Thursday, October 4, 2018

ದುಡ್ಡೇ ದೊಡ್ಡಪ್ಪ

ಹಿಂದೊಂದು ಕಾಲದಲ್ಲಿ ವಸ್ತು ವಿನಿಮಯ ಪದ್ಧತಿ ಚಾಲ್ತಿಯಲ್ಲಿತ್ತು. ಕಾಲಾಂತರದಲ್ಲಿ ’ಹಣ’ ಎಂಬ ಮಾಧ್ಯಮವೊಂದು ಸೃಷ್ಟಿಯಾಯಿತು. ನಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಆ ದುಡ್ಡು ಇಂದು ನಮ್ಮ ತಲೆಯ ಮೇಲೇ ಕುಳಿತು ನಮ್ಮನ್ನು ಆಳುತ್ತಿದೆ. ಅಪ್ಪನಿಗಿಂತ ದೊಡ್ಡದಾಗಿ ದೊಡ್ಡಪ್ಪನಾದ ಆ ಹಣದ ಬಗ್ಗೆ ಇರುವ ಗಾದೆ ಇದು.
ಪಂಚತಂತ್ರದಲ್ಲೊಂದು ಕಥೆಯಿದೆ. ಹಿರಣ್ಯಕನೆಂಬ ಇಲಿಯೊಂದು ತಾಮ್ರಚೂಡನೆಂಬ ಸಂನ್ಯಾಸಿ ಎತ್ತರದ ನಾಗಂದಿಕೆಯ ಮೇಲಿಟ್ಟ ಭಿಕ್ಷಾನ್ನವನ್ನು ಜಿಗಿದು ತಿನ್ನುತ್ತಿತ್ತು. ತನ್ನ ಮಿತ್ರನ ಸಲಹೆಯಂತೆ ತಾಮ್ರಚೂಡ ಇಲಿಯ ಬಿಲವನ್ನು ಶೋಧಿಸಿ ಅಲ್ಲಿದ್ದ ಹಣದ ರಾಶಿಯನ್ನು ವಶಪಡಿಸಿಕೊಂಡ ಮೇಲೆ ಇಲಿಯ ಹಾರುವ ಸಾಮರ್ಥ್ಯವೇ ಕುಸಿಯಿತು. ತನ್ನಲ್ಲಿದ್ದ ದುಡ್ಡೇ ಇಲಿಗೆ ಆ ಸಾಮರ್ಥ್ಯವನ್ನು ಒದಗಿಸಿತ್ತು.  
ಸಂಸ್ಕೃತದ ಸುಭಾಷಿತವೊಂದು ಹಣದ ಮಹಿಮೆಯನ್ನು ಸುಂದರವಾಗಿ ವರ್ಣಿಸುತ್ತದೆ.
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ |
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ ||
ಯಾರಲ್ಲಿ ಹಣವಿದೆಯೋ ಅವನೇ ಕುಲವಂತ, ಪಂಡಿತ, ಗುಣಜ್ಞ, ವಾಗ್ಮಿ, ಸುಂದರ. ಹೀಗೆ ಈ ಎಲ್ಲ ಗುಣಗಳು ಹಣವನ್ನೇ ಆಶ್ರಯಿಸಿರುತ್ತವೆ. ಬೆಲ್ಲಕ್ಕೆ ಇರುವೆ ಮುತ್ತುವಂತೆ ಹಣವಿರುವ ಮನುಷ್ಯನನ್ನು ಜನರು ಸುತ್ತುವರಿದಿರುತ್ತಾರೆ. ಒಣಗಿದ ಮರವನ್ನು ಪಕ್ಷಿಗಳು ತ್ಯಜಿಸುವಂತೆ ನಿರ್ಧನನಾದ ವ್ಯಕ್ತಿಯಿಂದ ಎಲ್ಲರೂ ದೂರವಾಗುತ್ತಾರೆ.
ಹೊರಗಿನ ಜನರನ್ನು ಬಿಡಿ. ನಮ್ಮದೇ ಕುಟುಂಬದಲ್ಲೂ ಹಣವನ್ನು ಅರ್ಜಿಸುವವನಿಗೇ ಮೊದಲ ಮಣೆ. ಹಣ ಸಂಪಾದನೆ ನಿಂತ ಮೇಲೆ ಆ ವ್ಯಕ್ತಿ ತನ್ನ ಮನೆಯಲ್ಲೇ ಮೂಲೆಗುಂಪಾಗುತ್ತಾನೆ. ಆಚಾರ್ಯ ಶಂಕರರು ಮೋಹ ಮುದ್ಗರದಲ್ಲಿ ಅದನ್ನೇ ಮಾರ್ಮಿಕವಾಗಿ ಹೇಳಿದ್ದಾರೆ.
