Thursday, August 3, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಕ ಖ ಗ ಘ

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - 3

*ಕ ಖ ಗ ಘ*

ಒಮ್ಮೆ ಭೋಜರಾಜನ ಆಸ್ಥಾನಕ್ಕೊಬ್ಬ ಪಂಡಿತ ಆಗಮಿಸಿದ. ರಾಜನಿಂದ ಯಥೋಚಿತ ಸತ್ಕಾರ ಪಡೆದು ಪಂಡಿತರ ಮುಂದೆ ಸಮಸ್ಯಾಪೂರ್ತಿಯ ವಾಕ್ಯವನ್ನುಸುರಿದ. ’ಕಖಗಘ’ ಎಂಬುದನ್ನು ಕೊನೆಯ ಪಾದದ ಅಂತಿಮ ಭಾಗವನ್ನಾಗಿರಿಸಿಕೊಂಡು ಕವಿತೆಯೊಂದನ್ನು ರಚಿಸಬೇಕೆಂಬುದೇ ಅವನ ಪಂಥಾಹ್ವಾನವಾಗಿತ್ತು. ನವಮಣಿಗಳು ತಿಣುಕಾಡಿದರೂ ಮಾಡಲಾಗದೆ ತಲೆಯನ್ನು ಕೆಳಗೆ ಹಾಕಿದರು. ನವ ನವೋನ್ಮೇಷಶಾಲಿ ಪ್ರತಿಭೆಯ ಕಾಳಿದಾಸನೂ ಅಪ್ರತಿಭನಾದ. ಒಂದು ದಿನದ ಸಮಾಯಾವಕಾಶ ಕೇಳಿ ಹೊರಬಿದ್ದ.

ತಲೆಯನ್ನು ಕಖಗಘ ಹುಳು ಕೊರೆಯುತ್ತಿತ್ತು. ದಾರಿಯಲ್ಲಿ ಸಾಗುತ್ತಿರುವಾಗ ಮುಗ್ಧ ಬಾಲಿಕೆಯೊಬ್ಬಳನ್ನು ನೋಡಿ ಆಕರ್ಷಿತನಾದ. ಅವಳೊಂದಿಗೆ ಸಂಭಾಷಣೆಗಿಳಿದ. ಅವರ ಸಂಭಾಷಣೆ ಹೀಗಿತ್ತು....

ಕಾಳಿದಾಸ – ಕಾ ತ್ವಂ ಬಾಲೇ? (ಎಲೈ ಬಾಲೆಯೇ ನೀನಾರು?)

ಬಾಲೆ – ಕಾಂಚನಮಾಲಾ

ಕಾಳಿದಾಸ – ಕಸ್ಯಾಃ ಪುತ್ರೀ? (ಯಾವಳ ಮಗಳು?)

ಬಾಲೆ – ಕನಕಲತಾಯಾಃ | (ಕನಕಲತೆಯ ಮಗಳು.)

ಕಾಳಿದಾಸ – ಹಸ್ತೇ ಕಿಂ ತೇ? (ನಿನ್ನ ಕೈಯಲ್ಲೇನಿದೆ?)

ಬಾಲೆ – ತಾಲೀಪತ್ರಮ್ | (ತಾಳೆಯ ಗರಿಗಳು.)

ಕಾಳಿದಾಸ – ಕಾ ವಾ ರೇಖಾ? (ಏನು ಬರೆದಿದೆ ಅದರಲ್ಲಿ?)

ಬಾಲೆ – ಕ ಖ ಗ ಘ


ತಾನು ಯೋಚಿಸುತ್ತಿರುವುದೇ ಅವಳ ಬಾಯಿಂದ ಬಂದಾಗ ಸಾವಿರ ದೀಪಗಳು ಹೊತ್ತಿದಂತಾಯ್ತು ಕಾಳಿದಾಸನ ಮಿದುಳಲ್ಲಿ. ಅವನ ಕವನ ಸಿದ್ಧವಾಗಿ ಹೋಯ್ತು.

ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ |
ಹಸ್ತೇ ಕಿಂ ತೇ? ತಾಲೀಪತ್ರಂ
ಕಾ ವಾ ರೇಖಾ? ಕಖಗಘ ||


ಸರಳ ಸುಂದರ ಪದ್ಯಕ್ಕೆ ಬೇರೆ ಉದಾಹರಣೆ ಬೇಕೆ ?!

📝 *ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Wednesday, August 2, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು-ವಿದ್ಯಾಹೀನಾ ನ ಶೋಭಂತೇ…...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು

ಪ್ರಸಂಗ - ೨

ವಿದ್ಯಾಹೀನಾ ನ ಶೋಭಂತೇ…...


ಆಂಧ್ರಪ್ರದೇಶದ ಒಂದು ಅಗ್ರಹಾರ. ಅಲ್ಲಿ ದೇವಶರ್ಮಾ ಎಂಬ ಪಂಡಿತನಿದ್ದ. ಅವನಿಗೊಬ್ಬ ಮಗ ಜನಿಸಿದ. ಅವನ ಹೆಸರು ಮಲ್ಲೀನಾಥ. ಆಲಸಿಯಾಗಿದ್ದ ಮಗನನ್ನು ವಿದ್ಯಾಸಂಪನ್ನನನ್ನಾಗಿ ಮಾಡುವ ತಂದೆಯ ಪ್ರಯತ್ನ ಫಲಿಸದೆ ಮಗ ನಿರಕ್ಷರಿಯಾಗಿಯೇ ಉಳಿದ. ಮದುವೆಯ ವಯಸ್ಸು ಬಂದಾಗ ಮಲ್ಲೀನಾಥನಿಗೆ ಮದುವೆಯೂ ಆಯಿತು. ಅವನ ಪತ್ನಿ ಹಾಗೂ ಅವಳ ಅಣ್ಣತಮ್ಮಂದಿರೆಲ್ಲ ವಿದ್ಯಾವಂತರಾಗಿದ್ದರು. ಅವರೆಲ್ಲ ಇವನನ್ನು ಮೂದಲಿಸುತ್ತಿದ್ದರು. ಒಮ್ಮೆ ಮಲ್ಲೀನಾಥ ಮಾವನ ಮನೆಗೆ ಹೋದಾಗ ಅವನ ಬಾವ ಮೈದುನರು ಅವನ ಅಜ್ಞಾನವನ್ನು ನೋಡಿ ಗೇಲಿ ಮಾಡಿದರು. ಅದರಿಂದ ಮಲ್ಲೀನಾಥನಿಗಿಂತ ಅವನ ಮಡದಿಗೆ ಹೆಚ್ಚು ಅವಮಾನವಾಯಿತು. ಅವನನ್ನು ಕರೆದುಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಮಲ್ಲೀನಾಥ ಪಲಾಶ(ಮುತ್ತುಗ) ವೃಕ್ಷವೊಂದರಲ್ಲಿ ಅರಳಿದ ಸುಂದರವಾದ ಹೂವಗಳನ್ನು ಪತ್ನಿಗೆ ತೋರಿಸಿದ. ಆಗ ಪತ್ನಿಯು ಚಾಣಕ್ಯನ ಸೂಕ್ತಿಯೊಂದನ್ನು ಅವನಿಗೆ ಹೇಳಿದಳು.

ರೂಪಯೌವನಸಂಪನ್ನಾ
ವಿಶಾಲಕುಲಸಂಭವಾಃ |
ವಿದ್ಯಾಹೀನಾ ನ ಶೋಭಂತೇ
ನಿರ್ಗಂಧಾ ಇವ ಕಿಂಶುಕಾಃ||

ಶ್ರೇಷ್ಠವಾದ ಕುಲದಲ್ಲಿ ಹುಟ್ಟಿ ರೂಪ, ಯೌವ್ವನಗಳಿಂದ ಕೂಡಿದ್ದರೂ ವಿದ್ಯೆಯಿಲ್ಲದವರು ಸುಗಂಧವಿಲ್ಲದ ಸುಂದರ ಪಾಲಾಶಕುಸುಮದಂತೆ ಜೀವನವನ್ನು ವ್ಯರ್ಥವಾಗಿ ಕಳೆಯುವರು.

