Monday, April 6, 2020

ಕಗ್ಗದ ಕಣ್ಣಲ್ಲಿ ರಾಮಾಯಣ - ಭಾಗ ೫



ಈ ಜಗತ್ತು ವೈರುಧ್ಯಗಳ ಬೀಡು. ಬೆಳಕು ಒಳ್ಳೆಯದು ನಿಜ, ಆದರೆ ಕತ್ತಲೆ ಇಲ್ಲದೆ ಇರಲು ಸಾಧ್ಯವಿಲ್ಲ. ಬೆಳೆ ಬೇಕು ನಿಜ, ಆದರೆ ಕಳೆ ಬೇಡವೆಂದರೂ ಬೆಳೆಯುತ್ತದೆ. ಒಳ್ಳೆಯದು ಕೆಟ್ಟದ್ದು ಎಂಬುದು ಸೃಷ್ಟಿಯ ಎರಡು ಮಗ್ಗಲುಗಳು. ಪ್ರಳಯಕಾಲದ ತಮಾಸುರನಿಂದ ಹಿಡಿದು ಕಲಿಗಾಲದ ಅಂಗುಲಿಮಾಲನವರೆಗೆ ದುಷ್ಟ ಸಂತತಿ ಹರಿದು ಬಂದಿದೆ. ಆ ಭಗವಂತ ಅದೆಷ್ಟೊ ಅವತಾರಗಳನ್ನೆತ್ತಿ ಬಂದು ತನ್ನ ಕೊಂಬಿನಿಂದ, ಚಿಪ್ಪಿನಿಂದ, ಕೋರೆದಾಡೆಯಿಂದ, ಉಗುರಿನಿಂದ, ಕಾಲಿನಿಂದ, ಕೊಡಲಿಯಿಂದ, ಬಾಣದಿಂದ, ಚಕ್ರದಿಂದ ಕೊನೆಗೆ ಶಾಂತಿಸಂದೇಶದಿಂದ ದುಷ್ಟತನದ ನಾಶ ಮಾಡಲು ಯತ್ನಿಸಿದ. ಆದರೂ ಈ ಪ್ರಪಂಚದಲ್ಲಿ ಎಂದಿಗೂ ದುಷ್ಟತನ ಇಲ್ಲವೆಂದಾಗಲಿಲ್ಲ. ಹಾಗಿರುವಾಗ ಸಾಮಾನ್ಯರಾದ ನಾವು ಏನು ಮಾಡಬಲ್ಲೆವು ಎಂದು ಕೇಳುತ್ತಾರೆ ಗುಂಡಪ್ಪನವರು.
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ|
ಭೂಮಿಭಾರವನಿಳುಹೆ ಸಾಲದಾಗಿರಲು||
ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು?|
ಕ್ಷೇಮವೆಂದುಂ ಮೃಗ್ಯ – ಮಂಕುತಿಮ್ಮ||

ಘಟಾನುಘಟಿಗಳೇ ದುಷ್ಟಮರ್ದನದಲ್ಲಿ ಸಂಪೂರ್ಣ ಸಫಲರಾಗದೆ ಇರುವಾಗ ಜಗತ್ತಿಗೆ ಕ್ಷೇಮ ಎಂಬುದು ಮರೀಚಿಕೆ ಎಂದು ಡಿವಿಜಿ ಅಭಿಪ್ರಾಯಪಡುತ್ತಾರೆ. ಈ ದುಷ್ಟ-ಶಿಷ್ಟ ಎಂಬ ದ್ವಂದ್ವ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ಡಿವಿಜಿ ಇನ್ನೊಂದು ಮುಕ್ತಕವನ್ನು ಬರೆದಿದ್ದಾರೆ.
ರಾಮನಿರ್ದಂದು ರಾವಣನೊಬ್ಬನಿರ್ದನಲ|
ಭೀಮನಿರ್ದಂದು ದುಶ್ಶಾಸನನದೊರ್ವನ್||
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು?|
ರಾಮಭಟನಾಗು ನೀಂ – ಮಂಕುತಿಮ್ಮ||

