Thursday, April 2, 2020

ಕಗ್ಗದ ಕಣ್ಣಲ್ಲಿ ರಾಮಾಯಣ

ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ |
ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ ||

ಎಲ್ಲಿಯವರೆಗೆ ಈ ಭೂತಲದಲ್ಲಿ ಪರ್ವತಗಳೂ ನದಿಗಳೂ ಇರುತ್ತವೆಯೋ ಅಲ್ಲಿಯವರೆಗೆ ರಾಮಾಯಣಕಥೆಯೂ ಇರುತ್ತದೆ. ಇದು ಸ್ವತಃ ರಾಮಾಯಣಕರ್ತೃವಾದ ಕ್ರಾಂತದರ್ಶಿ ವಾಲ್ಮೀಕಿ ಹೇಳಿದ ಮಾತು. ಅನಂತರ ಬಂದ ಅದೆಷ್ಟು ಕೃತಿಗಳಿಗೆ ರಾಮಾಯಣ ಉಪಜೀವ್ಯವಾಗಿಲ್ಲ? ಈ ಕಲಿಯುಗದಲ್ಲೂ ಅದೆಷ್ಟು ಬಾರಿ ನಾವು ರಾಮಾಯಣದ ಸನ್ನಿವೇಶಗಳನ್ನು ನಮ್ಮ ಜೀವನದ ಘಟನೆಗಳೊಡನೆ ಸಮೀಕರಿಸಿ ನೋಡುವುದಿಲ್ಲ? ರಾಮಾಯಣ ಎನ್ನುವುದು ಪ್ರತಿಯೊಬ್ಬ ಭಾರತೀಯನ ಜೀವನದ ಭಾಗವೇ ಆಗಿಬಿಟ್ಟಿದೆ.

ಅಪ್ರತಿಮ ದಾರ್ಶನಿಕ ಡಿ.ವಿ. ಗುಂಡಪ್ಪನವರೂ ತಮ್ಮ ವಿಚಾರಮಾಲೆಯಲ್ಲಿ ಅಲ್ಲಲ್ಲಿ ರಾಮಾಯಣದ ಮುತ್ತುಗಳನ್ನು ಪೋಣಿಸಿದ್ದಾರೆ. ಮಂಕುತಿಮ್ಮನ ಕಗ್ಗದಲ್ಲಿ ತಮ್ಮ ಸಿದ್ಧಾಂತದ ನಿರೂಪಣೆಗೆ ಅವರು ಬಳಸಿರುವ ರಾಮಾಯಣದ ದೃಷ್ಟಾಂತಗಳನ್ನು ಸ್ವಲ್ಪ ಅವಲೋಕಿಸೋಣ.

ಈ ಪ್ರಪಂಚ ಪ್ರಾಕೃತಿಕವಾಗಿ ಜಡ. ಯಾವುದೋ ಚೈತನ್ಯ ಅದನ್ನು ಸೋಂಕಿದಾಗ ಅದು ಜೀವವನ್ನು ತಳೆಯುತ್ತದೆ. ಈ ವಿಚಾರವನ್ನು ಡಿವಿಜಿಯವರು ಅಹಲ್ಯೋದ್ಧಾರದ ಘಟನೆಯೊಂದಿಗೆ ಸಮೀಕರಿಸಿದ್ದಾರೆ.

ಶಿಲೆಯಾಗಿ ನಿದ್ರಿಸುತಿರ್ದಾಕೆ ರಾಮಪದ|
ತಲದ ಸಂಸ್ಪರ್ಶದಿಂದೆದ್ದು ನಿಂತಂತೆ ||
ಚಲಿಸದೆನಿಸಿದ ಜಡವನಾವ ಗಾಳಿಯೊ ಸೋಕೆ
ಬಲತೀವಿ ಚಲಿಪುದದು – ಮಂಕುತಿಮ್ಮ ||

