ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರಾಮಚರಿತೆಯ ಚಿತ್ರಗಳನ್ನು ನೋಡುವ ಸಂದರ್ಭದಲ್ಲಿ ಮತ್ತೆ ತಪೋವನಕ್ಕೆ ಹೋಗುವ ಬಯಕೆ ಸೀತೆಯಲ್ಲಿ ಮೂಡುತ್ತದೆ. ಅದನ್ನು ಕೇಳಲೆ ಎಂದು ರಾಮನಲ್ಲಿ ಕೇಳಿದಾಗ, ’ಕೇಳುವುದಲ್ಲ, ಆಜ್ಞಾಪಿಸು’ ಎಂದು ತಾನು ಅವಳ ಸೇವಕನೆಂಬಂತೆ ವರ್ತಿಸುತ್ತಾನೆ.
ಸೀತೆ ರಾಮನ ತೋಳನ್ನೇ ದಿಂಬಾಗಿಸಿ ಗಾಢನಿದ್ರೆಗೆ ಜಾರಿದಾಗಲೇ ಗೂಢಚರ ಬಂದು ಸೀತೆಯ ವಿಷಯದಲ್ಲಿ ಪೌರಜನರಾಡಿಕೊಳ್ಳುತ್ತಿದ್ದ ಮಾತನ್ನು ರಾಮನಿಗೆ ಹೇಳುತ್ತಾನೆ. ರಾಮನಿಗೆ ವಜ್ರಾಘಾತವಾಗುತ್ತದೆ. ತೋಳಿನಲ್ಲಿ ಪ್ರೀತಿಯ ಮಡದಿ, ಕಿವಿಯಲ್ಲಿ ಇಂತಹ ಕಠೋರ ಮಾತು. ಸೀತೆಗೆ ನಿದ್ರಾಭಂಗವಾಗದಂತೆ ವಿಲಪಿಸುತ್ತಾನೆ. ಕೊನೆಗೂ ಕಠಿನನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾದ್ದರಿಂದ ಅವಳ ತಲೆಯನ್ನು ಮೆಲ್ಲಗೆ ತೋಳಿನಿಂದ ಜಾರಿಸಿ ಅವಳ ಪಾದಗಳ ಬಳಿಬಂದು ಅವಳ ಚರಣಗಳನ್ನು ತನ್ನ ತಲೆಗೊತ್ತಿಕೊಂಡು ’ದೇವಿ, ಅಯಂ ಪಶ್ಚಿಮಸ್ತೇ ರಾಮಶಿರಸಾ ಪಾದಪಂಕಜಸ್ಪರ್ಶಃ (ದೇವಿ, ರಾಮನ ಶಿರಸ್ಸಿನಿಂದ ಇದೇ ನಿನ್ನ ಪಾದಪಂಕಜದ ಕೊನೆಯ ಸ್ಪರ್ಶ). ಇಲ್ಲಿ ಕೊನೆಯ ಸ್ಪರ್ಶ ಎನ್ನುವುದು ಗಮನಾರ್ಹ. ಸೀತೆಯ ಚರಣಗಳಿಗೆ ತಲೆಬಾಗುವುದು ರಾಮನ ನಿತ್ಯಕ್ರಿಯೆಯಾಗಿತ್ತು ಎಂಬುದು ಇಲ್ಲಿನ ಧ್ವನಿಯಾಗಿರಬಹುದು ಅಲ್ಲವೆ?
ಶಂಬೂಕವಧೆಯ ವ್ಯಾಜದಿಂದ ವನಪ್ರವೇಶ ಮಾಡಿದ ರಾಮನಿಗೆ ಮತ್ತೆ ಸೀತೆಯ ನೆನಪಾಗುತ್ತದೆ. ಪರಿಪರಿಯಾಗಿ ವಿಲಪಿಸುತ್ತಾನೆ. ಭಾಗೀರಥಿಯ ವರದಿಂದ ಸೀತೆ ಯಾರಿಗೂ ಕಾಣದಂತೆ ಅದೃಶ್ಯರೂಪವನ್ನು ತಳೆದಿದ್ದಳು. ಅವಳು ರಾಮನನ್ನು ಸಂತೈಸಲು ಅವನನ್ನು ಸ್ಪರ್ಶಿಸಿದಾಗ ರಾಮ ತನಗೆ ಸೀತೆಯ ಅನುಗ್ರಹವಾಯಿತು ಎಂದು ಭಾವಿಸುತ್ತಾನೆ.
