Wednesday, March 8, 2017

ದೈವೀಗುಣ ಸಂಪನ್ನೆ ದೇವಹೂತಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು

ಭಾಗ - 2

ದೈವೀಗುಣ ಸಂಪನ್ನೆ ದೇವಹೂತಿ
ಸ್ವಾಯಂಭು ಮನು ಮತ್ತು ಶತರೂಪೆಯ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳು ದೇವಹೂತಿ. ನಾರದರಿಂದ ಕರ್ದಮ ಋಷಿಯ ಗುಣಸಂಪನ್ನತೆಯನ್ನು ಕೇಳಿ ಅವನನ್ನೇ ವರಿಸಿದಳು. ಪೃಥ್ವಿಯ ಮೊದಲ ರಾಜನ ಮಗಳಾಗಿದ್ದರೂ ಸಂಪತ್ತಿನ ಭೋಗಕ್ಕೆ ಮಾರು ಹೋಗದೆ ಜ್ಞಾನಧನನೂ ತಪೋಧನನೂ ಆದ ಮಹರ್ಷಿಯನ್ನು ವರಿಸಿದ್ದು ಅವಳ ಪ್ರಬುದ್ಧತೆಗೆ ಸಾಕ್ಷಿ. ಸ್ವತ: ಅವಳೇ ತಂದೆ ತಾಯಿಯರನ್ನು ಕರೆದುಕೊಂಡು ಕರ್ದಮನ ಆಶ್ರಮಕ್ಕೆ ಹೋಗುವುದು ಅಂದಿನ ಕಾಲದ ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ತೋರಿಸುತ್ತದೆ.

ರಾಜಕುವರಿ ದೇವಹೂತಿಯ ಸಂತೋಷಕ್ಕಾಗಿ ಕರ್ದಮ ತನ್ನ ತಪ:ಶ್ಶಕ್ತಿಯಿಂದ ದಿವ್ಯ ವಿಮಾನವೊಂದನ್ನು ನಿರ್ಮಿಸಿದ. ಅದರಲ್ಲಿ ಸ್ವಲ್ಪ ಕಾಲ ವಿಹರಿಸಿದರೂ ಅವಳಿಗೆ ಆ ಭೋಗ ಬೇಡವೆನಿಸಿತು. ದಾಂಪತ್ಯದ ಬಹುಭಾಗ ತಪಶ್ಚರ್ಯದಲ್ಲೇ ಮುಗಿದು ಹೋದರೂ ದೇವಹೂತಿಯು ಕಲಾ, ಅನಸೂಯಾ, ಅರುಂಧತಿ, ಶ್ರದ್ಧಾ, ಹವಿರ್ಭೂಗತಿ, ಕ್ರಿಯಾ, ಶಾಂತಿ, ಖ್ಯಾತಿ ಮತ್ತು ಗತಿ ಎಂಬ ಒಂಭತ್ತು ಹೆಣ್ಣುಮಕ್ಕಳಿಗೆ ಜನ್ಮವಿತ್ತಳು. ಅವರೆಲ್ಲರಿಗೂ ಉತ್ತಮ ಸಂಸ್ಕಾರವನ್ನು ನೀಡಿ ವ್ಯಕ್ತಿತ್ವವನ್ನು ರೂಪಿಸಿದಳು.
ಹೆಣ್ಣು ಮಕ್ಕಳ ಜನನದ ನಂತರ ಮತ್ತೆ ತಪಸ್ಸಿಗೆ ಹೊರಟು ನಿಂತ ಕರ್ದಮನಿಗೆ ದೇವಹೂತಿಯು ತಂದೆಯಾದವನ ಕರ್ತವ್ಯವನ್ನು ಜ್ಞಾಪಿಸುತ್ತಾಳೆ. ಅವಳ ತರ್ಕಬದ್ಧ ವಾದಕ್ಕೆ ಸೋತ ಕರ್ದಮ ಅವಳೊಟ್ಟಿಗೆ ಸಂಸಾರವನ್ನು ಮುಂದುವರಿಸುತ್ತಾನೆ. ನಂತರ ದೇವಹೂತಿಯು ’ಕಪಿಲ’ ಎಂಬ ಮಹಾಜ್ಞಾನಿ ಪುತ್ರನಿಗೆ ಜನ್ಮವೀಯುತ್ತಾಳೆ. ರಾಮಚರಿತ ಮಾನಸದಲ್ಲಿ ತುಲಸೀದಾಸರು ಶ್ರೀಹರಿಯೇ ದೇವಹೂತಿಯ ಮಗನಾಗಿ ಅವತಾರವೆತ್ತಿದ್ದಾನೆ ಎಂದು ವರ್ಣಿಸಿದ್ದಾರೆ.

ದೇವಹೂತಿಯು ಮನುವಿನ ಕನ್ನೆ
ಕರ್ದಮ ಮುನಿಯ ಪ್ರೇಮಸಂಪನ್ನೆ |
ಆದಿದೇವ ಪ್ರಭು ದೀನ ದಯಾಳು
ಉದರದಲಿ ಜನಿಸಿದನು ಕಪಿಲ ಕೃಪಾಳು ||
(ತುಲಸೀದಾಸರ ಪದ್ಯದ ಭಾವಾನುವಾದ)

ದೇವಹೂತಿಯು ಜೀವನದ ಕೊನೆಯ ಭಾಗದಲ್ಲಿ ಮಗನಿಂದಲೇ ತತ್ತ್ವಜ್ಞಾನದ ಉಪದೇಶ ಪಡೆದು ಸಾಯುಜ್ಯವನ್ನು ಪಡೆಯುತ್ತಾಳೆ.

