚ್ಯವನ ಹೇಳಿದ. ಅಶ್ವಿನೀಕುಮಾರರು ಒಪ್ಪಿಕೊಂಡರು. ಸರಸ್ವತೀನದಿಯಲ್ಲಿ ಮುಳುಗು ಹಾಕಿ ಬಂದ ಚ್ಯವನ ನವ ಯುವಕನಾದ. ಸುಕನ್ಯೆಯ ಪತಿನಿಷ್ಠೆ ಫಲ ನೀಡಿತು. ಅವಳ ಬಾಳು ಹಸನಾಯಿತು.


ಮಹಾಬಲ ಭಟ್, ಗೋವಾ

Sunday, March 26, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೭

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಇಂದ್ರಮಾತಾ: ಹತ್ತನೆಯ ಮಂಡಲದ ೧೫೩ ನೇ ಸೂಕ್ತದ ಋಷಿಕೆ. ಕೇವಲ ಐದು ಮಂತ್ರಗಳಿರುವ ಸೂಕ್ತ ಇಂದ್ರಪರಕವಾಗಿದೆ.
ಶಿಖಂಡಿನೀ: ಕಶ್ಯಪಮುನಿಯ ಕುವರಿಯರಾದ ಶಿಖಂಡಿನಿಯರು ಒಂಭತ್ತನೆಯ ಮಂಡಲದ ೧೦೪ನೇ ಸೂಕ್ತದ ದ್ರಷ್ಟಾರರು. ಈ ಸೂಕ್ತ ಪವಮಾನ ಸೋಮನ ಪರಕವಾಗಿದೆ.
ಸೂರ್ಯಾ ಸಾವಿತ್ರೀ : ಸೂರ್ಯನ ಮಗಳು ಹಾಗೂ ಪ್ರಜಾಪತಿಯಿಂದ ಪಾಲಿತಳಾದವಳು. ಋಗ್ವೇದದ ಹತ್ತನೆಯ ಮಂಡಲದ ೮೫ ನೆಯ ಸೂಕ್ತದಲ್ಲಿ ಇವಳ ವಿವಾಹದ ವರ್ಣನೆಯಿದೆ. ವಿವಾಹ ಸಮಯದಲ್ಲಿ ಸೋಮನು ಇವಳಿಗೆ ಮೂರೂ ವೇದಗಳನ್ನು ಕೊಟ್ಟನು. ವಿವಾಹದಲ್ಲಿ ಬಳಸುವ ಪ್ರಸಿದ್ಧ ಮಂತ್ರಗಳು ಈ ಸೂಕ್ತದಲ್ಲಿವೆ. ಪಾಣಿಗ್ರಹಣ ಕಾಲದಲ್ಲಿ ವರನು ಹೇಳುವ ’ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ’ ಎಂಬ ಮಂತ್ರ ಇದೇ ಸೂಕ್ತದ್ದು. ವಧುವು ಸುಮಂಗಲಿಯಾಗಿದ್ದಾಳೆ. ಇವಳಿಗೆ ಸೌಭಾಗ್ಯವನ್ನು ನೀಡಿ ಎಂದು ಪ್ರಾರ್ಥಿಸುವ ’ಸುಮಂಗಲೀರಿಯಂ ವಧೂ: ಸಮೇತ ಪಶ್ಯತ’ ಎಂಬ ಮಂತ್ರವೂ ಇದೆ. ಕೊನೆಯ ಮಂತ್ರ ’ಸಮ್ರಾಜ್ಞೀ ಶ್ವಶುರೇ ಭವ, ಸಮ್ರಾಜ್ಞೀ ಶ್ವಶ್ರ್ವಾಂ ಭವ’ ಎಂಬ ಮಂತ್ರದ್ತಲ್ಲಂತೂ ಗಂಡನ ಮನೆಯಲ್ಲಿ ವಧುವು ಮಾವ, ಅತ್ತೆ ಮೈದುನರು ಹಾಗೂ ನಾದಿನಿಯರ ಮನವನ್ನು ಗೆದ್ದು ಸಾಮ್ರಾಜ್ಞಿಯಾಗಿ ಮೆರೆಯಲಿ ಎಂಬ ಉನ್ನತ ಆಶಯ ವ್ಯಕ್ತವಾಗಿದೆ.

