Friday, April 10, 2020

ವೇದಗಣಿತಮಣಿಮಾಲಿಕೆ; ಮಣಿ ೧


ಶ್ರೀ ಶ್ರೀ ಭಾರತೀಕೃಷ್ಣತೀರ್ಥ ಸ್ವಾಮೀಜಿ       
             
ಪ್ರಾಚೀನ ಕಾಲದಿಂದಲೂ ಭರತಭೂಮಿ ಜ್ಞಾನ-ವಿಜ್ಞಾನಗಳ ನೆಲೆವೀಡು. ಒಂದೆಡೆ ಆಧ್ಯಾತ್ಮ ಸಾಧನೆಯ ಮೂಲಕ ಪಾರಮಾರ್ಥಿಕ ಸುಜ್ಞಾನದ ಗೌರೀಶಂಕರವನ್ನೇರಿದ ಸಾಧಕರು ಮೆರೆಯುತ್ತಿದ್ದರೆ, ಇನ್ನೊಂದೆಡೆ ಐಹಲೋಕಿಕ ಸುಖಕ್ಕೆ ಬೇಕಾದ ವಿಜ್ಞಾನದ ಮೇರುಶಿಖರದ ಮೇಲೆ ಭಾರತೀಯರು ವಿಜೃಂಭಿಸುತ್ತಿದ್ದಾರೆ. ಹೊರನೋಟಕ್ಕೆ ಪರಸ್ಪರ ವಿರುದ್ದ ದಿಶೆಯಲ್ಲಿ ಪ್ರವಹಿಸುವಂತೆ ತೋರುವ ವಿಜ್ಞಾನ ಸುಜ್ಞಾನ ಪ್ರವಾಹಗಳು ಅಂತಿಮವಾಗಿ ಪರಮಾನಂದ ಸಾಗರವನ್ನೇ ಸೇರುತ್ತವೆ ಎಂಬುದು ನಮ್ಮ ಸಂಸ್ಕೃತಿಯ ವಿಶೇಷತೆ. ಅಂತೆಯೇ ಸನಾತನ ಕಾಲದಿಂದಲೂ ಆಧ್ಯಾತ್ಮ ಸಾಧನೆಗೈಯುತ್ತಲೇ ಲೌಕಿಕ ವಿಚಾರದಲ್ಲಿಯೂ ಕೃತಪರಿಶ್ರಮರಾದ ಋಷಿ ಪರಂಪರೆ ನಮ್ಮೀ ನಾಡಿನಲ್ಲಿ ಪ್ರವಹಿಸುತ್ತಿದೆ. ಅಂತಹ ಪರಂಪರೆಯಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಅವತರಿಸಿದವರು ಪ್ರಾಚೀನ ಅರ್ವಾಚೀನಜ್ಞಾನಸೇತುವಾಗಿ ಸುಜ್ಞಾನ-ವಿಜ್ಞಾನಗಳ ಸಂಗಮವಾಗಿದ್ದ ಶ್ರೀಮಚ್ಛಂಕರಾಚಾರ್ಯ ಶ್ರೀ ಶ್ರೀ ಭಾರತೀಕೃಷ್ಣತೀರ್ಥ ಸ್ವಾಮೀಜಿಗಳವರು. ಶ್ರೀ ಶಂಕರಭಗವತ್ಪಾದರಿಂದ ಸ್ಥಾಪಿತವಾದ ಪೂರ್ವಾಮ್ನಾಯ ಶ್ರೀ ಗೋವರ್ಧನಪೀಠದ ಅಧಿಪತಿಗಳಾಗಿ ಅವರು ಮಾಡಿದ ಆಧ್ಯಾತ್ಮಿಕ ಸಾಧನೆ, ದೇಶವಿದೇಶಗಳಲ್ಲಿ ಕೈಗೊಂಡ ಭಾರತೀಯ ಸಂಸ್ಕೃತಿ ಪ್ರಸಾರ ಕಾರ್ಯ, ಗಣಿತ ಕ್ಷೇತ್ರಕ್ಕೆ ಕೊಟ್ಟ ಅಪೂರ್ವ ಕಾಣಿಕೆ ಇವೆಲ್ಲ ಅತ್ಯದ್ಭುತ ಹಾಗೂ ಅನುಕರಣೀಯ.

