Thursday, October 4, 2018

ಹೊತ್ತು ಹೋದರೆ ಮತ್ತೆ ಬಾರದು

ನಮ್ಮ ಜೀವನದಲ್ಲಿ ಸಮಯವೆಂಬುದು ದುಡ್ಡು ಕೊಟ್ಟರೂ ಸಿಗದ ಅಮೂಲ್ಯ ವಸ್ತು. ಅದನ್ನು ಅಜ್ಞಾನದಿಂದ ಕಳೆದುಕೊಂಡರೆ ಮತ್ತೆ ಸಿಗದು ಎಂಬುದನ್ನು ಈ ಗಾದೆ ತಿಳಿಸಿಕೊಡುತ್ತದೆ.
ನಾವು ಹುಟ್ಟಿದ್ದು ಯಾವಾಗ ಎಂಬುದು ನಮಗೆ ತಿಳಿದಿದೆ. ಆದರೆ ಸಾವು ಯಾವಾಗ ಬರುತ್ತದೆ ಎಂಬುದು ತಿಳಿದಿಲ್ಲ. ಪ್ರತಿಕ್ಷಣವೂ ನಮ್ಮ ಆಯುಷ್ಯ ಕಡಿಮೆಯಾಗುತ್ತಲೇ ಸಾಗುತ್ತದೆ. ಹಾಗಾಗಿ ಒಂದು ವರ್ಷವಾಗಲಿ, ಮಾಸವಾಗಲಿ, ದಿನವಾಗಲಿ, ಗಂಟೆಯೇ ಆಗಲಿ ಅಥವಾ ನಿಮೇಷವೇ ಆಗಲಿ ಅತ್ಯಂತ ಅಮೂಲ್ಯವಾದದ್ದು. ಅದನ್ನೇ ’ಶಿವರಾಜ್ಯೋದಯಃ’ ಎಂಬ ಮಹಾಕಾವ್ಯದ ಶಿವಶಿಕ್ಷಣ ಎಂಬ ಅಧ್ಯಾಯದಲ್ಲಿ ಜಿಜಾಮಾತೆ ಬಾಲಶಿವಾಜಿಗೆ ಹೀಗೆ ಹೇಳುತ್ತಾಳೆ-
ಪ್ರತಿಕ್ಷಣಂ ಕ್ಷೀಯತ ಆಯುರೇತತ್ ನಾಯಾತಿ ಯಾತೋಽವಸರಃ ಕದಾಪಿ |
ತನ್ಮಾ ಕೃಥಾ ಜಾತು ವೃಥಾ ಸ್ವಮಾಯುಃ ಪಲೇ ಕ್ಷಣೇ ದಿವಸೇತಿ ಮಾಸೇ ||

ಅರ್ಥಾರ್ಥಿಗೆ ಹೇಗೆ ಪ್ರತಿಯೊಂದು ಕಣವೂ ಮುಖ್ಯವೋ ಹಾಗೆಯೇ ವಿದ್ಯಾರ್ಥಿಗೆ ಪ್ರತಿಯೊಂದು ಕ್ಷಣವೂ ಮುಖ್ಯ. ವಿದ್ಯಾರ್ಥಿಜೀವನದಲ್ಲಿ ವ್ಯಸನಗಳಿಂದ ಸಮಯವನ್ನು ವ್ಯರ್ಥಗೊಳಿಸಿಕೊಂಡರೆ ಆ ಕಾಲ ಮತ್ತೆ ದೊರಕದು.

ಧರ್ಮಾಚರಣೆಯ ಕಾಲಕ್ಕೆ ನಾಳೆಯೇ ತನ್ನ ಮರಣ ಎಂದು ಯೋಚಿಸಿ ತಕ್ಷಣ ಮಾಡಿ ಮುಗಿಸಬೇಕಂತೆ. ಪುರಂದರ ದಾಸರು ತಮ್ಮ ಒಂದು ಕೀರ್ತನೆಯಲ್ಲಿ “ಬರಿದೆ ಹೋಯಿತು ಹೊತ್ತು, ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ” ಎಂದು ಪರಿತಪಿಸುತ್ತಾರೆ.

ಹಿಡಿದ ಕೆಲಸವನ್ನು ಬೇಗ ಮುಗಿಸದೆ ಎಳೆಯುತ್ತಾ ಹೋಗುವ ದೀರ್ಘಸೂತ್ರತೆ ಅನೇಕರ ಸ್ವಭಾವವಾಗಿದೆ. ದೀರ್ಘಸೂತ್ರತೆ. ಯಶಸ್ಸಿಗೆ ಪ್ರತಿಬಂಧಕವಾದ ಶತ್ರುಗಳಲ್ಲಿ ಇದೂ ಒಂದು. ಸುಭಾಷಿತವೊಂದು ಅದನ್ನು ಸುಂದರವಾಗಿ ನಿರೂಪಿಸುತ್ತದೆ.