ವಿದುಷಿ ಪತ್ನಿಯ ಮಾತು ಅವಮಾನದಿಂದ ಜರ್ಜರಿತನಾಗಿದ್ದ ಮಲ್ಲೀನಾಥನ ಹೃದಯಕ್ಕೆ ನಾಟಿತು. ಮನೆಗೆ ಹೋಗದೆ ನೇರವಾಗಿ ಗುರುಕುಲವನ್ನು ತಲುಪಿದ. ಗುರುಗಳು ಕನಿಕರದಿಂದ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರದ್ಧೆಯಿಂದ ಅಧ್ಯಯನ ಮಾಡಿದ ಮಲ್ಲೀನಾಥ ಜ್ಞಾನಸಂಪನ್ನನಾದ.


ಅನೇಕ ವರ್ಷಗಳ ಅಧ್ಯಯನದ ನಂತರ ಒಂದಿನ ಗುರುಮಾತೆ ನೀಡಿದ ಭೋಜನವನ್ನು ಸ್ವೀಕರಿಸುವಾಗ ಮಲ್ಲೀನಾಥ ಕೇಳಿದ ’ಅಮ್ಮಾ! ಇಂದೇಕೋ ಊಟ ಕಹಿಯಾಗಿದೆಯಲ್ಲ. ಏನಾದರೂ ಕಹಿ ಪದಾರ್ಥ ಬಿದ್ದಿರಬಹುದೆ?’ ಆಗ ಗುರುಗಳು ಹೇಳಿದರು – ’ಮಲ್ಲೀನಾಥ! ಇಂದಿಗೆ ನಿನ್ನ ವಿದ್ಯಾಭ್ಯಾಸ ಮುಗಿಯಿತು. ಪ್ರತಿದಿನವೂ ನಿನ್ನ ಊಟದಲ್ಲಿ ಬೇವಿನ ಎಣ್ಣೆಯನ್ನು ಬೆರೆಸಲು ನಾನೇ ಸೂಚಿಸಿದ್ದೆ. ಆದರೆ ಅಧ್ಯಯನದಲ್ಲಿ ಮುಳುಗಿಹೋಗಿದ್ದ ನಿನಗೆ ಇನ್ನ್ಯಾವ ಪರಿವೆಯೂ ಇರಲಿಲ್ಲ. ಇಂದು ನಿನಗೆ ಕಹಿ ತಿಳಿಯಿತು. ಇದು ನಿನ್ನ ವಿದ್ಯಾಭ್ಯಾಸ ಪೂರ್ತಿಯಾದ ಲಕ್ಷಣ’ ಎಂದರು. ಗುರುವಿಗೆ ಯಥಾಶಕ್ತಿ ಗುರುದಕ್ಷಿಣೆಯನ್ನು ಅರ್ಪಿಸಿ ಮಲ್ಲೀನಾಥ ಮನೆಗೆ ಬಂದ. ತಾನು ಗಳಿಸಿದ ವಿದ್ವತ್ತಿನಿಂದ ಭರತಖಂಡದ ಅನೇಕ ಪಂಡಿತರನ್ನು ವಾದದಲ್ಲಿ ಸೋಲಿಸಿ ಮಹಾಮಹೋಪಾಧ್ಯಾಯ ಎಂಬ ಬಿರುದನ್ನು ಸಂಪಾದಿಸಿದ. ಮಲ್ಲಿನಾಥ ಸೂರಿ ಎಂದು ಖ್ಯಾತನಾಗಿ ಸಂಸ್ಕೃತದ ಪಂಚ ಮಹಾಕಾವ್ಯಗಳಿಗೆ ಪಾಂಡಿತ್ಯಪೂರ್ಣ ಟೀಕೆಯನ್ನು ಬರೆದುದಲ್ಲದೆ ಅನೇಕ ಸ್ವತಂತ್ರ ಕೃತಿಗಳನ್ನೂ ರಚಿಸಿ ಅಜರಾಮರ ಕೀರ್ತಿಯನ್ನು ಗಳಿಸಿದ. ಇಂದಿಗೂ ಮಹಾಕಾವ್ಯಗಳ ಅಧ್ಯಯನಕ್ಕೆ ಮಲ್ಲಿನಾಥನ ಟೀಕೆ ಅತ್ಯುತ್ತಮ ಮಾಧ್ಯಮವಾಗಿದೆ.

📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

Tuesday, August 1, 2017

ಅದ್ಯ ಧಾರಾ ನಿರಾಧಾರಾ.......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - ೧

*ಅದ್ಯ ಧಾರಾ ನಿರಾಧಾರಾ.......*

ಕಾಳಿದಾಸನನ್ನು ತಿಳಿಯದಿರುವವರಾರು? ಕವಿಕುಲಗುರುವೆಂಬ ಕೀರ್ತಿ ಹೊತ್ತ ಅಪ್ರತಿಮ ಶೃಂಗಾರ ಕವಿ. ಪ್ರತ್ಯುತ್ಪನ್ನ ಮತಿಯೂ ಆಗಿದ್ದ ಅವನು ಕ್ಷಣಾರ್ಧದಲ್ಲಿ ಕವಿತೆಯನ್ನು ರಚಿಸಬಲ್ಲವನಾಗಿದ್ದ. ಅವನು ಭೋಜರಾನ ಆಸ್ಥಾನದ ನವಮಣಿಗಳಲ್ಲಿ ಒಬ್ಬನಾಗಿದ್ದ ಎಂದು ಭೋಜ ಪ್ರಬಂಧದಲ್ಲಿ ಹೇಳಲಾಗಿದೆ.

ಸ್ವತ: ಕವಿಯೂ, ಪಂಡಿತರಿಗೆ ಆಶ್ರಯದಾತನೂ ಆಗಿದ್ದ ಭೋಜರಾಜ ಕಾಳಿದಾಸನ ಪರಮಮಿತ್ರನೂ ಆಗಿದ್ದ. ಅಂತಹ ಭೋಜರಾಜನಿಗೆ ಒಮ್ಮೆ ಒಂದು ವಿಚಿತ್ರ ಕೋರಿಕೆಯುಂಟಾಯಿತು. ತಾನು ಸತ್ತಾಗ ಕಾಳಿದಾಸ ಯಾವ ರೀತಿಯಲ್ಲಿ ಚರಮಗೀತೆಯನ್ನು ಬರೆಯಬಹುದು ಎಂಬ ಜಿಜ್ಞಾಸೆ ಕಾಡಹತ್ತಿತು. ಅದನ್ನು ಕಾಳಿದಾಸನಲ್ಲಿ ತೋಡಿಕೊಂಡ. ದಿಗ್ಭ್ರಾಂತನಾದ ಕಾಳಿದಾಸ ಅದಕ್ಕೆ ಒಪ್ಪಲಿಲ್ಲ. ವಾಗ್ದೇವಿಯ ವರಪುತ್ರನಾದ ತನ್ನ ಶಬ್ದಗಳ ಶಕ್ತಿಯ ಅರಿವು ಅವನಿಗಿತ್ತು. ಎಷ್ಟು ಹೇಳಿದರೂ ಒಪ್ಪದ ಅವನ ಮೇಲೆ ಸಿಟ್ಟುಗೊಂಡ ಭೋಜ ತನ್ನ ಆಸ್ಥಾನವನ್ನು ಬಿಟ್ಟು ತೊಲಗುವಂತೆ ಆಜ್ಞಾಪಿಸಿದ.

