Thursday, March 30, 2017

ಸುಲಭಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೩೧

ಸುಲಭಾ

ಮಹಾಭಾರತದಲ್ಲಿ ಶ್ರುತಾವತೀ, ಸಿದ್ಧಾ, ಸುಲಭಾ ಮುಂತಾದ ಅನೇಕ ಬ್ರಹ್ಮವಾದಿನಿಯರ ಉಲ್ಲೇಖವಿದೆ. ಸ್ಥಾಲೀಪುಲಾಕ ನ್ಯಾಯದಿಂದ ಅವರಲ್ಲಿ ಒಬ್ಬಳಾದ ಸುಲಭಾ ಎಂಬ ಯೋಗಿನಿಯ ಸಾಧನೆಯನ್ನು ನಿಮ್ಮ ಮುಂದಿಡುತ್ತೇನೆ. ಶಾಂತಿಪರ್ವದ ೩೨೦ನೇ ಅಧ್ಯಾಯದಲ್ಲಿ ಇವಳ ಕಥೆಯಿದೆ.

ಪ್ರಧಾನ ಎಂಬ ರಾಜರ್ಷಿಯ ಮಗಳು ಮಗಳು ಸುಲಭಾ. ವೇದಶಾಸ್ತ್ರಾದಿಪಾರಂಗತೆಯಾಗಿದ್ದ ಅವಳು ಒಬ್ಬಳು ಶ್ರೇಷ್ಠವಾದ ಯೋಗಿನಿಯಾಗಿದ್ದಳು. ಅವಳೇ ಹೇಳಿಕೊಂಡಂತೆ ತನ್ನ ವಿದ್ಯೆ, ಜ್ಞಾನಗಳಿಗೆ ಅನುರೂಪನಾದ ವರ ಸಿಗದೆ ವೈರಾಗ್ಯವೇ ಮೋಕ್ಷಸಾಧನೆಯೆಂದು ಅರಿತು ಸಂನ್ಯಾಸತ್ವವನ್ನು ಸ್ವೀಕರಿಸಿದ್ದಳು. ಪರಿವ್ರಾಜಕಳಾಗಿ ಸಂತರನ್ನೂ ಬ್ರಹ್ಮಜ್ಞಾನಿಗಳನ್ನೂ ಸಂದರ್ಶಿಸುತ್ತ ಆತ್ಮವಿಚಾರವನ್ನು ಚರ್ಚಿಸುತ್ತಿದ್ದಳು. ಒಮ್ಮೆ ರಾಜರ್ಷಿ ಜನಕನ ವಿಚಾರ ಅವಳ ಕಿವಿಗೆ ಬಿತ್ತು. ಅವನೊಂದಿಗೆ ವಾಕ್ಯಾರ್ಥವನ್ನು ಮಾಡುವ ಮನಸ್ಸಾಯಿತು. ಸುಂದರ ಯುವತಿಯ ರೂಪದಲ್ಲಿ ಮಿಥಿಲೆಗೆ ಬಂದು ಜನಕನ ಮುಂದೆ ನಿಂತಳು. ಜನಕ ಮಹಾರಾಜ ಅವಳನ್ನು ಗೌರವದಿಂದ ಸ್ವಾಗತಿಸಿದ. ಜನಕನ ಆಧ್ಯಾತ್ಮ ಸಾಧನೆಯನ್ನು ಪರೀಕ್ಷಿಸಲೋಸುಗ ಯೋಗಮಾರ್ಗದ ಮೂಲಕ ಅವನ ಮನಸ್ಸನ್ನು ಪ್ರವೇಶಿಸಿದಳು. ಜನಕನಿಗೆ ಅದು ಅರಿವಾಗಿ ಕಸಿವಿಸಿಯಾಯಿತು. ಅವನು ಅವಳನ್ನು ಪ್ರಶ್ನಿಸಿದ – “ಹೇ ಯುವತಿ! ಯಾರು ನೀನು? ಯಾರಿಗೆ ಸೇರಿದವಳು? ನೀನು ಹೀಗೆ ಪರಪುರುಷನ ಮನಸ್ಸನ್ನು ಪ್ರವೇಶಿಸುವುದು ತರವಲ್ಲ. ನನ್ನ ಅರಿವಿನೊಂದಿಗೆ ನಿನ್ನ ಅರಿವನ್ನು ಜೋಡಿಸಿ ನೀನು ವ್ಯಭಿಚಾರವನ್ನೆಸಗುತ್ತಿದ್ದೀಯಾ”.

