ಡಿವಿಜಿಯವರು ಅನೇಕ ಮುಕ್ತಕಗಳಿಂದ ವರ್ಣಿಸಿದ ಇನ್ನೊಂದು ಪ್ರಸಂಗ ಪಾದುಕಾ
ಪಟ್ಟಾಭಿಷೇಕ. ಭರತನ ಭ್ರಾತೃಪ್ರೇಮ ಹಾಗೂ ಸಮದರ್ಶಿತ್ವ ಗುಂಡಪ್ಪನವರನ್ನು ಬಹುವಾಗಿ ತಟ್ಟಿದೆ
ಎನ್ನಬಹುದು.
ಭರತ-ರಾಮರ ಭೇಟಿ ಭ್ರಾತೃಪ್ರೇಮದ ಪರಾಕಾಷ್ಠತೆಯನ್ನು ಸಾರುವ
ಸನ್ನಿವೇಶವೆಂದು ಅವರು ವರ್ಣಿಸಿದ್ದಾರೆ.
ರಾಮನುಂ ಭರತನುಂ ತಬ್ಬಿಕೊಂಡತ್ತಂದು|
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು ||
ಸೀಮೆಯಂ ಮುಟ್ಟಿತಲ ಬಾಂಧವ್ಯ ಸೌಂದರ್ಯ|
ಕ್ಷೇಮವದು ಜೀವಕ್ಕೆ – ಮಂಕುತಿಮ್ಮ||
ತಾಯಿಗೆ ಮಗನ ಮೇಲೆ ಮಮತೆ, ಆ ಮಗನಿಗಾದರೋ ಅಣ್ಣನೇ ಸರ್ವಸ್ವ. ತನಗೆ
ಬರಬೇಕಾದ ರಾಜ್ಯ ಕೈತಪ್ಪಿದರೂ ಅದಕ್ಕೆ ಕಾರಣಳಾದ ತಾಯಿಯ ಮೇಲೋ, ತಮ್ಮನ ಮೇಲೋ ಒಂದಿನಿತೂ
ಮುನಿಸಿಲ್ಲದ ಅಣ್ಣ ಒಂದೆಡೆಯಾದರೆ ಇನ್ನೊಂದೆಡೆ ಅಣ್ಣನಿಗೆ ಮಾಡಿದ ಅನ್ಯಾಯಕ್ಕಾಗಿ ತಾಯಿಯನ್ನೇ
ಕೊಲ್ಲಹೊರಟ ತಮ್ಮ. ಇವರಿಬ್ಬರೂ ತಬ್ಬಿಕೊಂಡು ಅತ್ತ ಕ್ಷಣದಲ್ಲಿ ಬಾಂಧವ್ಯಸೌಂದರ್ಯ ಅನ್ನುವುದು
ಸೀಮೆಯನ್ನು ಮುಟ್ಟಿತು ಎಂದು ಡಿವಿಜಿಯವರು ವರ್ಣಿಸಿದ್ದಾರೆ. ಭರತ ಅಂದು ಚಿತ್ರಕೂಟಕ್ಕೆ
ಹೋಗದಿದ್ದರೆ ಕೈಕೇಯಿಗಂಟಿದ ಕಳಂಕ ಶಾಶ್ವತವಾಗಿ ಭರತನಿಗೂ ಅಂಟಿಕೊಳ್ಳುತ್ತಿತ್ತು. ಭರತನೆಂಬ
ಭ್ರಾತೃಪ್ರೇಮಿಯನ್ನು ಜಗತ್ತಿಗೆ ನಿದರ್ಶನವಾಗಿ ಕೊಟ್ಟ ಪ್ರಸಂಗ ಅದು. ಈ ರೀತಿಯ ನಿರ್ವ್ಯಾಜಪ್ರೇಮ
ಜೀವಕ್ಕೆ ಕ್ಷೇಮವನ್ನುಂಟುಮಾಡುತ್ತದೆ ಎಂದೂ ಡಿವಿಜಿ ಅಭಿಪ್ರಾಯಪಟ್ಟಿದ್ದಾರೆ.
