Monday, October 15, 2018

ಧಾನ್ಯಪಲಾಲನ್ಯಾಯ


ಈ ಸಂಸಾರವೇ ಹೀಗೆ. ಅಸಾರದ ಮಧ್ಯೆ  ಅಡಗಿ ಕುಳಿತಿರುವ ’ಸಾರ’ ಕಾಣದೆ ಭ್ರಮೆಯಲ್ಲಿ ತೇಲಾಡುತ್ತಿರುತ್ತೇವೆ. ಪರದೆ ಸರಿದಾಗ ಒಳಗಿರುವ ತಥ್ಯದ ಅನುಭವವಾಗುತ್ತದೆ.
ಸಾಮಾನ್ಯನಿಗೆ ಕಲ್ಲೊಂದನ್ನು ಕಂಡಾಗ ಅದು ಕೇವಲ ಕಲ್ಲಾಗಿ ಕಾಣಿಸುತ್ತದೆ. ಅದನ್ನೇ ಶಿಲ್ಪಿಯೊಬ್ಬ ನೋಡಿದಾಗ ಅವನಿಗೆ ಅದರೊಳಗೊಂದು ಮೂರ್ತಿ ಕಾಣಿಸುತ್ತದೆ. ಬೇಡವಾದ ಭಾಗವನ್ನು ಕತ್ತರಿಸಿ ಹಾಕಿದಾಗ ಅದೇ ಕಲ್ಲು ಮೂರ್ತಿಯಾಗಿ ಪೂಜೆಗೊಳ್ಳುತ್ತದೆ.
ಮಾವಿನ ಹಣ್ಣನ್ನು ತಿನ್ನುವಾಗ ಸಿಪ್ಪೆ ಮತ್ತು ಓಟೆಯನ್ನು ಎಸೆಯುತ್ತೇವೆ.
ಕೃಷಿಕನ ಕಠಿಣಪರಿಶ್ರಮದಿಂದ ಬೆಳೆದ ಧಾನ್ಯ ಸಸ್ಯದಿಂದ ಬೇರ್ಪಡಿಸಿದ ಮೇಲೂ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಮೇಲಿನ ಸಿಪ್ಪೆಯನ್ನು ತೆಗೆದ ಮೇಲೆಯೇ ಧಾನ್ಯವನ್ನು ಉಪಯೋಗಿಸಬಹುದು. ಧಾನ್ಯ ದೊರೆತ ಮೇಲೆ ಅದರ ಚರ್ಮ ಕಸವೇ.
ಜ್ಞಾನಾರ್ಜನೆಗೆ ಶಾಸ್ತ್ರಗ್ರಂಥದ ಅಧ್ಯಯನ ಆವಶ್ಯಕ. ಆದರೆ ಗ್ರಂಥದಲ್ಲಿರುವ ಪ್ರತಿಯೊಂದು ಶಬ್ದವೂ ಗ್ರಾಹ್ಯವೆಂದೇನೂ ಇಲ್ಲ. ಗ್ರಂಥದ ಸಾರವನ್ನು ಗ್ರಹಿಸಿ ಉಳಿದದ್ದನ್ನು ತ್ಯಜಿಸಬೇಕಾಗುತ್ತದೆ. ಬ್ರಹ್ಮಪದವನ್ನು ಮುಟ್ಟಿದವಂಗೆ ಅದನ್ನು ತೋರಿಸಿದ ಶಾಸ್ತ್ರಗಳೂ ತ್ಯಾಜ್ಯಗಳೇ. ದಾರ್ಶನಿಕ ಕವಿ ಡಿವಿಜಿಯವರೆಂದಂತೆ – ’

ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ
ಹಾದಿ ತೋರಲು ನಿಶಿಯೊಳುರಿವ ಪಂಜುಗಳು,
ಸೌಧವೇರಿದವಂಗೆ ನಭವ ಸೇರಿದಂಗೆ
ಬೀದಿ ಬೆಳಕಿಂದೇನೊ? – ಮಂಕುತಿಮ್ಮ ||

ಬ್ರಹ್ಮಬಿಂದೂಪನಿಷತ್ ಇದೇ ನ್ಯಾಯವನ್ನು ಹೀಗೆ ನಿರೂಪಿಸಿದೆ-

ಗ್ರಂಥಮಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ |
ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ ಗ್ರಂಥಮಶೇಷತಃ ||

ಸಾರವನ್ನು ಗ್ರಹಿಸಿ, ಅಸಾರವನ್ನು ತ್ಯಜಿಸಿ ಸಂಸಾರವನ್ನು ನಡೆಸೋಣ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...