ಶಾಪಗ್ರಸ್ತಳಾಗಿ ಜಡವಾದ ಕಲ್ಲಾಗಿ ಮಲಗಿದ್ದ ಋಷಿಪತ್ನಿ ಅಹಲ್ಯೆ ರಾಮನೆಂಬ ಚೈತನ್ಯದ ಸ್ಪರ್ಶದಿಂದ ಸಜೀವವಾದಳು. ಜಡವಾದ ಪ್ರಕೃತಿಯು ಚೈತನ್ಯಮಯ ಪುರುಷತತ್ತ್ವದ ಸಂಸ್ಪರ್ಶದಿಂದ ಪ್ರಪಂಚವಾಗಿ ಅರಳುವುದು ಎಂಬ ಸಾಂಖ್ಯತತ್ತ್ವವನ್ನು ಮಾನ್ಯ ಗುಂಡಪ್ಪನವರು ರಾಮಾಯಣದ ಈ ಸನ್ನಿವೇಶದ ಮೂಲಕ ನಿರೂಪಿಸಿದ್ದಾರೆ. ನಮ್ಮ ದೈನಂದಿನ ಜೀವನದಲ್ಲೂ ನಿದ್ರೆ, ಆಲಸ್ಯ, ಭಯ ಮುಂತಾದ ದೌರ್ಬಲ್ಯಗಳಿಂದ ಅದೆಷ್ಟೋ ಬಾರಿ ನಮ್ಮನ್ನು ಜಡತೆ ಆವರಿಸಿರುತ್ತದೆ. ಅಂತಹ ಸಂದರ್ಭದಲ್ಲಿ ಅಣ್ಣನೊ, ಅಕ್ಕನೊ, ತಂದೆಯೊ, ತಾಯಿಯೊ, ಇಲ್ಲ ಯಾರೋ ಅಪರಿಚಿತರೊ, ಇಲ್ಲವೆ ನಮ್ಮ ಮನಸ್ಸಿನಲ್ಲಿ ಮೂಡಿದ ಯಾವುದೊ ವಿಚಾರದ ಕಿಡಿಯೊ ನಮ್ಮ ಜಡತೆಯನ್ನು ನಿವಾರಿಸಿ ಚೈತನ್ಯವನ್ನು ನೀಡಬಹುದು.

ರಾಮನ ಬದುಕಿಗೆ, ರಾಮಾಯಣಕಥೆಗೆ ತಿರುವನ್ನು ಒದಗಿಸಿದವರು ಇಬ್ಬರು ಅಬಲೆಯರು - ಮಂಥರೆ ಮತ್ತು ಕೈಕೇಯಿ. ಮಾನವನ ಭಾವನೆಗಳ ಹೊಯ್ದಾಟ ನಡೆದ ಸನ್ನಿವೇಶ ರಾಮನ ಪಟ್ಟಾಭಿಷೇಕ ಸಂದರ್ಭ. ಅಲ್ಲಿಯವರೆಗೆ ಒಬ್ಬ ತಂದೆ, ಎರಡು ತೊಟ್ಟಿಲು, ಮೂವರು ತಾಯಂದಿರು, ನಾಲ್ವರು ಮಕ್ಕಳು ಅಂತಿರುವ ಅರಮನೆಯ ಆಹ್ಲಾದಕರ ವಾತಾವರಣ ಒಮ್ಮೆಲೇ ಬದಲಾದ ಪ್ರಸಂಗ ಅದು. ನಾಲ್ಕು ಮಕ್ಕಳ ಮೂವರು ತಾಯಿಯರಲ್ಲಿ ಒಬ್ಬಳಾದ ಕೈಕೇಯಿಯನ್ನು ಭರತನಮಾತೆಯನ್ನಾಗಿ ಸಂಕುಚಿತಗೊಳಿಸಿದ ಸಂದರ್ಭ ಅದು. ಅದು ಆಗಿದ್ದು ಹೇಗೆ? ಇದೆಲ್ಲ ಲೋಕನಾಟಕ ಎನ್ನುತ್ತಾರೆ ಡಿವಿಜಿ.

