ಕಣ್ಣಲ್ಲಿ ಕಂಡರೂ ಪರಾಂಬರಿಸಿ ನೋಡು
ಜ್ಞಾನೇಂದ್ರಿಯಗಳಿಗೆ ಗೋಚರವಾದದ್ದು ಮಾತ್ರ ಸತ್ಯ ಎಂಬುದು ಚಾರ್ವಾಕ ಸಿದ್ಧಾಂತ. ಆದರೆ ಜ್ಞಾನೇಂದ್ರಿಯಗಳು ತರುವ ಜ್ಞಾನ ಮಿಥ್ಯೆ ಎನ್ನುತ್ತದೆ ವೇದಾಂತ. ಈ ಗಾದೆಯಲ್ಲಿರುವ ಕಣ್ಣು ಜ್ಞಾನೇಂದ್ರಿಯದ ಪ್ರತಿನಿಧಿ. ನಮ್ಮ ಇಂದ್ರಿಯಗಳಿಂದ ಉಂಟಾದ ಜ್ಞಾನವನ್ನು ವಿಮರ್ಶಿಸದೆ ಒಪ್ಪಿಕೊಳ್ಳಬಾರದು ಎಂಬುದು ಈ ಗಾದೆಯ ಅಂಬೋಣ.
ಪಂಚತಂತ್ರದ ಅಪರೀಕ್ಷಿತಕಾರಕದಲ್ಲಿರುವ ಪ್ರಸಿದ್ಧ ಕಥೆಯೊಂದನ್ನು ನೀವೆಲ್ಲ ಬಲ್ಲಿರಿ. ಹಾವನ್ನು ಕೊಂದು ತನ್ನ ಮಗನನ್ನು ಬದುಕಿಸಿದ ಮುಂಗುಸಿಯ ರಕ್ತಸಿಕ್ತ ಬಾಯನ್ನು ನೋಡಿ ಅದು ಮಗುವನ್ನೇ ಕೊಂದಿದೆ ಎಂದು ಭಾವಿಸಿದ ಬ್ರಾಹ್ಮಣಿ ಅವಿಚಾರದಿಂದ ಆ ಮುಂಗುಸಿಯನ್ನು ಕೊಂದ ಕಥೆ ಸರ್ವವಿದಿತ. ಇದೇ ಕಥೆಯನ್ನು ಆಧರಿಸಿ ಚಿ.ಉದಯಶಂಕರರು ಬರೆದ ರಾಮ-ಲಕ್ಷ್ಮಣ ಚಿತ್ರದ
ಕೇಳಿದ್ದು ಸುಳ್ಳಾಗಬಹುದು, ನೋಡಿದ್ದೂ ಸುಳ್ಳಾಗಬಹುದು,
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’
ಎಂಬ ಗೀತೆ ಜನಪ್ರಿಯವಾಗಿದೆ.
ಸಂಸ್ಕೃತದ ಸುಭಾಷಿತವೊಂದು ಇದನ್ನು ಸುಂದರವಾಗಿ ಪ್ರತಿಪಾದಿಸುತ್ತದೆ
ಸಹಸಾ ವಿದಧೀತ ನ ಕ್ರಿಯಾಂ ಅವಿವೇಕಃ ಪರಮಾಪದಾಂ ಪದಮ್ |
ವೃಣುತೇ ಹಿ ವಿಮೃಶ್ಯಕಾರಿಣಂ ಗುಣಲುಬ್ಧಾಃ ಸ್ವಯಮೇವ ಸಂಪದಃ ||
ಯಾವುದೇ ಕೆಲಸವನ್ನು ಯೋಚಿಸದೆ ಮಾಡಬಾರದು. ಅವಿವೇಕವು ದೊಡ್ದ ವಿಪತ್ತಿಗೆ ಮೆಟ್ಟಿಲು. ಗುಣಪಕ್ಷಪಾತಿಯಾದ ಸಂಪತ್ತು ಯೋಚಿಸಿ ಕಾರ್ಯವೆಸಗುವವನನ್ನು ವರಿಸುತ್ತದೆ.
ಈ ಪದ್ಯವನ್ನು ರಾಜನೊಬ್ಬ ತನ್ನ ಮಲಗುವ ಕೋಣೆಯ ತೊಲೆಯ ಮೇಲೆ ಬರೆಸಿಕೊಂಡಿದ್ದ. ಒಮ್ಮೆ ತನ್ನ ಹೆಂಡತಿಯನ್ನೂ, ಸಣ್ಣ ಮಗನನ್ನೂ ಮನೆಯಲ್ಲಿ ಬಿಟ್ಟು ದಂಡಯಾತ್ರೆಗೆ ಹೋದ ರಾಜ ಮರಳಿ ಬರಲು ಹದಿನೈದು ವರ್ಷಗಳು ಕಳೆದಿದ್ದವು. ಬರುವಾಗ ರಾತ್ರಿಯಾಗಿತ್ತು. ನೇರವಾಗಿ ಶಯನಗೃಹವನ್ನು ಸೇರಿದ. ಅಲ್ಲಿ ಅವನು ನೋಡಿದ ದೃಶ್ಯ ಅವನನ್ನು ಕೆರಳಿಸಿತು. ಅವನ ಪತ್ನಿ ಒಬ್ಬ ಪುರುಷನೊಂದಿಗೆ ಮಲಗಿರುವುದನ್ನು ಕಂಡು ಸಿಟ್ಟಿನಿಂದ ಖಡ್ಗವನ್ನು ಸೆಳೆದು ಬೀಸಿಯೇ ಬಿಟ್ಟ. ಸುದೈವಕ್ಕೆ ಆ ಕತ್ತಿ ಮನೆಯ ತೊಲೆಗೆ ಬಡಿದು ನಿಂತಿತು. ತೊಲೆಯ ಮೇಲೆ ಬರೆದಿದ್ದ ಆ ಸಾಲುಗಳು ಅವನ ಕೋಪವನ್ನು ಇಳಿಸಿದವು. ನಂತರ ತಿಳಿದದ್ದು ಆ ಪುರುಷ ಮತ್ತಾರೂ ಆಗಿರದೆ ಯೌವನಕ್ಕೆ ಕಾಲಿರಿಸಿದ್ದ ಅವನ ಮಗನೇ ಆಗಿದ್ದ. ಅವನ ಕಣ್ಣು ಅವನಿಗೆ ಮೋಸ ಮಾಡಿತ್ತು.
