Tuesday, January 26, 2016

ಗೆಳೆಯ ರಾಮಚಂದ್ರ ಹೆಗಡೆಗೆ ಅಭಿನಂದನೆ.

೨೦೦೨ ನೇ ಇಸ್ವಿಯ ಆರಂಭದಲ್ಲಿ ಯು.ಜಿ.ಸಿ.ಯ ಒಂದು ಉಪಕ್ರಮದಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಣ್ಣದೊಂದು ನೌಕರಿ ದೊರೆತಿತ್ತು. ಸಂಸ್ಕೃತಭಾರತಿಯ ಕಾರ್ಯಕರ್ತನಾದುದರಿಂದ ಸೋದರ ಸಂಸ್ಥೆ ವಿದ್ಯಾರ್ಥಿಪರಿಷತ್ತಿನ ಕಾರ್ಯಾಲಯದಲ್ಲಿ ನನ್ನ ವಾಸವ್ಯವಸ್ಥೆಯಾಗಿತ್ತು.ಅಲ್ಲಿಗೆ ಬಂದು ಹೋಗುತ್ತಿದ್ದ ಅನೇಕ ವಿದ್ಯಾರ್ಥಿಗಳಲ್ಲಿ ಒಬ್ಬ ದಿನ ಕಳೆದಂತೆ ನನಗೆ ಆಪ್ತನಾದ. ಅವನ ಮುಖದಲ್ಲಿ ಅದಮ್ಯ ಉತ್ಸಾಹ, ಉತ್ಕಟ ರಾಷ್ಟ್ರಾಭಿಮಾನ ಬತ್ತದ ಕ್ರಿಯಾಶೀಲತೆಗಳು ಪ್ರತಿಫಲನಗೊಂಡಿರುವುದನ್ನು ಗಮನಿಸಿದ್ದೆ. ಒಂದಿನ ಅವನ ಪ್ರೀತಿಯ ಕರೆಗೆ ಓಗೊಟ್ಟು ಪಕ್ಕದಲ್ಲೇ ಇದ್ದ ಅನಾಥಾಶ್ರಮವೆಂಬ ಛಾತ್ರಾವಾಸಕ್ಕೆ ಹೋಗಿದ್ದೆ. ತನ್ನ ಇಂಜಿನಿಯರಿಂಗ್ ಪುಸ್ತಕಗಳ ಮಧ್ಯದಿಂದ ಸಣ್ಣ ದಿನಚರಿ ಪುಸ್ತಕವನ್ನು ತೆಗೆದು ತಾನು ಬರೆದಿದ್ದ ನಾಲ್ಕಾರು ಮುಕ್ತಕಗಳನ್ನೂ ಒಂದೆರಡು ಕವಿತೆಗಳನ್ನೂ ತೋರಿಸಿದ. ನಾನು ಅವನಲ್ಲಿ ಕಂಡ ಗುಣಗಳು ಅಲ್ಲಿಯೂ ಪ್ರತಿಬಿಂಬಿತವಾಗಿದ್ದವು. ದೇಶದ ಬಗ್ಗೆ, ಯುವಕರ ಬಗ್ಗೆ ನಾವು ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಅವನ ಪ್ರತಿ ಮಾತಿನಲ್ಲೂ ತಾನು ತನ್ನ ನೆಲಕ್ಕಾಗಿ, ನಮ್ಮ ಜನರಿಗಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತ ಕಾಣುತ್ತಿತ್ತು.
ನಾನು ಮೈಸೂರನ್ನು ಬಿಟ್ಟು ಗೋವಾಕ್ಕೆ ಬಂದ ಮೇಲೂ ಪತ್ರಗಳ ಮೂಲಕ ನಮ್ಮ ಸಂಪರ್ಕ ನಿರಂತರವಾಗಿತ್ತು. ನಾನೊಂದು ಹಸ್ತಪ್ರತಿಯ ಪತ್ರಿಕೆಯನ್ನು ಆರಂಭಿಸುತ್ತೇನೆ. ನೀವು ಅದಕ್ಕೆ ನಿರಂತರವಾಗಿ ಲೇಖನ ಬರೆಯಬೇಕು ಎಂದು ಒತ್ತಾಯಿಸುತ್ತಿದ್ದ. ಆಯಿತು ಎಂದು ಒಪ್ಪಿದ್ದೆ. ಹೀಗೆ ತನ್ನ ಸಹವಾಸಿ ನಾರಾಯಣ ಹೆಗಡೆ ಮತ್ತಿತರರನ್ನು ಕಲೆಹಾಕಿ ಏ೩ ಆಕಾರದ ಒಂದು ಹಾಳೆಯ ಒಂದೇ ಮಗ್ಗುಲಲ್ಲಿ ಬರೆದ ಪತ್ರಿಕೆಯನ್ನು ಆರಂಭಿಸಿಯೇ ಬಿಟ್ಟ. ೨೦೦೪ ರ ಮೇ ತಿಂಗಳಿನಲ್ಲಿ ಕಾರ್ಯನಿಮಿತ್ತ ಮೈಸೂರಿಗೆ ಹೋದಾಗ ’ಭಟ್ರೆ! ಇದು ನಿಮ್ಮ ಕೈಯಿಂದಲೇ ಬಿಡುಗಡೆ ಆಗಲಿ’ ಎಂದು ಕಾಗದದ ಸುರುಳಿಯೊಂದನ್ನು ನನ್ನ ಕೈಗಿತ್ತ. ಒಂದೆರಡು ಹೊಸ್ಟೆಲ್ ವಾಸಿಗಳ ಸಮ್ಮುಖದಲ್ಲಿ ಸರಳವಾಗಿ ’ಚೈತ್ರರಶ್ಮಿ – A ray of hope’ (ಖಾಸಗಿ ಪ್ರಸಾರಕ್ಕಾಗಿ ಮಾತ್ರ) ಬಿಡುಗಡೆಯಾಗಿತ್ತು. ತನ್ನ ಖರ್ಚಿನಲ್ಲಿಯೇ ಒಂದೆರಡು ಝೆರೊಕ್ಸ್ ಪ್ರತಿಗಳನ್ನು ಮಾಡಿ ಓದುವವರಿಗೆ ಮಾತ್ರ ಹಂಚಿದ. ಈ ಪತ್ರಿಕೆ ಅವಕಾಶವಂಚಿತ ಗ್ರಾಮೀಣ ಯುವಬರಹಗಾರರಿಗೆ ಒಂದು ವೇದಿಕೆಯಾಗಬೇಕೆಂದು ಅವನ ಆಸೆಯಾಗಿತ್ತು. ಮುಂದೆ ಸಾವಕಾಶವಾಗಿ ಹಸ್ತಪ್ರತಿ ಡಿ.ಟಿ.ಪಿ.ಗೆ ತಿರುಗಿ, ಪುಸ್ತಕದ ಆಕಾರವನ್ನು ಪಡೆದುಕೊಂಡುದೂ ಅಲ್ಲದೆ ಓದುಗರು ಹಾಗೂ ಬರಹಗಾರರ ಸಂಖ್ಯೆ ನಾಲ್ಕರಿಂದ ಎಂಟಾಗಿ, ಎಂಟರಿಂದ ಹದಿನಾರಾಗಿ ಬೆಳೆಯುತ್ತ ತನ್ನ ವ್ಯಾಪ್ತಿಯನ್ನು ಮೈಸೂರಿನಿಂದ ಬೆಂಗಳೂರು, ಕರಾವಳಿ, ಮಲೆನಾಡು, ಬಯಲುಸೀಮೆಗಳಲ್ಲೆಲ್ಲ ವಿಸ್ತರಿಸಿತ್ತು. ಅದೊಂದು ಪತ್ರಿಕೆಯಾಗಷ್ಟೆ ಉಳಿಯದೆ ಪ್ರೀತಿಯ ಸಂಬಂಧಗಳ ಭಾವಯಾನವಾಗಿ ’ಚೈತ್ರರಶ್ಮಿ’ ಪರಿವಾರವನ್ನು ಹುಟ್ಟುಹಾಕಿತ್ತು.

