Sunday, April 5, 2020

ಕಗ್ಗದ ಕಣ್ಣಲ್ಲಿ ರಾಮಾಯಣ ಭಾಗ-೩


ತನ್ನ ವಿರುದ್ಧ ಮಾತನಾಡಿದ್ದಕ್ಕೆ ತನ್ನ ತಂಗಿ ಶೂರ್ಪಣಖಿಯ ಗಂಡನನ್ನು ರಾವಣ ಕೊಂದು ಹಾಕಿದ್ದ. ಜನಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಅವಳ ಮಗನನ್ನು ರಾಮ ಕೊಂದು ಹಾಕಿದ್ದ. ರಾಮರಾವಣರಿಬ್ಬರನ್ನೂ ಒಂದೇ ಕಲ್ಲಿನಿಂದ ಹೊಡೆಯುವ ಅವಕಾಶಕ್ಕಾಗಿ ಶೂರ್ಪಣಖಿ ಕಾಯುತ್ತಿದ್ದಳು. ರಾಮನನ್ನು ಮದುವೆಯಾಗಿ ರಾವಣನನ್ನು ಕೊಲ್ಲಿಸಿ ಅನಂತರ ರಾಮನನ್ನು ಮುಗಿಸುವ ಆಲೋಚನೆ ಅವಳಿಗಿತ್ತು.

ಶೂರ್ಪಣಖಿ ರಾಮನ ಮುಂದೆ ಬಂದಿದ್ದು ಮಾಯಕದ ರೂಪಿಂದ. ತನ್ನ ರಕ್ಕಸರೂಪವನ್ನು ಅಡಗಿಸಿ ಹದಿಹರೆಯದ ತರುಣಿಯಾಗಿ ರಾಮನ ಮುಂದೆ ವಯ್ಯಾರ ತೋರಿಸುತ್ತಾಳೆ. ರಾಮನೇನೊ ಆತ್ಮಸಂಯಮದಿಂದ ಅವಳಿಗೆ ಮರುಳಾಗಲಿಲ್ಲ. ಆದರೆ ಸಾಮಾನ್ಯರ ಗತಿ? ಡಿವಿಜಿಯವರು ಈ ಸಂದರ್ಭವನ್ನು ಬಳಸಿಕೊಂಡು ಸುಂದರ ಸಾಲುಗಳನ್ನು ಪೋಣಿಸಿದ್ದಾರೆ.

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ?|
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ?||
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ|
ಮೃಷೆಯೊ ಮೈಬೆಡಗೆಲ್ಲ-ಮಂಕುತಿಮ್ಮ||

ಶೂರ್ಪಣಖಿಯಂತಹ ಒರಟು ರಾಕ್ಷಸಿಗೆ ಹೂವಿನಷ್ಟು ಕೋಮಲವಾದ ದೇಹವನ್ನು ಧರಿಸುವುದು ಕಷ್ಟವಾಗಲಿಲ್ಲ. ಪೂತನಿ ನಗುನಗುತ್ತಲೇ ಮಕ್ಕಳಿಗೆ ವಿಷವನ್ನುಣಿಸಲಿಲ್ಲವೆ? ಹಾಗೆ ನಸುನಗುವವರೆಲ್ಲ ದೇವತೆಗಳಲ್ಲ. ಮುಸಿನಗುವಿನ ಹಿಂದೆಯೂ ಪಿಶಾಚಿಕೆ ಅಡಗಿರಬಹುದು. ಹೊರಗೆ ಕಾಣಿಸುವ ಸುರೂಪವೇ ಸತ್ಯವಲ್ಲ. ಎಚ್ಚರಿಕೆಯಿರಲಿ ಎಂಬ ಸಂದೇಶ ಮಂಕುತಿಮ್ಮನದ್ದು.

ರಾಮ ಸೀತೆಯರನ್ನು ಪರಮಾತ್ಮ ಮತ್ತು ಜೀವಾತ್ಮರೊಂದಿಗೆ ಸಮೀಕರಿಸುವುದುಂಟು.ಶೂರ್ಪಣಖಿಯ ಆಂತರ್ಯವನ್ನು ರಾಮನೇನೊ ಅರ್ಥೈಸಿಕೊಂಡ. ಆದರೆ ಕಾಂಚನಮೃಗದ ಹಾಗೂ ರಾವಣಸಂನ್ಯಾಸಿಯ ರಹಸ್ಯವನ್ನು ಸೀತೆ ತಿಳಿಯದಾದಳು. ತನ್ನ ಆಸೆಯನ್ನು ಪೂರೈಸುವುದಕ್ಕಾಗಿ ಪರಮಾತ್ಮನನ್ನೇ ದೂರಕ್ಕೆ ಕಳಿಸಿದಳು. ವಿವೇಕ ಹಾಕಿದ ಗೆರೆಯನ್ನು ದಾಟಿದಳು. ಸುಭಾಷಿತವೊಂದು ಹೇಳುವಂತೆ ’ಪ್ರಾಯಃ ಸಮಾಪನ್ನವಿಪತ್ತಿಕಾಲೇ ಧಿಯೋಽಪಿ ಪುಂಸಾಂ ಮಲಿನೀಭವಂತಿ’- ವಿಪತ್ಕಾಲ ಹತ್ತಿರ ಬಂದಾಗ ಮನುಷ್ಯರ ಬುದ್ಧಿಯೂ ಮಂಕಾಗುತ್ತದೆ.