ಕಾಳಿದಾಸನಿಲ್ಲದ ಭೋಜರಾಜನ ಆಸ್ಥಾನ ಚಂದ್ರನಿಲ್ಲದ ರಾತ್ರಿಯಂತಾಗಿತ್ತು. ಬೇಸರಗೊಂಡ ಅರಸ ಕವಿಯನ್ನರಸಿ ಮಾರುವೇಷದಲ್ಲಿ ಹೊರಟೇ ಬಿಟ್ಟ. ಬಲುದಿನಗಳ ಅನ್ವೇಷಣೆಯ ನಂತರ ಕಾಳಿದಾಸನನ್ನು ಸಂಧಿಸಿ ಭೋಜರಾಜ ದಿವಂಗತನಾದ ಎಂದು ಸುಳ್ಳನ್ನು ಹೇಳಿದ. ಕವಿಚಕ್ರವರ್ತಿಯು ಕಂಬನಿ ತುಂಬಿ ಅಗಲಿದ ಮಿತ್ರನಿಗಾಗಿ ಚರಮಗೀತೆಯನ್ನು ಹಾಡಿದ.

ಅದ್ಯ ಧಾರಾ ನಿರಾಧಾರಾ
ನಿರಾಲಂಬಾ ಸರಸ್ವತೀ |
ಪಂಡಿತಾ: ಖಂಡಿತಾ: ಸರ್ವೇ
ಭೋಜರಾಜೇ ದಿವಂಗತೇ ||

(ಭೋಜರಾಜ ಸ್ವರ್ಗಸ್ಥನಾದ್ದರಿಂದ ಇಂದು ಧಾರಾನಗರಿಯು ಆಧಾರವನ್ನು ಕಳೆದುಕೊಂಡಿತು. ಸರಸ್ವತಿಯು ಆಶ್ರಯವನ್ನು ಕಳೆದುಕೊಂಡಳು. ಪಂಡಿತರು ಗೌರವವನ್ನು ಕಳೆದುಕೊಂಡರು.)

ಋಷಿತುಲ್ಯನಾದ ಕವಿಯ ಮಾತುಗಳು ಸುಳ್ಳಾಗಲು ಸಾಧ್ಯವೇ. ಮಾರುವೇಷದಲ್ಲಿದ್ದ ಭೋಜರಾಜ ನಿಶ್ಚೇಷ್ಟಿತನಾಗಿ ಬಿದ್ದ. ಕಾಳಿದಾಸನಿಗೆ ಪರಿಸ್ಥಿತಿಯ ಅರಿವಾಯಿತು; ದುಃಖ ಇಮ್ಮಡಿಸಿತು. ತಕ್ಷಣ ಶ್ಲೋಕವನ್ನು ಮಾರ್ಪಡಿಸಿ ಪಠಿಸಿದ.

ಅದ್ಯ ಧಾರಾ ಸದಾಧಾರಾ
ಸದಾಲಂಬಾ ಸರಸ್ವತೀ |
ಪಂಡಿತಾ ಮಂಡಿತಾ ಸರ್ವೇ
ಭೋಜರಾಜೇ ಭುವಂ ಗತೇ ||

(ಭೋಜರಾಜ ಈ ಭೂಮಿಯಲ್ಲಿರಲು ಧಾರಾ ನಗರವಿಂದು ಉತ್ತಮ ಆಧಾರವನ್ನು ಹೊಂದಿತು. ಸರಸ್ವತಿಗೆ ಒಳ್ಳೆಯ ಆಶ್ರಯ ಸಿಕ್ಕಿತು. ಪಂಡಿತರೆಲ್ಲರೂ ಸಮ್ಮಾನಿತರಾದರು.)

ಭೋಜರಾಜ ನಿದ್ದೆಯಿಂದೆಂಬಂತೆ ಎದ್ದು ಕುಳಿತ. ಕವಿಕುಲಗುರುವಿನ ವಾಕ್ ಶಕ್ತಿಯನ್ನರಿತು ಆದರಿಸಿದ.

ಕಾಳಿದಾಸನಿಗೆ ಕಾಳಿದಾಸನೇ ಸಾಟಿ.!

📝 ಮಹಾಬಲ ಭಟ್, ಗೋವಾ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸ್ತಾವನೆ

ಆತ್ಮೀಯ ಸ್ನೇಹಿತರೇ,
’ಸನಾತನ ಭಾರತದ ಸ್ತ್ರೀರತ್ನಗಳು’ ಎಂಬ ಲೇಖನ ಸರಣಿಗೆ ನೀವು ಕೊಟ್ಟ ಆತ್ಮೀಯ ಸ್ಪಂದನೆಯಿಂದ ಪ್ರೇರಿತನಾಗಿ ಎರಡನೆಯ ಲೇಖನ ಸರಣಿಯನ್ನು ಆರಂಭಿಸುತ್ತಿದ್ದೇನೆ.
ಸಂಸ್ಕೃತ ಸಾಹಿತ್ಯ ಎಂಬುದು ಹಲವು ಕುತೂಹಲಗಳ ಅನೇಕ ಚಮತ್ಕಾರಗಳ ಆಗರ. ಮೊಗೆದಷ್ಟೂ ಹೊರಚಿಮ್ಮುವ ಈ ರಸಸಾಗರದ ಕೆಲವು ಮುತ್ತುಗಳನ್ನು ನಿಮ್ಮ ಮುಂದಿಡುವ ನನ್ನ ಸವಿನಯ ಪ್ರಯತ್ನವಿದು. ಸಂಸ್ಕೃತ ಕವಿಗಳನೇಕರ ಜೀವನದಲ್ಲಿ ಆಗಿ ಹೋದ ಒಂದೊಂದು ಘಟನೆಗಳೂ ಒಂದೊಂದು ರಸಪ್ರಸಂಗಗಳು. ಅಂತಹ ಪ್ರಸಂಗಗಳನ್ನು ಕಲೆ ಹಾಕಿ ಇಲ್ಲಿ ಹೊರಹೊಮ್ಮಿದ ಚಮತ್ಕಾರಪೂರ್ಣ ಕವಿತೆಗಳನ್ನು ನಿಮ್ಮ ಮುಂದಿಡುವ ಪ್ರಾಮಾಣಿಕ ಯತ್ನ ಮಾಡುತ್ತಿದ್ದೇನೆ. ಈ ಪ್ರಸಂಗಗಳೆಲ್ಲ ಬೇರೆ ಬೇರೆ ಹೊತ್ತಿಗೆಗಳಲ್ಲಿ ಓದಿದ್ದು ಹಾಗೂ ವಿದ್ವನ್ಮಣಿಗಳ ಭಾಷಣಗಳಲ್ಲಿ ಕೇಳಿದ್ದು. ಹಾಗಾಗಿ ಈ ಲೇಖನಗಳ ಮೂಲವಸ್ತು ನನ್ನದಲ್ಲ. ಮಧುಕರವೃತ್ತಿಯಿಂದ ಸಂಗ್ರಹಿಸಿದ ಮಕರಂದವನ್ನು ನನ್ನ ಭಾಷೆಯಲ್ಲಿ ಜೇನಾಗಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಅದು ಸಹೃದಯರಾದ ನಿಮಗೆಷ್ಟು ರುಚಿಸುವುದೋ ನಾಕಾಣೆ. ಏನೇ ಇರಲಿ, ನಿಮ್ಮವನೀತ. ಓದಿ, ತಪ್ಪಿದ್ದರೆ ತಿದ್ದಿ, ಮೆಚ್ಚಿದರೆ ಬೆನ್ನುತಟ್ಟಿ.
ಈ ಲೇಖನಗಳಲ್ಲಿರುವ ಘಟನೆಗಳಿಗೆ ಐತಿಹಾಸಿಕ ಮಹತ್ತ್ವವಿಲ್ಲ. ಅನೇಕ ಪ್ರಸಂಗಗಳು ಕಲ್ಪಿತ ಪ್ರಸಂಗಗಳು. ಬಲ್ಲಾಳ ಸೇನನೆಂಬ ಕವಿ ರಚಿಸಿದ್ದ ಭೋಜ ಪ್ರಬಂಧ ಎಂಬ ಕಾವ್ಯದಲ್ಲಿ ಕಾಳಿದಾಸ ಭೋಜರಾಜನ ಆಸ್ಥಾನದಲ್ಲಿದ್ದ ಎಂದು ವರ್ಣಿಸಲಾಗಿದೆ. ಅದು ಇತಿಹಾಸಕಾರರಿಂದ ತಿರಸ್ಕರಿಸಲ್ಪಟ್ಟಿದೆ. ಅದರಂತೆ ಈ ಸರಣಿಯಲ್ಲಿ ವರ್ಣಿಸಲಾದ ಪ್ರಸಂಗಗಳೂ ಐತಿಹ್ಯಗಳೇ ಹೊರತು ಇತಿಹಾಸವಲ್ಲ. ರಸಾಸ್ವಾದನೆಯೇ ಈ ಲೇಖನಗಳ ಪರಮೋದ್ದೇಶವೇ ವಿನಾ ಸತ್ಯಾನ್ವೇಷಣೆಯಲ್ಲ.
ಶ್ರಾವಣ ಪೂರ್ಣಿಮೆಯನ್ನು ’ಸಂಸ್ಕೃತದಿನ’ ಎಂದು ಕೇಂದ್ರ ಸರಕಾರ ಘೋಷಿಸಿದೆ. ಆ ದಿನ, ಹಿಂದಿನ ಮೂರು ದಿನ ಹಾಗೂ ಮುಂದಿನ ಮೂರು ದಿನ ಹೀಗೆ ಏಳು ದಿನಗಳ ಕಾಲ ಸಂಸ್ಕೃತ ಸಪ್ತಾಹ ನಡೆಯುತ್ತದೆ. ಸಂಸ್ಕೃತ ಭಾಷೆಯ ಪ್ರಸಾರದ ಪ್ರಯತ್ನ ಈ ಸಪ್ತಾಹದಲ್ಲಿ ತನ್ನ ವೇಗವನ್ನು ವರ್ಧಿಸಿಕೊಳ್ಳುತ್ತದೆ. ಈ ವರ್ಷ ಅಗಸ್ಟ್ ೪ ರಿಂದ ೧೦ರವರೆಗೆ ಸಂಸ್ಕೃತ ಸಪ್ತಾಹವಿದೆ. ೭ ನೇ ತಾರೀಖಿಗೆ ಸಂಸ್ಕೃತದಿನ. ಈ ಸಂದರ್ಭದಲ್ಲಿ ಸಂಸ್ಕೃತದ ಅನ್ನ ತಿನ್ನುತ್ತಿರುವ ನನ್ನ ಒಂದು ಅಳಿಲು ಸೇವೆ ಈ ಲೇಖನ ಸರಣಿ. ಅಗಸ್ಟ್ ತಿಂಗಳು ಪೂರ್ತಿ ಈ ಸರಣಿಯು ಪ್ರಸಾರವಾಗಲಿದೆ.
ತಮ್ಮ ಸಹಕಾರ, ಪ್ರೋತ್ಸಾಹ ಇರಲಿ
ನಿಮ್ಮವ
ಮಹಾಬಲ ಭಟ್, ಗೋವಾ

