Thursday, October 4, 2018

ನ್ಯಾಯಪಥ *ತಮೋದೀಪನ್ಯಾಯ*


ಪರಸ್ಪರ ವಿರುದ್ಧ ಸ್ವಭಾವದ ಅದೆಷ್ಟು ವಸ್ತುಗಳು ಈ ಜಗತ್ತಿನಲ್ಲಿಲ್ಲ? ಈ ವಿಶ್ವದಲ್ಲಿ ದುಷ್ಟ-ಶಿಷ್ಟ, ಒಳಿತು-ಕೆಡುಕು, ದೇವ-ದಾನವ ಹಾಗೆಯೇ ಕತ್ತಲೆ-ಬೆಳಕು ಎಲ್ಲವಕ್ಕೂ ಸ್ಥಾನವಿದೆ, ಅವರದ್ದೇ ಆದ ಕೆಲಸವಿದೆ. ಎಲ್ಲವೂ ಇದ್ದಾಗಲೇ ಪ್ರಪಂಚ ಸುಂದರವಾಗಿ ಕಾಣಿಸುವುದು. ’ರಾಮನಿರ್ದಂದು ರಾವಣನೊಬ್ಬನಿರ್ದನಲ’ ಎಂದ ಮಂಕುತಿಮ್ಮನಿಗೂ ಅದು ಜಗದ ನಿಯಮವಾಗಿ ತೋರಿದೆ.

ಈ ರೀತಿ ಪರಸ್ಪರ ವಿರುದ್ಧಗುಣಗಳ ವಸ್ತುಗಳೋ ವ್ಯಕ್ತಿಗಳೋ ಒಂದೇ ದೇಶಕಾಲದಲ್ಲಿರುವುದು ಪ್ರಕೃತಿಗೆ ಸಹಜವಾದ ಗುಣ. ಆದರೆ ಅವುಗಳಲ್ಲಿ ಕತ್ತಲೆ ಬೆಳಕುಗಳು ಮಾತ್ರ ವಿಶಿಷ್ಟವಾದವು. ಬೆಳಕಿದ್ದಲ್ಲಿ ಕತ್ತಲೆಯಿಲ್ಲ, ಕತ್ತಲೆಯಿದೆಯೆಂದರೆ ಬೆಳಕಿಲ್ಲವೆಂದೇ ಅರ್ಥ. ಅಂಧಕಾರವಿನಾಶವೇ ದೀಪದ ಹೇತು. ಕತ್ತಲೆಯನ್ನು ಶಪಿಸುವುದನ್ನು ಬಿಟ್ಟು ದೀಪವೊಂದನ್ನು ಹಚ್ಚು ಎನ್ನುತ್ತದೊಂದು ನಾಣ್ಣುಡಿ.
ಬೆಳಕು-ಕತ್ತಲೆಗಳಂತೆ ಜ್ಞಾನ-ಅಜ್ಞಾನಗಳು. ಹೃದಯದಲ್ಲಿ ಅಜ್ಞಾನ ಮನೆ ಮಾಡಿದವನಿಗೆ ಜಗತ್ತೇ ಕತ್ತಲೆ. ಜ್ಞಾನಮಯ ಪ್ರದೀಪ ಪ್ರಜ್ವಲಿಸಿದಾಗ ಅಜ್ಞಾನದ ಅಂಧಕಾರ ಪಲಾಯನವನ್ನು ಮಾಡುತ್ತದೆ.
ಇದು ವಿಚಿತ್ರವಾದರೂ ಸತ್ಯ.

ಬೆಳಕಿನಿಂದ ಎಲ್ಲವನ್ನೂ ನೋಡಬಹುದು ಆದರೆ ಕತ್ತಲೆಯನ್ನು ನೋಡಲಾಗದು. ಯಾರಾದರೂ ಅಜ್ಞಾನವನ್ನು ತಿಳಿದುಕೊಳ್ಳಬೇಕೆಂದು ಬಯಸಿದರೆ ಅವರು ದೀಪದಿಂದ ಕತ್ತಲೆಯನ್ನು ನೋಡಲು ಬಯಸುವವರಂತೆ ಮೂರ್ಖರು ಎನ್ನುತ್ತದೆ ಈ ಸುಭಾಷಿತ.

ಅಜ್ಞಾನಂ ಜ್ಞಾತುಮಿಚ್ಛೇದ್ಯೋ
ಮಾನೇನಾತ್ಯಂತಮೂಢಧೀಃ |
ಸ ತು ನೂನಂ ತಮಃ ಪಶ್ಯೇದ್ ದೀಪೇನೋತ್ತಮತೇಜಸಾ ||

ಇದೇ ತಮೋದೀಪನ್ಯಾಯ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...