Sunday, August 4, 2013

ಮಿತ್ರರ ದಿನ

ಮೂಲತ: ನನಗೆ ದಿನಗಳಲ್ಲಿ ನಂಬಿಕೆಯಿಲ್ಲದಿದ್ದರೂ ಇತ್ತೀಚೆಗೆ ಇವು ವಿಷಯದಲ್ಲಿ ಚಿಂತನೆಯ ಕಿಡಿ ಹೊತ್ತಿಸುತ್ತಿರುವುದರಿಂದ ಇಂತಹ ದಿನಗಳು ಬೇಕೇನೊ ಅನ್ನಿಸುತ್ತಿವೆ. ಇಂದೂ ಹಾಗೇ ಆಯಿತು. ನಾವು ಯಾವುದೋ ದೇಶದ ಸಂಪ್ರದಾಯವನ್ನು ಅನುಸರಿಸಿ ಅಗಸ್ಟ್ ತಿಂಗಳ ಮೊದಲ ಭಾನುವಾರ ಫ್ರೆಂಡ್ ಶಿಪ್ ಡೇ ಆಚರಿಸುತ್ತಿದ್ದರೂ ನಮ್ಮ ಸಂಸ್ಕೃತಿಯಲ್ಲಿ ಮಿತ್ರನ ಸ್ಥಾನವೇನು ಎಂಬುದನ್ನು ಚಿಂತಿಸುವ ಮೂಲಕ ಅದನ್ನುಸ್ನೇಹಿತರ ದಿನವನ್ನಾಗಿ ಮಾಡಬಹುದು ಎಂಬ ಆಲೋಚನೆ ಹೊಳೆಯಿತು. ಅದಕ್ಕೇ ಕೀಲಿಮಣೆಗಳ ಮೇಲೆ ಕೈಯಾಡಿಸಲು ಆರಂಭಿಸಿರುವೆ.

ಇಂದು ಪ್ರಾಯ ಮಿತ್ರರಿಲ್ಲದವರಿಲ್ಲ. ಇಂದು ಮಿತ್ರತ್ವಕ್ಕೆ ಭೌಗೋಲಿಕ ಸೀಮೆಯೂ ಇಲ್ಲ. ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳು ಸ್ನೇಹಕ್ಕೆ ಬೇರೆಯದೇ ಭಾಷ್ಯ ಬರೆದಿವೆ. ಆದರೆ ಅವೆಲ್ಲ ಹರಟೆಹೊಡೆಯುವ ವೇದಿಕೆಗಳಾಗಿವೆಯೇ ಹೊರತು ಸ್ನೇಹದ ಮೂಲ ತತ್ತ್ವವನ್ನು ಮುಟ್ಟಿಲ್ಲ ಅನ್ನಿಸುತ್ತಿದೆ. ತಮ್ಮ ವಿಚಾರಗಳನ್ನು ಶೆರ್ ಮಾಡುವಷ್ಟು ಆಸಕ್ತಿ ಬೇರೆಯವರ ವಿಚಾರವನ್ನು ಕೇಖುವುದರಲ್ಲಿ, ಅದಕ್ಕೆ ಸ್ಪಂದಿಸುವಲ್ಲಿ ಇಲ್ಲವೇನೋ ಅನ್ನಿಸುತ್ತದೆ. ಇದ್ದರೂ ಅದು ಒಂದು ಲೈಕ್ ಗೋ, ಒಂದು ಕೊಮೆಂಟ್ ಗೋ ಅಥವಾ ಒಂದು + ಗೋ ಸೀಮಿತ. ಇದು ಸ್ನೇಹದ ಒಂದು ಭಾಗ ಮಾತ್ರವೇ ಹೊರತು ಅದೇ ಸ್ನೇಹದ ವ್ಯಾಖ್ಯೆಯಲ್ಲ.

ಸ್ನೇಹಿತರು ಯಾಕೆ ಬೇಕು ಎಂದು ಕೇಳಿದರೆ ನಮ್ಮ ವಿಚಾರವನ್ನು ಹಂಚಿಕೊಳ್ಳಲು ಎಂಬುದು ಬಹುತೇಕ ಜನರಿಂದ ಬರುವ ಉತ್ತರ. ’ಅಮಿತ್ರಸ್ಯ ಕುತ: ಸುಖಮ್’ (ಮಿತ್ರರಿಲ್ಲದವರಿಗೆ ಸುಖವೆಲ್ಲಿ?) ಎಂದು ಕೇಳುವ ಸುಭಾಷಿತ ಮಿತ್ರನ ಸ್ಥಾನ ಅಷ್ಟೇ ಅಲ್ಲ ಎಂದು ಸೂಚಿಸುತ್ತದೆ. ಡಿ.ವಿ.ಜಿ.ಯವರು ಒಂದೆಡೆ ಮಾರ್ಮಿಕವಾಗಿ ಹೇಳುತ್ತಾರೆ.

