೧. ಮಾಡಿದ್ದುಣ್ಣೊ ಮಹಾರಾಯ
ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಫಲವೆಂಬುದೊಂದು
ಇರುತ್ತದೆ. ಅದು ಶುಭವೂ ಆಗಿರಬಹುದು ಅಶುಭವೂ ಆಗಿರಬಹುದು. ಶುಭಾಶುಭಫಲಗಳು ದೈವಾಯತ್ತ ಎಂದು ಮಾನವ
ಚಿಂತಿಸುತ್ತಾನೆ. ಆದರೆ ಅವು ಅಡಗಿರುವುದು ನಾವು ಮಾಡುವ ಕಾರ್ಯದ ಅಂತರಂಗದೊಳಗೆ ಎಂಬ ರಹಸ್ಯ
ಹೆಚ್ಚಿನವರಿಗೆ ತಿಳಿದಿಲ್ಲ. ತಮ್ಮ ಕರ್ಮಫಲಕ್ಕೆ ತಾವೇ ಬಲಿಯಾದಾಗ ಈ ಗಾದೆ ಬಳಕೆಯಾಗುತ್ತದೆ.
ರಾಮಾಯಣದ ರಾವಣ ಸೀತಾಪಹಾರದಿಂದ ತನ್ನ ಹತ್ತು ತಲೆಗಳನ್ನೂ ಕಳೆದುಕೊಳ್ಳಬೇಕಾಯಿತು. ಮಹಾಭಾರತದ ದುರ್ಯೋಧನ ತೊಡೆ ತಟ್ಟಿ ನಕ್ಕಿದ್ದಕ್ಕೆ ತೊಡೆಯನ್ನೇ ಮುರಿಸಿಕೊಳ್ಳಬೇಕಾಯಿತು. ಉಪಪಾಂಡವರನ್ನು ಕೊಂದ ಅಶ್ವತ್ಥಾಮ ತನ್ನ ಶಿರೋರತ್ನವನ್ನೇ ಕಳೆದುಕೊಳ್ಳಬೇಕಾಯಿತು. ಏಕಲವ್ಯನ ಬೆರಳ ಕಪಟದಾನ ಪಡೆದ ದ್ರೋಣಾಚಾರ್ಯರು ಅಭಿಮನ್ಯುವಿನ ಬಾಣಕ್ಕೆ ತಮ್ಮ ಹೆಬ್ಬೆರಳನ್ನು ಬಲಿಕೊಡಬೇಕಾಯಿತು. ತಂದೆಯನ್ನು ಸೆರೆಯಲ್ಲಿಟ್ಟು ರಾಜನಾದ ಷಹಜಹಾನ್ ತನ್ನ ಮಗ ಔರಂಗಜೇಬನಿಂದಾಗಿಯೇ ಜೀವನದ ಕೊನೆ ಘಟ್ಟವನ್ನು ಸೆರೆಮನೆಯ ಕಿಂಡಿಯಿಂದ ತಾಜಮಹಲನ್ನು ಈಕ್ಷಿಸುತ್ತ ಕಳೆಯಬೇಕಾಯಿತು. ಅಷ್ಟೇ ಏಕೆ ತಾವು ಮಾಡಿದ ಹಗರಣಗಳಿಂದಾಗಿ ಸಾಲು ಸಾಲಾಗಿ ಸೆರೆಮನೆ ಸೇರುತ್ತಿರುವ ರಾಜಕಾರಣಿಗಳನ್ನು ನೋಡಿದರೆ, ಗಲ್ಲುಗಂಬ ಏರುತ್ತಿರುವ ಭಯೋತ್ಪಾದಕರನ್ನು ನೋಡಿದರೆ ಸಾಲದೆ ಈ ಗಾದೆಯ ಸಾಕ್ಷಾತ್ಕಾರಕ್ಕೆ.
ಇದೇ ಅರ್ಥದ ಸಂಸ್ಕೃತ ಸುಭಾಷಿತವೊಂದಿದೆ.
ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ್ |
ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ ||
’ಶುಭವಾಗಲಿ, ಅಶುಭವಾಗಲಿ ಕರ್ಮಕ್ಕೆ ತಕ್ಕ
ಪ್ರತಿಫಲವನ್ನು ಅನುಭವಿಸಬೇಕು. ಅನುಭವಿಸದ ಕರ್ಮದ ಭಾರ ನೂರುಕೋಟಿಕಲ್ಪಗಳು ಕಳೆದರೂ
ಕ್ಷೀಣಿಸಲಾರದು.’
ಕೆಲವೊಮ್ಮೆ ಕೆಟ್ಟವರು ಸಂತೋಷವಾಗಿಯೂ ಸುಜನರು
ಕಷ್ಟದಿಂದಲೂ ಜೀವನ ನಡೆಸುವುದನ್ನು ಕಂಡಾಗ ಈ ಗಾದೆ ಸುಳ್ಳೇನೋ ಎನಿಸುತ್ತದೆ. ಆದರೆ
ವೇದಸುಳ್ಳಾದರೂ ಗಾದೆ ಸುಳ್ಳಾಗದು ತಾನೆ. ಕರ್ಮಫಲ ತಕ್ಷಣವೇ ಗೋಚರವಾಗುತ್ತದೆಂದಿಲ್ಲ. ಅದು ಈ
ಲೋಕದಲ್ಲೇ ಸಿಗುತ್ತದೆ ಎಂದೂ ಹೇಳುವಂತಿಲ್ಲ. ಒಟ್ಟಿನಲ್ಲಿ ಈಗಲಾದರೂ ಮುಂದಾದರೂ, ಇಲ್ಲಾದರೂ
ಅಲ್ಲಾದರೂ ಅವಶ್ಯವಾಗಿ ಅನುಭವಿಸಲೇಬೇಕು. ಡಿ.ವಿ.ಜಿ. ಒಂದೆಡೆ ಹೆಳುತ್ತಾರೆ-
ನರಕ ತಪ್ಪಿತು ಧರ್ಮಜಂಗೆ ದಿಟ ಆದೊಡೇಂ?|
ನರಕದರ್ಶನದು:ಖ ತಪ್ಪದಾಯಿತಲ ||
ದುರಿತತರುವಾರು ನೆಟ್ಟುದೊ ನಿನಗಮುಂಟು ಫಲ |
ಚಿರಋಣದ ಲೆಕ್ಕವದು – ಮಂಕುತಿಮ್ಮ ||
ನಾವು ಮಾಡಿದ ಅಡುಗೆಯೇ ನಮಗೆ ಗತಿ. ನೆರೆಮನೆಯ ಅಡುಗೆ
ನಮಗಲ್ಲ. ನಾವು ತಯಾರಿಸಿದ್ದನ್ನೇ ನಾವು
ಉಣ್ಣುವುದು ಅನಿವಾರ್ಯ ಎಂಬುದು ಗಾದೆಯ ತಾತ್ಪರ್ಯ.
No comments:
Post a Comment