Monday, June 12, 2017

ನಾಟಕವ ನೋಡ್ ಬ್ರಹ್ಮಾಂಡ ರಂಗಸ್ಥಳದಿ

ಜಗತ್ತು ಒಂದು ನಾಟಕರಂಗ ಅದರಲ್ಲಿ ಅವನು ಸೂತ್ರಧಾರಿ ನಾನು ಪಾತ್ರಧಾರಿ ಎಂಬ ವಿಚಾರ ಇಂದು ನಿನ್ನೆಯದಲ್ಲ. ನಾಟಕದಲ್ಲಿ ನಟನೊಬ್ಬ ತನ್ನಿಚ್ಛೆಯಂತೆ ನಟಿಸಬಹುದು. ಬೇಡವೆಂದರೆ ಬಿಡಬಹುದು. ಸೂತ್ರಧಾರನ ನಿರ್ದೇಶನವಿದ್ದರೂ ಸಹ ನಟನೆಯಲ್ಲಿ ಸ್ವಾತಂತ್ರ್ಯವಿದೆ. ದೃಶ್ಯಗಳ ಮಧ್ಯೆ ವಿಶ್ರಾಂತಿ ಸಿಗುತ್ತದೆ. ಆದರೆ ಈ ಜಗವೆಂಬ ನಾಟಕರಂಗವನ್ನು ಪ್ರವೇಶಿಸಿದ ಜೀವಿ ನಟನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಒಮ್ಮೆ ರಂಗಸ್ಥಳದಿಂದ ಕಾಲ್ತೆಗೆದರೆ ಮತ್ತೆ ಪ್ರವೇಶವಿಲ್ಲ. ಅಥವಾ ಮತ್ತಾವುದೋ ಪಾತ್ರವಾಗಿ ಮತ್ತೆ ಪ್ರವೇಶ. ಸೂತ್ರಧಾರಿಯ ಆಜ್ಞೆಯನ್ನು ಅತಿಕ್ರಮಿಸಲಾಗದು. ಕುಣಿಕುಣಿದು ಸುಸ್ತಾದರೂ ಸೂತ್ರಧಾರಿ ಇಚ್ಛಿಸದಿದ್ದರೆ ವಿರಮಿಸಲಾರೆವು.

ಈ ನಾಟಕರಂಗದ ಪಾತ್ರಗಳಲ್ಲಿ ಅದೇನು ವೈವಿಧ್ಯತೆ! ಭಿಕ್ಷುಕನಿಂದ ಮುಮುಕ್ಷುವಿನವರೆಗೆ ವಿವಿಧ ರಸಭಾವಗಳ ಪಾತ್ರಗಳು. ದಿನಕ್ಕೆ ಸಾವಿರಾರು ರೂಪಾಯಿಗಳನ್ನು ಸಂಪಾದಿಸುವ ಶ್ರೀಮಂತ ಭಿಕ್ಷುಕನೂ, ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಸಾಲಹೊಂದಿರುವ ಬಡ ಉದ್ಯಮಿಯೂ ಇಲ್ಲಿನ ವಿಚಿತ್ರ ಪಾತ್ರಧಾರಿಗಳು. ಒಂದೆಡೆ ನಾಗರೀಕತೆಯನ್ನು ಮೈಗೂಡಿಕೊಂಡು ಸುಸಂಸ್ಕೃತರಂತೆ ಬಾಳಲಿಚ್ಛಿಸುವ ಅವಿದ್ಯಾವಂತರಿದ್ದರೆ ಇನ್ನೊಂದೆಡೆ ಪ್ರಾಣಿಗಳಂತೆ ಆಹಾರ ನಿದ್ರಾ ಮೈಥುನಗಳನ್ನಷ್ಟೇ ಜೀವನಕ್ರಮವನ್ನಾಗಿರಿಸಿಕೊಂಡ ವಿದ್ಯಾವಂತರು ಕಾಣಸಿಗುತ್ತಾರೆ. ಬೆಳಿಗ್ಗೆ ೮ ಗಂಟೆಯ ಹೊತ್ತಿಗೆ ಮಾಪುಸಾ ಪಟ್ಟಣವನ್ನು ಪ್ರವೇಶಿಸಿದರೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಲ್ಲಿನಲ್ಲಿ ಜನಸಂಮರ್ದದಿಂದ ಕೂಡಿದ ’ಕೂಲಿಕಾರ ಮಾರುಕಟ್ಟೆ’ ಕಾಣಿಸುತ್ತದೆ. ಗೋವಾದ ಪ್ರಮುಖ ಪಟ್ಟಣಗಳಲ್ಲೆಲ್ಲ ಈ (ಅ)ವ್ಯವಸ್ಥೆ ಇದೆ. ತಮ್ಮ ದಿನದ ಶ್ರಮವನ್ನು ಮಾರಾಟಮಾಡಲು ತುದಿಗಾಲಲ್ಲಿ ನಿಂತಿರುವ ಶ್ರಮಿಕರನ್ನು ನೋಡಿದರೆ ಹರಿಶ್ಚಂದ್ರ ನೆನಪಾಗುತ್ತಾನೆ. ಬೆಳಿಗ್ಗೆ ಎಂಟಕ್ಕೆ ಮಧ್ಯಾಹ್ನದ ಊಟವನ್ನೂ ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ತಮ್ಮ ಶ್ರಮವನ್ನು ಕೊಳ್ಳುವ ಗಿರಾಕಿಗಾಗಿ ಅವರು ಕಾಯುತ್ತಿರುತ್ತಾರೆ. ನೂರಾರು ಜನರಲ್ಲಿ ತಾವೂ ಒಬ್ಬರಾಗಿ ನಿಂತು ಯಾರಾದರೂ ಇವತ್ತಿನ ಅನ್ನ ನೀಡಬಲ್ಲರೆ ಎಂಬ ಕಾತರದ ಕಾಯುವಿಕೆಯದು. ಅಲ್ಲಿಯೇ ಒಂದೆರಡು ತಾಸು ಕಳೆದರೆ ಅಂದಿನ ದಿನದ ಉಪವಾಸದ ಕರಿಛಾಯೆ ಮುಖದ ಮೇಲೆ ಮೂಡಲಾರಂಭಿಸುತ್ತದೆ. ನಿನ್ನೆಯ ಹಣ ಖರ್ಚಾಗಿದೆ, ಇಂದು ಸಂಪಾದನೆಯಿಲ್ಲ, ನಾಳೆ ದೇವರೇ ಗತಿ.