                    ಶ್ರೀ ಶ್ರೀ ಭಾರತೀಕೃಷ್ಣ ತೀರ್ಥರ ಜೀವನ ವೃತ್ತಾಂತವೇ ರೋಮಾಂಚನಕಾರಿಯಾಗಿದೆ. ಕ್ರಿ.ಶ ೧೮೮೪ ಮಾರ್ಚ ೧೪ ಚೈತ್ರ ಶುದ್ಧ ತೃತಿಯಾದಂದು ತಮಿಳು ನಾಡಿನ ತಿನ್ನವೇಲಿ ಎಂಬ ಗ್ರಾಮದಲ್ಲಿ ಟಿ.ನರಸಿಂಹ ಶಾಸ್ತ್ರಿದಂಪತಿಗಳ ಸುಪುತ್ರನಾಗಿ ಜನಿಸಿದ ಇವರ ಬಾಲ್ಯ ನಾಮ ವೆಂಕಟರಮಣ. ಶಾಲಾ ವಿದ್ಯಾಭ್ಯಾಸದಲ್ಲಿ ಯಾವಾಗಲೂ ಮೊದಲಿಗರು. ಮನೆಯ ಆಧ್ಯಾತ್ಮಿಕ ಪರಿಸರ ಸಂಸ್ಕೃತಾಭ್ಯಾಸಕ್ಕೆ ಪ್ರೋತ್ಸಾಹವನ್ನೊದಗಿಸಿತ್ತು. ಪ್ರಗಲ್ಭ ಸಂಸ್ಕೃತ ಪಂಡಿತರಿಗೆ ಮದರಾಸು ಸಂಸ್ಕೃತ ಸಂಘನೀಡುವ ಸರಸ್ವತೀಎಂಬ ಅಭಿಧಾನಕ್ಕೆ ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಪಾತ್ರರಾದುದು ಇವರ ಹೆಗ್ಗಳಿಕೆ. ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಅಮೇರಿಕನ್ ಕೊಲೆಜ್ ಒಫ್ ಸೈನ್ಸ ನ  ಮುಂಬೈಕೇಂದ್ರದಲ್ಲಿ ಏಕಕಾಲದಲ್ಲಿ ಏಳು ಎಂ.ಎ ಪರೀಕ್ಷೆಗಳಿಗೆ ಕುಳಿತು ಎಲ್ಲ ವಿಷಯಗಳಲ್ಲಿಯೂ ಸರ್ವೋಚ್ಚ ಅಂಕ ಪಡೆದ ವೆಂಕಟರಮಣ ಸರಸ್ವತಿಯವರ ಸಾಧನೆ ಇಂದಿಗೂ ವಿಶ್ವದಾಖಲೆಯಾಗಿಯೇ ಉಳಿದಿದೆ. ಅವರು ಅಲ್ಲಿ ಆರಿಸಿಕೊಂಡಿದ್ದ ವಿಷಯಗಳು ಗಣಿತ, ಭೌತಶಾಸ್ತ್ರ, ತತ್ವಶಾಸ್ತ್ರ, ಸಂಸ್ಕೃತ, ಇತಿಹಾಸ ಮೊದಲಾದವು.

                    ಗೋಪಾಲ ಕೃಷ್ಣ ಗೋಖಲೆ, ಅರಬಿಂದೋರಂಥವರ ಸಹವಾಸ ಕೆಚ್ಚೆದೆಯ ತರುಣರಾದ ವೆಂಕಟರಮಣರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿತು. ೧೯೦೫ರ ರಾಷ್ಟ್ರೀಯ ಶಿಕ್ಷಣ ಆಂದೋಲನ ಹಾಗೂ ವಗಭಂಗ ಚಳುವಳಿಗಳಲ್ಲಿ ಅವರು ಭಾಗವಹಿಸಿದ್ದರು. ಮಾನವಕೋಟಿಯನ್ನು ಉದ್ಧರಿಸಬೇಕೆಂಬ ಅವರ ತೀವ್ರ ತುಡಿತ ಅವರನ್ನು ಬಲವಾದ ಆಧ್ಯಾತ್ಮಿಕ ಸೆಳೆತಕ್ಕೆ ಸಿಲುಕಿಸಿತ್ತು. ಅದು ಅವರನ್ನು ೧೯೦೯ರಲ್ಲಿ ಶೃಂಗೇರಿಯ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವನೃಸಿಂಹ ಸರಸ್ವತಿಯವರ ಸನ್ನಿಧಾನದೆಡೆಗೆ ಸೆಳೆದೊಯ್ದಿತು. ಶೃಂಗೇರಿಯ ಶಾರದಾಂಬೆಯ ಪದತಲದಲ್ಲಿ ಕುಳಿತು ತೀವ್ರ ಅಧ್ಯಯನ ಹಾಗೂ ಸಾಧನೆಯಲ್ಲಿ ತೊಡಗಿದರು. ಹೀಗೆಯೇ ಒಮ್ಮೆ ಸಮೀಪದ ಕಿಗ್ಗದ ಕಾಡಿನಲ್ಲಿ ಧ್ಯಾನಾಸಕ್ತರಾಗಿದ್ದಾಗ ಅವರಿಗೆ ವೇದಗಣಿತ ಸೂತ್ರಗಳು ಗೋಚರವಾದವು.

