Wednesday, January 8, 2020

*ಅಣ್ವಣೂಪಾಧ್ಯಾಯ* - _ಅಣ್ವವಲೋಕನ_


ಕೃತಿ: ಅಣ್ವಣೂಪಾಧ್ಯಾಯ
ಲೇಖಕರು: ಡಾ. ಎಚ್. ಆರ್. ವಿಶ್ವಾಸ
ಪ್ರಕಾಶಕರು: ಡಿವಿಜಿ ಬಳಗ ಪ್ರತಿಷ್ಠಾನ, ಮಂಗಳೂರು
ಬೆಲೆ: ₹150/-

ಮಿತ್ರ ಕನಕರಾಜು ಅವರ ನೇತೃತ್ವದ ಡಿವಿಜಿ ಬಳಗ ಪ್ರತಿಷ್ಠಾನ ಪ್ರಕಟಿಸಿದ ಡಾ. ವಿಶ್ವಾಸ ಅವರ ಅಣ್ವಣೂಪಾಧ್ಯಾಯ ಕಥಾ ಸಂಗ್ರಹವನ್ನು ಎರಡೇ ದಿನದಲ್ಲಿ ಓದಿ ಮುಗಿಸಿದ್ದು ನನ್ನ ಮಟ್ಟಿಗೆ ಒಂದು ದಾಖಲೆ. ಎಂದಿನಂತೆ ಪುಸ್ತಕದ ಒಳಹೂರಣವನ್ನು ನಿಮ್ಮ ಮುಂದಿಡಲು ಯತ್ನಿಸುತ್ತೇನೆ.

ಕಥಾಸಂಗ್ರಹದ ಶೀರ್ಷಿಕೆಯೇ ವಿಚಿತ್ರ ಅನಿಸಿತ್ತು. ಅದೇ ಶೀರ್ಷಿಕೆಯನ್ನು ಹೊಂದಿರುವ ಕೊನೆಯ ಕಥೆ ವೈಚಿತ್ರ್ಯವನ್ನು ಅನಾವರಣಗೊಳಿಸಿತು.

ಮೊದಲ ಕಥೆ *ದಂಡವಸೂಲಿ* ಅನವಧಾನತೆಯಿಂದ ಗಂಡಹೆಂಡಿರ ಮಧ್ಯೆ ಉಂಟಾಗುವ ಸಂಘರ್ಷವನ್ನು ಲಲಿತಪ್ರಬಂಧದಂತೆ ನಮ್ಮೆದುರಿಗಿಡುತ್ತದೆ.

ನೆರೆಹೊರೆಯ ಕಿರಿಕಿರಿಯನ್ನು ಆಧರಿಸಿ ಬರೆದ *ಹೋದೆಯಾ ಪಿಶಾಚಿ ಅಂದ್ರೆ...* ಎಂಬ ಕಥೆಯು ರಂಜಕವಾಗಿದೆ.

*ಸ್ವಾಮಿಗಳ ಅಂತರಂಗ* ಎಂಬ ಕಥೆ ಕರ್ಮಠ ಮಠಾಧೀಶರೊಬ್ಬರ ಮಾನವೀಯ ಆಂತರ್ಯವನ್ನು ಬಹಿರಂಗಪಡಿಸುತ್ತದೆ.

*ಪುರಸ್ಕಾರದ ರಹಸ್ಯ* ಎನ್ನುವ ಕಥೆ ಖ್ಯಾತನಾಮರ ಸೊಗಲಾಡಿತನದ ದರ್ಶನ ಮಾಡಿಸುತ್ತದೆ.

*ಅರ್ಧಜರತೀ* ಕಥೆಯಲ್ಲಿ ಪರಿಚಿತರೇ ಅಪರಿಚಿತರಾಗಿ ಬಂದು ಕೊನೆಗೆ 'ಓ! ಅವರೇ ಇವರಲ್ಲವೆ' ಎಂಬ ಉದ್ಗಾರ ತೆಗೆವ ವಿಚಿತ್ರ ಸನ್ನಿವೇಶದ ನಿರೂಪಣೆ ಇದೆ.

*ಆಹಾ! ಕಂಡೆನು ತಾಯ್ತನವ!* ಎಂಬ ಕಥೆ ಇಷ್ಟವಾಯಿತು. ಹೆಣ್ಣಿನ ವೇಷಭೂಷಣಗಳು ನಡವಳಿಕೆಗಳು ಹೇಗೇ ಇರಲಿ ನೈಸರ್ಗಿಕವಾಗಿ ಅವರಲ್ಲಿರುವ ಮಾತೃ ವಾತ್ಸಲ್ಯ ಸಂದರ್ಭಬಂದಾಗ ಪ್ರಕಟವಾಗುತ್ತದೆ ಎಂಬ ತತ್ತ್ವ ನಿರೂಪಿತವಾಗಿದೆ.