ಇವನ್ನೆಲ್ಲ ನೋಡುತ್ತಿದ್ದರೆ ದೇವರು ನಮಗೆ ಎಂತಹ ಅದ್ಭುತ ಭಾಗ್ಯವನ್ನು ಕರುಣಿಸಿದ್ದಾನೆ ಎನ್ನಿಸದಿರದು. ಸುಸಂಸ್ಕೃತ ಕುಟುಂಬ, ಮನೋಲ್ಲಾಸಕರ ವಿದ್ಯೆ, ಉದ್ಯೋಗ ಮಾಡಿ ಬಂದ ನಂತರವೂನಮ್ಮಿಚ್ಛೆಯಂತೆ ಕೆಲಸ ಮಾಡಲು ಸಾಕಷ್ಟು ಸಮಯ, ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು..... ಮತ್ತೇನು ಬೇಕು?

ಆಹಾರ ವಿದ್ಯಾ ಭಯ ಮೈಥುನಗಳು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನವಾಗಿರುವ ಗುಣಗಳು. ಮನುಷ್ಯ ತನ್ನ ಜೀವನವನ್ನು ಇಷ್ಟಕ್ಕೇ ಸೀಮಿತ ಮಾಡಿಕೊಂಡರೆ ಬಾಲ ಕೋಡುಗಳಿಲ್ಲದ ಪ್ರಾಣಿಯಾಗುತ್ತಾನೆ. ಇಂದು ಮನುಷ್ಯ ಪಾಣಿಗಳೇ ಹೆಚ್ಚಾಗಿದ್ದಾರೆ. ಕೆಲವರು ಅನ್ಯ ವಿಧಿಯಿಲ್ಲದೆ, ಇನ್ನು ಕೆಲವರು ಬುದ್ಧಿ ಹೆಚ್ಚಾಗಿ. ದಿನಕ ಕೋಳಿಗಾಗಿ ದುಡಿಯುವ ಕಾರ್ಮಿಕರು ಇನ್ನೇನು ಮಾಡಬಹುದು? ಹೊಟ್ಟೆ ತುಂಬಿಸಿಕೊಳ್ಳಲೇ ಸಮಯವಿರದ ಅವರಿಗೆ ಉಳಿದ ವಿಷಯಗಳ ಕಡೆಗೆ ಗಮನ ಹೋದೀತೆ? ವಿದ್ಯಾಭ್ಯಾಸವೂ ಇಲ್ಲದೆ, ಜ್ಞಾನವೆಂಬ ಕಣ್ಣುಗಳಿಂದ ವಂಚಿತರಾಗಿ ಕುರುಡರಂತೆ ಅಧಾನುಕರಣದ ಯಾಂತ್ರಿಕ ಜೀವನವನ್ನು ನದೆಸುತ್ತಾರೆ. ಒಂದು ರೀತಿಯಲ್ಲಿ ನೋಡುತ್ತ ಹೋದರೆ ನಮ್ಮ ದೇಶದ ಏಳು ಬೀಳುಗಳಿಗೆ ಇವರ ಕೊಡುಗೆ ಗೌಣ. ಆಗಿನ ಕಾಲದಲ್ಲಿ ರಾಮ ಮನೋಹರ ಲೋಹಿಯಾ ಹೇಳಿದ ಮಾತು ಗಮನಾರ್ಹ. ಸುಮಾರು ೧೫% ನಷ್ಟಿರುವ ವಿದ್ಯಾವಂತರೇ ಈ ದೇಶದ ಏಳ್ಗೆಗೂ ಅವ್ಯವಸ್ಥೆಗೂ ಕಾರಣ. ಇವರು ಬುದ್ಧಿ ಹೆಚ್ಚಾಗಿರುವ ಮನುಷ್ಯ ಪ್ರಾಣಿಗಳು.

ಹೀಗೆ ಯಾವ ಪಾತ್ರ ನಾಯಕ, ಯಾವ ಪಾತ್ರ ಖಳನಾಯಕ, ಯಾರು ಕಳ್ಳ , ಯಾರು ಸುಳ್ಳ, ಯಾರು ಸತ್ಯವಾದಿ ಎಂಬ ಗುಟ್ಟನ್ನು ಬಿಟ್ಟುಕೊಡದ ಈ ನಾಟಕದ ಸೂತ್ರಧಾರಿ ನಿಜಕ್ಕೂ ಅದ್ಭುತ ವ್ಯಕ್ತಿ ಅಲ್ಲ ಶಕ್ತಿ.

೨೮.೦೨.೨೦೦೬ ರಂದು ಬರೆದಿದ್ದು.

Monday, April 24, 2017

ದೇಹೋ ದೇವಾಲಯ: ಪ್ರೋಕ್ತ:

ದೇಹೋ ದೇವಾಲಯ: ಪ್ರೋಕ್ತ:
ವೇದಗಳು ಭಾರತೀಯ ತತ್ತ್ವಜ್ಞಾನದ ಅಡಿಗಲ್ಲುಗಳು. ವೇದಪ್ರಾಮಾಣ್ಯವನ್ನೂ ದೇವರ ಅಸ್ತಿತ್ವವನ್ನೂ ನಂಬುವ ಜನರನ್ನು ಆಸ್ತಿಕರೆಂದು ಕರೆಯುತ್ತಾರೆ. ಇದಕ್ಕೆ ವಿರುದ್ಧ ಮನೋಭಾವದವರು ನಾಸ್ತಿಕರು. ನಮ್ಮ ಪರಂಪರೆಯಲ್ಲಿ ಆಸ್ತಿಕರಿಗೆ ವಿಶೇಷವಾದ ಗೌರವವಿದ್ದರೂ ನಾಸ್ತಿಕವಾದವನ್ನು ಕಡೆಗಣಿಸಿಲ್ಲ. ಅವರಿಗೆ ಚಾರ್ವಾಕ(ಸುಂದರ, ಆಕರ್ಷಕ ಮಾತುಳ್ಳವರು) ಎಂಬ ಉಪಾಧಿಯನ್ನು ಕೊಟ್ಟು ಅವರ ’ಋಣಂ ಕೃತ್ವಾ ಘೃತಂ ಪಿಬೇತ್’ ಎಂಬ ವಾದವನ್ನು ಆಸ್ತಿಕದರ್ಶನದ ಪೂರ್ವಪಕ್ಷವಾಗಿ ತೆಗೆದುಕೊಳ್ಳಲಾಗಿದೆ.