ನಾನು ಯಾರ ಬಗ್ಗೆ ಬರೆಯುತ್ತಿರುವೆ ಎನ್ನುವುದು ನಿಮಗೆ ಇನ್ನೂ ಒಗಟಾಗಿಯೆ ಇದೆಯೇ? ಇರಲಿಕ್ಕಿಲ್ಲ. ನಿಜ, ಇದು ಅದೇ ರಾಚಂ ಅಥವಾ ರಾಮಚಂದ್ರ ಹೆಗಡೆಯವರ ’ಚೈತ್ರರಶ್ಮಿ’ಯ ಕಥೆ.

ಇಂದು ಆ ಪತ್ರಿಕೆ ಇಲ್ಲದೆ ಇರಬಹುದು. ಆದರೆ ಅದು ಯುವ ಬರಹಗಾರರಲ್ಲಿ ಮೂಡಿಸಿದ ಸಂಚಲನ ಅವರ್ಣನೀಯ. ಕಲ್ಲಬ್ಬೆಯ ಪ್ರಿಯಕ್ಕ, ಕರ್ಕಿಸವಲಿನ ಸುಧಕ್ಕ, ಗಂಗೋತ್ರಿಯ ನವೀನ, ಹಳವಳ್ಳಿಯ ನರಸಿಂಹಣ್ಣ, ಎನ್ವೀ, ಸಂಜಯ, ಸೋದರಿ ರಜನಿ ಹಾಗೂ ನಾನು ಬೆಳೆದಿದ್ದು ಚೈತ್ರರಶ್ಮಿಯಿಂದ ಅಲ್ಲದಿರಬಹುದು. ಆದರೆ ಆಗ ಬೆಳಕಿಗೆ ಬಂದಿದ್ದು ಚೈತ್ರರಶ್ಮಿಯಿಂದ ಎಂದು ಧೈರ್ಯವಾಗಿ ಹೇಳಬಲ್ಲೆ. ನಮ್ಮೆಲ್ಲರ ಮೊಳಕೆಯೊಡೆಯುತ್ತಿದ್ದ ಪ್ರತಿಭೆಗೆ ಚೈತ್ರರಶ್ಮಿ ಒಂದು ದಿಕ್ಕನ್ನು ತೋರಿಸಿತು ಎಂದೂ ನಿಸ್ಸಂಶಯವಾಗಿ ಹೇಳಬಲ್ಲೆ.  ಉದ್ಯೋಗವಿಲ್ಲದೆ ಅಲೆಯುತ್ತಿದ್ದ ಕಾಲದಲ್ಲಿಯೂ ರಾಚಂ ತಮ್ಮ ಕಾಯಕವನ್ನು ಬಿಡಲಿಲ್ಲ. ಲೇಖಕರನ್ನೂ ಓದುಗರನ್ನೂ ಅವರಷ್ಟಕ್ಕೇ ಬಿಡದೆ ಅವರ ಮನೆಗೆ ಹೋಗಿ ಒಂದು ದಿನ ಉಳಿದು, ಅವರ ಬಗ್ಗೆ ಸಂಪೂರ್ಣ ತಿಳಿದುಕೊಂಡು ಬಾಂಧವ್ಯವನ್ನು ಸ್ಥಾಪಿಸಿದಾಗಲೇ ಅವರಿಗೆ ಸಮಾಧಾನ.

ನಾಯಕ ಆಲದಮರದಂತೆ ಆದರೆ ಇತರರಿಗೆ ತಂಪಾದ ನೆರಳನ್ನಷ್ಟೇ ನೀಡಬಲ್ಲ. ಆ ನೆರಳಲ್ಲಿ ಇನ್ಯಾವುದೇ ಗಿಡ ಬೆಳೆಯುವುದಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ತನ್ನ ಗೆಳೆಯರ ಕವನ ಸಂಕಲನಗಳು ತಯಾರಾದಾಗ ಅವರಿಗಿಂತ ಹೆಚ್ಚು ಸಂಭ್ರಮಿಸಿದ್ದು ಈ ರಾಮು. ಪುಸ್ತಕದ ಡಿ.ಟಿ.ಪಿ.ಯಿಂದ ಹಿಡಿದು ಬಿಡುಗಡೆಯವರೆಗೆ ಅವರೊಂದಿಗೆ ನಿಂತು ಎಲ್ಲವನ್ನೂ ಸರಿಯಾಗಿದೆ ಎಂದು ಮನದಟ್ಟಾದಾಗಲೇ ಅವರಿಗೆ ಸಮಾಧಾನ.

ಬರಹಗಾರನಿಗೆ ಸಾಮಾಜಿಕ ಬದ್ಧತೆ ಇರಲೇಬೇಕು ಎಂದು ಪ್ರತಿಪಾದಿಸುವ ರಾಚಂ ಬರಹ-ಕೃತಿ ಪರಸ್ಪರ ವಿರುದ್ಧವಾಗಿರುವ ಲೇಖಕರ ಮೇಲೆ ಹರಿಹಾಯುತ್ತಾರೆ. ತಮ್ಮ ಇಂಜಿನಿಯರ್ ಗೆಳೆಯರೊಂದಿಗೆ ಸಮಾಜ ಸೇವಕರ ಸಮಿತಿಯನ್ನು ರಚಿಸಿಕೊಂಡು ನೆರವು ಬೇಕಾದಲ್ಲಿ ಧಾವಿಸುವ ಇವರ ಸಾಮಾಜಿಕ ಬದ್ಧತೆ ಪ್ರಶ್ನಾತೀತ. ೨೦೧೦ರಲ್ಲಿ ಉತ್ತರಕರ್ನಾಟಕ ನೆರೆಹಾವಳಿಗೆ ತುತ್ತಾದಾಗ ತಮ್ಮ ಗೆಳೆಯರೊಂದಿಗೆ ಅವರ ನೆರವಿಗೆ ಧಾವಿಸಿದ್ದಲ್ಲದೆ, ಅಲ್ಲಿಯ ಚಿತ್ರಣ ಮನಮುಟ್ಟುವಂತೆ ’ನೆರೆಯ ನೋವಿಗೆ ಸ್ಪಂದನ’ ಎಂಬ ಪುಸ್ತಕವನ್ನೂ ಹೊರತಂದು ಹಂಚಿದರು. ಇನ್ಫೋಸಿಸ್ ಸೇರಿದ ಮೇಲೂ ಅಲ್ಲಿಯೂ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ.

ನನ್ನ ಮತ್ತು ಅವರ ಮೈತ್ರಿ ಹೆಚ್ಚು ಬೆಳೆಯಲು ಇಬ್ಬರೂ ಮಂಕುತಿಮ್ಮನ ಭಕ್ತರಾಗಿದ್ದು ಕಾರಣ ಅನಿಸುತ್ತಿದೆ. ನನ್ನ ಮದುವೆ ನಿಶ್ಚಿತವಾದಾಗ ಇವರು ಗಾಬರಿಯಾಗಿದ್ದರು. ಸಂಸಾರಕೂಪದಲ್ಲಿ ಬಿದ್ದು ಭಟ್ಟರೆಲ್ಲಿ ಕಾಣೆಯಾಗಿ ಬಿಡುತ್ತಾರೊ ಎಂಬ ಭಯ ಅವರಲ್ಲಿತ್ತು. ನನ್ನ ಭಾವೀ ಪತ್ನಿಯ ವಿಳಾಸವನ್ನು ಇಸಕೊಂಡು ’ಭಟ್ಟರನ್ನು ಸಂಪೂರ್ಣ ಹೈಜಾಕ್ ಮಾಡಿಬಿಡಬೇಡಿ. ನಮಗೂ ಸ್ವಲ್ಪ ಉಳಿಸಿ’ ಎಂದು ಪತ್ರ ಬರೆದಿದ್ದನ್ನು ನನ್ನ ಪತ್ನಿ ಇಂದಿಗೂ ಸ್ಮರಿಸುತ್ತಾಳೆ. ಗೆಳೆಯರೊಂದಿಗೆ ವ್ಯವಹರಿಸುವಾಗ ಅದೇ ಮುಗ್ಧತೆ ಅವರ ಮಾತಿನಲ್ಲಿ. ಇನ್ಫೋಸಿಸ್ ಸೇರಿದ ಹೊಸದರಲ್ಲಿ ಮೊದಲ ಬಾರಿ ವಿಮಾನ ಪ್ರಯಾಣದ ಅವಕಾಶ ದೊರೆತಾಗ ಗೆಳೆಯರಿಗೆಲ್ಲ ಫೋನ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು ಇನ್ನೂ ನೆನಪಿದೆ.