*ಇದು ಉದಾಹರಣೆ* ಎಂಬುದು ಗೃಹಿಣಿಯರ ಮೌಲ್ಯವನ್ನು ಎತ್ತಿ ಹಿಡಿಯುವ ಕಥನ.

*ಅಪರಾಧ* ವೆಂಬ ಏಳನೆಯ ಕಥೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧ ಹಾಗೂ ಸಾಮಾನ್ಯ ಬರಹಗಾರರಿಗೆ ಸಮಾಜ ತೋರುವ ತಾರತಮ್ಯದ ವಿಡಂಬನೆ ಇದೆ.

*ಮಾನಸಿಯ ಮನದಳಲು* ಎಂಬ ಕಥನದಲ್ಲಿ ಶೋಷಿತ ಮಹಿಳೆಯೋರ್ವಳ ವೇದನೆಯಿದೆ.

ಕೊನೆಯ ಕಥೆ ಸಂಸ್ಕೃತ ಶಿಕ್ಷಕರೊಬ್ಬರ ಜೀವನದ ಸಂಕಥನ. ಮಹಾ+ಮಹಾ+ಉಪಾಧ್ಯಾಯ (=ಮಹಾಮಹೋಪಾಧ್ಯಾಯ) ಎಂಬ ಉಪಾಧಿಗೆ ಭಾಜನರಾದ ಪಂಡಿತರು ತಮ್ಮನ್ನು ಅದಕ್ಕೆ ವಿರುದ್ಧವಾಗಿ  ಅಣು+ಅಣು+ಉಪಾಧ್ಯಾಯ (=ಅಣ್ವಣೂಪಾಧ್ಯಾಯ) ಎಂದು ಭಾವಿಸುವುದು ಕಥೆಯ ತಿರುಳು.

ಕಥೆಗಾರರದು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಳಗಿದ ಕೈ. ಇಲ್ಲಿನ ಕಥೆಗಳು ಸಂಸ್ಕೃತದಿಂದ ಕನ್ನಡಕ್ಕೆ ಬಂದವಾದರೂ ಸಂಸ್ಕೃತ ಶಬ್ದಗಳ ಅನಾವಶ್ಯಕ ಪ್ರಯೋಗಗಳಿಲ್ಲ.

ಕಥೆಗಳನ್ನು ಓದುವಾಗ ಒಂದು ವಿಷಯವನ್ನು ಮನಸ್ಸಿನಲ್ಲಿಡುವುದು ಒಳಿತು. ಇವು ಕನ್ನಡ ಸಾಹಿತ್ಯ ಪ್ರಪಂಚಕ್ಕಾಗಿ ಬರೆದ ಕಥೆಗಳಲ್ಲ. ಸಂಸ್ಕೃತದಲ್ಲಿ ಆಧುನಿಕ ಸಾಹಿತ್ಯ ರಚನೆಯ ಉದ್ದೇಶದಿಂದ ಸಾಮಾನ್ಯ ಓದುಗರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದವು. ಹಾಗಾಗಿ ಕಥಾಹಂದರ ಸಂಕೀರ್ಣವಾಗಿಲ್ಲ. ನಿರೂಪಣೆ ಸರಳವಾಗಿದೆ. ಕಥೆ ಹೆಣೆಯುವ ತಂತ್ರವೂ ಸಾಮಾನ್ಯವಾಗಿದೆ. ಭಾವತೀವ್ರತೆಯೂ ಕಾಣದು. ಕೆಲವು ಕಡೆ ವಿಷಯಗಳ ನಿರೂಪಣೆ ವಾಚ್ಯವಾಗಿದೆ ಎನಿಸುತ್ತದೆ.

ಹೀಗಿದ್ದರೂ ಮನದ ರಂಜನೆಗೇನೂ ಕೊರತೆಯಿಲ್ಲ. ಮೊದಲೆಲ್ಲ ಸರಳವಾಗಿ ಓಡುವ ಕಥೆಗಳು ಅನೂಹ್ಯ ಚಮತ್ಕೃತಿಯಲ್ಲಿ ಕೊನೆಗೊಂಡು ಓದುಗರಿಗೆ ಸಂತೃಪ್ತಿಯನ್ನು ಉಂಟುಮಾಡುತ್ತವೆ.

ನಮ್ಮ ನಿಮ್ಮ ನಡುವೆ ಬದುಕುವ ಮಧ್ಯಮವರ್ಗದ ಜನರ ಸುತ್ತ ಹೆಣೆದ ಕಥೆಗಳು ಆಪ್ತವೆನಿಸುತ್ತವೆ.

ಆಸಕ್ತರು ಪ್ರಕಾಶಕರನ್ನು ಚರವಾಣಿ ಸಂಖ್ಯೆ 9448973582 ಮೂಲಕ ಸಂಪರ್ಕಿಸಬಹುದು.

📖 *_ಪುಸ್ತಕಾವಲೋಕನ_*
*ಮಹಾಬಲ ಭಟ್, ಗೋವಾ*

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...