ಲೇಖನ: ಮಹಾಬಲ ಭಟ್, ಗೋವಾ
ಡಿ.ವಿ.ಜಿ. ಎಂದಾಕ್ಷಣ ನೆನಪಿಗೆ ಬರುವುದು ಅವರ ಮಂಕುತಿಮ್ಮನ ಕಗ್ಗ. ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಈ ಗ್ರಂಥ ಕನ್ನಡದಲ್ಲಿಯೇ ಅದ್ವಿತೀಯವಾದುದು. ಆದರೆ ಈ ಮಂಕುತಿಮ್ಮನಿಗೆ ಒಬ್ಬ ತಮ್ಮನಿದ್ದಾನೆ ಎನ್ನುವ ವಿಚಾರ ಪ್ರಾಯಃ ಅನೇಕರಿಗೆ ಗೊತ್ತಿಲ್ಲ. ಮರುಳಮುನಿಯನ ಕಗ್ಗ ಎಂದು ಕರೆಯಲ್ಪಡುವ ಈ ಪುಸ್ತಕ ಅಷ್ಟೊಂದು ಪ್ರಸಿದ್ಧಿಯನ್ನು ಪಡೆದಿಲ್ಲ. ಅದಕ್ಕೆ ಕಾರಣ ಮಂಕುತಿಮ್ಮನ ಕಗ್ಗಕ್ಕೆ ಹೋಲಿಸಿದರೆ ಸ್ವಲ್ಪ ಕಠಿಣವೆನ್ನಬಹುದಾದ ಭಾಷಾಶೈಲಿ ಹಾಗೂ ವಿಷಯದ ಗಹನತೆ. ಮಂಕುತಿಮ್ಮನ ಕಗ್ಗವನ್ನು ಸಾಮಾನ್ಯರಿಗಾಗಿ ಬರೆದ ಡಿ.ವಿ.ಜಿ. ಯವರು ಮರುಳಮುನಿಯನ ಕಗ್ಗವನ್ನು ಚಿಂತಕರಿಗಾಗಿ, ಆಧ್ಯಾತ್ಮಜ್ಞಾನಪಿಪಾಸುಗಳಿಗಾಗಿ ಬರೆದಿದ್ದಾರೆ ಎನ್ನಬಹುದು. ಮರುಳಮುನಿಯನ ಕಗ್ಗ(ಕಾವ್ಯಾಲಯ:ಪ್ರಕಾಶಕರು:ಮೈಸೂರು)ದ ಪ್ರಸ್ತಾವನೆಯಲ್ಲಿ ವಿದ್ವಾನ್ ರಂಗನಾಥ ಶರ್ಮಾ ಹೇಳುವಂತೆ-ಈ ಮರುಳಮುನಿಯನು ಮಂತ್ರದ್ರಷ್ಟಾರರಾದ ಮುನಿಗಿಂತ ಕಡಿಮೆಯವನಲ್ಲ. ಮಂಕುತಿಮ್ಮನ ತಮ್ಮನಾದರೂ ಅಣ್ಣನಿಗೆ ಸರಿದೊರೆಯಾಗಿ ನಿಲ್ಲುತ್ತಾನೆ. ಕೆಲವೆಡೆ ಅವನನ್ನೂ ಮೀರಿಸುತ್ತಾನೆ ಮಂಕುತಿಮ್ಮನ ಜೀವನದರ್ಶನವನ್ನು ಅರ್ಥೈಸಿಕೊಂಡಿರುವ ವ್ಯಕ್ತಿ ಮರುಳಮುನಿಯನ ಕಗ್ಗವನ್ನು ಓದಲು ಅರ್ಹನಾಗುತ್ತಾನೆ.