ಅವರಿಗೆ ಸಿಕ್ಕಿದ್ದು ಪದ್ಮಪ್ರಶಸ್ತಿಯೋ ಭಾರತರತ್ನವೋ ಆಗಿಲ್ಲದಿರಬಹುದು. ಆದರೂ ಅವರ ಸ್ನೇಹಿತರು ಸಂಭ್ರಮಪಡುವುದರಲ್ಲಿ ಅರ್ಥವಿದೆ. ಇದು ಅವರು ಅರ್ಜಿಹಾಕಿ ಅಥವಾ ವಶೀಲಿ ಹಚ್ಚಿ ಪಡೆದ ಪ್ರಶಸ್ತಿಯಲ್ಲ. ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಎಷ್ಟೋ ಎಲೆಮರೆಯ ಕಾಯಿಗಳನ್ನು ಹೊರಗೆ ತಂದು ಅವರಲ್ಲಿರುವ ಸಿಹಿಯನ್ನು ಸಮಾಜಕ್ಕೆ ತೋರಿದ ವ್ಯಕ್ತಿ ಎಲೆಮರೆಯ ಕಾಯಾಗಿಯೇ ಇರುವುದು ತರವಲ್ಲ. ಈ ಪ್ರಶಸ್ತಿ ಅವರ ಹೆಚ್ಚಿನ ಸಾಧನೆಗೆ ಪ್ರೇರಣೆಯಾಗಲಿ, ಪ್ರಶಸ್ತಿಯ ಮಾಯೆ ಅವರನ್ನು ಆವರಿಸದಿರಲಿ ಎಂದು ಆಶಿಸೋಣ.


Monday, December 21, 2015

ಭಗವದ್ಗೀತೆ-ಯುವಕರ ಚೈತನ್ಯಸ್ರೋತ.