ರಾಮನಿದ್ದಾಗ ರಾವಣನೊಬ್ಬನಿದ್ದ, ಭೀಮನಿದ್ದಾಗ ದುಶ್ಶಾಸನನಿದ್ದ. ಇನ್ನೂ ಒಳಹೊಕ್ಕು ಯೋಚಿಸಿದರೆ ರಾವಣನಿರುವುದರಿಂದಲೇ ರಾಮನಿರಬೇಕಾಯಿತು. ಪ್ರಪಂಚ ಯಾವಾಗಲೂ ಹೀಗೇ ಇರುವಾಗ ಸಾಮಾನ್ಯರಾದ ನಾವು ಏನು ಮಾಡಬೇಕು. ಡಿವಿಜಿಯವರ ಸಂದೇಶ ಸ್ಪಷ್ಟ – ರಾಮಭಟನಾಗು ನೀಂ. ರಾವಣನಿದ್ದಾನೆ ಅಂದಾಕ್ಷಣ ನಾನು ಅವನನ್ನು ಅನುಸರಿಸಬೇಕೆಂದೆನೂ ಇಲ್ಲವಲ್ಲ. ದುಷ್ಟತನ ಇರುವುದು ಒಂದೆಡೆ ಇರಲಿ. ನಾವು ಆ ಪಕ್ಷಕ್ಕೆ ಹೋಗದಿದ್ದರಾಯಿತು ಅಷ್ಟೆ. ಆಯ್ಕೆ ನಮ್ಮ ಕೈಯಲ್ಲಿದೆ.

ರಾಮ ಲಂಕೆಗೆ ಹೋಗುತ್ತಾನೆ. ಸ್ವರ್ಣಮಯ ಲಂಕೆಯ ಮಣ್ಣು ಅವನ ವ್ಯಕ್ತಿತ್ವನ್ನೋ ವಿಚಾರವನ್ನೋ ಬದಲಿಸಲಿಲ್ಲ. ಯುದ್ಧ ಮಾಡುವಾಗ ರಾಮನ ಉಸಿರು ರಾವಣನಿಗೆ, ರಾವಣನ ಉಸಿರು ರಾಮನಿಗೆ ಸೋಂಕಿರಬಹುದು. ಆದರೂ ಅವರು ಬದಲಾಗಲಿಲ್ಲ. ಇದನ್ನೇ ಡಿವಿಜಿ ಹೇಳುವ ಪರಿಯನ್ನು ನೋಡಿ.

ರಾಮನುಚ್ಛ್ವಾಸ ಅಲೆದಿರದೆ ರಾವಣನೆಡೆಗೆ?|
ರಾಮನುಂ ದಶಕಂಠನೆಲರನುಸಿರಿರನೆ||
ರಾಮರಾವಣರುಸಿರ್ಗಳಿಂದು ನಮ್ಮೊಳಗಿರವೆ?|
ಭೂಮಿಯಲಿ ಪೊಸತೇನೊ? – ಮಂಕುತಿಮ್ಮ||

ಇಂದು ರಾಮರಾವಣರ ಉಸಿರು ನಮ್ಮೊಳಗಿಲ್ಲವೆ? ಅಂದರೆ ಶಿಷ್ಟತನ-ದುಷ್ಟತನ ಎರಡೂ ಭಾವ ನಮ್ಮಲ್ಲಿವೆ. ಯಾವ ಭಾವ ಪ್ರಬಲವೊ ಆ ಸ್ವಭಾವ ನಮ್ಮದಾಗುತ್ತದೆ.

ರಾವಣನಿಗೆ ಹತ್ತು ತಲೆ ಇತ್ತು. ಈಗಿನ ಮನುಷ್ಯನಿಗೆ ನೂರು ತಲೆಗಳು ಎನ್ನುತ್ತಾರೆ ಡಿವಿಜಿ.

ರಾವಣನ ದಶಶಿರವದೇಂ? ನರನು ಶತಶಿರನು|
ಸಾವಿರಾಸ್ಯಗಳನೊಂದರೊಳಣಗಿಸಿಹನು||
ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುಮಾಗಿ|
ಭೂವ್ಯೋಮಕತಿಶಯನು – ಮಂಕುತಿಮ್ಮ||