ಯಾವದ್ವಿತ್ತೋಪಾರ್ಜನಸಕ್ತಃ ತಾವನ್ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ||
ಸರ್ವಜ್ಞ ಕವಿಯು ತನ್ನ ಒಂದು ವಚನದಲ್ಲಿ ಈ ರೀತಿಯ ಭಾವವನ್ನೇ ವ್ಯಕ್ತಪಡಿಸಿದ್ದಾನೆ.
ಧನಕನಕವುಳ್ಳವನ ದಿನಕರನ ವೋಲಕ್ಕು |
ಧನಕನಕ ಹೋದ ಮರುದಿನವೆ
ಹಾಳೂರ ಶುನಕದಂತಿಕ್ಕು – ಸರ್ವಜ್ಞ ||
ಇನ್ನೊಂದು ವಚನದಲ್ಲಿ ಸಿರಿಯಣ್ಣ ಇರುವ ತನಕ ಅವನು ಹಿರಿಯಣ್ಣ, ಸಿರಿಯಣ್ಣ ಹೋದ ಮರುದಿನ ಅವನು ನರಿಯಣ್ಣ ಎಂದು ಗೇಲಿ ಮಾಡಿದ್ದಾನೆ.
ದಟ್ಟ ದಾರಿದ್ರ್ಯದಲ್ಲೇ ತಮ್ಮ ಜೀವನವನ್ನು ಯಾಪಿಸಿದ ವರಕವಿ ಬೇಂದ್ರೆಯವರು ’ಕುರುಡು ಕಾಂಚಾಣ ಕುಣಿಯುತಲಿತ್ತೋ ಕಾಲಿಗೆ ಬಿದ್ದವರ ತುಳಿಯುತಲಿತ್ತೋ’ ಎನ್ನುತ್ತ ದುಡ್ಡಿನ ರುದ್ರ ನರ್ತನವನ್ನು ತಮ್ಮ ಶಬ್ದಗಳಲ್ಲಿ ವರ್ಣಿಸಿದ್ದಾರೆ. ಲಕ್ಷ್ಮೀವಂತರಿಗೆ ಇತರರ ಕಷ್ಟ ತಿಳಿಯದು. ತನ್ನ ವಕ್ಷಸ್ಥಲದಲ್ಲಿ ಲಕ್ಷ್ಮಿಯನ್ನು ಧರಿಸಿದ ವಿಷ್ಣು ಈಗಾಗಲೇ ಭೂಮಿಯನ್ನು ಹೊತ್ತು ಬಳಲಿರುವ ಶೇಷನ ಮೇಲೆಯೇ ಮಲಗುವುದಿಲ್ಲವೆ ಎಂದು ಸುಭಾಷಿತಕಾರನೊಬ್ಬ ಚುಚ್ಚಿದ್ದಾನೆ. ಮೃಚ್ಛಕಟಿಕದ ನಾಯಕ ಚಾರುದತ್ತ ದಾರಿದ್ರ್ಯ ಎಂಬುದು ಆರನೆಯ ಪಾತಕವೋ ಎಂಬಂತೆ ಜನರು ವರ್ತಿಸುತ್ತಾರೆ ಎಂದು ಹಳಹಳಿಸುತ್ತಾನೆ.  
ನಿಜ. ಹಣದಿಂದ ಎಲ್ಲವನ್ನೂ ಸಾಧಿಸಲಾಗದು. ಹಸಿವೆಯಾದರೆ ಹಣವನ್ನು ತಿನ್ನಲಾಗದು ಆದರೆ ಆಹಾರವನ್ನು ಕೊಂಡುಕೊಳ್ಳಬಹುದು. ನೀರಡಿಕೆಯಾದರೆ ದುಡ್ಡನ್ನು ಕುಡಿಯಲಾಗದು, ಆದರೆ ನೀರನ್ನು ಕೊಳ್ಳಬಹುದಲ್ಲ. ಹಣದಿಂದ ಆರೋಗ್ಯವನ್ನು ಕೊಳ್ಳಲಾಗದು ಆದರೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ಹಣ ಬೇಕೇ ಬೇಕು. ಇಂದು ಅಪೇಕ್ಷಿತ ಶಿಕ್ಷಣವನ್ನು ಪಡೆಯಲೂ ಹಣ ಬೇಕು. ’ಧನಾದ್ಧರ್ಮಃ ತತಃ ಸುಖಂ’ ಎಂಬ ಉಕ್ತಿ ಹೇಳುವಂತೆ ದಾನಾದಿ ಧರ್ಮ ಕಾರ್ಯಗಳನ್ನು ಮಾಡಲೂ ಹಣ ಬೇಕು.  ಹಾಗಾಗಿ ಪುರುಷಾರ್ಥ ಚತುಷ್ಟಯದಲ್ಲಿ ಅರ್ಥಕ್ಕೆ ಎರಡನೆಯ ಸ್ಥಾನ. ಒಟ್ಟಿನಲ್ಲಿ ಆಧುನಿಕಯುಗದಲ್ಲಿ ದುಡ್ಡು ದೊಡ್ಡಪ್ಪನಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...