ಕಾರಿರುಳೊಳು ಆಗಸದಿ ತಾರೆ ನೂರಿದ್ದೇನು?|
ದಾರಿಗನ ಕಣ್ಗೆ ಬೇಕೊಂದು ಮನೆ ಬೆಳಕು ||
ದೂರದಾ ದೈವವಂತಿರಲಿ, ಮಾನುಷಸಖನ |
ಕೋರುವುದು ಬಡಜೀವಮಂಕುತಿಮ್ಮ ||

ಮಾಡಲೇಬೇಕೆಂದು ಕಟ್ಟಪ್ಪಣೆ ಮಾಡುವ ಪ್ರಭುಸಮ್ಮಿತ, ವಯ್ಯಾರತೋರುವ ಕಾಂತಾಸಮ್ಮಿತ ಉಪದೇಶಗಳಿಗಿಂತ ವಿಭಿನ್ನವಾದದ್ದು ಮಿತ್ರಸಮ್ಮಿತ ಉಪದೇಶ. ಸಾಮಾನ್ಯವಾಗಿ ಸ್ನೇಹ ಬೆಳೆಯುವುದು ಸಮಾನ ವಯಸ್ಕರ, ಸಮಾನ ಮನಸ್ಕರ ಮಧ್ಯೆ ಆಗಿರುವುದರಿಂದ  ಒಬ್ಬರೊನ್ನಬ್ಬರು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ ಸಲಹೆಗಳು ಅಪ್ಯಾಯಮಾನವಾಗಿ ತೋರುವುದು. ಕಾಂತಾಸಮ್ಮಿತದಲ್ಲಿ ಪ್ರೀತಿ ಅಧಿಕವಿದ್ದರೂ ಹಚ್ಚು ಕಾಳಜಿ ಇರುವುದು ಮಿತ್ರಸಮ್ಮಿತದಲ್ಲಿಯೇ.

ಮಹಾಭಾರತದ ಕರ್ಣ ಒಬ್ಬ ಆದರ್ಶ ಮಿತ್ರ ಎನ್ನುವುದು ನಮಗೆ ಗೊತ್ತು. ಕೃಷ್ಣ ಕುರುಕುಲದ ಸಾರ್ವಭೌಮ ಪದವಿಯ ಆಮಿಷ ಒಡ್ಡಿದಾಗಲೂ, ಪಾಂಡವರು ತನ್ನ ಸಹೋದರರು ಎಂಬ ನಿಜ ತಿಳಿದಾಗಲೂ ತನ್ನ ಮಿತ್ರ ದುರ್ಯೋಧನನಿಗಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟಿದ್ದ ಅವನು. ಸುಯೋಧನನಾದರೂ ಅಷ್ಟೇ ತಾನಿಲ್ಲದಾಗಲೂ ತನ್ನ ಅಂತ:ಪುರವನ್ನು ಪ್ರವೇಶಿಸಿ ತನ್ನ ಪತ್ನಿಯೊಡನೆ ಪಗಡೆಯಾಡುವಷ್ಟು ಸಲುಗೆಯನ್ನು ತನ್ನ ಮಿತ್ರ ಕರ್ಣನಿಗೆ ಕೊಟ್ಟಿದ್ದ. ಇಷ್ಟೆಲ್ಲ ಇದ್ದರೂ ಅವರ ಮಿತ್ರತ್ವಕ್ಕೆ ನಾವು ಮನ್ನಣೆ ಕೊಡುವುದಿಲ್ಲ. ಅದಕ್ಕೆ ಒಂದೇ ಕಾರಣ ಸುಯೋಧನ ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದರೂ ಕರ್ಣ ಅವನನ್ನು ತಿದ್ದದೆ ಹೋದದ್ದು ಒಂದು ಗಾಜಿನ ತುಂಡು ಸಹ ಚಿನ್ನದ ಪಕ್ಕದಲ್ಲಿಟ್ಟಾಗ ಚಿನ್ನಕ್ಕಿಂತ ಹೆಚ್ಚಾಗಿ ಹಳದಿ ರತ್ನದಂತೆ ಹೊಳೆಯುತ್ತದೆ. ಹಾಗೆಯೇ ಸಜ್ಜನರ ಸಂಗದಲ್ಲಿರುವ ಸಾಮಾನ್ಯನೂ ರತ್ನದಂತಹ ಮನುಷ್ಯನಾಗುತ್ತಾನೆ. ದುರ್ಯೋಧನನಲ್ಲಿ ಇಂತಹ ಬದಲಾವಣೆಯನ್ನು ತರುವಲ್ಲಿ ಕರ್ಣನ ಸ್ನೇಹ ಯಶಸ್ವಿಯಾಗಲಿಲ್ಲ.