                    ಸಂನ್ಯಾಸವೇ ಆತ್ಮಸಾಕ್ಷಾತ್ಕಾರಕ್ಕೆ ಉತ್ತಮ ಮಾರ್ಗವೆಂದು ಅರಿತ ವೆಂಕಟರಮಣ ಸರಸ್ವತಿಯವರು ೧೯೧೯ ರಲ್ಲಿ ಬನಾರಸಿನಲ್ಲಿ ಶ್ರೀ ಶ್ರೀ ತ್ರಿವಿಕ್ರಮ ತೀರ್ಥರಿಂದ ಸಂನ್ಯಾಸವನ್ನು ಸ್ವೀಕರಿಸಿದರು. ಅವರ ವೈರಾಗ್ಯ ಹಾಗೂ ಸಂನ್ಯಾಸ ಮಾನವ ಜನಾಂಗದ ಸೇವೆಗೆ ಪೂರಕವಾಯಿತೇ ಹೊರತು ಬಾಧಕವಾಗಲಿಲ್ಲ. ೧೯೨೧ ರ ಖಿಲಾಪತ್ ಚಳುವಳಿಯಲ್ಲಿ ಅಲಿ ಸಹೋದರರೊಂದಿಗೆ ಇವರೂ ಬಂಧಿತರಾಗಿದ್ದರು. ಕೆಲಕಾಲ ದ್ವಾರಕಾಪೀಠದ ಶ್ರೀ ಶ್ರೀ ಮಧುಸೂದನ ತೀರ್ಥರ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ಅಲ್ಲಿಂದ ನಿರಂತರವಾಗಿ ಭಾರತೀಯ ತತ್ತ್ವಜ್ಞಾನದ ಪ್ರಸಾರ ಕಾರ್ಯದಲ್ಲಿ ಪ್ರವೃತ್ತರಾದರು. ೧೯೫೩ ರಲ್ಲಿ ನಾಗಪುರದಲ್ಲಿ ವಿಶ್ವ ಪುನರ್ನಿರ್ಮಾಣ ಸಂಘವನ್ನು ಸ್ಥಾಪಿಸಿ ಆ ಮೂಲಕ ಸಮಾಜಸೇವೆಗೆ ಹೊಸ ಆಯಾಮವನ್ನಿತ್ತರು.

                    ೧೯೫೮ರಲ್ಲಿ ಅಮೇರಿಕಾದ ಆತ್ಮ ಸಾಕ್ಷಾತ್ಕಾರ ಸಂಘದ ಶ್ರೀಮತಿ ದಯಾಮಾತಾರವರ ಆಮಂತ್ರಣವನ್ನು ಮನ್ನಿಸಿ ಲಾಸ್ ಎಂಜಲೀಸ್‌ಗೆ ತೆರಳಿದ ಶ್ರೀ ಸ್ವಾಮೀಜಿಯವರು ಅಮೇರಿಕಾದ್ಯಂತ ಭಾರತದ ತತ್ವಶಾಸ್ತ್ರ-ವಿಜ್ಞಾನ ಸಾಧನೆಗಳ ಕಹಳೆಯನ್ನೂದಿದರು. ನಮ್ಮ ಸನಾತನ ಆಧ್ಯಾತ್ಮಿಕ ಕಂಪನ್ನು ಪಸರಿಸುವುದರ ಜೊತೆಗೆ ವಿಜ್ಞಾನ-ತಂತ್ರಜ್ಞಾನ-ಗಣಿತ ಕ್ಷೇತ್ರಗಳಲ್ಲಿ ಭಾರತೀಯರ ಸಾಧನೆಯ ಶಿಖರದ ಪರಿಚಯ ಮಾಡಿಕೊಟ್ಟರು.

