ಮಹಿಳಾ ದಿನಾಚರಣೆ ನಿಮಿತ್ತ
ವಿಶಿಷ್ಟ ಲೇಖನ ಸರಣಿ:
ಸನಾತನ ಭಾರತದ ಸ್ತ್ರೀರತ್ನಗಳು
ಭಾಗ – 8
ವೀರಮಾತೆ
ವಿದುಲಾ
ಸಂಧಾನಕ್ಕಾಗಿ ಹಸ್ತಿನಾವತಿಗೆ
ಬಂದ ಕೃಷ್ಣ ವಿದುರನ ಮನೆಯಲ್ಲಿ ಆಶ್ರಯ ಪಡೆದಿದ್ದ ಕುಂತಿಯನ್ನು ಭೇಟಿಯಾಗಿ ’ಈ ಸಂದಿಗ್ಧ
ಪರಿಸ್ಥಿತಿಯಲ್ಲಿ ಯುಧಿಷ್ಠಿರನಿಗೆ ನಿನ್ನ ಸಂದೇಶವೇನು?’ ಎಂದು ಕೇಳುತ್ತಾನೆ. ಆಗ ಕುಂತಿ
ವೀರಮಾತೆ ವಿದುಲಾಳ ಕಥೆಯನ್ನು ಹೇಳುತ್ತಾಳೆ. (ಮಹಾಭಾರತದ ಉದ್ಯೋಗಪರ್ವ ೧೩೩ನೇ ಅಧ್ಯಾಯ –
ವಿದುಲೋಪಾಖ್ಯಾನ)
ಸೌವೀರ ರಾಜ್ಯದ ಶೂರ ಧೀರ
ಕ್ಷತ್ರಿಯಾಣಿ ರಾಜಮಾತೆ ವಿದುಲಾ ಸರ್ವಶಾಸ್ತ್ರಪಾರಂಗತಳಾಗಿದ್ದಳು. ಅವಳ ದೂರದರ್ಶಿತ್ವ,
ಚಿಂತನಶೀಲತೆ, ಸಂಯಮಗಳಿಂದ ಭರತಖಂಡದ ರಾಜರೆಲ್ಲರ ಆದರಾಭಿಮಾನಕ್ಕೆ ಪಾತ್ರಳಾಗಿದ್ದಳು.
ದುರ್ದೈವವಶಾತ್ ಸಿಂಹದ ಹೊಟ್ಟೆಯಲ್ಲಿ ನರಿ ಹುಟ್ಟಿತೊ ಎಂಬಂತೆ ಹೇಡಿ ಮಗನೊಬ್ಬ ಹುಟ್ಟಿದ್ದ. ಅವನ
ಹೆಸರು ಸಂಜಯ. ಸಂಜಯನ ಅರಾಜಕ ಆಳ್ವಿಕೆಯ ದುರುಪಯೋಗವನ್ನು ಪಡೆದುಕೊಂಡ ಸಿಂಧು ದೇಶದ ರಾಜ
ಯುದ್ಧಕ್ಕೆ ಬಂದ. ಯುದ್ಧದಲ್ಲಿ ಕೈಸೋತ ಸಂಜಯ ಮನೆಗೆ ಮರಳಿ ಮಲಗಿದ. ಇದು ಆ ವೀರಮಾತೆಯನ್ನು
ಕೆರಳಿಸಿತು. ಮಲಗಿದ್ದ ಮಗನನ್ನು ಬಡಿದೆಬ್ಬಿಸಿದಳು. ಯುದ್ಧಭೂಮಿಯಿಂದ ಪಲಾಯನಗೈದ ಅವನನ್ನು
ಜರೆದಳು.
“ಛಿ! ನೀನೂ ನನ್ನ ಮಗನೆ?
ನಪುಂಸಕನಂತೆ ಬಂದು ಮಲಗಿರುವೆಯಲ್ಲ. ದೇಹದಲ್ಲಿ ಪ್ರಾಣವಿದ್ದೂ ಹೇಗೆ ಪರಾಜಿತನಾದೆ? ನಿನ್ನ
ಆತ್ಮಕ್ಕೇ ನೀನು ಅಪಮಾನ ಮಾಡುತ್ತಿರುವೆಲ್ಲ! ಕ್ಷತ್ರಿಯನಾದವನು ಪ್ರಾಣ ಹೋದರೂ ಪೌರುಷವನ್ನು
ಬಿಡಕೂಡದು. ಶತ್ರುವಿನ ಮೇಲೆ ಸ್ವಲ್ಪವೂ ದ್ವೇಷ,ರೋಷ ಇಲ್ಲದವನು ಅದೆಂಥ ಕ್ಷತ್ರಿಯನು. ಹೋಗು,
ಹೋರಾಡು. ಪರಿಶ್ರಮದಿಂದ ಜಯವನ್ನು ಪಡೆ. ಇಲ್ಲವೆ ವೀರಸ್ವರ್ಗವನ್ನು ಹೊಂದು.”