ಭಗವದ್ಗೀತೆಯ ಬಗ್ಗೆ ವಿಚಾರಬಂದಾಗಲೆಲ್ಲ ಸ್ವಾಮಿ ವಿವೇಕಾನಂದರು ನೆನಪಾಗುತ್ತಾರೆ. "ಭಗವದ್ಗೀತೆ ೬೦ನ್ನು ದಾಟಿದವರ ಕಾಲಕ್ಷೇಪಗ್ರಂಥವೆಂದು ತಿಳಿದು ನಿವೃತ್ತಿಯ ನಂತರ ಆ ಗ್ರಂಥವನ್ನು ತೆರೆದರೆ ಮೊದಲೇ ಓದಿದ್ದರೆ ಜೀವನದಲ್ಲಿ ಏನನ್ನಾದರೂ ಮಾಡಬಹುದಿತ್ತಲ್ಲ ಎಂದು ಪಶ್ಚಾತ್ತಾಪವಾಗುತ್ತದೆ." ಹೌದು. ಭಗವದ್ಗೀತೆ ಮುದುಕರು ಓದಬೇಕಾದ ಗೊಡ್ಡು ಗ್ರಂಥವಲ್ಲ. ಅದರಲ್ಲಿ ನಮ್ಮ ಯುವ ಪೀಳಿಗೆ ಓದಿ ಅನುಸರಿಸಬೇಕಾದ ಅದೆಷ್ಟೋ ಅಂಶಗಳಿವೆ. ಮೋಕ್ಷಪ್ರಾಪ್ತಿಯೇ ಭಗವದ್ಗೀತೆಯ ಲಕ್ಷ್ಯವಾದರೂ ಕರ್ಮಯೋಗದ ಉದ್ಗ್ರಂಥ ಅದು.
                ಭಗವದ್ಗೀತೆಯ ವಿಷಯದಲ್ಲಿ ನಾವು ಪ್ರಥಮವಾಗಿ ಗಮನಿಸಬೇಕಾದ ಅಂಶ ಅಂದರೆ ಅದನ್ನು ಬೋಧಿಸಿದ್ದು ಯಾವುದೇ ತಪೋಭೂಮಿಯಲ್ಲಲ್ಲ; ಖಾಡಾಖಾಡಿ ಯುದ್ಧ ಮಾಡಬೇಕಾದ ರಣರಂಗವೆಂಬ ಕರ್ಮಭೂಮಿಯಲ್ಲಿ. ಎರಡನೆಯ ಅಂಶ ಇದನ್ನು ಬೋಧಿಸಿದವನು ಯಾವುದೇ ಋಷಿಯಲ್ಲ; ಭಾರತದ ಸಾರ್ವಕಾಲಿಕ ರಾಜಕೀಯ ಮುತ್ಸದ್ಧಿ ಶ್ರೀಕೃಷ್ಣ. ಮೂರನೆಯ ಅಂಶ ಇದನ್ನು ಬೋಧಿಸಿದ್ದು ಸಾವಿನಂಚಿನಲ್ಲಿರುವ ವೃದ್ಧನಿಗೋ, ಮೂಗು ಮುಚ್ಚಿಕೊಂಡು ತಪಸ್ಸನ್ನಾಚರಿಸುವ ತಪಸ್ವಿಗೋ ಅಲ್ಲ; ಅರ್ಜುನ ಎಂಬ ಬಿಸಿರಕ್ತದ ವೀರಯೋಧನಿಗೆ. ಬೋಧನೆಯ ಉದ್ದೇಶ ಮೋಕ್ಷಪ್ರಾಪ್ತಿಯಲ್ಲ; ಕರ್ತವ್ಯವಿಮುಖನಾದವನನ್ನು ಕಾರ್ಯಸಮ್ಮುಖಿಯಾಗಿ ಮಾಡುವುದು. ಇಷ್ಟಿದ್ದೂ ನಾವು ಇಂದಿಗೂ ಭಗವದ್ಗೀತೆಯನ್ನು ವೃದ್ಧರ ಕಾಲಕ್ಷೇಪ ಗ್ರಂಥ ಎಂದು ಭಾವಿಸುತ್ತೇವೆ. ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿಯೆಂದು ಗುರುತಿಸಲ್ಪಟ್ಟ ಆಲ್ಬರ್ಟ್ ಐನ್‌ಸ್ಟೈನ್ ಭಾರತೀಯನೊಬ್ಬನಿಗೆ ಹೀಗೆ ಛೀಮಾರಿ ಹಾಕಿದ್ದರು.
                "You hail from India in the name of Hindu philosophy, yet you have not cared to learn Sanskrit. Come along; see my library which treasures classics from Sanskrit, the Geeta and other treasures on Hindu Philosophy. They are the main source of inspirations and guidelines for the purpose of scientific investigations and formulation of theories".
                ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬಂದಿದ್ದು ಧರ್ಮಸಂಕಟ. ಅವನ ಮುಂದೆ ಧರ್ಮ ಹಾಗೂ ಅಧರ್ಮಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸಮಸ್ಯೆಯಿರಲಿಲ್ಲ. ಎರಡು ಧರ್ಮಗಳಲ್ಲಿ ಯಾವುದು ಶ್ರೇಷ್ಠ ಎಂಬುದು ಅವನ ಮುಂದಿರುವ ಸಮಸ್ಯೆಯಾಗಿತ್ತು. ಒಂದೆಡೆ ’ಅಹಿಂಸಾ ಪರಮೋ ಧರ್ಮ:’ ಎಂಬ ಆರ್ಷ ವಾಕ್ಯ. ಇನ್ನೊಂದೆಡೆ ’ಕ್ಷತ್ರಿಯಧರ್ಮ’. ಆ ಕಾಲಕ್ಕೆ ಆ ಸ್ಥಳದಲ್ಲಿ ಯಾವ ಧರ್ಮವನ್ನು ಆಶ್ರಯಿಸಬೇಕು ಎಂಬುದು ಆತನ ಸಮಸ್ಯೆಯಾಗಿತ್ತು. ಆತನೇನೂ ನಿರಕ್ಷರಿಯಲ್ಲ. ವೇದ ವೇದಾಂಗಗಳಲ್ಲೂ ಶಸ್ತ್ರವಿದ್ಯೆಯಲ್ಲೂ ಪಾರಂಗತನಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡವ. ಅಂಥವನೇ ಕೌರವಸೇನೆಯ ಮುಂದೆ ದಿಙ್ಮೂಢನಾಗಬೇಕಾಯಿತು. ನಮ್ಮ ಜೀವನದಲ್ಲೂ ನಾವೆಲ್ಲ ಅರ್ಜುನರೇ. ಇಂದು ನಾವು ಅನೇಕ ಪದವಿಗಳನ್ನು ಪಡೆದುಕೊಂಡಿದ್ದರೂ ಅದನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಉಪಯೋಗಿಸಿಕೊಳ್ಳಲಾಗದೆ ಕರ್ತವ್ಯಭ್ರಷ್ಟರಾಗುತ್ತೇವೆ. ಈ ಮನೋವ್ಯಾಧಿ ಬುದ್ಧಿವಂತರೆನಿಸಿಕೊಂಡವರಲ್ಲೇ ಹೆಚ್ಚು. ಇಂದು ದಿನಕ್ಕೊಂದರಂತೆ ತಲೆ ಎತ್ತುತ್ತಿರುವ ಕೌನ್ಸೆಲಿಂಗ್ ಸೆಂಟರ್‌ಗಳೇ ಅದಕ್ಕೆ ಸಾಕ್ಷಿ. "ಯುದ್ಧ ಮಾಡಲಾರೆ; ವನಕ್ಕೆ ಹೋಗಿ ತಪಸ್ಸು ಮಾಡುತ್ತೇನೆ ಎಂದ ಹೇಡಿ ಅರ್ಜುನನಂತೆ ಕಷ್ಟವನ್ನು ಎದುರಿಸಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದೆ ಇಂದಿನ ಯುವ ಸಮಾಜ. "ಕ್ಲೈಬ್ಯಂ ಮಾ ಸ್ಮ ಗಮ: ಪಾರ್ಥ!"(ಅರ್ಜುನ ನಪುಂಸಕನಾಗಬೇಡ!) ಎಂಬ ಚಾವಟಿಯೇಟು ನಮ್ಮ ಬೆನ್ನಿಗೇ ಬಿದ್ದಿದೆಯೆಂದು ತಿಳಿಯಬೇಕು.
                ಇಂದು ಜನಪ್ರಿಯವಾಗುತ್ತಿರುವ ಸ್ಟ್ರೆಸ್ ಮೆನೇಜ್‌ಮೆಂಟ್ ಭಗವದ್ಗೀತೆಯ ಕೂಸು. ಒಂದೆಡೆ ಯುದ್ಧ ಮಾಡುವ ಅನಿವಾರ್ಯತೆ, ಇನ್ನೊಂದೆಡೆ ಬಲಿಯ ಸ್ಥಾನದಲ್ಲಿ ನಿಂತಿರುವ ಬಂಧು-ಬಳಗ. ಈ ದ್ವಂದ್ವದಲ್ಲಿ ಸಿಲುಕಿರುವ ಅರ್ಜುನ ನಮ್ಮೆಲ್ಲರ ಪ್ರತಿನಿಧಿ. ತಾಯಿ-ಹೆಂಡತಿ, ಉದ್ಯೋಗ-ವಿದ್ಯಾಭ್ಯಾಸ, ವ್ಯಷ್ಟಿ-ಸಮಷ್ಟಿ, ಕುಟುಂಬ-ರಾಷ್ಟ್ರ ಈ ದ್ವಂದ್ವಗಳಲ್ಲಿ ಸಿಲುಕಿದ ಮಾನವ ತನ್ನ ಸಮೀಪ ಕೃಷ್ಣನಿಲ್ಲದೆ ತೊಳಲಾಡುತ್ತಿದ್ದಾನೆ. ಇಂತಹ ಮನೋವ್ಯಾಧಿಗೆ ಅಮೃತೌಷಧವಾಗಬಲ್ಲದು ಭಗವದ್ಗೀತೆ. ಸಂತೋಷದಲ್ಲಿ ಅತಿಯಾಗಿ ಹಿಗ್ಗಿದರೆ ಮಾತ್ರ ದು:ಖದಲ್ಲಿ ಕುಗ್ಗುಂಟು. ಯಶಸ್ವಿಯಾದಾಗ ಅಹಂಕಾರಿಯಾದರೆ ಮಾತ್ರ ಅಸಫಲನಾದಾಗ ದು:ಖಪಡಬೇಕಾಗುವುದು. ಈ ಸಮಸ್ಯೆಯ ಪರಿಹಾರಕ್ಕೆ  ಬೀಜಮಂತ್ರ "ಸಮತ್ವಂ ಯೋಗ ಉಚ್ಯತೇ". ಜೋರಾಗಿ ಗಾಳಿಬೀಸದ ಸ್ಥಳದಲ್ಲಿರುವ ದೀಪದಂತೆ ಮನಸ್ಸು ಸ್ಥಿರವಾಗಿದ್ದರೆ ಬದುಕು ಪ್ರಕಾಶಮಾನವಾಗುತ್ತದೆ ಹೊಯ್ದಾಡುವ ಮನಸ್ಸು ಬದುಕನ್ನು ಅಸ್ಥಿರಗೊಳಿಸುತ್ತದೆ. ಯಾವನು ಜಯ-ಅಪಜಯಗಳಲ್ಲಿ, ಲಾಭ-ನಷ್ಟಗಳಲ್ಲಿ, ಸುಖದು:ಖಗಳಲ್ಲಿ ಒಂದೇ ಮನೋಸ್ಥಿತಿಯನ್ನು ಇಟ್ಟುಕೊಳ್ಳಬಲ್ಲನೋ ಅವನು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾನೆ.

                ಭಗವದ್ಗೀತೆಯ ಬಗ್ಗೆ ಇಷ್ಟೆಲ್ಲ ತಿಳಿದ ಮೇಲೂ ನೀವು ಭಗವದ್ಗೀತೆ ಇರುವುದು ವೃದ್ದರಿಗಾಗಿ ಎನ್ನುತ್ತೀರಾ? ಕಳೆದ ವರ್ಷ ಅಲಹಾಬಾದ್ ಉಚ್ಚನ್ಯಾಯಲಯ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವೆಂದು ಉದ್ಘೋಷಿಸಬೇಕು ಎಂದು ಸರಕಾರಕ್ಕೆ ಸಲಹೆ ಮಾಡಿತ್ತು. ಸರಕಾರ ಅದನ್ನು ಮಾಡಲಾರದು; ನಾವಾದರೂ ಮಾಡೋಣವೆ?