ಡಿ.ವಿ.ಜಿ.ಯವರು ತಮ್ಮ ಗ್ರಂಥವನ್ನು ’ಕಗ್ಗ’ ಎಂದು ಕರೆದುದೇ ವಿಚಿತ್ರವಾಗಿದೆ. ಕಗ್ಗ ಎಂದರೆ ಅಶಿಕ್ಷಿತರ ಮಾತು. ಅವರು ತಮ್ಮ ನಾಯಕನಿಗೆ ’ಮಂಕುತಿಮ್ಮ’ ಹಾಗೂ ’ಮರುಳಮುನಿಯ’ ಎಂದು ಅಭಿಧಾನವನ್ನಿತ್ತಾಗ ತಿಮ್ಮ, ಮುನಿಯ ಇತ್ಯಾದಿ ಹೆಸರುಗಳನ್ನೇ ಹೆಚ್ಚಾಗಿ ಬಳಸುವ ಜಾತಿಯವರನ್ನು ಡಿ.ವಿ.ಜಿಯವರು ಅವಹೇಳನಮಾಡಿದ್ದಾರೆ ಎಂದು ಆಕ್ಷೇಪಿಸಿದವರೂ ಇದ್ದಾರೆ. ಆದರೆ ಇವರ ಮೂಲಕ ಗಹನವಾದ ಜೀವನತತ್ತ್ವ್ವವನ್ನು ನಿರೂಪಿಸಿ, ಅದನ್ನು ತಿಳಿದಿರದ ಸುಂದರ ನಾಮಧೇಯಶೋಭಿತರಾದ ನಾವು ಓದುಗರೇ ಮಂಕು ಅಥವಾ ಮರುಳು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಡಿ.ವಿ.ಜಿಯವರು ತಮ್ಮನ್ನು ’ಡಿ.ವಿ.ಜಿ. ಸಂಜ್ಞಿತ: ಕೋಪಿ ಬ್ರಹ್ಮಪತ್ತನಭಿಕ್ಷುಕ:’- ಡಿವಿಜಿ ಎಂಬ ಹೆಸರಿನ ಬ್ರಹ್ಮನ ಪಟ್ಟಣದ ಒಬ್ಬ ಭಿಕ್ಷುಕ ಎಂದು ಕರೆದುಕೊಂಡಿದ್ದಾರೆ. ಯೋಗಿಗಳಂತೆ ತಪಸ್ಸುಮಾಡಿ ಮೋಕ್ಷವನ್ನು ಪಡೆಯುವ ಯೋಗ್ಯತೆಯಿಲ್ಲದೆ ’ಅಂಧವತ್ ಜಡವಚ್ಚೈವ ಮೂಕವಚ್ಚ ಮಹೀಂ ಚರೇತ್’ ಎಂಬ ನುಡಿಯಂತೆ ಬ್ರಹ್ಮಪುರಿಯಲ್ಲಿ ಭಿಕ್ಷೆ ಎತ್ತುತ್ತಿರುವ (ಅ)ಸಾಮಾನ್ಯ ಭಿಕ್ಷುಕ ತಾನು ಎಂಬುದನ್ನು ಮಾರ್ಮಿಕವಾಗಿ ಸೂಚಿಸಿದ ಪರಿ ಇದು. ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಲೌಕಿಕಜೀವನದ ಅಸಾರತೆಯನ್ನು ತಿಳಿದು ಆಳವಾದ ಆಧ್ಯಾತ್ಮ ಚಿಂತನೆಗಿಳಿದ ಡಿವಿಜಿಯವರ ಪರಿಪಕ್ವ ವಿಚಾರಗಳು ಮರುಳಮುನಿಯನ ಕಗ್ಗದಲ್ಲಿ ವ್ಯಕ್ತವಾಗಿವೆ.
ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ |
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು||
ನುಗ್ಗಿ ಬರುತಿರೆ ಲೋಕದ ಪ್ರಶ್ನೆಗಳ ದಾಳಿ|
ಉಗ್ಗು ಬಾಯ್ಚಪಲವಿದು -ಮರುಳಮುನಿಯ||
ನಿಗರ್ವ, ವಿಧೇಯತೆ, ಸೌಜನ್ಯಗಳು ಡಿವಿಜಿಯವರ ಅಸಾಧಾರಣಗುಣಗಳು. ’ತಿಳಿಸಿದೊಡೆ ತಿದ್ದಿಕೊಳುವ ಗುಣವುಂಟು’ ಎಂದು ಮಂಕುತಿಮ್ಮ ಹೇಳಿದರೆ ಮರುಳಮುನಿಯ ’ಸರಿನೋಡಿಕೊಡುವ ಸಜ್ಜನರಿಹರೆ ಲೋಕದಲಿ ಶರಣೆಪ್ಪನವರಿಂಗೆ’ ಎನ್ನುತ್ತಾನೆ. ಮರುಳಮುನಿಯನ ಮೂಲಕ ತನ್ನ ಮನಸ್ಸನ್ನು ಅವರು ಉದ್ಘಾಟಿಸಿದ ಪರಿಯನ್ನು ನೋಡಿ-
ಮರುಳಮುನಿಯನ ಮನಸು ಸರಳಬಾಳ್ವೆಯ ಕನಸು|
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು ||
ಕೆರೆಯಿನೆದ್ದೆಲೆಯೆರಚಿ ತಣಿವು ತುಂತುರನಿನಿತು |
ಮರಳಿ ತೆರೆ ಸೇರ್ವುದಲ-ಮರುಳಮುನಿಯ||
ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರಲು ಬಯಸಿದ್ದ ಡಿವಿಜಿಯವರು ’ಮರಣವನು ಬೇಡದಿರು ಜೀವಿತವ ಬೇಡದಿರು ತರುವುದೆಲ್ಲವ ಸಕಾಲಕ್ಕೆ ಕರ್ಮಚಕ್ರಂ’ ಎಂಬುದನ್ನು ನಂಬಿದವರಾಗಿದ್ದರು. ’ವಿಹಿತಗೈವನು ವೈದ್ಯ ನೀನಲ್ಲ ರೋಗಿ ನೀಂ ಗ್ರಹಿಸು ವಿಧಿಯೌಷಧವ’ ಎಂಬುದನ್ನು ತಿಳಿದವರಾಗಿದ್ದರು. ಸುಖ ಎಂದರೆ ಏನೆಂದು ತಿಳಿಯದೆಯೇ ನಾವು ಸುಖವನ್ನು ಬಯಸುತ್ತೇವೆ. ನಮ್ಮ ಸುಖ ಯಾವ ರೀತಿಯದ್ದು?
ತುರಿಬಂದ ಮೈಯ ಬೆರಲಿಂ ಕೆರೆವುದೊಂದು ಸುಖ |
ಎರೆದು ಬಿಸಿನೀರ ಪಲ್ಕಿರಿವುದೊಂದು ಸುಖ ||
ಉರಿಯೆಂದು ಲೇಪಗಳ ಸವರಲಿನ್ನೊಂದು ಸುಖ |
ನರಸುಖಗಳಿವು ತಾನೆ? - ಮರುಳಮುನಿಯ ||
ಕೈತುಂಬಾ ಹಣ ಬಂದರೆ ನಾವು ಸುಖಿಗಳಾಗುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಈ ಜಗತ್ತಿನಲ್ಲಿ ಎಷ್ಟೋ ಹಣವಂತರಾದ ಬಡವರಿದ್ದಾರೆ, ಧನಹೀನರಾದ ಶ್ರೀಮಂತರಿದ್ದಾರೆ.
ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಜನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳಮುನಿಯ ||
ಉಪನಿಷದ್ವಾಕ್ಯ ’ತತ್ತ್ವಮಸಿ’ಯಲ್ಲಿ ಮರುಳಮುನಿಯನಿಗೆ ಅಪರಿಮಿತ ವಿಶ್ವಾಸ. ’ಜೀವ ತಾಂ ಬ್ರಹ್ಮದೈಶ್ವರ್ಯವದ ಗೌರವಿಸು’ ಎನ್ನುತ್ತಾನೆ. ಆದರೆ ಅಹಂಕಾರಕ್ಕೆ ಒಳಗಾಗದೆ ಅವನ ನೆನೆದೂಟವುಣು ಎಂದು ಸಲಹೆ ನೀಡುತ್ತಾನೆ. ಒಂದೆಡೆ ’ನಂಬು ನೀ ದೈವವನು.... ನಂಬಿಕೆಯ ಮಾತ್ರದಿಂದಿಂಬುಗೊಳುವುದು ಜೀವ’ ಎಂದ ಅವನು ನಮ್ಮ ಆಲಸ್ಯ ನಿವಾರಣೆಗಾಗಿ ’ನೆಚ್ಚದಿರು ದೈವವನು ಬೆಚ್ಚದಿರದಾರಿಗಂ ಎಚ್ಚರಿರು ನಿನ್ನ ಸತ್ತ್ವದಲಿ ನೀಂ ನಿಂತು ಎಮದು ಎಚ್ಚರಿಕೆಯ ಮಾತನ್ನೂ ಆಡುತ್ತಾನೆ.