ಆಧುನಿಕ ಮಾನವ ರಾವಣನಿಗಿಂತ ಕಡಿಮೆಯೇನಲ್ಲ. ತನ್ನ ಒಂದು ತಲೆಯಲ್ಲೇ ನೂರು ತಲೆಗಳ, ಒಂದು ಬಾಯಿಯಲ್ಲೇ ಸಾವಿರ ಬಾಯಿಗಳನ್ನು ಅಡಗಿಸಿಟ್ಟುಕೊಂಡಿದ್ದಾನೆ. ಅವನಲ್ಲಿ ಎಲ್ಲ ಪ್ರಾಣಿಗಳ ತಲೆಯೂ ಅಡಕವಾಗಿವೆ. ಒಮ್ಮೊಮ್ಮೆ ಒಂದೊಂದು ಪ್ರಾಣಿಯಂತೆ ಯೋಚಿಸುತ್ತಾನೆ, ವರ್ತಿಸುತ್ತಾನೆ. ಹಾಗಾಗಿ ಮಾನವ ಎಂಬ ಜೀವಿ ಈ ಭೂಮಿಗಷ್ಟೇ ಅಲ್ಲ ಊರ್ಧ್ವಲೋಕಗಳಿಗೂ ತನ್ನ ವಿಶಿಷ್ಟತೆಯನ್ನು ಹಬ್ಬಿಸಿದ್ದಾನೆ.

ಡಿವಿಜಿಯವರಿಗೆ ರಾವಣನ ಮೇಲೆ ಹೆಚ್ಚೇ ಕನಿಕರವಿತ್ತು ಅನಿಸುತ್ತದೆ. ಅಥವಾ ದುಷ್ಟನೆಂದು ನಿವಾಳಿಸಿ ಒಗೆಯುವ ಪಾತ್ರವಲ್ಲ ಅದು, ಅದರಿಂದ ಕಲಿಯುವುದು ಬಹಳವಿದೆ ಎಂಬ ಭಾವವಿರಬೇಕು. ಕಾವ್ಯ ಹಾಗೆಯೇ. ’ರಾಮಾದಿವತ್ ಪ್ರವರ್ತಿತವ್ಯಂ’ ಎಂದು ತೋರಿಸುವುದರ ಜೊತೆಗೆ ’ನ ರಾವಣಾದಿವತ್’ ಎಂದೂ ಹೇಳುತ್ತದೆ. ರಾವಣನನ್ನು ನಿಂದಿಸುವವರಿಗೆ ಡಿವಿಜಿ ಒಂದು ಕಿವಿ ಮಾತು ಹೇಳಿದ್ದಾರೆ.

ರಾವಣನ ಹಳಿವವನೆ, ಜೀವವನೆ ಬಿಡಿಸುವ|
ಲಾವಣ್ಯವೆಂತಹದೊ? ನೋವದೆಂತಹುದೊ?||
ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ|
ಗಾವಿಲನ ಗಳಹೇನು? – ಮಂಕುತಿಮ್ಮ||

ಶೂರ್ಪಣಖೆ ಮಾಡಿದ ಸೀತೆಯ ಲಾವಣ್ಯದ ವರ್ಣನೆ ರಾವಣನ ತಲೆಕೆಡಿಸಿತ್ತು. ಮನ್ಮಥನ ಪಂಚಬಾಣಗಳು ಹೂವಿನವೇ ಆದರೂ ಅವು ಕೊಡುವ ಯಾತನೆ ಮಾತ್ರ ಅಸಹನೀಯವಾದುದು. ತಾನೇ ಕಟ್ಟಿದ ಸಕಲ ಸಾಮ್ರಾಜ್ಯವನ್ನೂ ತನ್ನ ದಶಶಿರಗಳನ್ನೂ ಬಲಿಕೊಡುವಂತೆ ಪ್ರೇರೇಪಿಸಿದ ಆ ಲಾವಣ್ಯ ಎಷ್ಟು ತೀಕ್ಷ್ಣವಾಗಿರಬೇಕು. ಈ ವಿಚಾರವನ್ನು ನಮ್ಮ ಚಿಂತನೆಯ ಮೂಸೆಯಲ್ಲಿಡಬೇಕು. ಅದು ಪಕ್ವವಾದ ಮೇಲೂ ರಾವಣನನ್ನು ಹಳಿಯಬೇಕು ಎನಿಸಿದರೆ ಹಾಗೆ ಮಾಡಲು ನಾವು ಸ್ವತಂತ್ರರು ಎಂದು ಡಿವಿಜಿ ಹೇಳುತ್ತಾರೆ.

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...