Monday, March 27, 2017

ಸುಕನ್ಯಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೨೮
ಸುಕನ್ಯಾ

ಮನುವಂಶದ ಶರ್ಯಾತನೆಂಬ ರಾಜ ಭರತಖಂಡದಲ್ಲಿ ರಾಜ್ಯವಾಳುತ್ತಿದ್ದ. ಅವನ ಮಗಳು ಸುಕನ್ಯಾ. ರೂಪದಲ್ಲಿ ಚೆಲುವೆ, ಸಂಸ್ಕಾರವಂತೆ ಹಾಗೂ ವಿದ್ಯಾಸಂಪನ್ನೆಯಾಗಿದ್ದಳು. ಚ್ಯವನನೆಂಬ ಮಹರ್ಷಿ ರಸವಿದ್ಯೆಯಲ್ಲಿ ಖ್ಯಾತನಾಗಿದ್ದ. ಮುದುಕನಾದರೂ ಯೌವನವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಪ್ರಯೋಗನಿರತನಾಗಿದ್ದ. ಕಾಡಿನಲ್ಲಿ ಒಮ್ಮೆ ಸಂಚರಿಸುವಾಗ ಒಂದು ಕಂದರದಲ್ಲಿ ಬಿದ್ದುಬಿಟ್ಟ. ಅವನ ಮೇಲೆ ತರಗೆಲೆಗಳು, ಮಣ್ಣು ಬಿದ್ದು ಯಾರಿಗೂ ಸ್ಪಷ್ಟವಾಗಿ ಕಾಣದಂತಾದ.
ಅದೇ ಸಮಯಕ್ಕೆ ಶರ್ಯಾತ ರಾಜ ತನ್ನ ಪರಿವಾರದೊಂದಿಗೆ ಮೃಗಯಾ ವಿಹಾರಕ್ಕೆಂದು ಆ ಕಾಡಿಗೆ ಬಂದು ಬಿಡಾರ ಹೂಡಿದ್ದ. ಸುಕನ್ಯೆಯೂ ಅವನೊಂದಿಗೆ ಬಂದಿದ್ದಳು. ಪರಿವಾರದ ಜನರು ಆ ಅಸ್ಪಷ್ಟ ಮಾನವಾಕೃತಿಯನ್ನು ಕಂಡು ಕುತೂಹಲದಿಂದ ಕಲ್ಲುಮಣ್ಣುಗಳನ್ನು ಎರಚಿದರು. ಸುಕನ್ಯೆ ಹೊಳೆಯುವ ಕಣ್ಣಿಗೆ ಕಡ್ಡಿಯಿಂದ ಚುಚ್ಚಿದಳು. ಚ್ಯವನ ನೋವಿನಿಂದ ಮುಲುಗಿದ.

ಇತ್ತ ರಾಜನ ಬಿಡಾರದಲ್ಲಿ ಆಶ್ಚರ್ಯಕರ ಘಟನೆಗಳು ನಡೆದವು. ವಿನಾಕಾರಣ ಎಲ್ಲರೂ ಪರಸ್ಪರ ಜಗಳವಾಡಹತ್ತಿದರು. ಚೀರತೊಡಗಿದರು. ರಾಜನಿಗೆ ಒಮ್ಮೆಲೇ ನಡೆದ ಈ ವಿದ್ಯಮಾನ ಸೋಜಿಗವನ್ನು ತಂದಿತು. ಆಗ ಅವನ ಮಂತ್ರಿಗಳು ಚ್ಯವನನಿಗೆ ಸೇವಕರು ಕೊಟ್ಟ ತೊಂದರೆಗಳನ್ನು ತಿಳಿಸಿದರು. ರಾಜ ಅಲ್ಲಿಗೆ ಧಾವಿಸಿದ. ಚ್ಯವನನನ್ನು ಪ್ರಾರ್ಥಿಸಿದ. ರಾಜನ ವಿನಯತೆ ಚ್ಯವನನಿಗೆ ಇಷ್ಟವಾಯಿತು. ಅಕಸ್ಮಾತ್ ಅವನ ದೃಷ್ಟಿ ರಾಜನ ಪಕ್ಕದಲ್ಲಿ ನಿಂತಿದ್ದ ಸುಕನ್ಯೆಯ ಮೆಲೆ ಬಿತ್ತು. ಅವಳ ಯೌವನ ಅವನನ್ನು ಆಕರ್ಷಿಸಿತು. ಅವಳನ್ನು ತನಗೆ ಮದುವೆ ಮಾಡಿಕೊಟ್ಟರೆ ತೊಂದರೆಯನ್ನು ನಿವಾರಿಸುವುದಾಗಿ ಹೇಳಿದ. ರಾಜ ದಿಗ್ಭ್ರಾಂತನಾದ. ಆದರೆ ಅನಿವಾರ್ಯವಾಗಿತ್ತು. ಸುಕನ್ಯೆಯ ಮನದಲ್ಲೂ ಅಪರಾಧಿ ಭಾವ ಮೊಳೆದಿತ್ತು. ಒಟ್ಟಿನಲ್ಲಿ ಮುದುಕನನ್ನು ಮದುವೆಯಾಗುವ ಭಾಗ್ಯ ಅವಳ ಹಣೆಯಲ್ಲಿ ಬರೆದಿತ್ತು. ಅವಳದನ್ನು ಸ್ವೀಕರಿಸಿದಳು. ಶ್ರದ್ಧೆಯಿಂದ ಗಂಡನ ಸೇವೆ ಮಾಡುತ್ತಿದ್ದಳು.

