Saturday, July 6, 2013

ಪ್ರಸ್ತಾವನೆ

ನನ್ನ ಅಕ್ಷರಭಿತ್ತಿಯನ್ನು ಅನಾವರಣಗೊಳಿಸಿದ ಮೊದಲದಿನವೇ ತಮ್ಮ ಹಾರೈಕೆಯಿಂದ ಹುರಿದುಂಬಿಸಿದ ಪ್ರಿಯಕ್ಕ ಹಾಗೂ ರಘುನಂದನ ಅವರಿಗೆ ನಾನು ಆಭಾರಿ.

ಸುಜ್ಞಾನ ಆರಂಭವನ್ನು ಜ್ಞಾನಕಾಂಡದಿಂದಲೇ ಆರಂಭಿಸಿದರೆ ಹೇಗೆ ಎಂಬ ವಿಚಾರದಿಂದ ಕೀಲಿಮಣೆಯ ಮೇಲೆ ಕೈಯಾಡಿಸಲು ಆರಂಭಿಸಿದೆ. ವಿಚಾರವನ್ನು ಪ್ರಚೋದಿಸಿದ್ದು ಅಚಾನಕ್ಕಾಗಿ ಕೈಗೆ ಸಿಕ್ಕಿದ ಉಪನಿಷತ್ತಿನ ಎರಡು ಕಥಾ ಸಂಗ್ರಹಗಳು. ಜೀರ್ಣಾವಸ್ಥೆಯಲ್ಲಿದ್ದರೂ ಓದುವ ಸ್ಥಿತಿಯಲ್ಲಿದ್ದ ಎರಡು ಪುಸ್ತಕಗಳು ಗೋವಾದಲ್ಲಿ ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕನ್ನಡಸಂಘದ ಗ್ರಂಥಾಲಯದ ಆಸ್ತಿಗಳು. ಸ್ವಂತ ಕಾರ್ಯಾಲಯವಿಲ್ಲದೆ ಆಚೀಚೆ ಅಡ್ದಾಡುತ್ತಿರುವ ಈಗಿನ ಕನ್ನಡ ಸಮಾಜಕ್ಕೆ ಆಸ್ತಿಗಳನ್ನು ಕಾಪಾಡಿಕೊಳ್ಳುವುದೇ ಕಷ್ಟವೆನಿಸಿದಾಗ ಪುಸ್ತಕದ ವ್ಯಾಮೋಹಕ್ಕೊಳಗಾದ ನಾನು ಮನೆಯಲ್ಲಿ ಜಾಗವಿಲ್ಲದಿದ್ದರೂ, ಅರ್ಧಾಂಗಿಯ ಕೆಂಗಣ್ಣಿಗೆ ಗುರಿಯಾದರೂ ( ಸಂಗ್ರಹದಲ್ಲಿ ಕಾದಂಬರಿಗಳೂ ಇದ್ದುದರಿಂದ ನಂತರ ಸಮಾಧಾನ ಹೊಂದಿದಳು!) ಮನೆಯ ಅಟ್ಟ ಹತ್ತಿಸಿಟ್ಟಿದ್ದೆ. ಮೊನ್ನೆ ಏನನ್ನೋ ಮಾಡುವಾಗ ಸಿಕ್ಕ ಪುಸ್ತಕಗಳನ್ನು ಬೇರೆ ತೆಗೆದಿಟ್ಟು ಸಮಯ ಸಿಕ್ಕಾಗ ಕಣ್ಣು ಹಾಯಿಸುತ್ತಿದ್ದೇನೆ.

ಪುಸ್ತಕಗಳಲ್ಲಿರುವವು ಸಣ್ಣ ಸಣ್ಣ ಕಥೆಗಳು. ಉಪನಿಷತ್ತಿನ ಕಾಲದ ಜ್ಞಾನಪಿಪಾಸುಗಳ ಪ್ರೇರಣಾದಾಯಕ ಕಥೆಗಳಿವು. ಅವರ ಜೀವನದ ಅಂತಿಮ ಉದ್ದೇಶ ನಮಗೆ ಆಸಕ್ತಿಯಿಲ್ಲದ ಮುಕ್ತಿ. ಸುಖ ದು:ಖಗಳಿಂದ ಕೂಡಿದ ಚಿತ್ರ ವಿಚಿತ್ರವಾದ ಜೀವನದ ಹಿಂದೆ ಮತ್ತಾವುದೋ ರಹಸ್ಯವಿದೆ ಎಂಬುದನ್ನು ಅರಿತು ಗುರುವನ್ನರಸಿ ಹೋದ ಧೀರರ ಚರಿತ್ರೆಯಿದು.