ಅಮ್ಮನ ಸೆರಗಿನಲ್ಲಿ
ಅಡಗಿದಂತಿದ್ದ ಮಗ ಹೇಳಿದ “ಅಮ್ಮ! ಬೇರೆ ಯಾರದೋ ಮಕ್ಕಳಿಗೆ ಹೇಳಿದಂತೆ ಹೇಳುತ್ತಿರುವೆಯಲ್ಲ ಯುದ್ಧದಲ್ಲಿ
ನಾನು ಸತ್ತರೆ ನಿನಗೇ ನಷ್ಟವಲ್ಲವೆ? ನಾನಿಲ್ಲದಿರೆ ಒಡವೆಗಳನ್ನು ಧರಿಸಿ ನೀನು ಸಂತೋಷದಿಂದಿರಲು
ಸಾಧ್ಯವೆ?.” ವಿದುಲಾ ಮಗನೆಡೆಗೆ ನೋಡಿ ಎಂದಳು “ಜಗತ್ತಿನಲ್ಲಿ ಎಲ್ಲರ ನಿಂದೆಗೆ ಪಾತ್ರನಾಗುವ ಇಂತಹ
ಮಗನಿದ್ದೂ ಏನು ಪ್ರಯೋಜನ? ಈ ಭರತಖಂಡದ ಯಾವ ಮಾತೆಗೂ ಇಂತಹ ಹೇಡಿ ಮಗ ಹುಟ್ಟದಿರಲಿ. ನೀನು ಸಿಂಧು
ದೇಶದ ಸೈನಿಕರನ್ನು ಚೆಂಡಾಡಿ ಬಾ. ಆಗ ನಾನು ನಿನ್ನನ್ನು ಪ್ರಶಂಸಿಸುತ್ತೇನೆ”.
ಅಳುಬುರುಕ ಮಗ ಮತ್ತೆ ನೆವ
ಹೇಳಿದ. “ ನನ್ನಲ್ಲಿ ಹಣ ಇಲ್ಲ, ಜನರಿಲ್ಲ. ಹೇಗೆ ಯುದ್ಧ ಮಾಡಲಿ?” ವಿದುಲೆ ಶಾಂತತೆಯಿಂದ
ಉತ್ತರಿಸಿದಳು - “ಎಂತಹ ಕಠಿಣ ಪರಿಸ್ಥಿತಿಯಲ್ಲೂ ರಾಜನಾದವನು ಧೃತಿಗೆಡಬಾರದು. ಗಾಬರಿಯಾದರೂ
ತೋರಿಸಿಕೊಳ್ಳಬಾರದು. ನಮ್ಮಲ್ಲಿ ರಹಸ್ಯ ಹಣವಿದೆ. ನಮಗೆ ನಿಷ್ಠಾವಂತರಾದ ಜನರಿದ್ದಾರೆ. ನಿನ್ನ
ಬುದ್ಧಿವಂತಿಕೆಯನ್ನು ತೋರಿಸಲು ಇದು ಸಕಾಲ. ಏಳು, ವಿಳಂಬಿಸಬೇಡ.”
ಚಾವಟಿಯ ಏಟನ್ನು ತಿಂದ
ಕುದುರೆಯಂತೆ ನೆಗೆದ ಆ ಮಗ ತಾಯಿಯ ಚರಣಕ್ಕೆರಗಿ ಯುದ್ಧಕ್ಕೆ ಸನ್ನದ್ಧನಾದ.
ಕುಂತಿ ಕೃಷ್ಣನಿಗೆಂದಳು –
’ವಿದುಲೆ ಸಂಜಯನಿಗೆ ಹೇಳಿದ ಮಾತೇ ಯುಧಿಷ್ಠಿರನಿಗೆ ನಾನು ಹೇಳಬೇಕಾಗಿರುವುದು.’
ಸಂಜಯನಿಗೆ ಯುದ್ಧದಲ್ಲಿ
ಜಯವಾಯಿತೋ, ವೀರಮರಣವಾಯಿತೋ ತಿಳಿದಿಲ್ಲ. ವಿದುಲೆ ಮಾತ್ರ ರಾಷ್ಟ್ರಪ್ರೇಮಿಗಳ ಹೃದಯಸಿಂಹಾಸನದಲ್ಲಿ
ವೀರಮಾತೆಯಾಗಿ ಪಟ್ಟಾಭಿಷಿಕ್ತಳಾದಳು. ಅಂತಹ ಧೀರವನಿತೆಯ ಸಂತಾನವಾದ ಭರತಖಂಡದ ಎಲ್ಲ ಮಾತೆಯರಿಗೆ
ಮಹಿಳಾ ದಿನಾಚರಣೆಯ ಸದಾಶಯಗಳು.
ಯಾ ದೇವಿ ಸರ್ವಭೂತೇಷು ಸ್ಫೂರ್ತಿರೂಪೇಣಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮ: ||
No comments:
Post a Comment