ಪ್ರಸಾದ ಇವ ಮೂರ್ತಸ್ತೇ ಸ್ಪರ್ಶಃ ಸ್ನೇಹಾರ್ದ್ರಶೀತಲಃ|
ಅದ್ಯಾಪ್ಯಾನಂದಯತಿ ಮಾಂ ತ್ವಂ ಪುನಃ ಕ್ವಾಸಿ ನಂದಿನೀ || ಉ.ರಾ.ಚ., ತೃತೀಯೋಂಕಃ, ೧೪
ಪುರುಷನಾದವನು ಕಾಂತೆಯನ್ನು ಸೇವೆಯಿಂದ ಒಲಿಸಿಕೊಳ್ಳಬೇಕೇ ಹೊರತು ಪೌರುಷದಿಂದ ಪೀಡಿಸಬಾರದು ಎನ್ನುವ ಸಂದೇಶವನ್ನು ರಾಮನ ಮೂಲಕ ಭವಭೂತಿ ನೀಡಿದ್ದಾನೆ. ವನದೇವತೆ ವಾಸಂತಿಯೊಡನೆ ವನದ ಆಗುಹೋಗುಗಳನ್ನು ವೀಕ್ಷಿಸುತ್ತ, ಅವೆಲ್ಲವನ್ನೂ ತನ್ನ ಹಾಗೂ ಸೀತೆಯ ಜೀವನದೊಂದಿಗೆ ಹೋಲಿಸಿಕೊಳ್ಳುತ್ತ ಇರುವ ಸಂದರ್ಭದಲ್ಲಿ ಒಂದು ಆನೆಜೋಡಿಯನ್ನು ನೋಡುತ್ತಾನೆ. ಅದರಲ್ಲಿ ಗಂಡಾನೆ ಹೆಣ್ಣಾನೆಯನ್ನು ಒಲಿಸಿಕೊಳ್ಳುತ್ತಿರುವ ವರ್ಣನೆ ತುಂಬ ಸುಂದರವಾಗಿದೆ.
ಲೀಲೋತ್ಖಾತಮೃಣಾಲಕಾಂಡಕವಚ್ಛೇದೇಷು ಸಂಪಾದಿತಾಃ
ಪುಷ್ಯತ್ಪುಷ್ಕರವಾಸಿತಸ್ಯ ಪಯಸೋ ಗಂಡೂಷಸಂಕ್ರಾಂತಯಃ|
ಸೇಕಃ ಶೀಕರಿಣಾ ಕರೇಣ ವಿಹಿತಃ ಕಾಮಂ ವಿರಾಮೋ ಪುನ-
ರ್ಯತ್ಸ್ನೇಹಾದನರಾಲನಾಲನಲಿನೀಪತ್ರಾತಪತ್ರಂ ಧೃತಮ್ || ಉ.ರಾ.ಚ., ತೃತೀಯೋಂಕಃ, ೧೬
(ಆಟದಲ್ಲಿ ಕಿತ್ತ ತಾವರೆದೇಟುಗಳ ತುತ್ತುಗಳನ್ನು ಕೊಡುತ್ತ, ನಡು ನಡುವೆ ಅರಳಿದ ತಾವರೆಗಳಿಂದ (ಅಥವಾ ಪುಷ್ಟವಾದ ಸೊಂಡಿಲಿಂದ) ಸುವಾಸಿತವಾದ ನೀರಿನ ಗುಟುಕುಗಳನ್ನು ಆ ಹೆಣ್ಣಾನೆಗೆ ನೀಡಿದೆ. ಆ ಮೇಲೆ ತನ್ನ ಸೊಂಡಿಲಿಂದ ಸಿಡಿಯುವ ನೀರಧಾರೆಗಳಿಂದ ಅದಕ್ಕೆ ಬೇಕಾದಷ್ಟು ಜಲಸೇಚನೆಯನ್ನು ಮಾಡಿದೆ; ಸ್ನಾನ ಮಾಡಿಸಿಯಾದ ಮೇಲೆ ಪ್ರೀತಿಯಿಂದ ಒಂದು ನೇರವಾದ ನಾಳವಿರುವ ತಾವರೆಯೆಲೆಯನ್ನು ಛತ್ರಿಯಂತೆ ಅದರ ಮೇಲೆ ಹಿಡಿದಿದೆ.) ಅನುವಾದ: ಡಾ. ಕೆ. ಕೃಷ್ಣಮೂರ್ತಿ, ಡಾ. ಬಿ.ಆರ್. ಮೋಡಕ