ಪ್ರತ್ಯಕ್ಷವಾಗಿ ಕಂಡಿದ್ದನ್ನೇ ನಂಬಬಾರದೆಂದ ಮೇಲೆ ಕಿವಿಯಲ್ಲಿ ಕೇಳಿದ ಮಾತುಗಳ ಬಗ್ಗೆ ಇನ್ನಷ್ಟು ಎಚ್ಚರಿಕೆಯಿರಬೇಕು. ಸಂಬಂಧಗಳನ್ನು ಕೆಡಿಸುವ ವಿದ್ವೇಷವನ್ನು ಹರಡುವ ಪಿಶುನಗಳು ಎಲ್ಲೆಡೆಯಲ್ಲಿಯೂ ಇವೆ. ಅವರ ಮಾತನ್ನು ವಿವೇಕದ ಒರೆಗೆ ಹಚ್ಚದೆ ನಂಬಿದೆವೆಂದರೆ ಅಪಾಯ ಕಟ್ಟಿಟ್ಟ ಬುತ್ತಿ.
ಅದರಂತೆ ಆಘ್ರಾಣಿಸಿದ ಎಲ್ಲ ವಾಸನೆಗಳೂ ನಿಜವಾಗಿರಲಿಕ್ಕಿಲ್ಲ, ನಾವು ಮುಟ್ಟಿದ್ದೆಲ್ಲ ಸರಿಯಾಗಿಯೇ ಇರುತ್ತದೆ ಎಂದಿಲ್ಲ, ನಾಲಿಗೆಯೂ ಯಥಾರ್ಥ ರುಚಿಯನ್ನೇ ತಿಳಿಸುತ್ತದೆ ಎಂದೇನೂ ಇಲ್ಲ. ಹೀಗೆ”ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ ನೆಮ್ಮುವುದದಾರನೋ!’
ವೇದಾಂತದ ಯಥಾರ್ಥ-ಅಯಥಾರ್ಥಜ್ಞಾನಗಳ ಹೊಯ್ದಾಟವನ್ನು ಈ ಗಾದೆ ಮಾತು ಸೂಕ್ಷ್ಮವಾಗಿ ತಿಳಿಸಿಕೊಡುತ್ತದೆ. ಇನ್ನೊಂದು ಗಾದೆ ’ಬೆಳ್ಳಗಿರುವುದೆಲ್ಲ ಹಾಲಲ್ಲ, ಹೊಳೆಯುವುದೆಲ್ಲ ಚಿನ್ನವಲ್ಲ’ ಎಂಬ ಗಾದೆಯೂ ಇದಕ್ಕೆ ಪೂರಕವಾಗಿದೆ. ಸುಣ್ಣದ ನೀರೂ ಹಾಲಿನಂತೆ ತೋರಬಹುದು. ಅದರೆ ಅದನ್ನು ಪರಾಂಬರಿಸದೆ ಕುಡಿದರೆ?! ಹಗ್ಗದಲ್ಲಿಯೂ ಹಾವಿನ ಅಧ್ಯಾಸ ಕಂಡು ನಮ್ಮನ್ನು ಬೆದರಿಸಬಹುದು. ಕಣ್ಣಿಗೆ ತಂಪ ನೀಡುವ ಈ ಸುಂದರ ಜಗತ್ತೂ ಪರಾಂಬರಿಸಿದಾಗ ಮಿಥ್ಯೆಯಾಗಿ ತೋರಬಹುದು.
ಅಂತಹ ಸಂದರ್ಭಗಳಲ್ಲಿ ನಮಗೆ ಸಹಾಯ ಮಾಡುವುದು ವಿವೇಕ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸುವ ಶಕ್ತಿಯೇ ವಿವೇಕ. ಸಮಯಪ್ರಜ್ಞೆ ವಿವೇಕದ ಗೆಳೆಯ. ಅರಿಷಡ್ವರ್ಗ ವಿವೇಕದ ಶತ್ರು. ಯುಕ್ತಾಯುಕ್ತವಿವೇಕದಿಂದಲೇ ಯಥಾರ್ಥಜ್ಞಾನ ಸಾಧ್ಯ.
No comments:
Post a Comment