ಮಾನವರ ಮಾತೆ ಶತರೂಪಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ - 1
ಮಾನವರ ಮಾತೆ ಶತರೂಪಾ
ಮಾನವರ ಮೂಲ ಪುರುಷ ’ಮನು’. ಹದಿನಾಲ್ಕು ಮನುಗಳಲ್ಲಿ ಮೊದಲ ಮನು ’ಸ್ವಾಯಂಭು ಮನು’ ಅವನ ಪತ್ನಿ ಶತರೂಪಾ. ಅಂದರೆ ಮಾನವರೆಲ್ಲರ ತಾಯಿ ಇವಳು. ಬ್ರಹ್ಮಾಂಡ ಪುರಾಣದ ಪ್ರಕಾರ ಈ ಸೃಷ್ಟಿಯ ಮೊದಲ ಸ್ತ್ರೀ ಶತರೂಪಾ. ಬ್ರಹ್ಮನ ಎಡಭಾಗದಿಂದ ಹುಟ್ಟಿದವಳೆಂದು ಉಲ್ಲೇಖವಿದೆ. ಬಲಭಾಗದಿಂದ ಹುಟ್ಟಿದ ಸ್ವಾಯಂಭುಮನುವನ್ನು ಪತಿಯಾಗಿ ಸ್ವೀಕರಿಸಿ ಬ್ರಹ್ಮನ ಸೃಷ್ಟಿಕಾರ್ಯವನ್ನು ಮುಂದುವರಿಸಿದಳು. ಪ್ರಿಯವ್ರತ, ಉತ್ತಾನಪಾದ ಮುಂತಾದ ಏಳುಜನ ಪುತ್ರರನ್ನೂ, ಆಕೂತಿ, ಪ್ರಸೂತಿ ಮತ್ತು ದೇವಹೂತಿ ಎಂಬ ಮೂವರು ಪುತ್ರಿಯರನ್ನೂ ಪಡೆದಳು.

ಇವಳು ವಿವಾಹಕ್ಕಿಂತ ಮುಂಚೆ ಕಠಿಣ ತಪಸ್ಸನ್ನು ಆಚರಿಸಿದಳು. ಆ ತಪೋಬಲದ ಕಾರಣದಿಂದಲೇ ಈ ಸೃಷ್ಟಿಯ ಪ್ರಥಮ ಪುರುಷ ಸ್ವಾಯಂಭುವ ಮನುವನ್ನು ಪತಿಯನ್ನಾಗಿ ಪಡೆದಳು. ಸ್ವಾಯಂಭುವ ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಸಿಗಬೇಕು ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ.


ದೃಢತೆ ಹಾಗೂ ಭಕ್ತಿಗೆ ಹೆಸರಾದ ’ಧ್ರುವ’ ಶತರೂಪೆಯ ಮೊಮ್ಮಗ. ಧ್ರುವ ನಲ್ಲಿ ಆ ಸಂಸ್ಕಾರವನ್ನು ಬಿತ್ತಿದ್ದು ಇವಳೇ. ಪತಿಗೆ ಅನುಕೂಲೆಯಾಗಿ, ಉತ್ತಮ ಸಂತಾನದ ಜನನಿಯಾಗಿ, ಶ್ರೇಷ್ಠ ತಪಸ್ವಿನಿಯಾಗಿ ಆದ್ಯ ಸ್ತ್ರೀ ಶತರೂಪಾ ಆದರ್ಶನಾರಿಯಾಗಿ ನಮ್ಮ ಮುಂದೆ ನಿಲ್ಲುತ್ತಾಳೆ. 

