ರಾಮಾಯಣದ ಪಾತ್ರಗಳಲ್ಲಿ ರಾಮನ ನಂತರದ
ಗೌರವದ ಸ್ಥಾನ ಇರುವುದು ಹನುಮಂತನಿಗೆ. ದಾಸತ್ವದಿಂದ ದೇವತ್ವಕ್ಕೆ ಏರಿದ ವ್ಯಕ್ತಿತ್ವ ಅದು. ನಮ್ಮ
ಜೀವನಕ್ಕೆ ಹನುಮಂತನ ಉಪದೇಶ ಏನು ಎಂಬುದನ್ನು ಡಿವಿಜಿಯವರು ಸುಂದರವಾದ ಮುಕ್ತಕದ ಮೂಲಕ
ತಿಳಿಸಿದ್ದಾರೆ.
ಘನತತ್ತ್ವವೊಂದಕ್ಕೆ ದಿನರಾತ್ರಿ
ಮನಸೋತು|
ನೆನೆಯದಿನ್ನೊಂದನೆಲ್ಲವ ನೀಡುತದರಾ||
ಅನುಸಂಧಿಯಲಿ ಜೀವಭಾರವನು ಮರೆಯುವುದು|
ಹನುಮಂತನುಪದೇಶ – ಮಂಕುತಿಮ್ಮ||
ಹನುಮಂತನಿಗೆ ರಾಮನೇ ಸರ್ವಸ್ವವಾಗಿದ್ದ.
ರಾಮದರ್ಶನವಾಗುವ ಮೊದಲೂ ಅವನು ಮಾಡುತ್ತಿದ್ದದ್ದು ರಾಮಜಪವೇ. ಒಂದು ಮಹತ್ತರವಾದ ತತ್ತ್ವವನ್ನು
ನಂಬಿ, ತನ್ನ ಮನಸ್ಸನ್ನು ಹಗಲಲ್ಲೂ ರಾತ್ರಿಯಲ್ಲೂ ಸಂಪೂರ್ಣವಾಗಿ ಅದಕ್ಕೆ ಸಮರ್ಪಿಸಿದವನು
ಹನೂಮಂತ. ಅವನಿಗೆ ರಾಮ ಒಂದು ವ್ಯಕ್ತಿಯಾಗಿರಲಿಲ್ಲ. ಅವನೇ ಪರಬ್ರಹ್ಮನಾಗಿದ್ದ. ಹಾಗಾಗಿ
ಇನ್ನೊಂದು ದೈವವನ್ನು ನೆನೆಯುವ ಪ್ರಮೇಯ ಅವನಿಗಿರಲಿಲ್ಲ. (ನೆನೆಯದೆ+ಇನ್ನೊಂದನು+ಎಲ್ಲವ
ನೀಡುತ+ಅದರಾ) ತನ್ನ ಸರ್ವಸ್ವವನ್ನೂ ರಾಮನಿಗೇ ಅರ್ಪಿಸಿಬಿಟ್ಟಿದ್ದ. ಅವನು ತನ್ನನ್ನು ತಾನು
ಮರೆಯುವುದು ಆ ರಾಮತತ್ತ್ವದ ಅನುಸಂಧಾನದಲ್ಲಿ ಮಾತ್ರ.ಈ ರೀತಿಯ ಅನುಸಂಧಾನ ಎಲ್ಲರದೂ ಆಗಲಿ ಎಂಬುದು
ಡಿವಿಜಿಯವರ ಆಶಯ.