ಸಂಸ್ಕೃತದ ಸುಭಾಷಿತವೊಂದು ಗೆಳೆಯನ ಲಕ್ಷಣವನ್ನು ಹೇಳುತ್ತದೆ.

ಪಾಪಾನ್ನಿವಾರಯತಿ ಯೋಜಯತೇ ಹಿತಾಯ
ಗುಹ್ಯಾನಿ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಜಹಾತಿ ದದಾತಿ ಕಾಲೇ
ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತ: ||

ನಮ್ಮ ಪಾಪವನ್ನು ತೊಳೆದು ಒಳ್ಳೆಯ ಕಾರ್ಯದಲ್ಲಿ ತೊಡಗಿಸುವವ ನಮ್ಮ ನಿಜವಾದ ಮಿತ್ರ. ಕಾದ ಕಬ್ಬಿಣದ ಕಾವಲಿಯಲ್ಲಿ ಬಿದ್ದ ನೀರಿನ ಹನಿ ಹೇಳ ಹೆಸರಿಲ್ಲದಂತೆ ನಾಶವಾಗಿ ಬಿಡುತ್ತದೆ. ಅದೇ ಕಮಲದೆಲೆಗಳ ಮೇಲಿದ್ದರೆ ಮುತ್ತಿನಂತೆ ತೋರುತ್ತದೆ. ಮತ್ತೆ ಅದೇ ಸ್ವಾತಿ ಮಳೆಯ ನೀರು ಸಮುದ್ರದ ಚಿಪ್ಪಿನಲ್ಲಿ ಬಿದ್ದರೆ ಮುತ್ತೇ ಆಗಿಬಿಡುತ್ತದಂತೆ. ಅದಕ್ಕೆ ಕಾರಣ ನೀರಿನ ಮಹಿಮೆಯಲ್ಲ. ನೀರು ಬೀಳುವ ಜಾಗದ ಮಹಿಮೆ. ಅದರಂತೆ ನಮ್ಮ ಮಿತ್ರರಾರು ಎನ್ನುವುದು ಸಮಾಜದಲ್ಲಿ ನಮ್ಮ ಸ್ಥಾನಮಾನವನ್ನು ನಿರ್ಧರಿಸುತ್ತದೆ.

ರಹಸ್ಯರಕ್ಷಣೆ ಮಿತ್ರನ ಪರಮ ಕರ್ತವ್ಯ. ಒಬ್ಬ ಮಿತ್ರನ ಹೃದ್ಗತ ವಿಚಾರವನ್ನು ಇನ್ನೊಬ್ಬ ಮಿತ್ರನಲ್ಲಿ ಹಂಚಿಕೊಳ್ಳುವವ ಸನ್ಮಿತ್ರನಾಗಲಾರ. ಅದೇ ರೀತಿ ಮಿತ್ರನ ಗುಣವನ್ನು ಜಗತ್ತಿಗೆ ತೋರುವ ಕೆಲಸವನ್ನೂ ಸನ್ಮಿತ್ರ ಮಾಡುತ್ತಾನೆ.

ಉತ್ಸವದಲ್ಲಿ ನಮ್ಮ ಮಿತ್ರರಾಗಿರುವವರು ದು:ಖದಲ್ಲಿ ಅದೇ ರೀತಿ ಇರುತ್ತಾರೆಂದಿಲ್ಲ. ಕೈಯಲ್ಲಿ ಹಣವಿರುವಾಗ ನೀನೇ ಚಂದ್ರ ನೀನೇ ಇಂದ್ರ ಎನ್ನುವ ಗೆಳೆಯರು ಬಡತನದಲ್ಲಿ ಜೊತೆಗಿರುತ್ತಾರೆಂದಿಲ್ಲ. ಅರಮನೆಯಲ್ಲಿ ಜೊತೆಗಿರುವವರು ಶ್ಮಶಾನಕ್ಕೆ ನಮ್ಮ ಜೊತೆ ಬರುತ್ತಾರೆಂದಿಲ್ಲ. ಆಪತ್ತಿನಲ್ಲಿ ನಮ್ಮ ನ್ನು ಬಿಟ್ಟು ಹೋಗದವನೇ ನಿಜವಾದ ಗೆಳೆಯ. ’ವ್ಯಸನೇ ಮಿತ್ರಪರೀಕ್ಷಾಎಂಬ ಮಾತೇ ಇದೆ.