ಸಂಹಿತಾ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತುಗಳೆಂಬ ವೇದಭಾಗಗಳಲ್ಲಿ ಕೊನೆಯ ಭಾಗ ಉಪನಿಷತ್ತುಗಳು. ವೇದಗಳ ಅಂತಿಮ ಭಾಗಗಳಾಗಿರುವುದರಿಂದಲೂ, ವೇದಗಳ ಅಂತಿಮ ಸತ್ಯದ ಪ್ರತಿಪಾದಕಗಳಾಗಿರುವುದರಿಂದಲೂ ಇವುಗಳಿಗೆವೇದಾಂತಎಂಬ ಹೆಸರೂ ಇದೆ. ಗುರುಗಳ ಸಮೀಪ ಕೂತು ಪಡೆದ ನಿಶ್ಚಿತಜ್ಞಾನವಾಗಿರುವುದರಿಂದಲೂ, ಮುಕ್ತಿಗೆ ಅತ್ಯಂತ ಸಮೀಪ ಒಯ್ಯುವುದರಿಂದಲೂ ಉಪನಿಷತ್ಎಂದು ಕರೆಸಿಕೊಂಡಿವೆ.

ಎಲ್ಲ ವೇದಗಳಲ್ಲೂ ಉಪನಿಷತ್ತುಗಳಿವೆ. ಎಲ್ಲ ವೇದಗಳ ಕಾಲದಲ್ಲಿಯೂ ಜ್ಞಾನಯಜ್ಞ ನಡೆಯುತ್ತಿತ್ತು ಎಂಬುದಕ್ಕೆ ಸಾಕ್ಷಿಯದು. ನೂರಾರು ಉಪನಿಷತ್ತುಗಳು ಅಧ್ಯಯನಕ್ಕೆ ಲಭ್ಯವಾಗಿದ್ದರೂ ಆಚಾರ್ಯತ್ರಯರ ಭಾಷ್ಯಕ್ಕೆ ನಿಲುಕಿದ ಹತ್ತು ಉಪನಿಷತ್ತುಗಳು ಮುಖ್ಯವೆನಿಸುತ್ತವೆ.

ಈಶ-ಕಠ-ಕೇನ-ಮುಂಡ-ಮಾಂಡೂಕ್ಯ-ತಿತ್ತಿರಿ: |
ಐತರೇಯಶ್ಚ ಛಾಂದೋಗ್ಯಂ ಬೃಹದಾರಣ್ಯಕಂ ತಥಾ ||

ಶ್ವೇತಾಶ್ವರ ಎಂಬ ಹನ್ನೊಂದನೆಯ ಉಪನಿಷತ್ತು ಕೂಡ ಪ್ರಸಿದ್ಧವಾಗಿದೆ.

ಉಪನಿಷತ್ತುಗಳ ಹಲವು ಸ್ವಾರಸ್ಯಗಳು ನನಗೆ ಸೋಜಿಗವನ್ನುಂಟುಮಾಡಿವೆ.

. ಉಪನಿಷತ್ತುಗಳ ಹೆಚ್ಚಿನ ಭಾಗ ಸಂವಾದಾತ್ಮಕವಾಗಿದೆ.
. ಪ್ರಶ್ನೆ ಕೇಳಿದವರಿಗೆ ಮಾತ್ರ ಉತ್ತರ ಪಡೆವ ಅರ್ಹತೆ. ಶಿಷ್ಯ ಪ್ರಶ್ನೆ ಕೇಳುವವರೆಗೆ ಕಾದು ನಂತರ ಅವನ್ನನ್ನು ಪರೀಕ್ಷಿಸಿ ಜ್ಞಾನವನ್ನು ಕೊಡಲಾಗುತ್ತಿತ್ತು. ಗುರುವನ್ನು ಪ್ರಶ್ನಿಸುವ ಅಧಿಕಾರವೇ ಶಿಷ್ಯರಿಗಿರಲಿಲ್ಲ ಎಂಬ ಆಧುನಿಕರ ಹುಸಿವಾದಕ್ಕೆ ತಕ್ಕ ಉತ್ತರ ಇದು.
. ಗುರುಕುಲವನ್ನು ನಡೆಸುವ ಕುಲಾಧಿಪತಿಯೇ ಗುರುವಾಗಬೇಕೆಂದಿಲ್ಲ. ತಂದೆಯೇ ಆಧ್ಯಾತ್ಮ ಗುರುವಾದ ಉದಾಹರಣೆಗಳೂ ಕಾಣಸಿಗುತ್ತವೆ.
. ಇಲ್ಲಿ ಗುರುವಾದವರೆಲ್ಲ ಬ್ರಾಹ್ಮಣರೇ ಎನ್ನುವಂತಿಲ್ಲ. ಕ್ಷತ್ರಿಯರೂ ದಾಸೀಪುತ್ರರೂ ಗುರುವಾದ ಸಂದರ್ಭ ಲಭ್ಯ.
ಬ್ರಹ್ಮಜ್ಞಾನ ಸಾಮಾನ್ಯವಾಗಿ ಒಬ್ಬ ಗುರುವಿನಿಂದ ಒಬ್ಬ ಶಿಷ್ಯನಿಗೆ ಏಕಾಂತದಲ್ಲಿ ಕೊಡಲ್ಪಟ್ಟಿದೆ. ಸಾರ್ವಜನಿಕವಾಗಿ ಹೇಳಲ್ಪಟ್ಟಿಲ್ಲ.
. ಕಥೆಗಳನ್ನು ಗಮನಿಸಿದಾಗ ಉತ್ಕಟೇಚ್ಛೆ, ಗುರುವಿನ ವಾತ್ಸಲ್ಯ, ಗುರುಶಿಷ್ಯರ ಮಧುರ ಸಂಬಂಧ ಅರಿವಿಗೆ ಬಂದು ಈಗಿನ ಶಿಕ್ಷಣ ಪದ್ಧತಿಯ ಬಗ್ಗೆ ಜುಗುಪ್ಸೆ ಮೂಡುತ್ತದೆ.


