Tuesday, April 28, 2020

ಭಾರತದ ಅಖಂಡತೆಯ ಶಿಲ್ಪಿ – ಶ್ರೀ ಶಂಕರ ಭವತ್ಪಾದರು


ಭಾರತದ ಅಖಂಡತೆಯ ಶಿಲ್ಪಿ – ಶ್ರೀ ಶಂಕರ ಭವತ್ಪಾದರು
ಹಿಂದೆ ಈಗಿನ ಭಾರತದೇಶ ಅನೇಕ ಸಣ್ಣ ಸಣ್ಣ ಪ್ರಾಂತಗಳಲ್ಲಿ ಹಂಚಿಹೋಗಿತ್ತು. ಬ್ರಿಟಿಷರು ಇಲ್ಲಿ ಏಕ ಚಕ್ರಾಧಿಪತ್ಯವನ್ನು ಸ್ಥಾಪಿಸುವ ಮೊದಲು ಅಖಂಡ ಭಾರತದ ಕಲ್ಪನೆಯೇ ಇರಲಿಲ್ಲ ಎಂಬ ಭಾವನೆ ಅನೇಕರಿಗಿದೆ. ಆದರೆ ಭಾರತದ ಅಖಂಡತೆಯ ಶಿಲ್ಪಿ ಎಂಟನೆಯ ಶತಮಾನದ ಅದ್ವಿತೀಯ ವೀರ ಸಂನ್ಯಾಸಿ ಶ್ರೀ ಶಂಕರಾಚಾರ್ಯರು. ಭಾರತದ ಮೂಲೆ ಮೂಲೆಗಳಲ್ಲಿ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಸಮಗ್ರ ದೇಶವನ್ನು ಒಂದೇ ಧರ್ಮಚ್ಛತ್ರದ ಅಡಿಯಲ್ಲಿ ತಂದ ಮಹಾಮಹಿಮರು ಶ್ರೀ ಶಂಕರಭಗವತ್ಪಾದರು.
               ಶ್ರೀ ಶಂಕರಾಚಾರ್ಯರು ಜನಿಸಿದ್ದು ಭಾರತದ ದಕ್ಷಿಣ ತುದಿಯ ಕೇರಳ ರಾಜ್ಯದ ಕಾಲಟಿಯೆಂಬ ಹಳ್ಳಿಯಲ್ಲಿ. ಅವರು ಜನಿಸಿದಾಗ ಭಾರತದಲ್ಲಿ ಸನಾತನ ವೈದಿಕ ಪರಂಪರೆ ಅವಸಾನದ ಅಂಚಿನಲ್ಲಿತ್ತು. ವೈದಿಕ ಮತಾನುಯಾಯಿಗಳು ಹಿಂಸಾತ್ಮಕ ಯಜ್ಞಯಾಗಾದಿಗಳಿಂದ ಕೂಡಿದ ಕರ್ಮಕಾಂಡದಲ್ಲಿ ನಿರತರಾಗಿದ್ದರು. ಅವರ ಅಂಧಶ್ರದ್ಧೆ, ಪಶುವಧೆ, ನರಬಲಿಯೇ ಮೊದಲಾದ ಹಿಂಸಾಕಾರ್ಯಗಳಿಂದಾಗಿ ಸಾಮಾನ್ಯ ಜನರು ವೈದಿಕ ಪರಂಪರೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದರು. ಅತ್ತ ಅಹಿಂಸೆಯ ಮಂತ್ರವನ್ನುಚ್ಚರಿಸುತ್ತ ವೈದಿಕ ಸಂಪ್ರದಾಯವನ್ನೂ ವೇದಪ್ರಾಮುಖ್ಯವನ್ನು ವಿರೋಧಿಸುವ ನಾಸ್ತಿಕ ಮತಗಳ ದಬ್ಬಾಳಿಕೆ ಹೆಚ್ಚಾಗುತ್ತಿತ್ತು. ಸಾಮಾನ್ಯ ಜನರಾದರೋ ನಿಜವಾದ ಮುಕ್ತಿಯ ಮಾರ್ಗ ಯಾವುದೆಂಬುದನ್ನು ತಿಳಿಯದೇ ತಳಮಳಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಜ್ಞಾನವೊಂದೆ ಮುಕ್ತಿಯ ಸಾಧನವೆಂದು ಸಾರಿ ವೈದಿಕ ಧರ್ಮವನ್ನು ಪುನರುತ್ಥಾನಗೊಳಿಸಿದ ಯಶಸ್ಸು ಶ್ರೀ ಶಂಕರಾಚಾರ್ಯರದು.