ಸನಾತನ ಭಾರತದ ಸ್ತ್ರೀರತ್ನಗಳು


ಮಹಿಳಾ ದಿನಾಚರಣೆಯ ವಿಶೇಷ ಸರಣಿ ಬರಹ..........
ಸನಾತನ ಭಾರತದ ಸ್ತ್ರೀರತ್ನಗಳು
ಸ್ತ್ರೀಸಂವೇದನೆಯ ಹಾಗೂ ಮಹಿಳಾ ಸಬಲೀಕರಣದ ವಿಷಯ ಚರ್ಚೆಗೆ ಬಂದಾಗ ಹೆಚ್ಚಾಗಿ ಟೀಕೆಗೆ ಒಳಗಾಗುವವರು ಸಂಪ್ರದಾಯವಾದಿಗಳು ಹಾಗೂ ನಮ್ಮ ವೇದ – ಪುರಾಣ – ಸ್ಮೃತಿಗಳು. ಇವು ಸ್ತ್ರೀ ಶೋಷಣೆಗಾಗಿಯೇ ಹುಟ್ಟಿಕೊಂಡ ಕಥೆಗಳು ಹಾಗೂ ನಿಯಮಗಳು ಎಂಬುದಾಗಿ ಸ್ತ್ರೀವಾದಿಗಳು ತುಂಬಾ ರೋಷದಿಂದ ವಾದಿಸುತ್ತಾರೆ. ಅದನ್ನು ಅಲ್ಲಗಳೆಯುವವರ ಕೈಲಿ ಇರುವುದು ಮೈತ್ರೇಯಿ, ಗಾರ್ಗಿ ಮುಂತಾದ ಬೆರಳೆಣಿಕೆಯಷ್ಟು ಉದಾಹರಣೆಗಳು ಮಾತ್ರ. ಅಂತಹ ಆದರ್ಶ ನಾರಿಯರ ಬಗ್ಗೆ ಹೇಳುವಾಗ ಅವರ ’ಪಾತಿವ್ರತ್ಯ ಧರ್ಮ’ದ ಗುಣಗಾನವಾಗುತ್ತದೆಯೇ ಹೊರತು ಅವರ ವ್ಯಕ್ತಿತ್ವಕ್ಕೆ ನ್ಯಾಯ ಸಿಗುವುದಿಲ್ಲ. ಈ ಹದಿಬದೆಯ ಧರ್ಮೋಪದೇಶ ಮಹಿಳೆಯರಲ್ಲಿ ಆತ್ಮಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಲಾರದು.
ಈ ಸರಣಿಬರಹದ ಉದ್ದೇಶ ಪ್ರಾಚೀನ ಕಾಲದಲ್ಲಿ ತಮ್ಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳಿಸಿದ್ದ ಕೆಲವು ಸ್ತ್ರೀರತ್ನಗಳನ್ನು ಪರಿಚಯಿಸುವುದು. ಅವರಲ್ಲಿ ಅನೇಕರು ಪತಿವ್ರತೆಯರೇ ಆಗಿದ್ದರೂ ಇಲ್ಲಿ ಅವರ ಪಾತಿವ್ರತ್ಯ ವ್ಯಕ್ತಿತ್ವದ ಒಂದು ಗುಣವಾಗಿಯಷ್ಟೇ ಉಲ್ಲೇಖವಾಗಲಿದೆ. ಈ ಎಲ್ಲ ಮಹಿಳೆಯರು ಐತಿಹಾಸಿಕ ವ್ಯಕ್ತಿಗಳೇ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಕಠಿಣ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲಿಖಿತವಾಗಿರುವ ಘಟನೆಗಳು ನೈಜವೇ ಕಾಲ್ಪನಿಕವೇ ಎಂಬ ವಿಚಾರ ನಮ್ಮ ನಂಬುಗೆಯನ್ನು ಅವಲಂಬಿಸಿರುತ್ತದೆ. ಹಾಗಾಗಿ ಅನೇಕರಿಗೆ ಈ ಬರಹ ಕಥೆಯೆಂದೆನಿಸಬಹುದು. ಅಂಥವರೆಲ್ಲ ನೀತಿಕಥೆಗಳನ್ನು ಓದುವಂತೆ ಈ ಲೇಖನ ಸರಣಿಯನ್ನು ಓದಬಹುದು. ಇಲ್ಲಿ ನೀಡಲಿರುವ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಲೇಖನರೂಪಕ್ಕೆ ಇಳಿಸುವ ಚಿಕ್ಕ ಪ್ರಯತ್ನ ಮಾತ್ರ ನನ್ನದು.
ನಿಮಗೆ ಇಷ್ಟವಾದರೆ ಬೆನ್ನುತಟ್ಟಿ. ಹೆಚ್ಚು ಹೆಚ್ಚು ಬಳಗಗಳಲ್ಲಿ ಹಂಚಿಕೊಳ್ಳಿ. ನಿಮ್ಮಲ್ಲಿ ಪೂರಕ ಮಾಹಿತಿಗಳಿದ್ದರೆ ಒದಗಿಸಿ.
ಇತಿ ನಿಮ್ಮ ವಿನಮ್ರ