’ದೇವರು ಮಾನವರನ್ನು ಸೃಷ್ಟಿಸಿದ್ದಾನೋ ಅಥವಾ ಮಾನವ ದೇವರನ್ನು ಸೃಷ್ಟಿಸಿದ್ದಾನೋ’ ಎಂಬುದು ಆಧುನಿಕ ಯುಗದಲ್ಲಿ ಚರ್ಚಾಸ್ಪದವಾದ ವಿಚಾರ. ದೇವರ ಸರ್ವಶಕ್ತಿಮತ್ವವನ್ನೂ ಜೀವರ ಅಲ್ಪಶಕ್ತಿತ್ವವನ್ನೂ ಒಪ್ಪಿರುವ ಆಸ್ತಿಕರು ಮನುಷ್ಯನನ್ನು ದೇವರು ಸೃಷ್ಟಿಸಿದ್ದಾನೆಂದು ಕೊಂಡಾಡಿದರೆ ನಾಸ್ತಿಕರು ಎರಡನೆಯ ವಾದವನ್ನು ಮುಂದಿಡುತ್ತಾರೆ. ದೇವರುಗಳಿಗೆಲ್ಲ ಸಂಸಾರವನ್ನು ಕಲ್ಪಿಸಿ ವಿವಿಧ ಕಥೆಗಳನ್ನು ಹೆಣೆದಿರುವುದನ್ನು ನೋಡಿದರೆ ದೇವರು ಮನುಷ್ಯನ ಕಲ್ಪನೆಯ ಫಲವೆಂದೇ ಹೇಳಬೇಕಾಗುವುದು. ಏನೇ ಆದರೂ ದೇವರ ಕಲ್ಪನೆಯೇ ಒಂದು ಅದ್ಭುತ. ದುಷ್ಪ್ರವೃತ್ತಿಯ ತ್ಯಾಗಕ್ಕಾಗಿ ಸತ್ಪ್ರವೃತ್ತಿಯ ಉಪಾಸನೆಗಾಗಿ ದೇವರನ್ನು ಉಪಯೋಗಿಸಿಕೊಂಡರೆ ಕಲ್ಪನೆಯೇ ಆದರೂ ಸಾಧು. ಕೆಲವೊಂದು ಸಂದರ್ಭಗಳಲ್ಲಿ ಈ ’ದೇವರು” ಜನರನ್ನು ಮೋಸಗೊಳಿಸುವುದಕ್ಕೂ ಉಪಯೋಗಿಸಲ್ಪಡುತ್ತಾನೆ ಎನ್ನುವುದು ವಿಷಾದಕರ.

ಆಧ್ಯಾತ್ಮ ಪ್ರಪಂಚದಲ್ಲಿ ಸಗುಣೋಪಾಸನೆ ಹಾಗೂ ನಿರ್ಗುಣೋಪಾಸನೆ ಎಂದು ಉಪಾಸನೆಯಲ್ಲಿ ಎರಡು ವಿಧಗಳಿವೆ. ಪ್ರಪಂಚದ ಚರಾಚರಗಳನ್ನೂ ನಿಯಂತ್ರಿಸುವ ನಿಯಾಮಕ ಶಕ್ತಿ ನಿರ್ಗುಣ ಎಂಬುದೊಂದು ವಾದವಾದರೆ, ಅದನ್ನೇ ಕೈಕಾಲುಗಳಿಂದ ಕೂಡಿದ ಮಾನವ ದೇಹದ ಕಲ್ಪನೆಯಲ್ಲಿ ಒಡಮೂಡಿಸಿ ಉಪಾಸಿಸುವ ಪಂಥ ಇನ್ನೊಂದಿದೆ. ನಿರ್ಗುಣೋಪಾಸನೆ ಸುಲಭದ ಮಾತಲ್ಲ. ಆಧ್ಯಾತ್ಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಮಾತ್ರ ಅದು ಸಾಧ್ಯ. ಸಾಮಾನ್ಯರಿಗೆ ಭಜಿಸಲು ಕಣ್ಣ ಮುಂದೊಂದು ಆಕೃತಿ ಬೇಕು. ನಿರ್ಗುಣೋಪಾಸನೆಯ ಮೂಲತತ್ತ್ವ-
ದೇಹೋ ದೇವಾಲಯ: ಪ್ರೋಕ್ತ: ಜೀವೋ ದೇವ: ಸದಾಶಿವ:|
ತ್ಯಜೇದಜ್ಞಾನನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ್ ||
ದೇಹವನ್ನೇ ದೇವಾಲಯವೆಂದು ಗಣಿಸಿ, ಒಳಗಿರುವ ಆತ್ಮವನ್ನೇ ಸದಾಶಿವನೆಂದು ಗ್ರಹಿಸುವ ಕಲ್ಪನೆಯೇ ಅದ್ಭುತ. ಈ ವಿಚಾರ ನನ್ನ ಮನದಲ್ಲಿ ಹರಿದಾಡತೊಡಗಿದ ಮೇಲೆ ದೇವಾಲಯಗಮನವೇ ಕಡಿಮೆಯಾಗಿದೆ. ಆದರೆ ಮಾನಸಿಕವಾದ ಕ್ಲೇಶಗಳುಂಟಾದಾಗ ದೈವೀ ಪ್ರಕೋಪವೇ ಇರಬಹುದೆಂಬ ಚಿಂತನೆ ಗರಿಗೆದರಿ ಮತ್ತೆ ನನ್ನನ್ನು ದೇವರ ಮೂರ್ತಿಯ ಮುಂದೆ ನಿಲ್ಲುವಂತೆ ಮಾಡುತ್ತದೆ. ಗೋವಾಕ್ಕೆ ಬಂದ ಮೇಲೆ ಶಿವರಾತ್ರಿಯ ದಿನಗಳಂದು ಯಾವುದೇ ದೇವಾಲಯಕ್ಕೆ ಹೋಗದೆ ಮನೆಯಲ್ಲಿಯೇ ಉಪವಾಸ ಮಾಡಿದ್ದೆ. ಮೊನ್ನೆ ಸಹೋದ್ಯೋಗಿಯೊಬ್ಬರು ’ಶಿವರಾತ್ರಿಯಂದು ಎಲ್ಲಿಗೆ ಹೋಗುವೆ?’ ಎಂದು ಕೇಳಿದಾಗ ಮೇಲಿನ ಶ್ಲೋಕವನ್ನೇ ಹೇಳಿದ್ದೆ. ಅದೇ ದಿನ ಸಂಜೆ ಅಕಸ್ಮಾತ್ತಾಗಿ ಮಿತ್ರ ಚಿನ್ಮಯನ ದೂರವಾಣಿ ಕರೆ ಬಂತು. ಆ ದಿನ ಶಾಲೆಗೆ ಬಿಡುವಿರುವುದರಿಂದ ಪುಸ್ತಕದ ಕೆಲಸವನ್ನು ಮುಗಿಸೋಣ ಎಂದು ಅವನ ಮನೆಗೆ ಕರೆದ. ಅವನ ಮನೆ ಇರುವುದು ಕಾಣಕೋಣ ಎಂಬ ಊರಿನಲ್ಲಿ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ. ಹಾಗಾಗಿ ಅಯಾಚಿತವಾಗಿ ಜ್ಯೋತಿರ್ಲಿಂಗವನ್ನು ಬಿಲ್ವದಳಗಳಿಂದ ಅರ್ಚಿಸುವ ಅವಕಾಶ ಒದಗಿತು. ನಾನು ಈ ಅವಕಾಶವನ್ನು ಬಯಸಿರದಿದ್ದರೂ ಶಿವನೇ ನನ್ನನ್ನು ಅಲ್ಲಿಗೆ ಎಳೆದನೆ? ನನ್ನಿಂದ ಪೂಜೆ ಪಡೆಯಬೇಕೆಂಬ ಬಯಕೆ ಅವನಿಗೇ ಇದ್ದರೆ ನಾನೆಷ್ಟರವನು ತಿರಸ್ಕರಿಸಲಿಕ್ಕೆ?