               ಬಾಲ್ಯದಿಂದಲೇ ವಿರಕ್ತಚಿತ್ತರಾದ ಶಂಕರರು ಸ್ನಾನಕ್ಕೆ ಹೋದಾಗ ಮೊಸಳೆ ಕಚ್ಚಿ ಹಿಡಿದಿದೆಯೆಂಬ ನಾಟಕವಾಡಿ ತಾಯಿಯಿಂದ ಸಂನ್ಯಾಸ ಸ್ವೀಕಾರಕ್ಕೆ ಅನುಮತಿ ಪಡೆದರು. ತಮ್ಮ ಜ್ಞಾನ ಮಾರ್ಗವನ್ನು ಬೋಧಿಸುವ ಮೊದಲು ಕರ್ಮಮಾರ್ಗಾವಲಂಬೀ ವಿದ್ವಾಂಸರನ್ನು ವಾದದಲ್ಲಿ ಸೋಲಿಸುವುದು ಅವಶ್ಯಕವೆಂದು ಮನಗೊಂಡರು. ದೇಶಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸುತ್ತ ಅನೇಕ ವಿದ್ವಾಂಸರನ್ನು ವಾದಕ್ಕೆಳೆದು ಸೋಲಿಸಿದರು. ಪ್ರಯಾಗದಲ್ಲಿರುವ ಮೀಮಾಂಸಾಶಾಸ್ತ್ರ ಪಾರಂಗತರೂ ಕರ್ಮಮಾರ್ಗಿಗಳ ಕುಲಗುರುಗಳೆಂದು ಖ್ಯಾತರಾಗಿದ್ದ ಕುಮಾರಿಲ ಭಟ್ಟರನ್ನು ವಾದದಲ್ಲಿ ಸೋಲಿಸಬೇಕೆಂದು ಬಯಸಿದರು. ಅವರು ಸ್ವತಃ ದೇಹಾಂತ ಶಿಕ್ಷೆಯನ್ನು ವಿಧಿಸಿಕೊಂಡಿದ್ದರಿಂದ  ಅದು ಸಾಧ್ಯವಾಗಲಿಲ್ಲ. ಮಾಹೀಷ್ಮತೀ ನಗರದಲ್ಲಿ ಪ್ರಜ್ವಲಿಸುತ್ತಿದ್ದ ಇನ್ನೊಬ್ಬ ವಿದ್ವಾಂಸ ಮಂಡನ ಮಿಶ್ರರ ಜೊತೆಗೆ ಅವರು ವಾದಕ್ಕೆ ನಿಂತು ಅವರನ್ನು ಸೋಲಿಸಿದರು. ವಾದದ ನಿಯಮದಂತೆ ಮಂಡನ ಮಿಶ್ರರಿಗೆ ಸಂನ್ಯಾಸ ದೀಕ್ಷೆ ಕೊಟ್ಟು ಸುರೇಶ್ವರಾಚಾರ್ಯರೆಂದು ನಾಮಕರಣ ಮಾಡಿದರು. ತದನಂತರ ಶಾಕ್ತ, ಕಾಪಾಲಿಕ, ಶೈವ, ಗಾಣಪತ್ಯ, ಪಾಶುಪತ ಮೊದಲಾದ ಅನೇಕ ಮತಗಳ ಪ್ರತಿಪಾದಕರ ಮನವೊಲಿಸಿ ಅವರ ಮತಗಳ ದುರ್ಬಲ ಅಂಶಗಳನ್ನು ಮನಗಾಣಿಸಿಕೊಟ್ಟರು. ಅವರೆಲ್ಲ ಜ್ಞಾನಮಾರ್ಗಾವಲಂಬಿಗಳಾದರು. ಹೀಗೆ ವಿವಿಧ ಮತಗಳನ್ನು ಒಂದೇ ಛತ್ರದಡಿಗೆ ತಂದು ಶಂಕರರು ಭಾವೈಕ್ಯತೆಯನ್ನು ಸಾಧಿಸಿದರು.
