Thursday, March 30, 2017

ಸಾವಿತ್ರೀ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೩೦

ಸಾವಿತ್ರೀ

ಸತ್ಯವಾನ್-ಸಾವಿತ್ರಿಯ ಕಥೆ ಯಾರಿಗೆ ಗೊತ್ತಿಲ್ಲ. ಮೃತ್ಯುವನ್ನೇ ಗೆದ್ದ ಸಾವಿತ್ರಿ ಧೈರ್ಯಶಾಲಿನಿ ಸತಿಯರ ಪಂಕ್ತಿಯಲ್ಲಿ ಅಗ್ರಗಣ್ಯಳಾಗಿ ನಿಲ್ಲುತ್ತಾಳೆ.

ಮದ್ರದೇಶದ ಅಧಿಪತಿ ಅಶ್ವಪತಿಯ ಮಗಳು ಇವಳು. ಸಕಲವಿದ್ಯಾಸಂಪನ್ನೆ. ರೂಪಯೌವನಗಳು ಅನರ್ಥಕಾರಿಗಳಾಗದಂತೆ ವಿದ್ಯೆಯು ಇವಳಿಗೆ ವಿನಯವನ್ನಿತ್ತಿತ್ತು. ಅವಳಿಗೆ ತಕ್ಕನಾದ ವರನನ್ನು ಹುಡುಕುವುದು ಅಶ್ವಪತಿಗೆ ಸಮಸ್ಯೆಯಾಗಿತ್ತು. ತಂದೆಯ ಅನುಜ್ಞೆಯಂತೆ ವರಾನ್ವೇಷಣೆಗೆ ಹೊರಟ ಸಾವಿತ್ರಿ ಅನೇಕ ರಾಜರ್ಷಿಗಳನ್ನು ತನ್ನ ಒರೆಗಲ್ಲಿಗೆ ಹಚ್ಚಿದಳು. ಕೊನೆಗೆ ಅವಳ ಮನಸ್ಸನ್ನು ಗೆದ್ದ ಯುವಕ ಶಾಲ್ವದೇಶದ ದ್ಯುಮತ್ಸೇನನ ಮಗನಾಗಿದ್ದ ’ಸತ್ಯವಾನ”. ಅವನು ಸಣ್ಣವನಾಗಿದ್ದಾಗಲೇ ರಾಜನ ವಯೋಸಹಜ ದೃಷ್ಟಿಹೀನತೆಯ ಲಾಭ ಪಡೆದಿದ್ದ ಶತ್ರುಗಳು ರಾಜ್ಯವನ್ನು ಅಪಹರಿಸಿದ್ದರು. ಸಾವಿತ್ರಿಗೆ ಅವನ ರಾಜ್ಯಹೀನತೆಯಾಗಲೀ ಬಡತನವಾಗಲೀ ಅವನನ್ನು ವರನನ್ನಾಗಿ ಆರಿಸುವಲ್ಲಿ ಪ್ರತಿಬಂಧಕಗಳಾಗಲಿಲ್ಲ. ಸತ್ಯವಾನನ ಗುಣಶೀಲ, ವಿದ್ಯಾ, ವಿನಯತೆಗೆ ತಲೆ ಬಾಗಿದಳು.
ಅಶ್ವಪತಿ ವಿರೋಧಿಸಲಿಲ್ಲ. ಆದರೆ ನಾರದರು ಬಂದು ಸತ್ಯವಾನನ ಆಯಸ್ಸು ಇನ್ನು ಒಂದೇ ವರ್ಷ ಎಂದಾಗ ದಿಗಿಲುಗೊಂಡು ನಿರ್ಧಾರವನ್ನು ಬದಲಿಸುವಂತೆ ಸಾವಿತ್ರಿಯನ್ನು ಕೇಳಿಕೊಂಡ. ’ಸಕೃತ್ ಕನ್ಯಾ ಪ್ರದೀಯತೇ’ ಎಂಬ ವಚನವನ್ನು ಮುಂದಿಟ್ಟುಕೊಂಡು ಸಾವಿತ್ರಿ ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ಮದುವೆಯಾಯಿತು. ದಂಪತಿಗಳು ಕಷ್ಟ-ಸುಖಗಳನ್ನು ಹಂಚಿಕೊಂಡು ಒಂದು ವರ್ಷ ಕಳೆದರು. ’ಆ ದಿನ’ ಸಮೀಪಿಸಿತು. ಸಾವಿತ್ರಿಗೆ ಗಂಡನನ್ನು ಉಳಿಸಿಕೊಳ್ಳುವ ಛಲ ಇತ್ತು. ಕಾಡಿಗೆ ಕಟ್ಟಿಗೆ ತರಲು ಹೊರಟ ಅವನನ್ನು ತಾನೂ ಅನುಸರಿಸಿದಳು. ’ಆ ಕ್ಷಣ’ ವೂ ಬಂದೇ ಬಿಟ್ಟಿತ್ತು. ಸತ್ಯವಾನನ ದೇಹ ನಿಶ್ಚೇಷ್ಟಿತವಾಗಿ ಬಿದ್ದಿತ್ತು. ಅಂತಹ ಧರ್ಮಾತ್ಮನ ಆತ್ಮವನ್ನು ತೆಗೆದುಕೊಂಡು ಹೋಗಲು ಸ್ವತ: ಯಮಧರ್ಮರಾಜನೇ ಆಗಮಿಸಿದ್ದ. ಸಾವಿತ್ರಿ ಅವನನ್ನು ಹಿಂಬಾಲಿಸಿದಳು. ಯಮನಿಗೆ ಕರುಣೆ ಉಕ್ಕಿತು. ಅವಳ ಜೊತೆ ಮಾತಿಗಾರಂಭಿಸಿದ. ಅವಳ ಯುಕ್ತಿಯುಕ್ತ ಮಾತಿಗೆ ಮರುಳಾಗಿ ಸತ್ಯವಾನನ ಜೀವವೊಂದನ್ನು ಬಿಟ್ಟು ಮತ್ಯಾವುದೇ ವರ ಬೇಡು ಅಂದ. ಸಾವಿತ್ರಿ ಚತುರೆ. ಅಂತಹ ಕಷ್ಟಮಯ ಸಮಯದಲ್ಲೂ ಅವಳ ಚಾಕಚಕ್ಯತೆ ಕೆಲಸ ಮಾಡಿತು. ತನ್ನ ವಾಕ್ಚಾತುರ್ಯದಿಂದ ಯಮನನ್ನು ಮರುಳಾಗಿಸಿ ಒಟ್ಟು ನಾಲ್ಕು ವರಗಳನ್ನು ಪಡೆದಳು. ಮಾವನ ದೃಷ್ಟಿ ಮತ್ತು ರಾಜ್ಯವನ್ನು ಮೊದಲೆರಡು ವರಗಳಿಂದಲೂ, ತಂದೆಗೆ ನೂರು ಗಂಡುಮಕ್ಕಳನ್ನು ಮೂರನೆಯ ವರದಿಂದಲೂ ದೊರಕಿಸಿದ ಸಾವಿತ್ರಿ ನಾಲ್ಕನೆಯ ವರದಿಂದ ತನಗೆ ನೂರು ಮಕ್ಕಳು ಹುಟ್ಟುವಂತೆ ವರ ಪಡೆದಳು. ಈ ವರವನ್ನು ದಯಪಾಲಿಸಿ ಯಮ ತನ್ನ ಮಾತಿನಿಂದಲೇ ಬದ್ಧನಾದ. ಪತಿಯಿಲ್ಲದೆ ಪತಿವ್ರತೆಗೆ ಸಂತಾನವಾಗಲು ಸಾಧ್ಯವೆ? ಸಂತಾನ ಪಡೆಯುವ ಪರ್ಯಾಯ ಮಾರ್ಗವನ್ನು ಸೂಚಿಸುವ ದುಸ್ಸಾಹಸವನ್ನು ಯಮ ಮಾಡಲಿಲ್ಲ. ಸತ್ಯವಾನನ ಜೀವವನ್ನು ಹಿಂತಿರುಗಿಸಿದ.

ಕಷ್ಟವನ್ನೇ ಮೆಟ್ಟಿಲಾಗಿಸಿಕೊಂಡು ಗಂಡನನ್ನು ಉಳಿಸಿಕೊಂಡದ್ದೇ ಅಲ್ಲದೆ ಸೇರಿದ ಮನೆಗೂ, ತವರು ಮನೆಗೂ ಶ್ರೇಯಸ್ಸನ್ನುಂಟುಮಾಡಿದ ಸಾವಿತ್ರಿ ಲೋಕವಿಖ್ಯಾತವಾದುದರಲ್ಲಿ ಆಶ್ಚರ್ಯವೇನಿದೆ?


ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...