ದೇವರಿಗೆ ಹರಕೆ ಹೊತ್ತುಕೊಳ್ಳುವುದೂ ಒಮ್ಮೊಮ್ಮೆ ಸ್ವಾರ್ಥದಿಂದ ಕೂಡಿದ ಮೂರ್ಖತೆ ಎಂದೆನಿಸುತ್ತದೆ. ಅದೊಂದು ರೀತಿಯ ಲಂಚಾವತಾರ ಎಂದು ಅದೆಷ್ಟೋ ಬಾರಿ ಅನಿಸಿದ್ದಿದೆ. ಆದರೆ ಕಷ್ಟಗಳು ಬಂದಾಗ ಹರಕೆ ಹೊತ್ತುಕೊಂಡು ಸಮಸ್ತ ಭಾರವನ್ನೂ ದೇವರ ಮೇಲೆ ಹಾಕಿ ಮಾನಸಿಕ ಸಮಾಧಾನ ಹಾಗೂ ಕಷ್ಟದ ಪರಿಹಾರ ಎರಡೂ ಆಗಿರುವ ಅನುಭವವಿದೆ. ದೇವಾಲಯಗಮನ, ಭಜನೆ ಇವೆಲ್ಲ ವ್ಯರ್ಥವಲ್ಲ. ಡಿ.ವಿ.ಜಿ. ಎನ್ನುವಂತೆ-
ದೇವಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ |
ಭಾವವಂ ಕ್ಷುಲ್ಲಜಗದಿಮ್ ಬಿಡಿಸಿ ಮೇಲಕೊಯ್ವ
ದಾವುದಾದೊಡಮೊಳಿತು – ಮಂಕುತಿಮ್ಮ ||
ನಾನು ಅದ್ವೈತ ಪರಂಪರೆಯನ್ನು ಮೆಚ್ಚುವುದು ಒಂದೇ ಕಾರಣಕ್ಕಾಗಿ - ಅದು ಸಮಾನತೆಯನ್ನು ಪ್ರತಿಪಾದಿಸುತ್ತದೆ. ’ಜೀವರೆಲ್ಲ ಚೈತನ್ಯದ ಕಣಗಳು; ಎಲ್ಲ ಜೀವರೂ ಒಂದೇ ದೇವರ ಅಂಶ’ ಎಂಬ ತತ್ತ್ವ ”ವಸುಧೈವ ಕುಟುಂಬಕಮ್’ ಎಂಬ ತತ್ತ್ವಕ್ಕೆ ನೆಲಗಟ್ಟಾಗಿ ದೀನದಲಿತರಲ್ಲೂ ದೇವರನ್ನು ಕಾಣುವ ಉದಾರಕಲ್ಪನೆಗೆ ನಾಂದಿಯನ್ನು ಹಾಡುತ್ತದೆ. ಭಜನೆ ನನ್ನ ಉದ್ಧಾರಕ್ಕೆ, ಸೇವೆ ಪರರ ಏಳ್ಗೆಗೆ. ನಮ್ಮ ಮಾನಸಿಕ ನೆಮ್ಮದಿಗೆ ಅವಶ್ಯವಿರುವಷ್ಟೇ ಸಮಯವನ್ನು ಪೂಜೆಗಾಗಿ ಮೀಸಲಿಟ್ಟು ಉಳಿದ ಸಮಯವನ್ನು ಸಮಾಜಸೇವೆಗಾಗಿ ಮುಡಿಪಾಗಿಟ್ಟು ’ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್’ ಎಂದು ಕರ್ಮಯೋಗವನ್ನು ಸಾಧಿಸಿದರೆ ಅದೇ ಜೀವನದ ನಿಜವಾದ ಆಸ್ತಿಕತೆ. ಪ್ರಪಂಚದಲ್ಲಿ ಅವಶ್ಯವಿರುವುದೂ ಇದೇ

೨೭-೦೨-೨೦೦೬ ರಂದು ಬರೆದಿದ್ದು.

Monday, April 10, 2017

ಭಾವಸ್ಪಂದನ ೧

ಆತ್ಮೀಯರೇ,
ಯಾವುದೇ ಭಾಷೆಯ ಸಾಹಿತ್ಯದಲ್ಲಿ ಭಾವಗೀತೆಗಳ ಪಾತ್ರ ಮಹತ್ತ್ವದ್ದು. ಹೃದಯದ ಭಾವವನ್ನು ಅಕ್ಷರರೂಪದಲ್ಲಿ ವ್ಯಕ್ತಪಡಿಸುವ ಕವಿ ಓದುಗರ ಹೃದಯದಲ್ಲೂ ಅನಿರ್ವಚನೀಯ ಭಾವವೊಂದನ್ನು ಹುಟ್ಟು ಹಾಕುತ್ತಾನೆ. ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲೂ ಭಾವಗೀತೆಗಳ ಸಂಖ್ಯೆ ವಿಪುಲವಾಗಿದೆ. ಅನೇಕ ಪ್ರಸಿದ್ಧ ಸಂಗೀತಗಾರರ ಮೂಲಕ ಇವು ಜನಮನದಲ್ಲಿ ಭಾವದ ಮುದ್ರೆಯನ್ನೊತ್ತಿವೆ. ಅಂತಹ ಭಾವಗೀತೆಗಳ ಹಾಗೂ ಭಾವಕವಿಗಳ ಪರಿಚಯವನ್ನು ಮಾಡಿಕೊಡುವ ಒಂದು ಸಣ್ಣ ಪ್ರಯತ್ನ ಈ ಭಾವಸ್ಪಂದನ.

ವಸಂತ ಋತು ಕಾಲಿಟ್ಟು ಕೆಲವು ದಿನಗಳು ಕಳೆದು ಹೋದವು. ಹೊಂಗೆ ಮರದ ಹೂವಿನಲ್ಲಿ, ಮಾವಿನ ತಳಿರಿನಲ್ಲಿ, ಅರಳಿ ನಿಂತ ಸುಮಗಳಲ್ಲಿ ವಸಂತನ ವೈಭವ ಕಾಣುತ್ತಾ ಇದೆ. ವಸಂತನ ಸೊಬಗು ಯಾವ ಕವಿಯ ಹೃದಯವನ್ನು ತಟ್ಟದಿದ್ದೀತು? ಪ್ರಕೃತಿಯ ಸೊಬಗು ಹೃದಯವನ್ನು ಹೊಕ್ಕು ಹೊರಬರುವಾಗ ಕವಿತೆಯ ರೂಪವನ್ನು ತಾಳಿರುತ್ತದೆ. ಅಂತಹ ಒಂದು ಕವಿತೆ ನಮ್ಮ ಭಾವಸ್ಪಂದನ ಧ್ವನಿ ಸರಣಿಯ ಮೊದಲ ಗೀತೆ. ಇದು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಬರೆದ ’ಬಾರೋ ವಸಂತ’ ಎಂಬ ಋತುರಾಜನ ಸ್ವಾಗತಗೀತೆ.