                    ಶ್ರೀ ಭಾರತೀಕೃಷ್ಣರು ಎಲ್ಲ ಕ್ಷೇತ್ರಗಳಲ್ಲಿಯೂ ಪರಿಣಿತಿ ಸಾಧಿಸಿದ್ದರು. ವಿಜ್ಞಾನ-ಗಣಿತ-ಆಧ್ಯಾತ್ಮಿಕ-ರಾಜಕೀಯ ಮುಂತಾದ ಅನೇಕ ವಿಷಯಗಳ ಕುರಿತು ಸಂಸ್ಕೃತದಲ್ಲಿಯೂ, ಇಂಗ್ಲೀಷಿನಲ್ಲಿಯೂ ಗ್ರಂಥಗಳನ್ನು ರಚಿಸಿದ್ದಾರೆ. ಸನಾತನ ಧರ್ಮ’, ’ಸ್ತೋತ್ರಭಾರತೀಕಂಠಹಾರ’, ’ವೇದಿಕ್ ಮೆಟಾಫಿಸಿಕ್ಸ್’ ಮುಂತಾದವು ಅವರ ಪ್ರಮುಖ ಗ್ರಂಥಗಳು. ಅವೆಲ್ಲವುಗಳಿಗಿಂತ ಮುಖ್ಯವೂ, ಆಶ್ಚರ್ಯಕರವೂ ಆದ ಗ್ರಂಥ ವೇದಗಣಿತ’.

                    ಶೃಂಗೇರಿಯಲ್ಲಿ ತಪೋನಿರತರಾಗಿದ್ದಾಗ ಸ್ಫುರಿಸಿದ ಅಲ್ಪಾಕ್ಷರವೂ, ಅಸಂದಿಗ್ಧವೂ ಆಗಿರುವ ಹದಿನಾರು ಮುಖ್ಯಸೂತ್ರ ಹಾಗೂ ಹದಿಮೂರು ಉಪಸೂತ್ರಗಳನ್ನು ಆಧರಿಸಿ ಹೇಗೆ ಕ್ಷಿಪ್ರಗತಿಯಲ್ಲಿ ಉತ್ತರವನ್ನು ಕಂಡುಹಿಡಿಯಬಹುದೆಂಬುದನ್ನು ಈ ಕೃತಿಯು ವಿವರಿಸುತ್ತದೆ.

                    ನಿರಂತರ ಪ್ರವಾಸದಿಂದ ಅನಾರೋಗ್ಯಕ್ಕೊಳಗಾದ ಶ್ರೀ ಶ್ರೀ ಭಾರತೀಕೃಷ್ಣತೀರ್ಥರು ಉತ್ತರಾಯಣ, ಮಾಘಶುದ್ದ ಪಂಚಮಿ ಅಂದರೆ ವಸಂತಪಂಚಮಿಯ ಪುಣ್ಯಕಾಲದಲ್ಲಿ ಪರಂಜ್ಯೋತಿಯಲ್ಲಿ ಲೀನವಾದರು. ಭರತಭೂಮಿಯಲ್ಲಿ ಅವತಾರವೆತ್ತಿದ ಋಷಿಕಲ್ಪ ಧೀಮಂತರ ಸಾಲಿನಲ್ಲಿ ಆಳಿಯದ ಕೀರ್ತಿಯನ್ನು ಸ್ಥಾಪಿಸಿ ಭೌತಿಕವಾಗಿ ಕಣ್ಮರೆಯಾದರು. ಅವರು ಲೋಕಕ್ಕೆ ನೀಡಿದ ಕಾಣಿಕೆ ಮಾತ್ರ ಸಾರ್ವಕಾಲಿಕ ಮಾರ್ಗದರ್ಶಕವಾಗಿ ಜನತೆ ಎಂದಿಗೂ ನೆನಪಿಡಬೇಕಾದಂಥದ್ದು.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...