               ಶಂಕರಾಚಾರ್ಯರು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸುವಲ್ಲಿ ಇಟ್ಟ ಇನ್ನೊಂದು ದಿಟ್ಟ ಹೆಜ್ಜೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದು. ಶೃಂಗೇರಿಯಲ್ಲಿ ಆರಂಭವಾದ ಈ ಆಮ್ನಾಯ ಮಠಗಳ ಸ್ಥಾಪನೆ ಕ್ರಮವಾಗಿ ದ್ವಾರಕೆ, ಬದರಿ, ಜಗನ್ನಾಥ ಪುರಿಗಳಿಗೆ ಹಬ್ಬಿತು. ಶೃಂಗೇರಿಯ ಮಠಕ್ಕೆ ಕಾಣ್ವ ಶಾಖೆಯ ಸುರೇಶ್ವರಾಚಾರ್ಯರನ್ನು, ಪಶ್ಚಿಮದ ದ್ವಾರಕೆಯ ಶಾರದಾ ಪೀಠಕ್ಕೆ ಸಾಮವೇದಿಯಾದ ಹಸ್ತಾಮಲಕರನ್ನು , ಉತ್ತರದ ಬದರಿಯ ಜ್ಯೋತಿರ್ಪೀಠಕ್ಕೆ ಅಥರ್ವವೇದಿ ತೋಟಕಾಚಾರ್ಯರನ್ನು, ಪೂರ್ವದ ಪುರಿಯ ಗೋವರ್ಧನ ಪೀಠಕ್ಕೆ ಋಗ್ವೇದಿ ಪದ್ಮಪಾದರನ್ನು ಪೀಠಾಧಿಪತಿಗಳಾಗಿ ನಿಯಮಿಸಿ ಚತುರ್ವೇದಗಳ ಸಮನ್ವಯವನ್ನು ಸಾಧಿಸಿದರು. ದೇಶದ ನಾಲ್ಕು ದಿಕ್ಕುಗಳಲ್ಲಿಯೂ ತಮ್ಮ ಧರ್ಮ ಪ್ರಸಾರ ಕಾರ್ಯವನ್ನು ಕೈಗೊಂಡು ಐಕ್ಯತೆ ಮೂಡಿಸಿದರು.
               ಶಂಕರಾಚಾರ್ಯರ ಅದ್ವೈತ ಸಿದ್ಧಾಂತವೇ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ. ಅವರು ಪ್ರಪಂಚದಲ್ಲಿರುವ ಅಣು-ರೇಣು, ತೃಣ-ಕಾಷ್ಠ, ಕ್ರಿಮಿಕೀಟ, ಪಶುಪಕ್ಷಿ, ಮಾನವ ಎಲ್ಲರೂ ಪರಬ್ರಹ್ಮನ ಅಂಶ. ತಾತ್ವಿಕವಾಗಿ ಅವರ ಮಧ್ಯೆ ಯಾವುದೇ ಭೇದವಿಲ್ಲ ಎಂದು ಪ್ರತಿಪಾದಿಸಿದರು. ಅವರಿಗೆ ಈ ಅದ್ವೈತದ ಜ್ಞಾನವನ್ನು ಮಾಡಿಸಿದವನು ಸಾಕ್ಷಾತ್ ಪರಮೇಶ್ವರನೆಂಬ ನಂಬಿಕೆಯಿದೆ. ಕಾಶೀಕ್ಷೇತ್ರದಲ್ಲಿ ಒಮ್ಮೆ ಶಂಕರಾಚಾರ್ಯರಿಗೆ ಚಂಡಾಲನೊಬ್ಬ ದಾರಿಗಡ್ಡ ಬಂದಾಗ ಗಚ್ಛ ಗಚ್ಛ (ದೂರ ಸರಿ...) ಎಂದರಂತೆ. ಆಗ ಚಾಂಡಾಲ ಎಲ್ಲರೂ ಪರಮಾತ್ಮನ ಅಂಶಗಳೇ ಆಗಿರುವಾಗ ದೂರ ಸರಿಯೆಂಬ ಮಾತೇಕೆ ಎಂದು ಕೇಳಿದಾಗ ಆಶ್ಚರ್ಯಚಕಿತರಾದ ಶಂಕರರು ಚಾಂಡಾಲನಿಗೆ ಉದ್ದಂಡ ನಮಸ್ಕಾರ ಮಾಡಿದರಂತೆ. ಆಗ ಚಾಂಡಾಲವೇಶದಲ್ಲಿ ಬಂದಿದ್ದ ಕಾಶೀ ವಿಶ್ವನಾಥ ಪ್ರತ್ಯಕ್ಷನಾಗಿ ಶಂಕರರಿಗೆ ಆತ್ಮತತ್ವವನ್ನು ಬೋಧಿಸಿದನಂತೆ. ಈ ಕಥೆ ಸತ್ಯಕ್ಕೆ ಎಷ್ಟು ಹತ್ತಿರವಾದುದೆಂಬುದು ರಹಸ್ಯವೇ ಆದರೂ ಭಗವತ್ಪಾದರು ತಮ್ಮ ಆತ್ಮಷಟ್ಕವೆಂಬ ಸ್ತೋತ್ರದಲ್ಲಿ ನ ಮೇ ಜಾತಿ ಭೇದಃಎಂದು ಘೋಷಿಸಿದ್ದಂತೂ ಸತ್ಯ. ಹೀಗೆ ಆ ಕಾಲದಲ್ಲಿಯೇ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದ ದಾರ್ಶನಿಕರು ಶ್ರೀ ಶಂಕರ ಭಗವತ್ಪಾದರು.