ಸುಲಭಾ ಮುಗುಳ್ನಕ್ಕಳು. ಈ ಮಾತನ್ನು ಅವಳು ನಿರೀಕ್ಷಿಸಿದ್ದಳು. ಅವಳು ಮಾತನಾಡತೊಡಗಿದಳು – “ನಮ್ಮೆಲ್ಲರ ಶರೀರ ಪಾಂಚಭೌತಿಕವಾದದ್ದು. ಎಲ್ಲರ ದೇಹದಲ್ಲಿಯೂ ಇರುವ ದೇಹೀ ಒಬ್ಬನೇ. ಆಧ್ಯಾತ್ಮಿಕವಾಗಿ ಎಲ್ಲರೂ ಒಂದೇ. ನಮ್ಮಲ್ಲಿರುವ ವ್ಯತ್ಯಾಸ ಪ್ರಾಕೃತಿಕವಾದದ್ದು.  ಹಾಗಿರುವಾಗ ನಿನ್ನ ಆತ್ಮವನ್ನು ನನ್ನ ಆತ್ಮದಲ್ಲೂ ನಿನ್ನ ದೇಹವನ್ನು ನನ್ನ ದೇಹದಲ್ಲೂ ಯಾಕೆ ಕಾಣಲಾರೆ? ನೀನಿನ್ನೂ ದ್ವೈತವನ್ನು ದಾಟಿ ಅದ್ವೈತವನ್ನು ತಲುಪಿಲ್ಲ. ಜೀವನ್ಮುಕ್ತತೆಯ ಸ್ತರವನ್ನು ಇನ್ನೂ ಮುಟ್ಟಿಲ್ಲ. ಹಾಗಾಗಿಯೇ ನೀನು ಯಾರು? ನೀನು ಯಾರವಳು? ಎಂಬ ಅರ್ಥಹೀನ ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ. ನನಗೆ ನನ್ನ ದೇಹದ ಜೊತೆಗೇ ನಿಜವಾದ ಸಂಬಂಧವಿಲ್ಲದಿರುವಾಗ ನಿನ್ನನ್ನು ಪ್ರವೇಶಿಸಿರುವುದು ವ್ಯಭಿಚಾರ ಹೇಗೆ? ಪಂಚಶಿಖರು ನಿನಗೆ ಬೋಧಿಸಿದ ತತ್ತ್ವವನ್ನು ಅರ್ಥೈಸಿಕೊಳ್ಳದೆ ಆತ್ಮವನ್ನೂ ದೇಹವನ್ನೂ ಒಂದೇ ಎಂದು ತಿಳಿದು ಇಂತಹ ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ. ನೀನಿನ್ನೂ ಬ್ರಹ್ಮಜ್ಞಾನಕ್ಕೆ ಬಲು ದೂರ ಇದ್ದೀಯಾ.”

ಸುಲಭಾಳ ವಾದವನ್ನು ಕೇಳಿ ಜನಕ ಸ್ತಂಭೀಭೂತನಾದ. ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ. ತನ್ನ ತಪ್ಪನ್ನು ಅರಿತ. ಯೋಗಿನಿಗೆ ಶರಣಾದ.


ಬ್ರಹ್ಮಜಿಜ್ಞಾಸುಗಳ ಗಡಣದಲ್ಲಿ ’ರಾಜರ್ಷಿ’ ಎಂಬ ಬಿರುದನ್ನು ಪಡೆದಿದ್ದ ಜನಕನಿಗೆ ಸವಾಲೆಸೆಯುವುದು, ಅವನನ್ನು ವಾದದಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಆದರೆ ಸುಲಭಾ ಅದನ್ನು ಸುಗಮವಾಗಿ ಮಾಡಿ ಮುಗಿಸಿದ್ದಳು. ಅವಳ ಧೈರ್ಯ, ಆತ್ಮವಿಶ್ವಾಸಗಳಿಗೆ ಎಣೆಯಿಲ್ಲ. ಮಹಿಳೆಯೊಬ್ಬಳು ತನ್ನ ವಿಚಾರಶೀಲತೆಯಿಂದ ಒಬ್ಬಂಟಿಯಾಗಿ ಯಾವ ಮಟ್ಟವನ್ನು ತಲುಪಬಲ್ಲಳು ಎಂಬುದಕ್ಕೆ ಸುಲಭಳು ದೃಷ್ಟಾಂತವಾಗಬಲ್ಲಳು. 

ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...