ಮಹಾಬಲ ಭಟ್

Tuesday, February 21, 2017

ತಿಂಗಳಿಗೊಂದು ಪುಸ್ತಕ - ೬ - ಮಳೆ ಮಾರುವ ಹುಡುಗನ ಕಥಾಸಂಕಲನ

’ಮಳೆಮಾರುವ ಹುಡುಗ’ ಇದು ಕರ್ಕಿ ಕೃಷ್ಣಮೂರ್ತಿಯವರ ಚೊಚ್ಚಲ ಕಥಾ ಸಂಕಲನ. ಸ್ವಸ್ತಿ ಪ್ರಕಾಶನದ ಉತ್ತಮ ಕಥಾ ಸಂಕಲನ ಪ್ರಶಸ್ತಿಯನ್ನು ಪಡೆದಿರುವ ಈ ಕೃತಿಯಲ್ಲಿ ಒಟ್ಟು ಒಂಭತ್ತು ಕಥೆಗಳು ಅಡಕವಾಗಿವೆ.
’ಅನಿಮಿತ್ತ’ ಎಂಬ ಮೊದಲ ಕಥೆ ಆರಂಭವಾಗುವುದು ಓಮಾನ್ ನ ರಾಜಧಾನಿ ಮಸ್ಕತ್ ನಿಂದ. ಗಲ್ಫ್ ರಾಷ್ಟ್ರಗಳ ವೈಭವೋಪೇತ ಜೀವನದ ಕಲ್ಪನೆಯೊಂದಿಗೆ ಅಲ್ಲಿಗೆ ತೆರಳಿದ ಕಥಾನಾಯಕ ಕಡುಘೋರ ಮರುಭೂಮಿಯ ನಡುವಿನ ತೈಲಸಂಸ್ಕರಣಾ ಕೇಂದ್ರದಲ್ಲಿ ಕೆಲಸಮಾಡಬೇಕಾಗಿ ಬಂದಾಗ ಅನುಭವಿಸುವ ಬವಣೆ ಮನಸ್ಸಿಗೆ ತಟ್ಟುವಂತೆ ನಿರೂಪಿಸಲ್ಪಟ್ಟಿದೆ. ಕಥೆಗೆ ರೋಚಕತೆ ಬರುವುದು ಜಗನ್ನಾಥ ಪೂಜಾರಿ ಎಂಬ ವ್ಯಕ್ತಿ ಮಸ್ಕತ್ ನಲ್ಲೆಲ್ಲೋ ಕೆಲಸ ಮಾಡುತ್ತಿರುವ ತನ್ನ ಮಗನನ್ನು ಹುಡುಕಿ ಕೊಡಲು ಸಾಧ್ಯವೆ ಎಂದು ಪತ್ರ ಬರೆದಾಗ. ಮಗನನ್ನು ಹುಡುಕದೆ ಪತ್ರಗಳ ಮೂಲಕ ತನ್ನ ಸಮಯಯಾಪನೆಗೆ ಸಹಾಯ ಮಾಡಿದ ಅಪ್ಪನನ್ನೇ ಹುಡುಕಿ ಹೋಗುವುದು ಸೋಜಿಗದ ಸಂಗತಿ ಈ ಹುಡುಕಾಟದ ಕೊನೆಯಲ್ಲಿ ಅವ್ಯಕ್ತವನ್ನು ಹುಡುಕಿ ಹೊರಟ ಆಧ್ಯಾತ್ಮಸಾಧಕನ ಸಂಭ್ರಾಂತಭಾವವೇ ಕಥಾನಾಯಕನನ್ನೂ ಆವರಿಸಿದೆ.
ಗೊರಟಪಾದಪ್ಪ ಎಂಬ ಅಂಕಿತದ ವ್ಯಕ್ತಿಯೊಬ್ಬ ತನ್ನ ಹಳ್ಳಿಗಾಡಿನ ಹೆಸರಿಂದಾಗಿ ನಾನಾ ಅವಮಾನಗಳನ್ನು ಅನುಭವಿಸಿ, ಹೆಸರು ಬದಲಾಯಿಸಿಕೊಂಡು ತಾನೇ ಕಳೆದು ಹೋದಂತಹ ಪರಿಸ್ಥಿತಿಯನ್ನು ಅನುಭವಿಸುವುದು ಎರಡನೆಯ ಕಥೆಯ ತಿರುಳು.
ಅಮೇರಿಕದ ಶ್ರವಂತಿ ಮತ್ತು ಬೆಂಗಳೂರಿನ ಚಿನ್ಮಯಿ ಎಂಬ ಎರಡು ಸಂಸ್ಕೃತಿಗಳ ಮಧ್ಯೆ ನಡೆಯುವ ಸಂವಾದ, ತಿಕ್ಕಾಟಗಳು ಮೂರನೆಯ ಕಥೆಯ ವಸ್ತು.
ಗಾರೆ ಎಂಬ ಕಥೆ ಗಾರೆ ಕೆಲಸ ಮಾಡುವ ಕೆಲಸಗಾರರ ಚಿತ್ರಣವನ್ನು ಕಟ್ಟಿಕೊಡುತ್ತದೆ. ನಿಮ್ಮ ಪಾದರಕ್ಷೆಗಳನ್ನು ಇಲ್ಲಿಗೆ ಬಿಡಿ ಎಂಬುದು ಕಥೆಗಿಂತ ಲಲಿತಪ್ರಬಂಧ ಎಂದು ಕರೆಸಿಕೊಳ್ಳಲು ಯೋಗ್ಯವಾಗಿದೆ. ಬೇರು ಅನ್ನುವ ಕಥೆ ದಾಂಡೇಲಿಯ ಅರಣ್ಯಪ್ರದೇಶದಿಂದ ಅಮೇರಿಕಕ್ಕೆ ಹಾರಿದ ಸಾಫ್ಟ್ ವೆರ್ ಇಂಜಿನಿಯರ್ ಒಬ್ಬನ ಏರು ಬೀಳುಗಳನ್ನು ಹೇಳುವ ಸಾಧಾರಣ ಕಥೆ. ಹುಡುಕಾಟ ಎಂಬುದು ಕಳೆದು ಹೋದ ಕೈಗಡಿಯಾರದ ಮೇಲೆ ಬರೆದ ಪ್ರಬಂಧದಂತಿದೆ.
ಪುಸ್ತಕದ ತಲೆಬರಹದ ಕಥೆ ’ಮಳೆ ಮಾರುವ ಹುಡುಗ’ ಸರದಿಯಲ್ಲಿ ಎಂಟನೆಯದು. ಬರಗಾಲದಲ್ಲಿ ಮಳೆ ತರುವ ಯಂತ್ರವೊಂದರಿಂದ ಮನೆಮನೆಗೆ ನೀರನ್ನು ಉತ್ಪಾದಿಸಿಕೊಡುತ್ತಿದ್ದ ಹುಡುಗನೊಬ್ಬನ ಕಥೆ. ಈ ಕಥೆ ಕೊನೆಯಾಗುವುದು ’ಸರ್! ಮಳೆ ಬರುತ್ತಿದ್ದುದು ಯಂತ್ರದಿಂದಲ್ಲ, ಮನಸ್ಸಿನಿಂದ. ಯಾಕೋ ಮಳೆ ತರಿಸಲು ಮನಸ್ಸೇ ಆಗಲಿಲ್ಲ’. ಎಂಬ ವಾಕ್ಯದಿಂದ. ಮನಸ್ಸೇ ಎಲ್ಲದಕ್ಕೂ ಕಾರಣ ಎಂಬ ಹಳೆಯ ತತ್ತ್ವವನ್ನು ಹೇಳುವುದಕ್ಕೇ ಬರೆದ ಕಥೆಯೋ ಎಂಬಂತಿದೆ. ಯಂತ್ರದಿಂದ ಮಳೆಯನ್ನು ಉತ್ಪಾದಿಸಿ ಕೊಡುತ್ತಿದ್ದುದು ಅವಾಸ್ತವಿಕ ಎನಿಸಿದ್ದರಿಂದಲೊ ಏನೊ, ಕಥೆ ನನ್ನ ಮಟ್ಟಿಗೆ ನಿಗೂಢತೆಯನ್ನು ಬಿಟ್ಟುಕೊಡಲಿಲ್ಲ.
’ಮಾಸ್ತಿಯ ದುಬೈ ನೌಕರಿ’ ಎಂಬ ಕೊನೆಯ ಕಥೆ ’ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಯನ್ನು ನೆನಪಿಸುವ, ಅವಾಸ್ತವಿಕ ವರ್ಣಮಯ ಜಗತ್ತಿನ ಹಿಂದೆ ಓಡಿ ತೊಳಲಾಡುವ ಮಾಸ್ತಿ ಗೌಡ ಎಂಬ ಹಳ್ಳಿ ಹೈದನ ಕಥಾನಕ.
ಹಳ್ಳಿಯನ್ನು ಬಿಟ್ಟು ನಗರದೆಡೆಗೆ ಮುಖ ಮಾಡಿದ ಮಹತ್ತ್ವಾಕಾಂಕ್ಷಿಗಳ ಚಡಪಡಿಕೆಯೇ ಹೆಚ್ಚಿನ ಕಥೆಗಳಲ್ಲಿ ಕಾಣಸಿಗುವ ಮುಖ್ಯ ವಸ್ತು. ನಿರರ್ಗಳ ಸರಳ ಭಾಷೆ ಸಂಕಲನವನ್ನು ಆಪ್ಯಾಯಮಾನವನ್ನಾಗಿ ಮಾಡುತ್ತದೆ. ಆರಂಭದಲ್ಲಿ, ಕೃತಿಯನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಿದ ತೀರ್ಪುಗಾರರಾದ ಡಾ. ಶ್ರೀಧರ ಬಳಗಾರ್ ಸಂಪೂರ್ಣ ಕೃತಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಜಯಂತ ಕಾಯ್ಕಿಣಿಯವರ ಸ್ಪಂದನೆಯೂ ಇದೆ. ೧೦೦ ಪುಟಗಳ ಹೊತ್ತಿಗೆಯ ಬೆಲೆ ೯೦ ರೂಪಾಯಿಗಳು. ಕುಮಟಾದ ಸ್ವಸ್ತಿ ಪ್ರಕಾಶನದ ಪ್ರಿಯದರ್ಶಿನಿ ಭಟ್ (ಮೊ: ೮೭೬೨೩೬೭೪೮೯) ರಲ್ಲಿ ಪ್ರತಿಗಳು ಲಭ್ಯ.