ಸೀತೆ ತನ್ನ ಆಸೆಗೆ ತಕ್ಕ ದಂಡವನ್ನು ತೆತ್ತಳು. ಶೂರ್ಪನಖಿಯಿಂದ ಸೀತೆಯ ವರ್ಣನೆಯನ್ನು ಕೇಳಿ ರಾವಣ ಅವಳನ್ನು ಬಯಸಿದ ಪರಿಣಾಮವಾಗಿ ಘಟಿಸಿದ ಘಟನೆ ಇದು. ಒಟ್ಟಿನಲ್ಲಿ ಎಲ್ಲವೂ ಆಸೆಯ ಆಟ. ಡಿವಿಜಿಯವರು ಈ ಘಟನೆಯನ್ನು ವಿಶಿಷ್ಟ ದೃಷ್ಟಿಯಿಂದ ನೋಡುತ್ತಾರೆ.

ಜನಕಜೆಯ ದರುಶನದಿನಾಯ್ತು ರಾವಣ ಚಪಲ|
ಕನಕಮೃಗದರುಶನದೆ ಜಾನಕಿಯ ಚಪಲ||
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ|
ಮನದ ಬಗೆಯರಿಯದದು – ಮಂಕುತಿಮ್ಮ||

ಇಬ್ಬರದ್ದೂ ಚಪಲವೆ. ಬಯಸಬಾರದ್ದನ್ನು ಬಯಸುವುದು. ಎರಡೂ ಅಷ್ಟೇ ಕೆಟ್ಟದ್ದು. ಆಸೆಯ ಪರಿಣಾಮ ವಸ್ತುವಿನ ಮೂಲ್ಯವನ್ನವಲಿಂಬಿಸಿ ನಿರ್ಧಾರವಾಗುವುದಲ್ಲ. ಅಡಿಕೆಯನ್ನು ಬಯಸಿದರೂ ಅದು ತಪ್ಪೇ, ಆನೆಯನ್ನು ಬಯಸಿದರೂ ತಪ್ಪೇ. ಆಸೆಯ ಸ್ತರವನ್ನು ಅದರ ಪರಿಣಾಮದ ತೀವ್ರತೆಯಿಂದ ನಿರ್ಧರಿಸಬೇಕೇ ಹೊರತು ಯಾರು ಬಯಸಿದ್ದಾರೆ, ಏನನ್ನು ಬಯಸಿದ್ದಾರೆ, ಯಾಕೆ ಬಯಸಿದ್ದಾರೆ ಎಂಬುದರಿಂದಲ್ಲ. ಹೀಗಿದ್ದರೂ ಜನರು ಯಾಕೆ ರಾವಣನನ್ನು ನಿಂದಿಸುತ್ತ, ಸೀತೆಯನ್ನು ಕನಿಕರದಿಂದ ನೋಡುತ್ತಾರೆ?

ಹೀಗೆ ತಾರತಮ್ಯ ತೋರುವವರಿಗೆ ಮನಸ್ಸಿನ ಪ್ರಕೃತಿ ತಿಳಿದಿಲ್ಲ. ಅಮೃತಬಿಂದೂಪನಿಷತ್ ಹೇಳುವಂತೆ ’ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ’ ನಮ್ಮ ಎಲ್ಲ ವಿಕಾರಗಳಿಗೆ ಮನಸ್ಸೇ ಕಾರಣ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೂ ’ಮನಸ್ಸು ವಿಷಯವಸ್ತುವಿನ ಬಗ್ಗೆ ಯೋಚಿಸಿದಾಗ ಅದರೊಂದಿಗೆ ನಮ್ಮ ಸಂಗವಾಗುತ್ತದೆ. ಸಂಗದಿಂದ ಕಾಮ, ಕಾಮದಿಂದ ಕ್ರೋಧ..... ಹೀಗೆ ಅನರ್ಥಪರಂಪರೆ ಮುಂದುವರಿಯುತ್ತಾ ಹೋಗುತ್ತದೆ ಎನ್ನುತ್ತಾನೆ. ಮನಸ್ಸಿನ ಈ ಗತಿಯನ್ನು ತಿಳಿಯದವರು ಮಾತ್ರ ಸೀತೆಯನ್ನು ಕನಿಕರಿಸುತ್ತ ರಾವಣನನ್ನು ನಿಂದಿಸುತ್ತಾರೆ.

ಆಸೆಯೇ ದುಃಖಕ್ಕೆ ಮೂಲ ಎಂಬುದಕ್ಕೆ ಸೀತೆ ರಾವಣರಿಬ್ಬರೂ ಸಮಾನ ನಿದರ್ಶನಗಳು.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...