ರಾಮ ಇದನ್ನು ವಾಸಂತಿಗೆ ತೋರಿಸುತ್ತ “ಪಶ್ಯ ಪಶ್ಯ, ಕಾಂತಾನುವೃತ್ತಿಚಾತುರ್ಯಮಪಿ ಶಿಕ್ಷಿತಂ ವತ್ಸೇನ” (ಈ ಆನೆಮರಿ ತನ್ನ ಕಾಂತೆಯನ್ನು ಒಲಿಸಿಕೊಳ್ಳುವ ಕೌಶಲ್ಯವನ್ನೂ ಕಲಿತುಕೊಂಡಿದೆ ) ಎನ್ನುತ್ತಾನೆ.
🌸🌸🌸🌸🌸
ಆತ್ಮೀಯರೇ, ರಾಮಾಯಣದೊಂದಿಗೆ ಆರಂಭಿಸಿದ ಲೇಖನಮಾಲೆಗೆ ರಾಮನೊಂದಿಗೆ ವಿರಾಮವನ್ನು ಹೇಳುತ್ತಿದ್ದೇನೆ. ಇದು ಅಲ್ಪ ವಿರಾಮವೇ ಹೊರತು ಪೂರ್ಣವಿರಾಮವಲ್ಲ. ಇಂತಹ ಸನ್ನಿವೇಶಗಳು ಇನ್ನಷ್ಟು ಗ್ರಂಥಗಳಲ್ಲಿ ಮತ್ತಷ್ಟು ಸಿಕ್ಕರೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಓದಿನಲ್ಲಿಯೂ ನಿಮಗೆ ಎಲ್ಲಾದರೂ ಈ ಲೇಖನಮಾಲೆಗೆ ಪೂರಕವಾದ ಮಾಹಿತಿಗಳು ದೊರೆತರೆ ದಯವಿಟ್ಟು ಹಂಚಿಕೊಳ್ಳಿ.
ನನ್ನ ಮಟ್ಟಿಗೆ ಇದೊಂದು ವಿಶಿಷ್ಟ ಲೇಖನಮಾಲೆ. ಅನೇಕ ಗ್ರಂಥಗಳನ್ನು ಓದುವ ಅವಕಾಶವನ್ನು ಒದಗಿಸಿಕೊಟ್ಟ ಬರಹವಿದು. ಇಲ್ಲಿನ ವಿಷಯಗಳ ಬಗ್ಗೆ ಕೆಲವರು ನಿರ್ಬಿಢೆಯಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೀರಿ. ನಿಮಗೆಲ್ಲ ನಾನು ಕೃತಜ್ಞ. ಎಲ್ಲರೂ ಸ್ವಾಭಿಪ್ರಾಯವನ್ನು ಹೇಳಬೇಕೆಂದು ನನ್ನ ಸವಿನಯ ಬಿನ್ನಹ. ನಿಮಗೆ ಇಷ್ಟವಾಗದಿದ್ದರೂ ದಯವಿಟ್ಟು ಹೇಳಿ.
ಮತ್ತೊಂದು ಲೇಖನಮಾಲೆಯೊಂದಿಗೆ ಮತ್ತೆ ಬರುತ್ತೇನೆ. ಆದರೆ ಯಾವಾಗ ಎಂದು ಹೇಳಲಾಗದು ’ಕಾಲೋ ಹ್ಯಯಂ ನಿರವಧಿಃ ....(ಉ.ರಾ.ಚ.). ಅಲ್ಲಿಯವರೆಗೆ ರಾಮ್... ರಾಮ್...
ಮಹಾಬಲ ಭಟ್ಟ, ಗೋವಾ