ಬೃಹದ್ದೇವತಾ ಎಂಬ ಗ್ರಂಥದ ಎರಡನೆಯ ಅಧ್ಯಾಯದಲ್ಲಿ ವೇದಕಾಲದ ಋಷಿಕೆಯರ ಯಾದಿಯನ್ನು ಕೊಡಲಾಗಿದೆ.
ಘೋಷಾ ಗೋಧಾ ವಿಶ್ವವಾರಾ ಅಪಾಲೊಪನಿಷನ್ನಿಷತ್ |
ಬ್ರಹ್ಮಜಾಯಾ ಜುಹುರ್ನಾಮ ಅಗಸ್ತ್ಯಸ್ಯ ಸ್ವಸಾದಿತಿ ||
ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ |
ಲೋಪಾಮುದ್ರಾ ಚ ನದ್ಯಶ್ಚ ಯಮೀ ನಾರೀ ಚ ಶಶ್ವತೀ ||
ಶ್ರೀರ್ಲಾಕ್ಷಾ ಸಾರ್ಪರಾಜ್ಞೀ ವಾಕ್ ಶ್ರದ್ಧಾ ಮೇಧಾ ಚ ದಕ್ಷಿಣಾ |
ರಾತ್ರೀ ಸೂರ್ಯಾ ಚ ಸಾವಿತ್ರೀ ಬ್ರಹ್ಮವಾದಿನ್ಯ ಈರಿತಾ: ||

ಇವರಲ್ಲಿ ಶ್ರೀ, ಲಾಕ್ಷಾ, ಮೇಧಾ ಮುಂತಾದ ಋಷಿಕೆಯರ ಬಗ್ಗೆ ಮಾಹಿತಿ ಸಿಗಲಿಲ್ಲ. ಹುಡುಕಿ ಮುಂದೆ ಬರೆಯುತ್ತೇನೆ.


ಮಹಾಬಲ ಭಟ್, ಗೋವಾ

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೬

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ವೈವಸ್ವತೀ ಯಮೀ: ಸೂರ್ಯ ಮತ್ತು ಸರಣ್ಯೂ ದೇವಿಯರ ಮಕ್ಕಳು ಯಮ ಮತ್ತು ಯಮೀ. ಋಗ್ವೇದದ ೧೦ ನೆಯ ಮಂಡಲದ ಹತ್ತನೆಯ ಸೂಕ್ತ ಇವರ ಸಂವಾದವನ್ನು ಹೊಂದಿದೆ. ಇಲ್ಲಿ ಯಮೀ ತನ್ನ ಸೋದರನಾದ ಯಮನಿಂದಲೇ ತನ್ನ ಕಾಮವನ್ನು ಪೂರ್ತಿಗೊಳಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ. ಆದರೆ ಯಮನು ಅದಕ್ಕೆ ಒಪ್ಪದೆ ಅಣ್ಣ ತಂಗಿಯರ ದೈಹಿಕ ಸಂಬಂಧ ಅಪ್ರಾಕೃತಿಕವಾದದ್ದು ಎಂದು ಪ್ರತಿಪಾದಿಸಿ ಅವಳನ್ನು ಸುಮ್ಮನಾಗಿಸುತ್ತಾನೆ. ಹತ್ತನೆಯ ಮಂಡಲದ ೧೫೪ ನೇ ಸೂಕ್ತದ ಋಷಿಕೆಯೂ ಈ ಯಮೀ.

ರಾತ್ರಿ: ಹತ್ತನೆಯ ಮಂಡಲದ ೧೨೭ ನೇ ಸೂಕ್ತ ೮ ಮಂತ್ರಗಳನ್ನು ಹೊಂದಿದ್ದು ರಾತ್ರಿಸೂಕ್ತವೆಂದು ಪ್ರಸಿದ್ಧವಾಗಿದೆ. ಇದರ ಋಷಿಕೆಯ ಹೆಸರೂ ರಾತ್ರಿ. ಅವಳು ಭರದ್ವಾಜ ಮುನಿಯ ಮಗಳಾಗಿದ್ದಳು.