ಕೈಕೇಯಿಯವೊಲು ಮಾತೆ, ಸತ್ಯಭಾಮೆವೊಲು ಸತಿ|
ಸಾಕಿ ಸಂತಸವೆರೆಯೆ ಸಂಸಾರಲೀಲೆ||
ಬೇಕು ಮತ್ಸರ ಮಮತೆ ಮೋಹಂಗಳಾವೇಶ|
ಲೋಕನಾಟಕಕಾಗ - ಮಂಕುತಿಮ್ಮ||

ಇನ್ನೊಂದೆಡೆ ಹೇಳುತ್ತಾರೆ-

ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್|
ಲೋಕದೊಳಗಿರಳು; ಬೆಳೆವುದು ಲೋಕವವರಿಂ||
ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ|
ಬೇಕದಕೆ ನಗು ಸಹನೆ – ಮಂಕುತಿಮ್ಮ||

ಮತ್ಸರ, ಮಮತೆ, ಮೋಹಗಳು ಕಟುವೇ ಆಗಿದ್ದರೂ ಲೋಕಪಾಕಕ್ಕೆ ಅದು ಬೇಕು. ಕೈಕೇಯಿಯ ಈ ಒಂದು ನಡೆಯೇ ಅಲ್ಲವೆ ರಾಜಾರಾಮನಾಗಬೇಕಾದವನನ್ನು ಲೋಕಾಭಿರಾಮನನ್ನಾಗಿ ಮಾಡಿದ್ದು. ಇದೇ ನಡೆಯಿಂದಲೇ ಅಲ್ಲವೆ ರಾವಣಾದಿ ಖಳರ ಹತ್ಯೆಯಾಗಿ ಲೋಕದಲ್ಲಿ ಶಾಂತಿ ನೆಲೆಸಿದ್ದು. ಇದನ್ನೆಲ್ಲ ಅರ್ಥಮಾಡಿಕೊಳ್ಳಲು ಸಹನೆ ಬೇಕು. ನಕ್ಕು ಸುಮ್ಮನಾಗಬೇಕು.

ಈ ಪ್ರಸಂಗ ಅದೆಷ್ಟೊ ಬಾರಿ ನಮ್ಮೊಳಗೂ ನಡೆಯುತ್ತದೆ. ಅದಕ್ಕೇ ಡಿವಿಜಿಯವರು ಹೇಳುತ್ತಾರೆ –

ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ|
ಬೀಸೆ ಮನದುಸಿರು ಮತಿದೀಪವಲೆಯುವುದು||
ವಾಸನೆಗಳನುಕೂಲ ಸತ್ಯತರ್ಕಕೆ ಶೂಲ|
ಶೋಷಿಸಾ ವಾಸನೆಯ – ಮಂಕುತಿಮ್ಮ||

ನಮ್ಮ ವಿವೇಚನಾಶಕ್ತಿಯೇ ಕೈಕೇಯಿ. ಅದು ಆತ್ಮರೂಪೀ ರಾಮನೊಂದಿಗೆ ಇದ್ದರೆ ಆಗ ಎಲ್ಲವೂ ಸರಿಯಿರುತ್ತದೆ. ಆದರೆ ಆಶೆಯೆಂಬ ಮಂಥರೆಯ ಮಾತನ್ನು ಕೇಳಹೊರಟರೆ ನಮ್ಮಲ್ಲಿ ಆಗುವುದೂ ಅಯೋಧ್ಯಾಕಾಂಡವೇ. ಆಶೆಗೆ ವಶವಾದ ಮನಸ್ಸು ಗಾಳಿಯಾಗಿ ಬೀಸಿದರೆ ನಮ್ಮ ಬುದ್ಧಿದೀಪ ಹೊಯ್ದಾಡುವುದು. ಆಸೆ ಹುಟ್ಟುವುದು ನಮ್ಮ ವಾಸನೆಗಳಿಂದ. ಕೈಕೇಯಿ ತನ್ನ ತವರು ಮನೆಯಿಂದ ಮಂಥರೆಯನ್ನು ಕರೆದುಕೊಂಡು ಬರದಿದ್ದರೆ ಹೀಗಾಗುತ್ತಿತ್ತೆ? ನಮ್ಮ ಪೂರ್ವಾರ್ಜಿತವಾಸನೆಗಳು ಸತ್ಯವನ್ನು ಇರಿದು ಇಂತಹ ಸನ್ನಿವೇಶವನ್ನು ಉಂಟುಮಾಡುತ್ತವೆ.ಹಾಗಾಗಿ ಇಡೀ ಪ್ರಕರಣದ ಸಂದೇಶ ಒಂದೇ ’ಶೋಷಿಸಾ ವಾಸನೆಯ’.
(ಮುಂದುವರಿಯುವುದು.....)

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...