Sunday, January 22, 2017

ತಿಂಗಳಿಗೊಂದು ಪುಸ್ತಕ - ೫ - ನಮ್ಮಮ್ಮ ಅಂದ್ರೆ ನಂಗಿಷ್ಟ


ಇದು ಕನ್ನಡದ ಬಹುಮಾನ್ಯ ಲೇಖಕ ವಸುಧೇಂದ್ರರ ಸುಲಲಿತ ಪ್ರಬಂಧಗಳ ಗುಚ್ಛ. ಮೊದಲ ಪ್ರಬಂಧದ ಹೆಸರೇ ಪುಸ್ತಕದ್ದೂ ಕೂಡ. ಅಮ್ಮನ ಬಗ್ಗೆ ಸಾಮಾನ್ಯವಾಗಿ ಎಲ್ಲ ಬರಹಗಾರರೂ ಒಂದಾದರೂ ಲೇಖನವನ್ನೋ ಕವಿತೆಯನ್ನೋ ಬರೆದಿರುತ್ತಾರೆ. ಅವರ ವ್ಯಕ್ತಿತ್ವನಿರ್ಮಾಣದಲ್ಲಿ ಅಮ್ಮನ ಪಾತ್ರವನ್ನು ವರ್ಣಿಸದಿದ್ದರೆ ಅದು ಅವರ ಲೇಖಕತ್ವಕ್ಕೇ ಒಂದು ಕುಂದು ಎನಿಸುವುದು ಸಹಜ ಭಾವನೆ.
ವಸುಧೇಂದ್ರರ ಈ ಪ್ರಬಂಧ ಬಿಚ್ಚುಮನಸ್ಸಿನ ಬರಹ ಎನಿಸಿತು ನನಗೆ. ಎಳವೆಯಲ್ಲಿ ಮಕ್ಕಳಿಗಿರುವ ಅಸಹಾಯಕತೆಯೇ ವೃದ್ಧರಿಗೆ ಮುಪ್ಪಿನಲ್ಲಿ ಒದಗುತ್ತದೆ ಎನ್ನುವ ಸತ್ಯವನ್ನು ಲಲಿತವಾದ ಶೈಲಿಯಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ತಮ್ಮ ಮೇಲೆಯೇ ಅವಲಂಬಿತರಾದ ಮಕ್ಕಳನ್ನು ತಂದೆ ತಾಯಿಗಳು ಪ್ರೇಮದಿಂದ ಸಲಹಿದಂತೆ ಮಕ್ಕಳು ತಂದೆ ತಾಯಿಯರನ್ನು ಅವರ ಮುಪ್ಪಿನಲ್ಲಿ ನೋಡಿಕೊಳ್ಳಬೇಕು ಎಂಬ ನೀತಿ ಈ ಪ್ರಬಂಧದಲ್ಲಿ ಧ್ವನಿಸಿದೆ.

