Wednesday, August 28, 2013

ಸಾರ್ವಕಾಲಿಕ ಮುತ್ಸದ್ದಿ ರಾಜಕಾರಣಿ "ಶ್ರೀಕೃಷ್ಣ"


ಕನ್ನಡ ಪ್ರಭದಲ್ಲಿ ಪ್ರಕಟವಾದ ಚೈತನ್ಯ ಹೆಗಡೆ ರ ಕೃಷ್ಣನ ಕುರಿತಾದ ಲೇಖನ ಓದಿ ನನಗೂ ಏನೋ ಬರೆಯಬೇಕೆಂಬ ಹಂಬಲ ಮೂಡಿತು. ಅದಕ್ಕೇ ನಾಲ್ಕಕ್ಷರದ ಬರಹ.

ಕೃಷ್ಣ ಎಂದಾಕ್ಷಣ ನಮಗೆಲ್ಲ ಗೋಪಾಲನೇ ನೆನಪಾಗುವುದು. ಅದರಲ್ಲೇ ಏನೋ ಒಂದು ಆನಂದ ಅವನಲ್ಲೇ ಏನೋ ಒಂದು ರೀತಿಯ ಆತ್ಮೀಯತೆ. ನಮ್ಮ ಮನೆಯ ಕಂದಮ್ಮಗಳೆಲ್ಲ ಕೃಷ್ಣನಂತೆ ಎಂಬ ಭಾವ ತಳೆವುದುಂಟು. ಅವರಿಗೆ ಕೃಷ್ಣನ ವೇಷ ಹಾಕಿ ಕಣ್ತುಂಬಿಕೊಳ್ಳುವುದುಂಟು. ವೃಂದಾವನದಿಂದ ಮಥುರೆಗೆ ಬಂದ ಕೃಷ್ಣನ ಕಥೆಯಲ್ಲಿ ನಮಗೆ ಅಷ್ಟೊಂದು ಆಸಕ್ತಿಯಿಲ್ಲ. ಆನಂತರದ ಕೃಷ್ಣ ಪ್ರೌಢನೆನಿಸಿ ನಮ್ಮಿಂದ ಸ್ವಲ್ಪ ದೂರವೇ ನಿಲ್ಲುತ್ತಾನೆ. ಭಗವದ್ಗೀತೆಯ ಕೃಷ್ಣ ಆಧ್ಯಾತ್ಮ ಪಿಪಾಸುಗಳಿಗೆ ಆತ್ಮೀಯನಾದರೂ ಪಾಮರರಿಗೆ ಅವನು ಎಲ್ಲರಿಗೂ ಗೋಚರವಾಗದ ವಿಶ್ವರೂಪನಾಗಿಯೇ ನಿಲ್ಲುತ್ತಾನೆ.

ಕೃಷ್ಣ ಒಮ್ಮೆ ವೃಂದಾವನದಿಂದ ಹೊರಬಿದ್ದ ಮೇಲೆ ಮತ್ತೆ ಆಕಡೆ ನೋಡಿದ್ದಿಲ್ಲ. ಕಂಸವಧೆಗಿಂತ ಮೊದಲ ಕೃಷ್ಣನ ಜೀವನಕ್ಕೂ ಆನಂತರದ್ದಕ್ಕೂ ಅಜಗಜಾಂತರ. ಅಲ್ಲಿ ಗೋವಳನಾಗಿ ಆಡಿಕೊಂಡಿದ್ದವ ಮಥುರೆಗೆ ಬಂದು ಹೇಗೆ ಪ್ರಬುದ್ಧ ರಾಜಕಾರಣಿಯಾಗಿ ಬಿಟ್ಟನೊ! ಮಥುರೆಯ ನೀರಿನ ಗುಣವೆ? ಅಥವಾ ಗ್ರಹಗತಿಯ ಬದಲಾವಣೆಯೆ? ಅಥವಾ ಸ್ಲಮ್ ನಲ್ಲಿ ಹುಟ್ಟಿ ಮಿಲಯನೇರ್ ಆಗುವವರ ಪ್ರತಿನಿಧಿಯೆ?