ಸರಮಾ: ಇದು ದೇವಲೋಕದ ಹೆಣ್ಣು ನಾಯಿಯ ಹೆಸರು. ಹತ್ತನೆಯ ಮಂಡಲದ ೧೦೮ ನೇ ಸೂಕ್ತದಲ್ಲಿ ಈ ನಾಯಿಯ ವಿಕ್ರಮ ವರ್ಣಿತವಾಗಿದೆ. ಇವಳನ್ನೇ ಈ ಸೂಕ್ತದ ಋಷಿಕೆ ಎಂತಲೂ ಹೇಳಲಾಗಿದೆ.ಈ  ಸೂಕ್ತದಲ್ಲಿ ಬರುವ ಘಟನೆ ಕುತೂಹಲಕಾರಿಯಾಗಿದೆ. ಪತ್ತೇದಾರಿಕೆಗೆ ನಾಯಿಯನ್ನು ಬಳಸಿಕೊಳ್ಳುವ ವಿಧಾನ ಋಗ್ವೇದಕಾಲದಲ್ಲಿಯೇ ಇತ್ತು ಎಂದು ಈ ಸೂಕ್ತದಿಂದ ಕಂಡುಬರುತ್ತದೆ. ಆಂಗಿರಸರಿಗೆ ಸಂಬಂಧಿಸಿದ ಗೋವುಗಳನ್ನು ಫಣಿಗಳೆಂಬ ಕಳ್ಳರು ಅಪಹರಿಸಿ ಗುಹೆಯಲ್ಲಿ ಅಡಗಿಕೊಂಡಾಗ ಅವರು ಇಂದ್ರನಿಗೆ ಮೊರೆಯಿಡುತ್ತಾರೆ. ಇಂದ್ರ ಕಳ್ಳರನ್ನು ಕಂಡುಹಿಡಿಯಲು ಸುಪರ್ಣನೆಂಬ ಪಕ್ಷಿಯನ್ನು ಕಳಿಸುತ್ತಾನೆ. ಆದರೆ ಫಣಿಗಳ ಎಂಜಲು ಕಾಸಿಗೆ ಕೈಯ್ಯೊಡ್ಡಿದ ಸುಪರ್ಣ ಇಂದ್ರನಿಗೆ ವಿಶ್ವಾಸದ್ರೋಹವನ್ನು ಮಾಡುತ್ತಾನೆ. ನಂತರ ಇಂದ್ರ ಸರಮೆಗೆ ಈ ಕೆಲಸವನ್ನು ಒಪ್ಪಿಸಿದಾಗ ತನ್ನ ಮರಿಗಳಿಗೆ ಆ ಆಕಳ ಹಾಲನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾಳೆ. ಬಹಳ ಚಾಕಚಕ್ಯತೆಯಿಂದ ಫಣಿಗಳ ಇರವನ್ನು ಸರಮೆ ಕಂಡು ಹಿಡಿಯುತ್ತಾಳೆ. ಫಣಿಗಳು ಅವಳನ್ನು ’ನೀನು ನಮ್ಮ ಸೋದರಿಯಾಗು. ಇಂದ್ರನನ್ನು ಮರೆ’ ಎಂದು ಆಮಿಷ ಒಡ್ಡುತ್ತಾರೆ. ಆದರೆ ಸರಮೆ ಅದಕ್ಕೆ ಕಿವಿಗೊಡದೆ ಅವರ ತಾವನ್ನು ಇಂದ್ರನಿಗೆ ತಿಳಿಸುತ್ತಾಳೆ. ಇಂದ್ರನು ಫಣಿಗಳನ್ನು ನಾಶಮಾಡಿ ಗೋವುಗಳನ್ನು ರಕ್ಷಿಸುತ್ತಾನೆ. ಹೀಗೆ ಸರಮೆ ವಿಶ್ವಾಸಪಾತ್ರ ಪತ್ತೇದಾರಳಾಗಿ ಪ್ರಸಿದ್ಧಳಾಗಿದ್ದಾಳೆ. ಇಂದಿಗೂ ಅವಳ ಸಂತಾನವಾದ ’ಸಾರಮೇಯ’ ಅಂದರೆ ನಾಯಿಗಳು ಯಜಮಾನನಿಗೆ ನಿಷ್ಠವಾಗಿರುತ್ತವೆ ಹಾಗೂ ಅಪರಾಧ ಪತ್ತೆ ಮಾಡುವಲ್ಲಿ ನಿಷ್ಣಾತವಾಗಿವೆ.
(ಮುಂದುವರಿಯುವುದು........)