ಮಿತ್ರತ್ವಕ್ಕೆ ಸಾಮೀಪ್ಯದ ಆವಶ್ಯಕತೆಯಿಲ್ಲ. ಭೂಮಿಯ ಮೇಲಿನ ನವಿಲು ಹಾಗೂ ಆಕಾಶದಲ್ಲಿನ ಮೋಡ, ಸರೋವರದಲ್ಲಿರುವ ಕಮಲ ಹಾಗೂ ಆಗಸದಲ್ಲಿರುವ ಸೂರ್ಯ ಇವರ ಮಿತ್ರತ್ವಕ್ಕೆ ಅವರ ಮಧ್ಯೆ ಇರುವ ಲಕ್ಷಾಧಿಕ ಕಿಲೋಮೀಟರ್ ಅಂತರದಿಂದ  ಘಾಸಿಯಾಗಿದೆಯೇ ?

ಶತ್ರುತ್ವಕ್ಕಿರುವಂತೆ ಮಿತ್ರತ್ವಕ್ಕೂ ಕಾರಣವಿರುತ್ತದೆ. ಅದು ನೆರೆಮನೆಯವರು ಎಂಬ ಕಾರಣ ಇರಬಹುದು, ಒಂದೇ ಶಾಲೆಯಲ್ಲಿ ಓದಿದವರು ಎಂಬುದಾಗಿರಬಹುದು, ಹಾಸ್ಟೆಲ್ ರೂಮ್ ಮೇಟ್ ಎಂಬುದಕ್ಕಾಗಿರಬಹುದು ಅಥವಾ ಆಪದ್ಭಾಂಧವನಾಗಿ ಬಂದಿರುವುದಕ್ಕಾಗಿರಬಹುದು. ಆದರೆ ಶತ್ರುತ್ವ ಅದರ ಕಾರಣನಾಶವಾದ ತಕ್ಷಣ ನಾಶವಾಗಬೇಕು. ಮಿತ್ರತ್ವ ಹಾಗಾಗಬಾರದು, ಮುಂದುವರಿಯಬೇಕು.

