Monday, April 6, 2020

ಕಗ್ಗದ ಕಣ್ಣಲ್ಲಿ ರಾಮಾಯಾಣ - ಭಾಗ ೪


ಅಹಲ್ಯೆಯಂತೆ ರಾಮನಿಗಾಗಿ ಕಾದಿದ್ದ ಇನ್ನೊಬ್ಬಳು ತಾಯಿ ಶಬರಿ. ’ಕಾದಿರುವಳು ಶಬರಿ.... ರಾಮ ಬರುವನೆಂದು... ತನ್ನ ಪೂಜೆಗೊಳುವನೆಂದು’ ಎಂಬ ವಿ. ಸೀತಾರಾಮಯ್ಯನವರ ಹಾಡು ಕನ್ನಡಿಗರ ಕಿವಿಯಲ್ಲಿ ಯಾವಾಗಲೂ ಅನುರಣನಗೊಳ್ಳುತ್ತಿರುತ್ತದೆ.

ಬೇಡರ ರಾಜನ ಮಗಳಾದ ಶಬರಿ ಮಾತಂಗ ಮುನಿಗಳ ಮಾರ್ಗದರ್ಶನದಂತೆ ಸದಾ ರಾಮಧ್ಯಾನವನ್ನು ಮಾಡುತ್ತ ಅವನ ಬರುವಿಕೆಗಾಗಿ ಕಾಯುತ್ತಿದ್ದಳು. ಅದೆಷ್ಟು ವತ್ಸರಗಳು ಕಳೆದವೊ ಗೊತ್ತಿಲ್ಲ. ರಾಮ ಹುಟ್ಟಿದ್ದಾಗಲಿ, ಅಯೋಧ್ಯೆಯಲ್ಲಿ ನಡೆದ ವಿಪ್ಲವವಾಗಲಿ ಅವಳನ್ನು ತಟ್ಟಿಲ್ಲ. ಅವನು ಯಾವ ದಾರಿಯಲ್ಲಿ ಯಾವಾಗ ಬರುತ್ತಾನೆಂಬ ಅರಿವಿಲ್ಲ. ಆದರೂ ಗುರುಗಳ ಮಾತಿನಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಕಾದು ಕುಳಿತಿದ್ದಳು. ದಿನವೂ ಇಂದು ಬರುವ ರಾಮ ಎಂಬ ನಂಬಿಕೆಯಿಂದ ಹಣ್ಣುಗಳನ್ನು ಆರಿಸಿ ತಂದು ರಾಮನಿಗೆ ಸಿಹಿಯಾದ ರುಚಿಯಾದ ಹಣ್ಣನ್ನು ಮಾತ್ರ ಕೊಡಬೇಕು ಎಂಬ ಉದ್ದೇಶದಿಂದ ಪ್ರತಿಯೊಂದು ಹಣ್ಣನ್ನೂ ಕಚ್ಚಿ ಅರ್ಧ ತಿಂದಿಟ್ಟು ರಾಮನಾಮ ಸ್ಮರಣೆ ಮಾಡುತ್ತ ಕಾದು ಕುಳಿತಿರುತ್ತಿದ್ದಳು. ಪ್ರತಿದಿನ ಸೂರ್ಯಾಸ್ತದೊಂದಿಗೆ ಆಗುವ ನಿರಾಸೆ ಮರುದಿನದ ಸೂರ್ಯೋದಯದೊಂದಿಗೆ ಚಿಗಿಯುತ್ತಿತ್ತು. ಶಬರಿಯ ಈ ಮುಗ್ಧ ಭಕ್ತಿಯನ್ನು ಡಿವಿಜಿಯವರು ತಮ್ಮ ಮುಕ್ತಕದಲ್ಲಿ ಆಧ್ಯಾತ್ಮ ಲೇಪದೊಂದಿಗೆ ಇನ್ನಷ್ಟು ಮೇಲಕ್ಕೇರಿಸಿದ್ದಾರೆ.

ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ-|
ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ||
ಎನ್ನುವಾ ಸಾಜಾದ ದೈವಾತ್ಮಭಾವದಲಿ|
ಧನ್ಯಳಾದಳು ಶಬರಿ – ಮಂಕುತಿಮ್ಮ||

ಒಬ್ಬನಿಗೆ ರುಚಿಯಾದದ್ದು ಇನ್ನೊಬ್ಬನಿಗೆ ರುಚಿಯೆನಿಸಲೇಬೇಕೆಂದಿಲ್ಲ. ಕಾಳಿದಾಸ ಹೇಳಿದಂತೆ ’ಭಿನ್ನರುಚಿರ್ಹಿ ಲೋಕಃ’. ಆದರೆ ಶಬರಿಗೆ ಅದೆಲ್ಲ ತಿಳಿದಿಲ್ಲ. ತನಗೆ ರುಚಿಯೆನಿಸಿದ್ದು ರಾಮನಿಗೂ ಹಿಡಿಸುತ್ತದೆ ಎಂಬ ಅಪರಿಮಿತ ವಿಶ್ವಾಸ ಅವಳಿಗೆ. ಅವಳು ಹಣ್ಣನ್ನು ಅರ್ಧ ತಿನ್ನುವುದು ಅವಳಿಗಾಗಿ ಅಲ್ಲ, ರಾಮನಿಗಾಗಿ. ಹಾಗಾಗಿ ಹಣ್ಣನ್ನು ತಿನ್ನುವುದರಿಂದ ಅವಳಿಗೆ ತೃಪ್ತಿಯಾಗುವುದಿಲ್ಲ. ಅವಳಿಗೆ ಸಂತೃಪ್ತಿಯಾಗುವುದು ರಾಮ ಆ ಹಣ್ಣನ್ನು ತಿಂದು ಸಂತುಷ್ಟನಾದಾಗ! ಇದನ್ನು ದೈವಾತ್ಮಭಾವವೆಂದು ಕರೆದು ಶಬರಿಯನ್ನು ಜೀವನ್ಮುಕ್ತರ ಸಾಲಿಗೆ ಸೇರಿಸಿದ್ದಾರೆ ಡಿವಿಜಿಯವರು. ಆ ಭಾವವಿರುವಾಗ ಎಂಜಲಿನ ಪ್ರಶ್ನೆಯ ಉದ್ಭವವೇ ಆಗದು.

ನಮ್ಮ ಬದುಕಿಗೆ ಧನ್ಯತೆ ಒದಗುವುದು ಈ ಭಾವ ಉದ್ಭವಿಸಿದಾಗ. ನಮಗೆ ರುಚಿಯೆನಿಸುವ ಭಕ್ಷ್ಯಗಳನ್ನೆಲ್ಲ ತಯಾರಿಸಿ ದೇವರ ಮುಂದೆ ನೈವೇದ್ಯಕ್ಕೆಂದು ಇಟ್ಟಾಗ ಇರಬೇಕಾದ ಭಾವ ಇದು.  ಗಣಪತಿಗೆ ಮೋದಕ ಇಷ್ಟವೆಂದು ಅರ್ಪಿಸಿ ಅದನ್ನೇ ಸವಿಯೆಂದು ನಾವು ಮೆಲ್ಲುವುದು, ರಾಮನಿಗೆ ಪಾನಕ ಪ್ರಿಯ ಎಂದು ಕಾಳು ಮೆಣಸಿನ ಪಾನಕ ನೈವೇದ್ಯ ಮಾಡಿ ಅದನ್ನು ಕುಡಿದು ಸವಿಯುವುದು ಇವೆಲ್ಲದರ ಹಿಂದೆ ಇರುವ ಭಾವ ಇದೇ ಅಲ್ಲವೆ? ನಮ್ಮ ರುಚಿಯನ್ನು ಭಗವದರ್ಪಣ ಮಾಡುವ ಮುಗ್ಧತೆಗೆ, ದೇವರ ಸಂತುಷ್ಟಿಯನ್ನೇ ನಮ್ಮ ಸಂತುಷ್ಟಿಯೆಂದು ಬಗೆವ ನಿರ್ವ್ಯಾಜ ಪ್ರೇಮಕ್ಕೆ ದೇವರು ಒಲಿಯುತ್ತಾನೆ ಎಂಬುದಕ್ಕೆ ಶಬರಿಯ ವೃತ್ತಾಂತ ಒಂದು ದೃಷ್ಟಾಂತವಾಗಿದೆ.


No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...