ಲಕ್ಷ್ಮೀನಾರಾಯಣ ಭಟ್ಟರು ಶಿವರಾಮ ಭಟ್ ಹಾಗೂ ಮೂಕಾಂಬಿಕಾ ದಂಪತಿಗಳ ಮಗನಾಗಿ ೧೯೩೬ ರ ಅಕ್ಟೋಬರ್ ೨೯ರಂದು ಶಿವಮೊಗ್ಗೆಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ  ಡಾ. ಲಕ್ಷ್ಮೀನಾರಾಯಣ ಭಟ್ಟರು ತೀನಂಶ್ರೀಯವರ ಶಿಷ್ಯರು. ತಮ್ಮ ಗುರುಗಳಂತೆ ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಅಪಾರ ಪ್ರಭುತ್ವವನ್ನು ಹೊಂದಿದ್ದ ಭಟ್ಟರು ಅನೇಕ ಕೃತಿಗಳನ್ನು ಇಂಗ್ಲೀಷ್ ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕನ್ನಡನಾಡಿನ ಸಹೃದಯ ಭಾವಗೀತಕಾರರಾದ ಇವರ ದೀಪಿಕಾ, ಬಾರೋ ವಸಂತ, ನಂದ ಕಿಶೋರಿ ಮುಂತಾದ ಕವನಸಂಕಲನಗಳು ಹಾಗೂ ಧ್ವನಿಸುರಳಿಗಳು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಶಿಶು ಸಾಹಿತ್ಯ, ವಿಮರ್ಶೆ, ಅನುವಾದ ಸಾಹಿತ್ಯಗಳ ನಿರ್ಮಾಣದಲ್ಲಿ ಸಕ್ರಿಯರಾದ ಭಟ್ಟರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರಶಸ್ತಿ ಮುಂತಾದ ಅನೇಕ ಪುರಸ್ಕಾರಗಳು ಅರಸಿ ಬಂದಿವೆ.
ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ || ಬಾರೋ ||

ಬಾರೋ ಸಂಕಲೆಗಳ ಕಳಚಿ
ಹೆಜ್ಜೆಗಳಿಗೆ ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖದೃಶ್ಯವ ಸಲಿಸಿ || ಬಾರೋ ||

ಮೊಗಚುತ ನೆನ್ನೆಯ ದು:ಖಗಳ
ತೆರೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ || ಬಾರೋ ||

ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||

”ಬಾರೋ ವಸಂತ’ ಕವಿತೆಯಲ್ಲಿ ಲಕ್ಷ್ಮಿನಾರಾಯಣ ಭಟ್ಟರು ವಸಂತನ ಆಗಮನದಿಂದ ಪ್ರಕೃತಿಯಲ್ಲಿ ಹಾಗೂ ಹೃದಯದಲ್ಲಿ ಆಗುವ ಬದಲಾವಣೆಗಳನ್ನು ಸೂಚ್ಯವಾಗಿ ನಮೂದಿಸಿದ್ದಾರೆ. ಶಿಶಿರದಲ್ಲಿ ತನ್ನ ಸಂಪತ್ತನ್ನು ಕಳೆದುಕೊಂಡ ಮರಗಿಡಗಳು ವಸಂತದಲ್ಲಿ ಮತ್ತೆ ನವ ಪಲ್ಲವಗಳಿಂದ ಮನೋಹರ ಸುಮಗಳಿಂದ ಮಧುರವಾದ ಹಣ್ಣುಗಳಿಂದ ಸಂಪದ್ಭರಿತವಾಗುತ್ತವೆ. ಅವನ್ನೆಲ್ಲ ನೋಡಿದ ನಮ್ಮ ಎದೆಯ ಭಾವನೆಯಲ್ಲೂ ಏನೋ ಹೊಸತನ ಏನೋ ಹರುಷ ಒಡಮೂಡುತ್ತದೆ. ಹಾಗಾಗಿ ವಸಂತ ಹೊಸ ಭಾವನೆಗಳನ್ನು ಹೊಸ ಕಾಮನೆಗಳನ್ನು ಮೂಡಿಸಿ ಹರುಷದ ಹರಿಕಾರನಾಗುತ್ತಾನೆ.

ಕುಣಿದು ಕುಪ್ಪಳಿಸಬೇಕೆಂಬ ನಮ್ಮ ಬಯಕೆಗೆ ಜಗತ್ತು ಅನೇಕ ಸಂಕೋಲೆಗಳನ್ನು ತೊಡಿಸಿರುತ್ತದೆ. ವಸಂತ ಆ ಸಂಕೋಲೆಗಳನ್ನೆಲ್ಲ ಕಳಚುವುದಲ್ಲದೆ ನಮ್ಮ ಕುಣಿತಕ್ಕೆ ತಾಳವನ್ನೂ ಹಾಕಲಿ ಎಂಬ ಆಶಾಭಾವನೆ ಕವಿಯದ್ದು. ವಸಂತ ತನ್ನೊಂದಿಗೆ ಕರೆತರುವ ಮಂದಮಾರುತ ವರ್ಷವಿಡೀ ದುಡಿದು ದಣಿದ ದೇಹಕ್ಕೆ ತಂಪನ್ನು ನೀಡಿ ಆ ಸುಖಸ್ಪರ್ಶದಲ್ಲಿ ಮನಸ್ಸಿನಲ್ಲಿ ನಾಳಿನ ಸುಖದೃಶ್ಯ ಮೂಡುವಂತೆ ಮಾಡುವನೆಂಬ ಹಂಬಲ ಅವನದ್ದು.

ಚಕ್ರವತ್ ಪರಿವರ್ತಂತೇ ಸುಖಾನಿ ಚ ದು:ಖಾನಿ ಚ ಎಂಬ ನುಡಿಯಂತೆ ಮಾನವ ಜೀವನ ಎನ್ನುವುದು ಸುಖ ದು:ಖಗಳ ಸಮ್ಮಿಶ್ರಣ. ನಾಳೆ ಸುಖ ಬರುವುದೆಂಬ ಆಶಾಭಾವನೆಯೇ ಇಂದು ದು:ಖದಲ್ಲಿರುವವನಿಗೆ ಆಲಂಬನೆ. ಪ್ರಕೃತಿಯು ತನ್ನ ಕಷ್ಟವನ್ನು ಕಳೆದುಕೊಂಡು ನಳನಳಿಸುತ್ತಿರುವಂತೆ ತನ್ನ ದು:ಖಗಳೂ ಕಳೆದು ಸುಖದ ಅಧ್ಯಾಯ ಆರಂಭವಾಗಲಿ. ಆ ಅಧ್ಯಾಯದಲ್ಲಿ ಮೇಲು ಕೀಳುಗಳೆಂಬ ಭಾವ ಇರದೆ ವಸುಧೈವ ಕುಟುಂಬಕಮ್ ಎಂಬ ಪಾಠ ಇರಲಿ ಎಂಬ ಬಯಕೆಯನ್ನು ಕವಿ ವ್ಯಕ್ತಪಡಿಸುತ್ತಾನೆ.

ವಸಂತ ಕೇವಲ ಹೊರಗಿನ ಪ್ರಕೃತಿಯಲ್ಲಿ ಬದಲಾವಣೆಯನ್ನು ತಂದರೆ ಸಾಲದು. ನಮ್ಮ ಜೀವನದ ಹೆಜ್ಜೆ ಹೆಜ್ಜೆಯಲ್ಲಿ ಆ ವಸಂತನ ಅನುಭವವಾಗಬೇಕು. ಎಳೆಕಂದನ ಗೆಜ್ಜೆಯ ದನಿ, ಇನಿಯಳ ಲಜ್ಜೆಯ ಕಟಾಕ್ಷಗಳಲ್ಲೂ ವಸಂತನ ಹೊಸತನವನ್ನು ಅನುಭವಿಸುವ ಇರಾದೆ ಕವಿಯದ್ದು. ಗೋಳುಗಳೇ ತುಂಬಿರುವ ಬಾಳಿನಲ್ಲಿ ಇವು ಸಂತಸದ ಹಸಿರನ್ನು ಸೃಷ್ಟಿಸಬಹುದು ಎಂಬ ಪ್ರತ್ಯಾಶೆಯೊಂದಿಗೆ ಕವಿ ಕವಿತೆಯನ್ನು ಮುಗಿಸುತ್ತಾನೆ.


ಈ ಸುಂದರ ಗೀತೆಯನ್ನು ಎಚ್.ಕೆ.ನಾರಾಯಣ ಅವರ ರಾಗಸಂಯೋಜನೆಯಲ್ಲಿ, ಸುಲೋಚನಾ ಅವರ ದನಿಯಲ್ಲಿ ಕೇಳಿ ಆನಂದಿಸಿ.

ನಿರೂಪಣೆ: ಮಹಾಬಲ ಭಟ್, ಗೋವಾ

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...