ಮುಂದಿನ ನಾಲ್ಕು ಪ್ರಬಂಧಗಳೂ ಅವರಮ್ಮನನ್ನು ಕೇಂದ್ರೀಕರಿಸಿಯೇ ಬರೆದವು. ಅವು ಲೇಖಕರ ತಾಯಿಯ ವಿಭಿನ್ನ ವ್ಯಕ್ತಿತ್ವವನ್ನು ತೆರೆದಿಟ್ಟಿವೆ.

ಅಮ್ಮನ ಬಗೆಗಿನ ಈ ಪ್ರಬಂಧಗಳ ಜೊತೆಗೆ ಲೇಖಕರು ತಮ್ಮ ಜೀವನದ ಅನೇಕ ಅನುಭವಗಳನ್ನು ಎರಕಹೊಯ್ದು ಬರೆದ ಪ್ರಬಂಧಗಳನ್ನೂ ಸೇರಿಸಿದ್ದಾರೆ. ಅದರಲ್ಲಿ ಕೆಲವು ವಿವಿಧ ಘಟನೆಗಳ, ವಿವಿಧ ವ್ಯಕ್ತಿಗಳ ಜೀವನದ ಸಂಕಲನ. ”ಮುಸ್ಸಂಜೆ ಮುರಳಿ’ ಎಂಬ ಲೇಖನ ಇಳಿವಯಸ್ಸಿನವರು ಬೆಂಗಳೂರಿನಲ್ಲಿ ಕಾಲಕಳೆಯುವ ವಿಭಿನ್ನ ವಿಧಾನಗಳನ್ನು ತೆರೆದಿಟ್ಟಿದೆ. ”ತತ್ತಿ ಇಡದ ಹಕ್ಕಿಗಳ ತಂಗುದಾಣದಲ್ಲಿ’ ಎಂಬ ಪ್ರಬಂಧ ವಿಮಾನನಿಲ್ದಾಣದ ವಿನೋದಸನ್ನಿವೇಶಗಳ ಸಂಗ್ರಹವಾಗಿದೆ.


ಅಷ್ಟೇನೂ ಪ್ರೌಢವಾಗಿಲ್ಲದ ಈ ಕೃತಿ ಆರಂಭಿಕ ಓದುಗರಿಗೆ ಮುದನೀಡುವುದಂತೂ ನಿಜ. ವಸುಧೇಂದ್ರರ ಸುಂದರ ಲಲಿತ ಶೈಲಿ ಕೃತಿಯನ್ನು ಓದಿಸಿಕೊಂಡು ಹೋಗುತ್ತದೆ. ೨೦೦೬ರಲ್ಲಿ ರಚಿತವಾಗಿ ಈವರೆಗೆ ಹದಿನೈದು ಮುದ್ರಣ ಕಂಡ ಈ ಕಿರು ಹೊತ್ತಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ೧೧೬ ಪುಟಗಳ ಪುಸ್ತಕದ ಬೆಲೆ ೮೦ ರೂಪಾಯಿಗಳು.

Wednesday, September 21, 2016

ತಿಂಗಳಿಗೊಂದು ಪುಸ್ತಕ - ೪

ಕ್ಷಣ ಹೊತ್ತು ಆಣಿ ಮುತ್ತು’ ಹೊಟೆಲ್ ಉದ್ಯಮಿ ಎಸ್. ಷಡಕ್ಷರಿಯವರ ಕೃತಿ. ಅಂದಾಕ್ಷಣ ಅದು ಹೊಟೆಲ್ ಉದ್ಯಮಕ್ಕೆ ಸಂಬಂಧಿಸಿದ ಪುಸ್ತಕವಲ್ಲ. ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಿಕೊಡುವ ಷಡಕ್ಷರಿಯವರು ತಮ್ಮ ಅಪಾರ ಅನುಭವದಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹ ಇದು.

ಈ ಕೃತಿಯ ಹೆಸರು ಒಂದು ಅನ್ವರ್ಥನಾಮ. ಧಾವಂತದ ಜೀವನದಲ್ಲಿ ಒಂದು ಕ್ಷಣ ನಿಂತು ಯೋಚಿಸಬೇಕಾದ ಚಿಂತನೆಯ ಮುತ್ತುಗಳ ಸಂಕಲನ ಇದು. ಹಾಗಂತ ಒಣ ತತ್ತ್ವಶಾಸ್ತ್ರವಿಲ್ಲ ಇಲ್ಲಿ. ಜೀವನ ಮೂಸೆಯಲ್ಲಿ ಬೆಂದು ಪಕ್ವವಾದ ಅನೇಕ ಜೀವಿಗಳ ಜೀವನದರ್ಶನ ಪ್ರತಿಯೊಂದು ಮುತ್ತಿನಲ್ಲಿಯೂ ಅಡಕವಾಗಿದೆ. ಇಲ್ಲಿ ಉಲ್ಲಿಖಿತವಾದ ಘಟನೆಗಳು ಸಾಮಾನ್ಯ ವ್ಯಕ್ತಿಯ ಜೀವನದಲ್ಲೂ ಬಂದು ಹೋಗುವಂತವೇ. ಆದರೆ ಅಂತಹ ಸಂದರ್ಭಗಳಲ್ಲಿ ವರ್ತಿಸುವ ರೀತಿಯೇ ಅಸಾಮಾನ್ಯರನ್ನು ಸಾಮಾನ್ಯರಿಂದ ಭಿನ್ನವಾಗಿ ನಿಲ್ಲಿಸುತ್ತದೆ. ವ್ಯಕ್ತಿತ್ವ ವಿಕಸನದ ಮುಖ್ಯ ಪಾಠ – ’ಜೀವನದಲ್ಲಿ ಆಶಾವಾದಿಯಾಗಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇಡಿ’ ಎಂಬುದೇ ಆಗಿದೆ ಎಂದು ನಮಗೆಲ್ಲ ಗೊತ್ತು. ಇಲ್ಲಿನ ಬರಹಗಳೆಲ್ಲ ಅದನ್ನೇ ಹೇಳುತ್ತಿದ್ದರೂ ಇಲ್ಲಿರುವ ದೃಷ್ಟಾಂತಗಳು ಮನಮುಟ್ಟುವಂತಿದೆ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವರನ್ನೂ ಎಬ್ಬಿಸಿ ನಿಲ್ಲಿಸುವ ಸಾಮರ್ಥ್ಯವನ್ನು ಈ ಬರಹಗಳು ಹೊಂದಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಕೃತಿಯ ಹೆಸರೇ ಹೇಳುವಂತೆ ಒಂದೇ ಪೇಜಿಗೆ ಸೀಮಿತವಾದ ಚಿಕ್ಕ ಚಿಕ್ಕ ಬರಹಗಳಿವೆ. ಕಥಾಪ್ರಿಯರೂ, ಪ್ರಬಂಧದ ಓದುಗರೂ ಸಮಾನವಾದ ಆನಂದವನ್ನು ಈ ಕೃತಿಯಿಂದ ಪಡೆಯಬಹುದು.