ಭರತ ರಾಮನ ಪಾದುಕೆಗಳನ್ನು ತಂದು ಸಿಂಹಾಸನದ ಮೇಲಿರಿಸಿದ. ಆಮೇಲೆ ಅವನು
ಮಾಡಿದ್ದೇನು?
ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ-|
ಳೊರೆಯದೊಡಮೆನನಂ, ತಾಂ ವರದಿಯೊರೆದು||
ದೊರೆತನದ ಭಾರವನು ಹೊತ್ತು ದೊರೆಯಾಗದಾ|
ಭರತವೊಲಿರು ನೀನು – ಮಂಕ್ಕುತಿಮ್ಮ||
ರಾಮನ ಪಾದುಕೆಗಳು ಸಿಂಹಾಸನದ ಮೇಲಿದ್ದರೂ ಹಾಗೆ ಮಾಡು, ಹೀಗೆ ಮಾಡು
ಎಂದು ಅವು ಭರತನಿಗೆ ನಿರ್ದೇಶನ ನೀಡಲಿಲ್ಲ. ಆದರೆ ಭರತ ಮಾತ್ರ ದಿನವೂ ತಾನು ಮಾಡಿದ ಕಾರ್ಯಗಳ
ವರದಿಯನ್ನು ಪಾದುಕೆಗಳಿಗೆ ಒಪ್ಪಿಸುತ್ತಿದ್ದ. ಭರತ ದೊರೆತನದ ಸಕಲ ಭಾರವನ್ನು ಹೊತ್ತೂ ದೊರೆಯಾಗದೆ
ಪಾದುಕೆಗಳ ಸೇವಕನಾಗಿಯೇ ಕಾರ್ಯ ನಿರ್ವಹಿಸಿದ. ಅವನಂತೆ ನಾವಿರಬೇಕು ಎನ್ನುವುದು ಡಿವಿಜಿಯವರ
ಸಂದೇಶ.
ರಾಜ್ಯ ಸಂಪೂರ್ಣವಾಗಿ ರಾಮನಿಗೆ ಸೇರಿದ್ದು ಎಂಬ ಭಾವದಿಂದ ರಾಜ್ಯಭಾರ
ಮಾಡುತ್ತಿದ್ದರೂ ಭರತ ತನ್ನ ಕಾರ್ಯದಲ್ಲಿ ಎಂದಿಗೂ ಲೋಪವನ್ನು ಮಾಡಲಿಲ್ಲ. ಸ್ವತಂತ್ರವಾಗಿ ಎಲ್ಲ
ನಿರ್ಧಾರಗಳನ್ನು ತೆಗೆದುಕೊಂಡು ರಾಮನಿಗೆ ವಿಧೇಯನಾಗಿದ್ದ. ಹಾಗಾಗಿಯೇ ಗುಂಡಪ್ಪನವರು ’ಕಡುಯೋಗಿ
ಭರತನಲ’ ಎಂದು ಉದ್ಗರಿಸುತ್ತಾರೆ ಇನ್ನೊಂದು ಮುಕ್ತಕದಲ್ಲಿ.
ಒಡೆಯನೆಂದೊ ಬಂದು ಕೇಳ್ವನದಕುತ್ತರವ |
ಕೊಡಬೇಕು ತಾನೆನವೊಲು ಋಜುತೆಯಿಂದ ||
ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು|
ಮುಡುಪುಕೊಟ್ಟನು ಭರತ – ಮಂಕುತಿಮ್ಮ||
ಪಾದುಕೆಗಳು ಈಗ ಏನೂ ಕೇಳದಿದ್ದರೂ ಒಡೆಯನಾದ ಶ್ರೀರಾಮ ಎಂದೊ ಬಂದು
ಕೇಳಬಹುದು ಅದಕ್ಕೆ ತಾನು ಉತ್ತರ ಕೊಡುವ ಸ್ಥಿತಿಯಲ್ಲಿರಬೇಕು ಎಂಬಂತೆ ತನ್ನ ಸಂಪೂರ್ಣಸಾಮರ್ಥ್ಯವನ್ನುಪಯೋಗಿಸಿ
ರಾಜ್ಯಭಾರ ಮಾಡಿದ್ದಾನೆ ಭರತ. ದೇವರು ನಮ್ಮ ಕಣ್ಮುಂದೆ
ಕಾಣನು ಎಂಬ ಕಾರಣದಿಂದ ನಮ್ಮ ವ್ಯವಹಾರದಲ್ಲಿ ಆಗಾಗ ಶಿಥಿಲತೆ ಕಾಣಿಸುವುದುಂಟು ಆದರೆ ಭರತನ
ಸೇವೆಯಲ್ಲಿ ಎಳ್ಳಷ್ಟೂ ಲೋಪವೆಂಬುದಾಗಲಿಲ್ಲ.
ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ
ನೆನೆನೆನೆದು|
ಸತ್ಯಭಕ್ತಿಯ ಸೇವೆಗಯ್ದವಂ ಭರತಂ||
ನಿತ್ಯಜೀವನದಿ ನೀನಾ ನಯವನನುಸರಿಸೊ|
ಸ್ವತ್ವದಾಶೆಯ ನೀಗಿ – ಮಂಕುತಿಮ್ಮ||
ಹದಿನಾಲ್ಕು ವರ್ಷಗಳ ನಂತರ ರಾಮ ತಿರುಗಿ
ಬರುವನೆಂಬ ಪ್ರತ್ಯಾಶೆ ಭರತನಿಗಿತ್ತು. ಹಾಗಂತ ತನ್ನ ರಾಜ್ಯಭಾರದ ಜಟಿಲ ನಿರ್ಣಯಗಳನ್ನು ರಾಮ ಬಂದು
ಮಾಡಲಿ ಎಂದು ಕಾದಿಡಲಿಲ್ಲ.
ದೊರೆತನದ ಜಟಿಲಗಳ, ಕುಟಿಲಗಳ ಕಠಿನಗಳ|
ಭರತನುಳಿಸಿದನೆ ರಾಮನ ತೀರ್ಪಿಗೆಂದು||
ಅರಿವಿಗಿಹ ಕರ್ತವ್ಯಭಾರವನು ತಾನರಿತು|
ಧುರವ ಧರಿಸಿದನವನು – ಮಂಕುತಿಮ್ಮ||
ಈ ಪ್ರಸಂಗ ನಮಗೆ ನೀಡುವ ಸಂದೇಶವನ್ನು ಡಿವಿಜಿಯವರು
ಮಾರ್ಮಿಕವಾಗಿ ಮುಂದಿನ ಮುಕ್ತಕದಲ್ಲಿ ನಿರೂಪಿಸಿದ್ದಾರೆ.
ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು|
ಭರತವೊಲನುಪಾಲನಕ್ರಿಯರು ನಾವು||
ಅರಸನೂಳಿಗ ನಮ್ಮ ಸಂಸಾರದಾಡಳಿತ|
ಹರುಷದಿಂ ಸೇವಿಸೆಲೊ – ಮಂಕುತಿಮ್ಮ||
ಈ ಜಗತ್ತೇ ಕೋಸಲರಾಜ್ಯ. ಕಣ್ಣಿಗೆ ಕಾಣದ
ಪರಬ್ರಹ್ಮನೇ ಶ್ರೀರಾಮ ಎಂದು ತಿಳಿದುಕೊಂಡು ನಾವು ಭರತರಾಗಬೇಕು. ನಮ್ಮ ಸಂಸಾರಕ್ರಿಯೆಗಳೆಲ್ಲ ಆ
ಅರಸನ ಸೇವೆ ಎಂಬ ಭಾವವಿದ್ದರೆ ಅಲ್ಲಿ ಮಮಕಾರ, ಮೋಹಾದಿ ವೈರಿಗಳ ಆಕ್ರಮಣ ಆಗದು. ಹರುಷವೊಂದೆ
ಸಂಸಾರದ ಫಲವಾಗಿ ಪ್ರಾಪ್ತವಾಗುವದು.
ಭರತನ ಬಂಧುಪ್ರೇಮದ ಭರತ ನಮ್ಮ ಹೃದಯಸಾಗರದಲ್ಲೂ ಏಳಲಿ.
No comments:
Post a Comment