ಉಪನಿಷತ್ತುಗಳಲ್ಲಿ ವಿವರಿಸಿದ ಬ್ರಹ್ಮಜ್ಞಾನವನ್ನು ವಿವರಿಸುತ್ತ ನಿಮಗೆ ಬೇಸರ ತರಿಸುವುದು ನನ್ನ ಉದ್ದೇಶವಲ್ಲ. ಜ್ಞಾನವನ್ನು ಪಡೆಯಲು ನಮ್ಮ ಪೂರ್ವಜರು ಮಾಡಿದ ತಪಸ್ಸು ತ್ಯಾಗಗಳು ಎಲ್ಲಕಾಲದಲ್ಲಿಯೂ ಮಾದರಿ ಎನಿಸಬಲ್ಲವು. ಅಂತಹ ಪ್ರೇರಣಾದಾಯಿ ಕಥೆಗಳನ್ನು ನನ್ನ ದೃಷ್ಟಿಯಲ್ಲಿ ವಿವೇಚಿಸಿ ನಿಮ್ಮ ಮುಂದಿಡುವ ಪ್ರಯತ್ನ ನನ್ನದು. ಅದರ ಯಶಸ್ಸು ನಿಮ್ಮ ಪ್ರತಿಕ್ರಿಯೆಯನ್ನೂ ಅವಲಂಬಿಸಿದೆ.


ಇಂದಿನ ಅಂಚೆಯನ್ನು ಇಷ್ಟಕ್ಕೇ ಸೀಮಿತಗೊಳಿಸಿ ಮುಂದಿನ ಬಾರಿ ಒಂದು ಆಸಕ್ತಿದಾಯಕ ಕಥೆಯೊಂದಿಗೆ ಬರುತ್ತೇನೆ. ಶುಭರಾತ್ರಿ

3 comments:

maanasa saarovra said...

ನಿರೀಕ್ಷೆಯಂತೆ ಅತ್ಯುತ್ತಮ ಆರಂಭವನ್ನೇ ನೀಡಿದ್ದೀರಿ. ಲೋಕಾ ಸಮಸ್ತ ಸುಖಿನೋಭವಂತು ಎಂಬ ಆದರ್ಶಗಳ ಹೊತ್ತು ಬರವಣಿಗೆಯೆಂಬ ನಾಂದಿ ಹಾಡಿದ್ದೀರಿ ಮತ್ತಷ್ಟು ಉತ್ತಮ ಬರಹಗಳ ನಿರೀಕ್ಷೆಯಲ್ಲಿ ನಾವಿದ್ದೇವೆ.

shashi said...
This comment has been removed by the author.
K Mahesh said...

ಮಹೋದಯ!
ಭವತಃ ವಿವರಣಂ ಬಹು ಸಮ್ಯಕ್ ಅಸ್ತಿ| ಸರಲಂ ಸುಂದರಮ್ ಚ!
ಅಭಿನಂದನಮ್, ಧನ್ಯವಾದಾಃ ಚ|
ಸರ್ವೇಷಾಂ ಉಪಯೋಗಾಯ ಭವತಿ ಇತಿ ಮಮ ವಿಶ್ವಾಸಃ|
ಅನುವರ್ತತಾಮ್|

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...