ಎಸ್.ಎಲ್.ಭೈರಪ್ಪನವರ ಮುನ್ನುಡಿ, ವಿಶ್ವೇಶ್ವರ ಭಟ್ಟರ ಹಿನ್ನುಡಿ, ಕನ್ನಡದ ಖ್ಯಾತನಾಮ ಬರಹಗಾರರ ಚೆನ್ನುಡಿಗಳು ೭೫ ಮುತ್ತುಗಳ ಸರಸ್ವತಿಯ ಹಾರಕ್ಕೆ ಮೆರಗನ್ನು ನೀಡಿವೆ. ೯೦ ದಿನಗಳಲ್ಲಿ ದಾಖಲೆಯ ೫೦೦೦೦ ಸಾವಿರ ಪ್ರತಿಗಳು ಮಾರಾಟವಾಗಿದ್ದು ೧೦ ಬಾರಿ ಮುದ್ರಣಗೊಂಡಿವೆ. ಸುಂದರ ಮುಖಪುಟ, ತಪ್ಪಿಲ್ಲದ ಮುದ್ರಣ, ಕೇವಲ ೭೫ ರೂಪಾಯಿಯಷ್ಟು ಕಡಿಮೆ ಬೆಲೆ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಕನ್ನಡ ಬಲ್ಲವರೆಲ್ಲ ಓದಿ ಮನನ ಮಾಡಬೇಕಾದ ಉತ್ಕೃಷ್ಟ ಕೃತಿಯಿದು.

Wednesday, August 24, 2016

’ಕರ್ಮ’ ಕಾದಂಬರಿ

ಶ್ರೀ ಕರಣಂ ಪವನ ಪ್ರಸಾದರ ಚೊಚ್ಚಲ ಕಾದಂಬರಿ ’ಕರ್ಮ’ವನ್ನು ಇದೀಗ ಓದಿ ಮುಗಿಸಿದೆ. ಶ್ರೀಕಂಠ ದೀಕ್ಷಿತ ಎಂಬ ಬ್ರಾಹ್ಮಣ ಸತ್ತಾಗ ನಡೆಯುವ ಅವರ ಔರ್ಧ್ವದೈಹಿಕ ಕರ್ಮಗಳ ಸುತ್ತ ಹೆಣೆದ ಕಥಾಹಂದರ ಈ ಕೃತಿ
.
ನಮ್ಮ ಧಾರ್ಮಿಕ ಆಚರಣೆಗಳೆಲ್ಲ ಮೌಢ್ಯ ಎಂದು ಪ್ರತಿಪಾದಿಸುವ ಒಂದು ಪಂಗಡ, ಇಲ್ಲ, ಎಲ್ಲವೂ ವೈಜ್ಞಾನಿಕ ಎಂದು ವಾದಿಸುವ ಇನ್ನೊಂದು ಪಂಗಡ ಇವುಗಳ ಜಗಳದಲ್ಲಿ ಸತ್ಯದ ಕೂಸು ಬಡವಾಗಿದೆ. ಈ ಎರಡೂ ಪಂಗಡಗಳಲ್ಲಿ ಕಾಣಬರುವ ಮುಖ್ಯ ಕೊರತೆ ಅಧ್ಯಯನದ್ದು. ಇಬ್ಬರದ್ದೂ ಪೂರ್ವಗ್ರಹ ವಾದವೇ. ಆಧುನಿಕ ಜೀವನಶೈಲಿಗೆ ಮಾರುಹೋದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಸಲುವಾಗಿ ಮೊದಲ ಪಂಗಡಕ್ಕೆ ಸೇರಿದರೆ, ಪರಂಪರಾಗತವಾಗಿ ಬಂದಿರುವ ಆಚರಣೆಗಳೇ ನಮ್ಮನ್ನು ಮುಕ್ತಿಯೆಡೆಗೆ ಒಯ್ಯುತ್ತವೆ, ಅವು ನಮ್ಮ ಕರ್ತವ್ಯಕರ್ಮ ಎಂದು ತಿಳಿದವರು ಎರಡನೆಯ ಪಂಗಡಕ್ಕೆ ಸೇರುತ್ತಾರೆ. ಪ್ರಸ್ತುತ ಕಾದಂಬರಿಯ ತಿರುಳೇ ಅದು. ಆಧುನಿಕತೆಯ ಲಕ್ಷಣ ಎಂಬಂತೆ ಪ್ರತಿಪಾದಿತವಾಗುವ ಮಾಂಸ ಭಕ್ಷಣ, ಮದಿರಾಪಾನ, ಹೆಣ್ಣಿನ ಸಹವಾಸ, ಕ್ಲಬ್ಬಿನ ನರ್ತನ ಇವೆಲ್ಲವಕ್ಕೂ ಒಗ್ಗಿಕೊಂಡಿದ್ದ ಬ್ರಾಹ್ಮಣ ಗ್ರಹಸ್ಥ(?)ನೊಬ್ಬ ತನ್ನಪ್ಪನ ಅಪರ ಕ್ರಿಯೆಯನ್ನು ಮಾಡಬೇಕಾಗಿ ಬಂದಾಗ ಅವನಲ್ಲಾಗುವ ತಳಮಳ, ಅಲ್ಲಿನ ಕರ್ಮಾಂಗಗಳನ್ನು ಒಪ್ಪಲಾರದ, ಒಪ್ಪದೇ ಇರಲಾರದ ಸ್ಥಿತಿಯಲ್ಲಿನ ತೊಳಲಾಟಗಳೇ ಕಾದಂಬರಿಯ ಜೀವವಸ್ತು. ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ ಎಂಬುದು ಲೇಖಕರ ವೈಚಾರಿಕ ಸೂತ್ರ. ಸುರೇಂದ್ರನೆಂಬ ಐ.ಟಿ. ಜೀವಿ, ಅವನಿಗೆ ತಕ್ಕಳಾದ ಸ್ನೇಹಾ ಎಂಬ ಆಧುನಿಕ ಗರತಿ, ನರಹರಿಯೆಂಬ ಹಳ್ಳಿಯ ಬ್ರಾಹ್ಮಣಯುವಕ, ವೈಚಾರಿಕ ನಾಟಕದ ದಿಗ್ದರ್ಶಕ ಪುರುಷೋತ್ತಮ, ವಿದೇಶಕ್ಕೂ ಹೋಗಿಬಂದು ಇಂಗ್ಲೀಷ ಭಾಷೆಯನ್ನೂ ಆಡಬಲ್ಲ ಕರ್ಮಠ ಪುರೋಹಿತ ವೆಂಕಟೇಶ ಭಟ್ಟರು ಇವೆಲ್ಲ ಕೃತಿಕಾರನಿಂದ ಸೃಷ್ಟಿಸಲ್ಪಟ್ಟ ಸುಂದರ ಪಾತ್ರಗಳು.