Saturday, January 17, 2015

ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ

ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಚಿಮ್ಮಿ ಬಾ ಚೈತನ್ಯ ಚಿಲುಮೆಯಾಗಿ
ಕಷ್ಟದಲು ಬತ್ತದೆ ಸಿಹಿನೀರ ಉಕ್ಕಿಸುವ
ಎನ್ನೆದೆಯ ಉತ್ಸಾಹ ಬುಗ್ಗೆಯಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಹೊಮ್ಮಿ ಬಾ ವಿವೇಕ ಜಲಧಿಯಾಗಿ
ಒಳಿತು ಕೆಡುಕುಗಳ ಭೇದದರಿವನು ಕೊಟ್ಟು
ಸತ್ಪಥದಿ ಕೊಂಡೊಯ್ವ ಹಂಸನಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಮೂಡಿ ಬಾ ಆನಂದ ಲಹರಿಯಾಗಿ
ಭವದ ದು:ಖವನಳಿಸಿ ಅಮರ ಸಂತಸವೀವ
ಎನ್ನೊಳಿರುವ ಪರಮಾತ್ಮ ಜ್ಯೋತಿಯಾಗಿ
ಎದ್ದು ಬಾ ಧೀರತೆಯ ಸಂನ್ಯಾಸಿ ಎನ್ನೊಳಗೆ
ಬೆಳೆದು ಬಾ ಸುಜ್ಞಾನಮೇರುವಾಗಿ
ಎನ್ನೊಳಗೆ ನಿನ್ನಿರವ ಅರಿಯಗೊಡದಧ್ಯಾಸ
ತೊಡೆದು ಹಾಕುವ ಜ್ಞಾನಸೂರ್ಯನಾಗಿ
-ಮಹಾಬಲ ಭಟ್, ಗೋವಾ

Monday, March 17, 2014

ಆನಂದವಾತ್ಮಗುಣ

ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ|
ಮಾನವಂ ಪ್ರಣಯದೊಳೊ ವೀರವಿಜಯದೊಳೊ
ಏನೋ ಎಂತೋ ಸಮಾಧಾನಗಳನರಸುತಿಹ|
ನಾನಂದವಾತ್ಮಗುಣ-ಮಂಕುತಿಮ್ಮ||

ಪ್ರತಿಯೊಬ್ಬ ಜೀವಿಯ ಪರಮೋದ್ದೇಶ ಜೀವನವನ್ನು ಆನಂದವಾಗಿ ಕಳೆಯುವುದು ಹಾಗೂ ಕೊನೆಯಲ್ಲಿ ಆತ್ಯಂತಿಕವಾದ ಆನಂದವನ್ನು ಪಡೆಯುವುದು. ನಾವು ಮಾಡುತ್ತಿರುವ ಡೊಂಬರಾಟಳೆಲ್ಲ ಈ ಆನಂದವನ್ನು ಪಡೆಯುವುದಕ್ಕೆ. ಹಾಗಾದರೆ ಈ ಆನಂದದ ಸ್ವರೂಪವೇನು? ಅದರ ರಹಸ್ಯವೇನು ಅದನ್ನು ಪಡೆಯುವ ಬಗೆಯೆಂತು?
ಆನಂದಂ ಬ್ರಹ್ಮೇತಿ ವ್ಯಜಾನಾತ್ ಎನ್ನುತ್ತದೆ ತೈತ್ತರೀಯ ಸಂಹಿತೆ. ಅಂದರೆ ಆನಂದವೇ ಬ್ರಹ್ಮ ಎಂಬ ಭಾವ. ಅದೇ ಆತ್ಯಂತಿಕ ಸತ್ಯ. ಅದನ್ನೇ ಉಪನಿಷತ್ತುಗಳು ಚಿದಾನಂದ, ಬ್ರಹ್ಮಾನಂದ ಇತ್ಯಾದಿ ಹೆಸರುಗಳಿಂದ ಕರೆಯುತ್ತವೆ. ಈ ಆತ್ಯಂತಿಕ ಆನಂದವನ್ನು ಪಡೆದವನಿಗೆ ಜಗತ್ತಿನ ಯಾವ ದು:ಖವೂ ತಟ್ಟುವುದಿಲ್ಲ.
ಈ ಆನಂದ ದೊರೆಯುವುದೆಲ್ಲಿ? ಹುಟ್ಟಿನಿಂದ ಸಾಯುವವರೆಗೆ ಮಾನವ ತನಗೆ ಸಿಗುವ ಎಲ್ಲ ವಸ್ತುಗಳಲ್ಲೂ, ತನಗೆದುರಾದ ಎಲ್ಲ ಸನ್ನಿವೇಶಗಳಲ್ಲೂ ಆನಂದವನ್ನು ಹುಡುಕುತ್ತಾನೆ. ಮೌನವಾಗಿದ್ದರೆ ಅಂತರಂಗದಲ್ಲಿ ಆನಂದವನ್ನನನುಭವಿಸಬಹುದೆಂದು ಮೌನವ್ರತವನ್ನು ಸ್ವೀಕರಿಸುತ್ತಾನೆ. ಪ್ರಿಯವ್ಯಕ್ತಿಗಳೊಂದಿಗೆ ಭಾವವನ್ನು ಹಂಚಿಕೊಂಡಾಗ ಆನಂದ ಸಿಗಬಹುದೆಂದು ಮಾತಿಗಿಳಿಯುತ್ತಾನೆ. ಕೆಲವರಿಗೆ ಹಾಸ್ಯ ಆನಂದದಾಯಕವಾಗಿರುತ್ತದೆ; ಮತ್ತೆ ಕೆಲವರು ಹಾಡಿನಲ್ಲಿ ತನ್ಮಯರಾಗಿ ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಾರೆ. ಇನ್ನು ಕೆಲವರಿಗೆ ಪ್ರಣಯಚೇಷ್ಟೆಗಳಿಂದ ಆನಂದ ದೊರೆಯುತ್ತದೆ. ಮತ್ತೆ ಕೆಲ ಬಿಸಿರಕ್ತದ ಯುವಕರಿಗೆ ಶೌರ್ಯಪ್ರದರ್ಶನದಿಂದಲೋ ವಿಜಯಲಾಭದಿಂದಲೋ ಆನಂದ ದೊರೆಯುತ್ತದೆ. ಹೀಗೆ ಮಾನವ ಸಮಾಧಾನವನ್ನು ಎಲ್ಲೆಲ್ಲೂ ಹುಡುಕುತ್ತಾನೆ. ಆದರೆ ಅವನಿಗೆ ನಿಜವಾದ ಆನಂದ ಸಿಗುತ್ತದೆಯೆ?
ಸೌಂದರ್ಯವಿರುವುದು ವಸ್ತುವಿನಲ್ಲಲ್ಲ ನೋಡುವ ಕಣ್ಣಿನಲ್ಲಿ ಎಂಬ ಒಂದು ಮಾತಿದೆ. ಅದೇ ರೀತಿಯಲ್ಲಿಯೇ ಆನಂದವಿರುವುದೂ ನಮ್ಮ ಹೃದಯದಲ್ಲಿ-ಆತ್ಮದಲ್ಲಿ. ಅದು ಆತ್ಮನ ಗುಣ. ಆತ್ಮಾನಂದ ಆತ್ಯಂತಿಕವಾದುದು. ಅದಕ್ಕೆ ಕೊನೆಯಿಲ್ಲ. ತಮಗೊದಗಿದ ಕಷ್ಟದಲ್ಲೂ ಆನಂದವನ್ನು ಅನುಭವಿಸುವವರಿದ್ದಾರೆ. ಜೈನಯತಿಗಳು ಕೇಶಲುಂಚನ ಎಂಬ ಮೈಮೇಲಿನ ಕೂದಲುಗಳನ್ನು ಕೀಳುವ ಆ ವೇದನಾಪೂರ್ಣಕ್ರಿಯೆಯಲ್ಲೇ ಸಂತೋಷವನ್ನು ಕಾಣುತ್ತಾರೆ. ಮಲ್ಲಜಟ್ಟಿಯೋರ್ವನಿಗೆ ಕುಳಿತು ಉಣ್ಣುವುದು ಹಿಡಿಸದು. ಇನ್ನೊಬ್ಬ ಮಲ್ಲನೊಂದಿಗೆ ಹೋರಾಡುವುದೇ ಅವನಿಗೆ ಆನಂದದಾಯಕ. 
ನಗುವಾತ್ಮ ಪರಿಮಳವ ಪಸರಿಸುವ ಕುಸುಮ. ಆನಂದ ಎಂಬುದು ಎಲ್ಲ ರೋಗಗಳಿಗೂ ಮದ್ದು ಎಂಬುದನ್ನು ವೈದ್ಯರೂ ಒಪ್ಪುತ್ತಾರೆ. ಸಂತೋಷ ಏವ ಪುರುಷಸ್ಯ ಪರಂ ನಿದಾನಂ ಎಂಬ ಮಾತೂ ಅದನ್ನು ಪುಷ್ಟೀಕರಿಸುತ್ತದೆ. ಮನಸ್ಸು ಸಂತೋಷ ಸಮೃದ್ಧಿಯಿಂದ ಇದ್ದಷ್ಟೂ ಆಯುಷ್ಯವೃದ್ಧಿಯಾಗುತ್ತದೆ. ಆದ್ದರಿಂದಲೇ ಆನಂದವೇ ಬ್ರಹ್ಮ ಎನ್ನುವುದು.