ಮಿತ್ರತ್ವಕ್ಕೆ ಕಾರಣ ದುರ್ವ್ಯಸನವೂ ಒಂದು. ’ಸಮಾನಶೀಲೇಷು ವ್ಯಸನೇಷು ಸಖ್ಯಮ್’ (ಸಂಸ್ಕೃತದಲ್ಲಿ ದುಶ್ಚಟಕ್ಕೆ ವ್ಯಸನ ಶಬ್ದದ ಬಳಕೆ ಕಡಿಮೆ. ಅಲ್ಲಿ ವ್ಯಸನ ಎಂದರೆ ದು:) ದುರ್ವ್ಯಸನಿಗಳು ಬಲುಬೇಗ ಮಿತ್ರರಾಗ್ತಾರೆ. ಫೇಸ್ ಬುಕ್ ಫ್ರೆಂಡಶಿಪ್ ನಿಂದ ಎಷ್ಟೋ ಅಪಾಯವಾಗಿದ್ದನ್ನೂ ನಾವು ಕೇಳಿದ್ದೇವೆ. ಒಮ್ಮೆ ಕರ್ನಾಟಕದ ಒಬ್ಬ ವ್ಯಕ್ತಿಯಿಂದ ನನಗೆ ಕರೆ ಬಂತು. ’ಸಾರ್ ನಾನು ನಿಮ್ಮ ಫೇಸ್ ಬುಕ್ ಫ್ರೆಂಡ್, ಗೋವಾಕ್ಕೆ ಬಂದಿದ್ದೇನೆ. ನಿಮ್ಮನ್ನು ಭೆಟ್ಟಿಯಾಗಬೇಕಿತ್ತು ಎಂದ. ನಾನು ಇಲ್ಲಿ ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯಾಗಿರುವುದರಿಂದ ಕರ್ನಾಟಕದಿಂದ ಬರುವ ಎಷ್ಟೋ ಮಂದಿ ಭೇಟಿಯಾಗಲು ಬಯಸುತ್ತಾರೆ. ನನಗೂ ಅದರಲ್ಲಿ ಆಸಕ್ತಿ ಇದೆ. ಅವರಿಗೆ ನಮ್ಮ ಕನ್ನಡ ಚಟುವಟಿಕೆಗಳ ಬಗ್ಗೆ ಹೇಳಬೇಕು ಎಂಬ ಉತ್ಸಾಹದಿಂದಜನನುಡಿಮಾಸಪತ್ರಿಕೆಯ ಪ್ರತಿಗಳನ್ನು ಹಿಡಿದು ಹೋದೆ. ಹೋಗಿ ನೋಡಿದರೆ ಸುಮಾರು ಇಪ್ಪತ್ತು ವರ್ಷಗಳ ಯುವಕ. ನನ್ನನ್ನು ನೋಡಿದಾಗ ಸ್ವಲ್ಪ ನಿರುತ್ಸಾಹನಾದ. ’ಸಾರ್, ನಿಮ್ಮ ಪ್ರೊಫೈಲ್ ನಲ್ಲಿ ಜನ್ಮದಿನಾಂಕ ೧೯೮೪ ನೇ ಇಸ್ವಿ ಎಂದಿದೆ. ಹಾಗಾಗಿ ನಮ್ಮ ವಯಸ್ಸು ಒಂದೇ ಎಂದುಕೊಂಡು ಕರೆದೆಎಂದ. ಹಾಗೇ ಪಕ್ಕದ ಹೊಟೆಲ್ ನಲ್ಲಿ ಚಹಾ ಕುಡಿಯುತ್ತ ಕುಳಿತೆವು. ಇಲ್ಲಿ ಗ್ಯಾಂಬ್ಲಿಂಗ್ ಆಡಬೇಕು ಅಂತ ಬಂದೆ ಸಾರ್. ಎಲ್ಲ ಕಡೆ ಬಹಳ ತುಟ್ಟಿ. ನಿಮಗೆ ಯಾವುದಾದರೂ ಕ್ಯಾಸಿನೊ ಪರಿಚಯ ಇದೆಯಾ? ನನ್ನನ್ನು ಕರ್ಕೊಂಡು ಹೋಗ್ತೀರಾ? ಅಂತೆಲ್ಲ ಕೇಳಲಿಕ್ಕೆ ಶುರು ಹಚ್ಚಿದ. ’ಇಲ್ಲಪ್ಪ, ನನಗೆ ಅಂತಹ ಅಭ್ಯಾಸಗಳೇನೂ ಇಲ್ಲ ಎಂದೆ. ನನಗೆ ಸಣ್ಣ ಭಯ ಶುರುವಾಗಿತ್ತು. ನಾಳೆ ಇವನೇನಾದರೂ ಇಲ್ಲಿ ಕುಡಿದು ಲಫಡಾ ಮಾಡಿ ಹೋದರೆ ನನ್ನನ್ನು ಅವನ ಜೊತೆ ನೋಡಿದ ಮಂದಿ ನನ್ನನ್ನು ಹಿಡಿದುಕೊಂಡರೆ? ಸದ್ಯಕ್ಕೆ ಹಾಗೇನೂ ಆಗಲಿಲ್ಲ. ಫೇಸ್ ಬುಕ್ ಫ್ರೆಂಡ್ಸನ್ನ ನಂಬಿಕೊಂಡರೆ ಇಂಥಾ ಸ್ಥಿತಿ ಬರಬಹುದು.

ನಿಜ, ಮಿತ್ರತ್ವಕ್ಕೆ ಜಾತಿ, ಮತ ಲಿಂಗ ಯಾವುದೇ ಭೇದವಿಲ್ಲ. ಇದೊಂದು ರೀತಿಯಲ್ಲಿ ವೇದಾಂತಿಗಳಆತ್ಮತತ್ತ್ವದಂತೆ. ಆದರೆ ಅನ್ಯಲಿಂಗೀಯರ ಸ್ನೇಹಕ್ಕೊಂದು ಎಲ್ಲೆಯ ಗೆರೆ ಎಳೆದುಕೊಳ್ಳುವುದು ಸುರಕ್ಷಿತತೆಯ ದೃಷ್ಟಿಯಿಂದ ಒಳ್ಳೆಯದು.

ಈಗಾಗಲೇ ಸಾಕಷ್ಟು ಆಯ್ತು. ರಾತ್ರಿ ೧೧.೪೫ ಆಗ್ತಾ ಬಂತು ಇನ್ನೂ ಬರೀತಾ ಕುತ್ರೆ ಫ್ರೆಂಡ್ ಶಿಪ್ ಡೇ ಕಳೆದೇ ಹೋಗ್ತದೆ. ಅದಕ್ಕಿಂತ ಮೊದಲು ಪೋಸ್ಟ್ ಮಾಡಬೇಕು.

ಸ್ನೇಹದಿನದ ಶುಭಾಶಯಗಳು.



No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...