ಇದನ್ನೊಂದು ವೈಚಾರಿಕ ಕಾದಂಬರಿ ಎನ್ನಬಹುದು. ಹದಿನೈದು ದಿನಗಳ ಕರ್ಮಾಂಗದ ವಿಶದ ನಿರೂಪಣೆ ಗ್ರಂಥಕರ್ತನ ಅಧ್ಯಯನಶೀಲತೆಗೆ ಹಿಡಿದ ಕೈಗನ್ನಡಿ. ಅಲ್ಲಲ್ಲಿ ಉದ್ಧರಿಸಿರುವ ಸಂಸ್ಕೃತ ಶ್ಲೋಕಗಳು ಹಾಗೂ ಕರ್ಮಾಂಗ ಮಂತ್ರಗಳು ಶುದ್ಧವಾಗಿದ್ದು (ಆರ್.ಗಣೇಶರು ತಿದ್ದುವಲ್ಲಿ ಸಹಕರಿಸಿದ್ದಾರೆ ಎಂದು ಲೇಖಕರೇ ಉಲ್ಲೇಖಿಸಿದ್ದಾರೆ) ಸಂಸ್ಕೃತಜ್ಞರಿಗೂ ಕಿರಿಕಿರಿಯನ್ನುಂಟುಮಾಡುವುದಿಲ್ಲ. ಲೇಖಕರ ಮೊದಲ ಕೃತಿಯಾದುದರಿಂದ ನಿರೂಪಣಾ ಶೈಲಿಯಲ್ಲಿನ ಸ್ವಲ್ಪಮಟ್ಟಿನ ಶಿಥಿಲತೆ ಕ್ಷಮಾರ್ಹ. ಈ ಕೃತಿ ಮೂರೇ ವರ್ಷಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಪ್ರಪಂಚದ ಮಟ್ಟಿಗೆ ಇದು ಒಂದು ಸಾಧನೆಯೇ. ಮುದ್ರಾರಾಕ್ಷಸನ ಹಾವಳಿಗೆ ತುತ್ತಾಗದೆ ಓದುಗರ ಮನಗೆಲ್ಲುವ ಈ ಕೃತಿ ನಮ್ಮ ಮಸ್ತಕಕ್ಕೆ ಹಾಗೂ ಪುಸ್ತಕಸಂಗ್ರಹಕ್ಕೆ ಸೇರುವ ಯೋಗ್ಯತೆಯನ್ನು ಹೊಂದಿದೆ. ಪುಟಗಳು ೧೬೧; ಬೆಲೆ ೧೩೫ ರೂ. ಪ್ರಕಾಶನ: ಕೊನ್ ಕೇವ್ ಮೀಡಿಯಾ ಕಂ.,ಬೆಂಗಳೂರು. ವಿದ್ವಾನ್ ನವೀನ ಭಟ್ಟ ಗಂಗೋತ್ರಿಯವರು ಈ ಕಾದಂಬರಿಯನ್ನು ಇಂಗ್ಲೀಷಿಗೆ ಅನುವಾದಿಸಿದ್ದು ಅದೂ ಕೂಡ ಲಭ್ಯವಿದೆ.

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...