ಮರುಳಮುನಿಯನು ನಾನು ಮಂಕುತಿಮ್ಮನ ತಮ್ಮ ......



ಲೇಖನ: ಮಹಾಬಲ ಭಟ್, ಗೋವಾ

ಡಿ.ವಿ.ಜಿ. ಎಂದಾಕ್ಷಣ ನೆನಪಿಗೆ ಬರುವುದು ಅವರ ಮಂಕುತಿಮ್ಮನ ಕಗ್ಗ. ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಈ ಗ್ರಂಥ ಕನ್ನಡದಲ್ಲಿಯೇ ಅದ್ವಿತೀಯವಾದುದು. ಆದರೆ ಈ ಮಂಕುತಿಮ್ಮನಿಗೆ ಒಬ್ಬ ತಮ್ಮನಿದ್ದಾನೆ ಎನ್ನುವ ವಿಚಾರ ಪ್ರಾಯಃ ಅನೇಕರಿಗೆ ಗೊತ್ತಿಲ್ಲ. ಮರುಳಮುನಿಯನ ಕಗ್ಗ ಎಂದು ಕರೆಯಲ್ಪಡುವ ಈ ಪುಸ್ತಕ ಅಷ್ಟೊಂದು ಪ್ರಸಿದ್ಧಿಯನ್ನು ಪಡೆದಿಲ್ಲ. ಅದಕ್ಕೆ ಕಾರಣ ಮಂಕುತಿಮ್ಮನ ಕಗ್ಗಕ್ಕೆ ಹೋಲಿಸಿದರೆ ಸ್ವಲ್ಪ ಕಠಿಣವೆನ್ನಬಹುದಾದ ಭಾಷಾಶೈಲಿ ಹಾಗೂ ವಿಷಯದ ಗಹನತೆ. ಮಂಕುತಿಮ್ಮನ ಕಗ್ಗವನ್ನು ಸಾಮಾನ್ಯರಿಗಾಗಿ ಬರೆದ ಡಿ.ವಿ.ಜಿ. ಯವರು ಮರುಳಮುನಿಯನ ಕಗ್ಗವನ್ನು ಚಿಂತಕರಿಗಾಗಿ, ಆಧ್ಯಾತ್ಮಜ್ಞಾನಪಿಪಾಸುಗಳಿಗಾಗಿ ಬರೆದಿದ್ದಾರೆ ಎನ್ನಬಹುದು. ಮರುಳಮುನಿಯನ ಕಗ್ಗ(ಕಾವ್ಯಾಲಯ:ಪ್ರಕಾಶಕರು:ಮೈಸೂರು)ದ ಪ್ರಸ್ತಾವನೆಯಲ್ಲಿ ವಿದ್ವಾನ್ ರಂಗನಾಥ ಶರ್ಮಾ ಹೇಳುವಂತೆ-ಈ ಮರುಳಮುನಿಯನು ಮಂತ್ರದ್ರಷ್ಟಾರರಾದ ಮುನಿಗಿಂತ ಕಡಿಮೆಯವನಲ್ಲ. ಮಂಕುತಿಮ್ಮನ ತಮ್ಮನಾದರೂ ಅಣ್ಣನಿಗೆ ಸರಿದೊರೆಯಾಗಿ ನಿಲ್ಲುತ್ತಾನೆ. ಕೆಲವೆಡೆ ಅವನನ್ನೂ ಮೀರಿಸುತ್ತಾನೆ ಮಂಕುತಿಮ್ಮನ ಜೀವನದರ್ಶನವನ್ನು ಅರ್ಥೈಸಿಕೊಂಡಿರುವ ವ್ಯಕ್ತಿ ಮರುಳಮುನಿಯನ ಕಗ್ಗವನ್ನು ಓದಲು ಅರ್ಹನಾಗುತ್ತಾನೆ.

ಡಿ.ವಿ.ಜಿ.ಯವರು ತಮ್ಮ ಗ್ರಂಥವನ್ನು  ’ಕಗ್ಗ’ ಎಂದು ಕರೆದುದೇ ವಿಚಿತ್ರವಾಗಿದೆ. ಕಗ್ಗ ಎಂದರೆ ಅಶಿಕ್ಷಿತರ ಮಾತು. ಅವರು ತಮ್ಮ ನಾಯಕನಿಗೆ ’ಮಂಕುತಿಮ್ಮ’ ಹಾಗೂ ’ಮರುಳಮುನಿಯ’ ಎಂದು ಅಭಿಧಾನವನ್ನಿತ್ತಾಗ ತಿಮ್ಮ, ಮುನಿಯ ಇತ್ಯಾದಿ ಹೆಸರುಗಳನ್ನೇ ಹೆಚ್ಚಾಗಿ ಬಳಸುವ ಜಾತಿಯವರನ್ನು ಡಿ.ವಿ.ಜಿಯವರು ಅವಹೇಳನಮಾಡಿದ್ದಾರೆ ಎಂದು ಆಕ್ಷೇಪಿಸಿದವರೂ ಇದ್ದಾರೆ. ಆದರೆ ಇವರ ಮೂಲಕ ಗಹನವಾದ ಜೀವನತತ್ತ್ವ್ವವನ್ನು ನಿರೂಪಿಸಿ, ಅದನ್ನು ತಿಳಿದಿರದ ಸುಂದರ ನಾಮಧೇಯಶೋಭಿತರಾದ ನಾವು ಓದುಗರೇ ಮಂಕು ಅಥವಾ ಮರುಳು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಡಿ.ವಿ.ಜಿಯವರು ತಮ್ಮನ್ನು ’ಡಿ.ವಿ.ಜಿ. ಸಂಜ್ಞಿತ: ಕೋಪಿ ಬ್ರಹ್ಮಪತ್ತನಭಿಕ್ಷುಕ:’- ಡಿವಿಜಿ ಎಂಬ ಹೆಸರಿನ ಬ್ರಹ್ಮನ ಪಟ್ಟಣದ ಒಬ್ಬ ಭಿಕ್ಷುಕ ಎಂದು ಕರೆದುಕೊಂಡಿದ್ದಾರೆ. ಯೋಗಿಗಳಂತೆ ತಪಸ್ಸುಮಾಡಿ ಮೋಕ್ಷವನ್ನು ಪಡೆಯುವ ಯೋಗ್ಯತೆಯಿಲ್ಲದೆ ’ಅಂಧವತ್ ಜಡವಚ್ಚೈವ ಮೂಕವಚ್ಚ ಮಹೀಂ ಚರೇತ್’ ಎಂಬ ನುಡಿಯಂತೆ ಬ್ರಹ್ಮಪುರಿಯಲ್ಲಿ ಭಿಕ್ಷೆ ಎತ್ತುತ್ತಿರುವ (ಅ)ಸಾಮಾನ್ಯ ಭಿಕ್ಷುಕ ತಾನು ಎಂಬುದನ್ನು  ಮಾರ್ಮಿಕವಾಗಿ ಸೂಚಿಸಿದ ಪರಿ ಇದು. ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಲೌಕಿಕಜೀವನದ ಅಸಾರತೆಯನ್ನು ತಿಳಿದು ಆಳವಾದ ಆಧ್ಯಾತ್ಮ ಚಿಂತನೆಗಿಳಿದ ಡಿವಿಜಿಯವರ ಪರಿಪಕ್ವ ವಿಚಾರಗಳು ಮರುಳಮುನಿಯನ ಕಗ್ಗದಲ್ಲಿ ವ್ಯಕ್ತವಾಗಿವೆ.

ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ |
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು||
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ದಾಳಿ|
ಉಗ್ಗು ಬಾಯ್ಚಪಲವಿದು -ಮರುಳಮುನಿಯ||

ನಿಗರ್ವ, ವಿಧೇಯತೆ, ಸೌಜನ್ಯಗಳು ಡಿವಿಜಿಯವರ ಅಸಾಧಾರಣಗುಣಗಳು. ’ತಿಳಿಸಿದೊಡೆ ತಿದ್ದಿಕೊಳುವ ಗುಣವುಂಟು’ ಎಂದು ಮಂಕುತಿಮ್ಮ ಹೇಳಿದರೆ ಮರುಳಮುನಿಯ ’ಸರಿನೋಡಿಕೊಡುವ ಸಜ್ಜನರಿಹರೆ ಲೋಕದಲಿ ಶರಣೆಪ್ಪನವರಿಂಗೆ’ ಎನ್ನುತ್ತಾನೆ. ಮರುಳಮುನಿಯನ ಮೂಲಕ ತನ್ನ ಮನಸ್ಸನ್ನು ಅವರು ಉದ್ಘಾಟಿಸಿದ ಪರಿಯನ್ನು ನೋಡಿ-

ಮರುಳಮುನಿಯನ ಮನಸು ಸರಳಬಾಳ್ವೆಯ ಕನಸು|
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು ||
ಕೆರೆಯಿನೆದ್ದೆಲೆಯೆರಚಿ ತಣಿವು ತುಂತುರನಿನಿತು |
ಮರಳಿ ತೆರೆ ಸೇರ‍್ವುದಲ-ಮರುಳಮುನಿಯ||

ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರಲು ಬಯಸಿದ್ದ ಡಿವಿಜಿಯವರು ’ಮರಣವನು ಬೇಡದಿರು ಜೀವಿತವ ಬೇಡದಿರು ತರುವುದೆಲ್ಲವ ಸಕಾಲಕ್ಕೆ ಕರ್ಮಚಕ್ರಂ’ ಎಂಬುದನ್ನು ನಂಬಿದವರಾಗಿದ್ದರು. ’ವಿಹಿತಗೈವನು ವೈದ್ಯ ನೀನಲ್ಲ ರೋಗಿ ನೀಂ ಗ್ರಹಿಸು ವಿಧಿಯೌಷಧವ’ ಎಂಬುದನ್ನು ತಿಳಿದವರಾಗಿದ್ದರು. ಸುಖ ಎಂದರೆ ಏನೆಂದು ತಿಳಿಯದೆಯೇ ನಾವು ಸುಖವನ್ನು ಬಯಸುತ್ತೇವೆ. ನಮ್ಮ ಸುಖ ಯಾವ ರೀತಿಯದ್ದು?

ತುರಿಬಂದ ಮೈಯ ಬೆರಲಿಂ ಕೆರೆವುದೊಂದು ಸುಖ |
ಎರೆದು ಬಿಸಿನೀರ ಪಲ್ಕಿರಿವುದೊಂದು ಸುಖ ||
ಉರಿಯೆಂದು ಲೇಪಗಳ ಸವರಲಿನ್ನೊಂದು ಸುಖ |
ನರಸುಖಗಳಿವು ತಾನೆ? - ಮರುಳಮುನಿಯ ||

ಕೈತುಂಬಾ ಹಣ ಬಂದರೆ ನಾವು ಸುಖಿಗಳಾಗುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಈ ಜಗತ್ತಿನಲ್ಲಿ ಎಷ್ಟೋ ಹಣವಂತರಾದ ಬಡವರಿದ್ದಾರೆ, ಧನಹೀನರಾದ ಶ್ರೀಮಂತರಿದ್ದಾರೆ.

ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಜನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳಮುನಿಯ ||

ಉಪನಿಷದ್ವಾಕ್ಯ ’ತತ್ತ್ವಮಸಿ’ಯಲ್ಲಿ ಮರುಳಮುನಿಯನಿಗೆ ಅಪರಿಮಿತ ವಿಶ್ವಾಸ. ’ಜೀವ ತಾಂ ಬ್ರಹ್ಮದೈಶ್ವರ್ಯವದ ಗೌರವಿಸು’ ಎನ್ನುತ್ತಾನೆ. ಆದರೆ ಅಹಂಕಾರಕ್ಕೆ ಒಳಗಾಗದೆ ಅವನ ನೆನೆದೂಟವುಣು ಎಂದು ಸಲಹೆ ನೀಡುತ್ತಾನೆ. ಒಂದೆಡೆ ’ನಂಬು ನೀ ದೈವವನು.... ನಂಬಿಕೆಯ ಮಾತ್ರದಿಂದಿಂಬುಗೊಳುವುದು ಜೀವ’ ಎಂದ ಅವನು ನಮ್ಮ ಆಲಸ್ಯ ನಿವಾರಣೆಗಾಗಿ ’ನೆಚ್ಚದಿರು ದೈವವನು ಬೆಚ್ಚದಿರದಾರಿಗಂ ಎಚ್ಚರಿರು ನಿನ್ನ ಸತ್ತ್ವದಲಿ ನೀಂ ನಿಂತು ಎಮದು ಎಚ್ಚರಿಕೆಯ ಮಾತನ್ನೂ ಆಡುತ್ತಾನೆ.

ಹೀಗೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯಾದರೆ ಮರುಳಮುನಿಯನ ಕಗ್ಗ ಉಪನಿಷತ್ತುಗಳಿದ್ದಂತೆ. ನಮ್ಮ ಜೀವನದ ಪ್ರತಿ ಹೆಜ್ಜೆಗೂ ಮಾರ್ಗದರ್ಶನ ಮಾಡಬಲ್ಲ ಕಗ್ಗ ಇತರ ಕಾವ್ಯಗಳಂತೆ ಓದಿ ಬದಿಗಿರಿಸುವಂಥ ಪುಸ್ತಕವಲ್ಲ. ಅವರೇ ಹೇಳುವಂತೆ-

ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |
ಮನನಾನುಸಂಧಾನಕಾದುದೀ ಕಗ್ಗ ||
ನೆನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ
ಅನುಭವಿಸಿ ಚಪ್ಪರಿಸೊ-ಮರುಳಮುನಿಯ ||


ತಮಿಳುನಾಡಿನ ದಾರ್ಶನಿಕಕವಿ ತಿರುವಲ್ಲುವರನ ತಿರುಕ್ಕುರಲ್ ಕೃತಿಗೆ ಯಾವರೀತಿಯಲ್ಲೂ ಕಡಿಮೆಯಿಲ್ಲದ ಹೊತ್ತಿಗೆಗಳು ಮಂಕುತಿಮ್ಮನ ಕಗ್ಗ ಹಾಗೂ ಮರುಳಮುನಿಯನ ಕಗ್ಗ. ಆದರೆ ತಮಿಳರು ತಿರುವಲ್ಲುವರನಿಗೆ ಕೊಡುವ ಕಾಲುಭಾಗ ಗೌರವವನ್ನೂ ನಾವು ಡಿವಿಜಿಯವರಿಗೆ ಕೊಡುತ್ತಿಲ್ಲ ಎಂಬುದಕ್ಕೆ ಕಾರಣ ಕನ್ನಡಿಗರ ಅಭಿಮಾನಶೂನ್ಯತೆಯೋ ಅಥವಾ ಅಜ್ಞಾನವೊ ತಿಳಿಯುತ್ತಿಲ್ಲ. ಡಿವಿಜಿಯವರಿಗೇನು ಜ್ಞಾನಪೀಠ ಪ್ರಶಸ್ತಿ ಕೊಡಬೇಕಾಗಿಲ್ಲ. ಅವರ ಕಗ್ಗದ ಎರಡು ಸಾಲುಗಳನ್ನು ನಾವು ತಿಳಿದಿದ್ದರೆ ಸಾಕು ಅದೇ ಅವರಿಗೆ ನಾವು ಸಲ್ಲಿಸುವ ಸಾರ್ಥಕ ಶ್ರದ್ಧಾಂಜಲಿ.