ದೇವವೈದ್ಯರಾದ ಅಶ್ವಿನೀಕುಮಾರರು ಒಮ್ಮೆ ಅವಳನ್ನು ನೋಡಿದರು. ಹಣ್ಣು ಹಣ್ಣು ಮುದುಕನಿಗೆ ನವತಾರುಣ್ಯದ ಹೆಂಡತಿ. ಯಮಳರು ಸುಕನ್ಯೆಯಲ್ಲಿಗೆ ಬಂದು ಮುದುಕನನ್ನು ಬಿಟ್ಟು ತಮ್ಮೊಂದಿಗೆ ಬಂದು ಬಿಡು ಎಂದರು. ಸುಕನ್ಯೆ ನಿತ್ಯರುಣರಾದ ಅವರ ರೂಪದ ಬಲೆಗೆ ಬೀಳಲಿಲ್ಲ. ಸರಿಯಾಗಿ ಮಂಗಳಾರತಿ ಮಾಡಿ ಕಳುಹಿದಳು. ಚ್ಯವನನಿಗೆ ಇದು ಗೊತ್ತಾಯಿತು. ತನ್ನ ಹೆಂಡತಿಯ ಮೇಲೆ ಅಭಿಮಾನ ಮೂಡಿತು. ಈ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಯೋಚಿಸಿ ಮರುದಿನ ಮತ್ತೆ ಅವರು ಬಂದರೆ ಏನು ಹೇಳಬೇಕೆಂದು ತನ್ನ ಹೆಂಡತಿಗೆ ಸೂಚಿಸಿದನು.

ಮರುದಿನ ಅವಳಿಕುಮಾರರು ಮತ್ತೆ ಸುಕನ್ಯೆಯಲ್ಲಿಗೆ ಬಂದಳು. ಆಗ ಅವಳು ’ ನೀವು ನನ್ನ ಗಂಡನಷ್ಟು ಶ್ರೇಷ್ಠರಲ್ಲ. ನಿಮಗೆ ಯಜ್ಞದಲ್ಲಿ ಹವಿರ್ಭಾಗವಿಲ್ಲ. ದೇವತೆಗಳು ನಿಮ್ಮನ್ನು ಹೊರಗಿಟ್ಟಿರುವರು’ ಅಂದಳು. ’ನನ್ನ ಗಂಡ ನಿಮಗೆ ಸೋಮರಸ ಪಾನ ಮಾಡಿಸಬಲ್ಲರು’ ಎಂದೂ ಸೂಚಿಸಿದಳು. ಅಶ್ವಿನೀಕುಮಾರರಿಗೆ ಆಸೆಯಾಯಿತು. ಅವರು ಚ್ಯವನನಲ್ಲಿಗೆ ಬಂದು ವಿನಂತಿಸಿಕೊಂಡರು. ಆಗ ತನ್ನನ್ನು ನವಯುವಕನನ್ನಾಗಿ ಮಾಡಿದರೆ ತಾನು ಅವರಿಗೆ ಸ್ಥಾನಮಾನ ಕೊಡಿಸುವುದಾಗಿ ಚ್ಯವನ ಹೇಳಿದ. ಅಶ್ವಿನೀಕುಮಾರರು ಒಪ್ಪಿಕೊಂಡರು. ಸರಸ್ವತೀನದಿಯಲ್ಲಿ ಮುಳುಗು ಹಾಕಿ ಬಂದ ಚ್ಯವನ ನವ ಯುವಕನಾದ. ಸುಕನ್ಯೆಯ ಪತಿನಿಷ್ಠೆ ಫಲ ನೀಡಿತು. ಅವಳ ಬಾಳು ಹಸನಾಯಿತು.


ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...