Thursday, October 4, 2018

ನ್ಯಾಯಪಥ *ದೇಹಲೀದೀಪನ್ಯಾಯ*


ಮಾನವ ಜನ್ಮ ದೊಡ್ಡದು. ಅದನ್ನು ಹಾನಿ ಮಾಡಿಕೊಂಡರೆ ಹುಚ್ಚಪ್ಪಗಳಾಗುತ್ತೇವೆ. ಏನು ಮಾನವ ಜನ್ಮದ ಸಾರ್ಥಕತೆ? ಲೌಕಿಕ ಅಭ್ಯುದಯವೊ, ಇಲ್ಲ ಪಾರಮಾರ್ಥಿಕ ನಿಃಶ್ರೇಯಸ್ಸೋ? ಎರಡೂ ಆವಶ್ಯಕ ತಾನೆ? ಅವೆರಡನ್ನೂ ಸಾಧಿಸುವ ಎಕೈಕ ಮಾರ್ಗ ’ಧರ್ಮ’ ಧರ್ಮದ ವ್ಯಾಖ್ಯೆಯೇ ಅದು-’ಯತೋಽಭ್ಯುದಯನಿಶ್ಶ್ರೇಯಸಿದ್ಧಿಃ ಸ ಧರ್ಮಃ’

ಎಷ್ಟೋ ಬಾರಿ ಎರಡು ಧರ್ಮಗಳ ಮಧ್ಯೆ ಸಂಘರ್ಷ, ಎರಡು ಕರ್ಮಗಳ ಮಧ್ಯೆಯೂ ಸಂಘರ್ಷ ಎದುರಾಗುತ್ತದೆ. ಕುಟುಂಬ ಹೆಚ್ಚೋ, ಸಮಾಜ ಹೆಚ್ಚೋ; ಆತ್ಮೋದ್ಧಾರ ಮೊದಲೊ, ಲೋಕೋದ್ಧಾರವೊ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಅನುಸರಿಸಬೆಕಾದ ಧರ್ಮ ಕರ್ಮಗಳು ’ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬಂತಿರಬೇಕು ಎನ್ನುತ್ತಾರೆ ಪ್ರಾಜ್ಞರು.

ಅದೊಂದು ಸಣ್ಣ ಮನೆ. ಹೊರಜಗುಲಿ ಅಡುಗೆ ಮನೆ ಎರಡೇ. ಅವುಗಳ ಮಧ್ಯೆ ಒಂದು ಬಾಗಿಲು. ಕೂಲಿ ಮಾಡಿ ಬದುಕುವ ದಂಪತಿ. ಅವರಿಗೊಬ್ಬಳೇ ಮಗಳು. ರಾತ್ರಿ ಸಮಯ. ಅನಿರೀಕ್ಷಿತ ಅತಿಥಿಗಳ ಆಗಮನ. ಇರುವುದೊಂದೇ ದೀಪ. ಜಗುಲಿಯಲ್ಲಿಟ್ಟರೆ ಅಡುಗೆ ಮಾಡಲಾಗದು. ಅಡುಗೆಮನೆಗೆ ಕೊಂಡೊಯ್ದರೆ ಜಗುಲಿಯಲ್ಲಿರುವ ಅತಿಥಿಗಳನ್ನು ಕತ್ತಲೆಯಲ್ಲೇ ಮಾತನಾಡಿಸುವ ಪರಿಸ್ಥಿತಿ.

ಮಗಳು ಬುದ್ಧಿವಂತೆ. ದೀಪವನ್ನು ಹೊಸ್ತಿಲ ಮೇಲಿಟ್ಟಳು. ಒಳಗೂ ಬೆಳಕು, ಹೊರಗೂ ಪ್ರಕಾಶ. ದೇಹಲೀದೀಪನ್ಯಾಯ ಉಭಯಸಂಕಟವನ್ನು ನಿವಾರಿಸಿತು.

ಹೊಸ್ತಿಲ ಮೇಲಿಟ್ಟ ದೀಪ ಒಳವನ್ನೂ ಹೊರವನ್ನೂ ಬೆಳಗುವಂತೆ ನಮ್ಮ ಕರ್ಮ ಪ್ರಾಪಂಚಿಕ ಸುಖವನ್ನೂ ಪರಮಾರ್ಥವನ್ನೂ ಸಾಧಿಸುವಂತಿರಲಿ.

✍🏻 *ಮಹಾಬಲ ಭಟ್, ಗೋವಾ*

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...