ಮಹಾಬಲ ಭಟ್, ಗೋವಾ

Saturday, March 25, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – 25

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಉರ್ವಶಿ: ಋಗ್ವೇದದಲ್ಲಿರುವ ಅನೇಕ ಸಂವಾದ ಸೂಕ್ತಗಳಲ್ಲಿ ಹತ್ತನೆಯ ಮಂಡಲದ ೯೫ ನೇ ಸೂಕ್ತವೂ ಒಂದು. ಇದರಲ್ಲಿ ಅಪ್ಸರೆ ಉರ್ವಶೀ ಹಾಗೂ ಚಂದ್ರವಂಶದ ರಾಜ ಪುರೂರವನ ಸಂವಾದವಿದೆ. ದೇವಲೋಕದ ಅಪ್ಸರೆಯಾದ ಉರ್ವಶಿ ಭೂಲೋಕಕ್ಕೆ ಬಂದಾಗ ಪುರೂರವ ಮೋಹಿತನಾಗಿ ಅವಳನ್ನು ವಿವಾಹವಾಗುತ್ತಾನೆ. ಮೂರು ಷರತ್ತುಗಳನ್ನು ವಿಧಿಸಿ ಉರ್ವಶಿ ಒಪ್ಪಿಕೊಳ್ಳುತ್ತಾಳೆ. ಅವಳ ಆಡುಗಳ ರಕ್ಷಣೆ, ಕೇವಲ ತುಪ್ಪದ ಸೇವನೆ ಮತ್ತು ಸಂಭೋಗ ಸಮಯದಲ್ಲದೆ ವಿವಸ್ತ್ರನಾಗಿ ಕಣ್ಣಿಗೆ ಬೀಳಬಾರದು ಎಂಬವೇ ಮೂರು ಷರತ್ತುಗಳು. ಅವರು ಸುಖ ದಾಂಪತ್ಯದಲ್ಲಿ ಯಯಾತಿಯೆಂಬ ಮಗನನ್ನು ಪಡೆಯುತ್ತಾರೆ. ಉರ್ವಶಿಯಿಲ್ಲದೆ ಕೊರಗುತ್ತಿದ್ದ ದೇವತೆಗಳು ಒಂದು ರಾತ್ರಿ ಅವಳ ಆಡುಗಳನ್ನು ಅಪಹರಿಸುತ್ತಾರೆ. ಅವರ ಕೂಗಿಗೆ ಎದ್ದ ಇಬ್ಬರೂ ವಿವಸ್ತ್ರವಾಗಿರುವಾಗ ಪರಸ್ಪರ ನೋಡುತ್ತಾರೆ. ನಿಯಮಭಂಗವಾದ ಕಾರಣ ಉರ್ವಶಿ ಸ್ವರ್ಗಕ್ಕೆ ನಡೆಯುತ್ತಾಳೆ.

ವಸುಕ್ರಪತ್ನಿ: ಇಂದ್ರನ ಮಗನಾದ ವಸುಕ್ರ ಎನ್ನುವವನ ಮಗಳು ಇವಳು. ಹತ್ತನೆಯ ಮಂಡಲದ ಇಪ್ಪತ್ತೆಂಟನೆಯ ಸೂಕ್ತದ ಋಷಿಕೆ. ಹನ್ನೆರಡು ಮಂತ್ರಗಳನ್ನು ಹೊಂದಿರುವ ಈ ಸೂಕ್ತದಲ್ಲಿ ಇಂದ್ರನ ಹಾಗೂ ವಸುಕ್ರನ ಸ್ತುತಿಯಿದೆ.

ಇಂದ್ರಾಣಿ: ಹತ್ತನೆಯ ಮಂಡಲದ ೮೬ ನೇ ಸೂಕ್ತದ ಋಷಿಕೆ. ಇಂದ್ರಪರಕವಾದ ಈ ಸೂಕ್ತದಲ್ಲಿ ಹತ್ತು ಮಂತ್ರಗಳು ಇಂದ್ರಾಣಿಯವು.
(ಮುಂದುವರಿಯುವುದು......)

ಮಹಾಬಲ ಭಟ್, ಗೋವಾ

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...