               ಸ್ತೋತ್ರ ಸಾಹಿತ್ಯಕ್ಕೆ ಶಂಕರರ ಕೊಡುಗೆ ಅಪಾರ. ಅವರು ಯಾವುದೇ ದೇವತೆಯನ್ನು ಸ್ತುತಿಸಿಲ್ಲವೆಂದಿಲ್ಲ. ಇದರಲ್ಲಿಯೂ ಶೈವ ವೈಷ್ಣವ ಸಂಪ್ರದಾಯಗಳ ಸಮನ್ವಯ ಸಾಧಿಸಿದ ಹಿರಿಮೆ ಅವರದು. ಅವರ ವಿಷ್ಣು ಷಟ್ಪದಿ, ಭಜಗೋವಿಂದಂ, ಸೌಂದರ್ಯಲಹರಿ, ಶಿವಾನಂದಲಹರಿ, ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರ, ಶ್ರೀಗಣೇಶ ಪಂಚರತ್ನ ಸ್ತೋತ್ರ ಮುಂತಾದವು ಪ್ರಸಿದ್ಧವಾಗಿವೆ. ಅವರು ತಮ್ಮ ಸ್ತೋತ್ರಗಳಲ್ಲಿ ಕಾವ್ಯ ಸುಧೆಯನ್ನು ಹರಿಸಿ ಸೌಂದರ್ಯ ಶಾಸ್ತ್ರ- ತತ್ತ್ವಶಾಸ್ತ್ರಗಳ ಸಮನ್ವಯ ಸಾಧಿಸಿದ್ದಾರೆನ್ನಬಹುದು.                          
ಶಂಕರಾಚಾರ್ಯರು ಬ್ರಹ್ಮ ಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ ಗಳಿಗೆ ಪ್ರೌಢವಾದ ಭಾಷ್ಯವನ್ನು ಬರೆದಿದ್ದಾರೆ. ಅವರ ಭಾಷ್ಯಗಳಲ್ಲಿ ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ’ (ಬ್ರಹ್ಮವೊಂದೇ ಸತ್ಯ; ಜಗತ್ತೆಂಬುದು ಮಿಥ್ಯ; ಜೀವನು ಬ್ರಹ್ಮನಿಗಿಂತ ಬೇರೆಯಲ್ಲ) ಎಂಬ ಅದ್ವೈತ ಸಿದ್ದಾಂತದ ತಿರುಳು ಸುವ್ಯಕ್ತವಾಗಿದೆ. ಶಂಕರರು ಅದ್ವೈತ ಮತ ಪ್ರತಿಪಾದಕರೇ ಹೊರತು ಸ್ಥಾಪಕರಲ್ಲ. ವೇದೋಪನಿಷತ್ತುಗಳಲ್ಲಿ ಪ್ರತಿಪಾದಿತವಾದ, ಗೌಡಪಾದಾಚಾರ್ಯರು, ಗೋವಿಂದ ಭಗವತ್ಪಾದರು ಮೊದಲಾದವರಿಂದ ಪ್ರಕಾಶಿತವಾದ ಅದ್ವೈತ ಸಿದ್ಧಾಂತವನ್ನೇ ಶ್ರೀ ಶಂಕರರು ಪ್ರತಿಪಾದಿಸಿದ್ದಾರೆ.
               ಹೀಗೆ ಅದ್ವೈತ ಸಿದ್ಧಾಂತದ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನೂ, ಸಾಮಾಜಿಕ ಸಾಮರಸ್ಯವನ್ನೂ, ವಿವಿಧ ಸಂಪ್ರದಾಯಗಳ ಸಮನ್ವಯವನ್ನು ಸಾಧಿಸಿ ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಮನೆ) ಎಂಬ ತತ್ವವನ್ನು ಮನಗಾಣಿಸಿಕೊಟ್ಟ ಆ ದಿವ್ಯ ಜ್ಯೋತಿಗೆ ಭುವಿಗೆ ಅವತರಿಸಿದ ಈ ದಿನ ನಮಿಸೋಣ.
ಮೇ ೨೦೦೫ ರಲ್ಲಿ ಗೋವಾ ದರ್ಪಣ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...