ಹೀಗೆ ಮಂಕುತಿಮ್ಮನ ಕಗ್ಗ ಭಗವದ್ಗೀತೆಯಾದರೆ ಮರುಳಮುನಿಯನ ಕಗ್ಗ ಉಪನಿಷತ್ತುಗಳಿದ್ದಂತೆ. ನಮ್ಮ ಜೀವನದ ಪ್ರತಿ ಹೆಜ್ಜೆಗೂ ಮಾರ್ಗದರ್ಶನ ಮಾಡಬಲ್ಲ ಕಗ್ಗ ಇತರ ಕಾವ್ಯಗಳಂತೆ ಓದಿ ಬದಿಗಿರಿಸುವಂಥ ಪುಸ್ತಕವಲ್ಲ. ಅವರೇ ಹೇಳುವಂತೆ-
ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ |
ಮನನಾನುಸಂಧಾನಕಾದುದೀ ಕಗ್ಗ ||
ನೆನೆನೆನೆಯುತೊಂದೊಂದು ಪದ್ಯವನದೊಮ್ಮೊಮ್ಮೆ
ಅನುಭವಿಸಿ ಚಪ್ಪರಿಸೊ-ಮರುಳಮುನಿಯ ||
ತಮಿಳುನಾಡಿನ ದಾರ್ಶನಿಕಕವಿ ತಿರುವಲ್ಲುವರನ ತಿರುಕ್ಕುರಲ್ ಕೃತಿಗೆ ಯಾವರೀತಿಯಲ್ಲೂ ಕಡಿಮೆಯಿಲ್ಲದ ಹೊತ್ತಿಗೆಗಳು ಮಂಕುತಿಮ್ಮನ ಕಗ್ಗ ಹಾಗೂ ಮರುಳಮುನಿಯನ ಕಗ್ಗ. ಆದರೆ ತಮಿಳರು ತಿರುವಲ್ಲುವರನಿಗೆ ಕೊಡುವ ಕಾಲುಭಾಗ ಗೌರವವನ್ನೂ ನಾವು ಡಿವಿಜಿಯವರಿಗೆ ಕೊಡುತ್ತಿಲ್ಲ ಎಂಬುದಕ್ಕೆ ಕಾರಣ ಕನ್ನಡಿಗರ ಅಭಿಮಾನಶೂನ್ಯತೆಯೋ ಅಥವಾ ಅಜ್ಞಾನವೊ ತಿಳಿಯುತ್ತಿಲ್ಲ. ಡಿವಿಜಿಯವರಿಗೇನು ಜ್ಞಾನಪೀಠ ಪ್ರಶಸ್ತಿ ಕೊಡಬೇಕಾಗಿಲ್ಲ. ಅವರ ಕಗ್ಗದ ಎರಡು ಸಾಲುಗಳನ್ನು ನಾವು ತಿಳಿದಿದ್ದರೆ ಸಾಕು ಅದೇ ಅವರಿಗೆ ನಾವು ಸಲ್ಲಿಸುವ ಸಾರ್ಥಕ ಶ್ರದ್ಧಾಂಜಲಿ.
2 comments:
Tumba artapurnavada barahaDVG yavarige Ananta koti pranamagalu.
GGHegde,Talekeri
Dhanyavada
Post a Comment