ಭಾರತೀಯರಿಗೆ ವೈವಿಧ್ಯ ತುಂಬ
ಪ್ರಿಯವಾದದ್ದು. ಆದರೆ ವಿವಿಧತೆಯಲ್ಲಿ ಏಕತೆಯನ್ನು ಕಾಣಲಾರದ್ದು ನಮ್ಮ ದುರಂತ. ಸೋಮವಾರ ಶಿವ,
ಮಂಗಳವಾರ ಗಣೇಶ, ಬುಧವಾರ ವಿಠ್ಠಲ, ಗುರುವಾರ ರಾಯರು, ಶುಕ್ರವಾರ ದೇವಿ, ಶನಿವಾರ ಹನುಮ ಹೀಗೆ
ದಿನಕ್ಕೊಂದು ದೇವರು ನಮಗೆ. ರವಿವಾರ ರಜೆಯಿರುವುದರಿಂದ ಎಲ್ಲ ದೇವರನ್ನೂ ಕೂಡಿಸಿ ಅರ್ಧಗಂಟೆ
ಹೆಚ್ಚು ಪೂಜೆ! ನಮ್ಮ ದೇವರ ಪೀಠದಲ್ಲಿ ವಿವಿಧ ದೇವರ ಚಿತ್ರಗಳು, ಮೂರ್ತಿಗಳು. ನಮ್ಮ ಒಂದೊಂದು
ಬೇಡಿಕೆಗೆ ಒಂದೊಂದು ದೇವರು, ಒಂದೊಂದು ಸ್ತೋತ್ರ. ನಾವು ಯಾವ ದೇವರನ್ನೂ ಸರ್ವಶಕ್ತ,
ಸರ್ವವ್ಯಾಪಿ, ಸರ್ವವರಪ್ರದ ಎಂದು ಪರಿಗಣಿಸುವುದೇ ಇಲ್ಲ. ನಮಗೆ ದೇವರ ಸಾಕ್ಷಾತ್ಕಾರ ಯಾಕೆ
ಆಗುತ್ತಿಲ್ಲ ಎಂಬುದಕ್ಕೆ ಕಾರಣ ಇದು. ಮುಕ್ಕೋಟಿ ದೇವತೆಗಳ ಪರಿಕಲ್ಪನೆ ಇರುವುದು ನಮಗೆ ಇಷ್ಟವಾದ
ತತ್ತ್ವವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯಕ್ಕಲ್ಲದೆ ಒಬ್ಬನೇ ಎಲ್ಲರನ್ನೂ ಪೂಜಿಸಬೇಕು ಎಂಬ
ಮೌಢ್ಯಕ್ಕಲ್ಲ. ಭೂಮಿಯನ್ನು ಒಂದೇ ಕಡೆ ಸಾವಿರ ಸಲ ಅಗೆದರೆ ಮಾತ್ರ ನೀರು ಸಿಗುವುದೇ ಹೊರತು ಸಾವಿರ
ಕಡೆ ಸ್ವಲ್ಪ ಸ್ವಲ್ಪ ಅಗೆದರಲ್ಲ ತಾನೆ?
ಆತ್ಮೀಯರೇ, ಹನುಮನ ಈ ಉಪದೇಶದೊಂದಿಗೆ
ನನ್ನ ಈ ಬರಹ ಸರಣಿಯನ್ನು ಮುಗಿಸುತ್ತಿದ್ದೇನೆ. ಕಿರಿಯ ತಪ್ಪಿದಲ್ಲಿ ತಿದ್ದುವುದು ಪ್ರಾಜ್ಞರಾದ
ನಿಮ್ಮ ಹೊಣೆ. ರಾಮಾಯಣದ ಸನ್ನಿವೇಶಗಳ ಉಲ್ಲೇಖ ಇರುವ ಕಗ್ಗಗಳನ್ನು ಮಾತ್ರ ನಾನು
ಆರಿಸಿಕೊಂಡಿದ್ದೇನೆ. ಇನ್ನೂ ಅನೇಕ ಕಗ್ಗಗಳು ಅಪ್ರತ್ಯಕ್ಷವಾಗಿ ರಾಮಾಯಣದ ಪ್ರಸಂಗಗಳಿಗೆ
ಹೊಂದಿಕೆಯಾಗುತ್ತವೆ. ಮುಂದಿನ ದಿನಗಳಲ್ಲಿ ಅವುಗಳ ಅನುಸಂಧಾನ ಮಾಡಲು ಯತ್ನಿಸುತ್ತೇನೆ. ನನಗರಿವಿಲ್ಲದೆ
ಯಾವುದಾದರೂ ಮುಕ್ತಕ ಬಿಟ್ಟು ಹೋಗಿದ್ದರೆ ತಿಳಿಸುವ ಕೃಪೆ ಮಾಡಬಹುದು.
ಈ ಸರಣಿಗೆ ನೀವೆಲ್ಲ ಕೊಟ್ಟ
ಪ್ರತಿಸ್ಪಂದನೆ, ಪ್ರೋತ್ಸಾಹ ಅಪರಿಮಿತ. ’ನಾನು ಸೊನ್ನೆ, ನೀನು ಸನ್ನೆ’ ಎಂಬುದನ್ನು ಆ
ಘನತತ್ತ್ವದ ಮುಂದೆ ಮತ್ತೆ ಮತ್ತೆ ನಿವೇದಿಸಿಕೊಳ್ಳುತ್ತ ವಿರಮಿಸುತ್ತೇನೆ.
No comments:
Post a Comment