Friday, November 22, 2013

ಗಾದೆ ಎಂಬ ಸುಭಾಷಿತ




೧. ಮಾಡಿದ್ದುಣ್ಣೊ ಮಹಾರಾಯ
ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಫಲವೆಂಬುದೊಂದು ಇರುತ್ತದೆ. ಅದು ಶುಭವೂ ಆಗಿರಬಹುದು ಅಶುಭವೂ ಆಗಿರಬಹುದು. ಶುಭಾಶುಭಫಲಗಳು ದೈವಾಯತ್ತ ಎಂದು ಮಾನವ ಚಿಂತಿಸುತ್ತಾನೆ. ಆದರೆ ಅವು ಅಡಗಿರುವುದು ನಾವು ಮಾಡುವ ಕಾರ್ಯದ ಅಂತರಂಗದೊಳಗೆ ಎಂಬ ರಹಸ್ಯ ಹೆಚ್ಚಿನವರಿಗೆ ತಿಳಿದಿಲ್ಲ. ತಮ್ಮ ಕರ್ಮಫಲಕ್ಕೆ ತಾವೇ ಬಲಿಯಾದಾಗ ಈ ಗಾದೆ ಬಳಕೆಯಾಗುತ್ತದೆ.

ರಾಮಾಯಣದ ರಾವಣ ಸೀತಾಪಹಾರದಿಂದ ತನ್ನ ಹತ್ತು ತಲೆಗಳನ್ನೂ ಕಳೆದುಕೊಳ್ಳಬೇಕಾಯಿತು. ಮಹಾಭಾರತದ ದುರ್ಯೋಧನ ತೊಡೆ ತಟ್ಟಿ ನಕ್ಕಿದ್ದಕ್ಕೆ ತೊಡೆಯನ್ನೇ ಮುರಿಸಿಕೊಳ್ಳಬೇಕಾಯಿತು. ಉಪಪಾಂಡವರನ್ನು ಕೊಂದ ಅಶ್ವತ್ಥಾಮ ತನ್ನ ಶಿರೋರತ್ನವನ್ನೇ ಕಳೆದುಕೊಳ್ಳಬೇಕಾಯಿತು. ಏಕಲವ್ಯನ ಬೆರಳ ಕಪಟದಾನ ಪಡೆದ ದ್ರೋಣಾಚಾರ್ಯರು ಅಭಿಮನ್ಯುವಿನ ಬಾಣಕ್ಕೆ ತಮ್ಮ ಹೆಬ್ಬೆರಳನ್ನು ಬಲಿಕೊಡಬೇಕಾಯಿತು. ತಂದೆಯನ್ನು ಸೆರೆಯಲ್ಲಿಟ್ಟು ರಾಜನಾದ ಷಹಜಹಾನ್ ತನ್ನ ಮಗ ಔರಂಗಜೇಬನಿಂದಾಗಿಯೇ ಜೀವನದ ಕೊನೆ ಘಟ್ಟವನ್ನು ಸೆರೆಮನೆಯ ಕಿಂಡಿಯಿಂದ ತಾಜಮಹಲನ್ನು ಈಕ್ಷಿಸುತ್ತ ಕಳೆಯಬೇಕಾಯಿತು. ಅಷ್ಟೇ ಏಕೆ ತಾವು ಮಾಡಿದ ಹಗರಣಗಳಿಂದಾಗಿ ಸಾಲು ಸಾಲಾಗಿ ಸೆರೆಮನೆ ಸೇರುತ್ತಿರುವ ರಾಜಕಾರಣಿಗಳನ್ನು ನೋಡಿದರೆ, ಗಲ್ಲುಗಂಬ ಏರುತ್ತಿರುವ ಭಯೋತ್ಪಾದಕರನ್ನು ನೋಡಿದರೆ ಸಾಲದೆ ಈ ಗಾದೆಯ ಸಾಕ್ಷಾತ್ಕಾರಕ್ಕೆ.
ಇದೇ ಅರ್ಥದ ಸಂಸ್ಕೃತ ಸುಭಾಷಿತವೊಂದಿದೆ.

ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ್ |
ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ ||
’ಶುಭವಾಗಲಿ, ಅಶುಭವಾಗಲಿ ಕರ್ಮಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಬೇಕು. ಅನುಭವಿಸದ ಕರ್ಮದ ಭಾರ ನೂರುಕೋಟಿಕಲ್ಪಗಳು ಕಳೆದರೂ ಕ್ಷೀಣಿಸಲಾರದು.’
ಕೆಲವೊಮ್ಮೆ ಕೆಟ್ಟವರು ಸಂತೋಷವಾಗಿಯೂ ಸುಜನರು ಕಷ್ಟದಿಂದಲೂ ಜೀವನ ನಡೆಸುವುದನ್ನು ಕಂಡಾಗ ಈ ಗಾದೆ ಸುಳ್ಳೇನೋ ಎನಿಸುತ್ತದೆ. ಆದರೆ ವೇದಸುಳ್ಳಾದರೂ ಗಾದೆ ಸುಳ್ಳಾಗದು ತಾನೆ. ಕರ್ಮಫಲ ತಕ್ಷಣವೇ ಗೋಚರವಾಗುತ್ತದೆಂದಿಲ್ಲ. ಅದು ಈ ಲೋಕದಲ್ಲೇ ಸಿಗುತ್ತದೆ ಎಂದೂ ಹೇಳುವಂತಿಲ್ಲ. ಒಟ್ಟಿನಲ್ಲಿ ಈಗಲಾದರೂ ಮುಂದಾದರೂ, ಇಲ್ಲಾದರೂ ಅಲ್ಲಾದರೂ ಅವಶ್ಯವಾಗಿ ಅನುಭವಿಸಲೇಬೇಕು. ಡಿ.ವಿ.ಜಿ. ಒಂದೆಡೆ ಹೆಳುತ್ತಾರೆ-

ನರಕ ತಪ್ಪಿತು ಧರ್ಮಜಂಗೆ ದಿಟ ಆದೊಡೇಂ?|
ನರಕದರ್ಶನದು:ಖ ತಪ್ಪದಾಯಿತಲ ||
ದುರಿತತರುವಾರು ನೆಟ್ಟುದೊ ನಿನಗಮುಂಟು ಫಲ |
ಚಿರಋಣದ ಲೆಕ್ಕವದು – ಮಂಕುತಿಮ್ಮ ||
ನಾವು ಮಾಡಿದ ಅಡುಗೆಯೇ ನಮಗೆ ಗತಿ. ನೆರೆಮನೆಯ ಅಡುಗೆ ನಮಗಲ್ಲ.  ನಾವು ತಯಾರಿಸಿದ್ದನ್ನೇ ನಾವು ಉಣ್ಣುವುದು ಅನಿವಾರ್ಯ ಎಂಬುದು ಗಾದೆಯ ತಾತ್ಪರ್ಯ.

ಸ್ನೇಹ-ಸ್ಪರ್ಧೆ

  ’ನಿನ್ನ ಲಿಟರರಿ ಕ್ರಿಟಿಸಿಸಮ್ ನೋಟ್ಸ್ ಕೊಡ್ತಿಯಾ? ಝೆರೊಕ್ಸ್ ಮಾಡಿಸಿಕೊಳ್ಳುತ್ತೇನೆ’ ಸಹಾಧ್ಯಾಯಿನಿ ಸುನೀತಾ ಹೀಗೆ ಕೇಳಿದಾಗ ಸುಜಯನಿಗೆ ಆಶ್ಚರ್ಯ. ಅವರಿಬ್ಬರೂ ಮಾನಸ ಗ...