ಆದಾನಸ್ಯ ಪ್ರದಾನಸ್ಯ ಕರ್ತವ್ಯಸ್ಯ ಚ ಕರ್ಮಣಃ |
ಕ್ಷಿಪ್ರಮಕ್ರಿಯಮಾಣಸ್ಯ ಕಾಲಃ ಪಿಬತಿ ತದ್ರಸಮ್ ||

ಕೊಡುವ, ತೆಗೆದುಕೊಳ್ಳುವ ಹಾಗೂ ಮಾಡಲೇಬೇಕಾದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ ಕಾಲವೇ ಅದರ ರಸವನ್ನು ಕುಡಿದುಬಿಡುತ್ತದೆ. ”ಶ್ವಃ ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್” ಎಂಬ ಸೂಕ್ತಿ ನಾಳೆ ಎಂದವನ ಮನೆ ಹಾಳು ಎಂಬ ಗಾದೆಯನ್ನು ನೆನಪಿಸುತ್ತದೆ.
ಮಾರ್ಕ್ ಲೇವಿ ಎಂಬ ಚಿಂತಕ ಒಂದೆಡೆ ಬರೆಯುತ್ತಾನೆ – “ಒಂದು ವರ್ಷದ ಮಹತ್ತ್ವವನ್ನು ತಿಳಿಯಬೇಕೆಂದರೆ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳು. ಒಂದು ತಿಂಗಳ ಮಹತ್ತ್ವವನ್ನು ಅರಿಯಬೇಕೆಂದರೆ ಎಂಟನೆಯ ಮಾಸದಲ್ಲಿ ಗರ್ಭಪಾತವಾದ ತಾಯಿಯನ್ನು ಕೇಳು. ಒಂದು ತಾಸಿನ ಮಹತ್ತ್ವವನ್ನು ಭೇಟಿಯಾಗಲು ಕಾಯುತ್ತಿರುವ ಪ್ರೇಮಿಗಳನ್ನು ಕೇಳು. ಒಂದು ನಿಮಿಷದ ಮಹತ್ತ್ವವನ್ನು ಸ್ವಲ್ಪದರಲ್ಲೇ ಬಸ್ಸನ್ನು ತಪ್ಪಿಸಿಕೊಂಡ ವ್ಯಕ್ತಿ ಹೇಳಬಲ್ಲ. ಒಂದು ಸೆಕೆಂಡಿನ ಮಹತ್ತ್ವವನ್ನು ಅಪಘಾತದಿಂದ ಕೂದಲೆಳೆಯಂತರದಲ್ಲಿ ಪಾರಾದ ವ್ಯಕ್ತಿ ಚೆನ್ನಾಗಿ ತಿಳಿದಿರುತ್ತಾನೆ. ಸೆಕೆಂಡಿನ ನೂರನೆಯ ಒಂದಂಶದ ಮಹತ್ತ್ವನ್ನು ಒಲಂಪಿಕ್ ನ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಪಡೆದ ಸ್ಪರ್ಧಾಳು ಅರಿತಿರುತ್ತಾನೆ.”
ಹೆಚ್ಚು ಕೆಲಸಗಳನ್ನು ಹೊಂದಿರುವವನಿಗೆ ಎಲ್ಲ ಕೆಲಸಗಳಿಗೂ ಸಮಯವಿರುತ್ತದೆ ಎನ್ನುತ್ತದೆ ಇನ್ನೊಂದು ನುಡಿ. ಕೆಲಸ ಮಾಡದವನಿಗೆ ಯಾವುದಕ್ಕೂ ಸಮಯವೇ ಇರುವುದಿಲ್ಲ. ’ಸಮಯಯೋಜನೆ’ ಎನ್ನುವುದು ಯಶಸ್ಸಿಗೆ ಅನಿವಾರ್ಯವಾದ ಅಂಶ.
ನವ್ಯಜೀವಿ ಅಂಕಿತದ ಶ್ರೀ ಸತ್ಯೇಶ್ ಬೆಳ್ಳೂರು ತಮ್ಮ ಒಲಮೆಯ ಹೊನಲು ಕೃತಿಯಲ್ಲಿ ಬರೆಯುತ್ತಾರೆ-
ಮಹಿಮರಿಗೆ ದಿನದೊಳಗೆ ತಾಸುಗಳು ಹೆಚ್ಚಿತ್ತೆ?
ಅಹನಿವಿಡಿ ದುಡಿದರೆಲೊ ಇದ್ದ ಸಮಯದೊಳೆ |
ಬಹುತೇಕ ತಮ್ಮೆಲ್ಲ ಗುರಿಗೈದು ತೋರಿಹರು
ಸಹಜ ಸಮಯಪ್ರಜ್ಞೆ – ನವ್ಯಜೀವಿ ||
ಕೆಲವರು ತಾವು ಸಮಯಹರಣ ಮಾಡುವುದಲ್ಲದೆ ಇನ್ನಿತರರ ಸಮಯವನ್ನೂ ಹಾಳು ಮಾಡುತ್ತಾರೆ. ಆಧುನಿಕ ಯುಗದಲ್ಲಂತೂ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಮೂಲ್ಯ ಸಮಯ ಹರಿದು ಹೋಗುತ್ತಿದೆ. ತಂತ್ರಜ್ಞಾನವನ್ನು ಸಮಯ ಉಳಿಸಲು ಬಳಸಬೇಕೇ ಹೊರತು ಸಮಯಹರಣಕ್ಕಲ್ಲ ಎಂಬುದನ್ನು ಅರಿತರೆ ಶ್ರೇಯಸ್ಕರ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...