ಕೃಷ್ಣನಂತಹ ರಾಜಕಾರಣಿ ಕಲಿಯುಗದಲ್ಲೂ ಹುಟ್ಟಲಿಕ್ಕಿಲ್ಲ. ಮಹಾಭಾರತದಲ್ಲಂತೂ ಅವನ ರಾಜಕಾರಣಕ್ಕೆ ಮಿತಿಯೇ ಇಲ್ಲ. ಮಹಾಭಾರತ ಕೌರವ-ಪಾಂಡವರ ಕಥೆ ಎನ್ನುವುದಕ್ಕಿಂತ ಕೃಷ್ಣನ ರಾಜಕಾರಣದ ಕಥೆ ಎಂದೇ ಹೇಳಬಹುದೇನೊ.

ಮಹಾಭಾರತಯುದ್ಧ ಸಂದರ್ಭದಲ್ಲಿಯೇ ನೋಡೋಣ. ದುರ್ಯೋಧನನಲ್ಲಿಗೆ ಸಂಧಾನಕ್ಕೆ ಬಂದಾಗಲೇ ಅವನ ರಾಜಕಾರಣ ಆರಂಭವಾಗಿತ್ತು. ಆ ಕಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೃಷ್ಣ ಹಸ್ತಿನಾವತಿಗೆ ಬಂದಿದ್ದು ಸಂಧಾನಕ್ಕಲ್ಲ, ಸಂಗ್ರಾಮಸಿದ್ಧತೆಗೆ ಎಂಬುದು ಯಾರಿಗಾದರೂ ಹೊಳೆಯುತ್ತದೆ. ತನ್ನ ಹಸ್ತಿನಾವತಿಯ ಪ್ರವಾಸದಲ್ಲಿಯೇ ೯೦% ಯುದ್ಧವನ್ನು ಮುಗಿಸಿಬಿಟ್ಟಿದ್ದ ಕೃಷ್ಣನ ಜಾಣ್ಮೆಯನ್ನು ಯಾರಾದರೂ ಮೆಚ್ಚಲೇಬೇಕು. ಕುಂತಿಯನ್ನು ಮಾತನಾಡಿಸುವ ನೆಪದಿಂದ ವಿದುರನಲ್ಲಿಗೆ ಹೋಗಿ ಅವನನ್ನೂ ರಾಜಸಭೆಗೆ ಕರೆದೊಯ್ದು ಅವನಲ್ಲಿ ದುರ್ಯೋಧನನ ರಕ್ಷಣೆಗಾಗಿ ಇದ್ದ ಬಿಲ್ಲನ್ನು ಮುರಿಸಿದ. ದುರ್ಯೋಧನನಿಗೆ ಅಗಲೇ ಸುಳಿವು ಸಿಗಬೇಕಿತ್ತು. ಮೂರ್ಖತನ ಮಾಡಿದ. ಗಾಂಧಾರಿಯ ದಿವ್ಯದೃಷ್ಟಿಯಿಂದ ಸಂಪೂರ್ಣದೇಹವನ್ನು ವಜ್ರಕಠೋರ ಮಾಡಿಕೊಳ್ಳುವ ಅವನ ಅವಕಾಶ ಕೃಷ್ಣನಿಂದ ಹಾಳಾಯಿತು. ಅವನ ತೊಡೆಯಭಾಗ ಮೃದುವಾಗಿಯೇ ಉಳಿಯಿತು. ಅದೇ ಅವನಿಗೆ ಮೃತ್ಯುವಾಯಿತು.

ತನ್ನದೇ ಭಕ್ತನಾದ ಕರ್ಣನ ವಿಷಯದಲ್ಲಿ ಕೃಷ್ಣ ಮಾಡಿದ ರಾಜಕಾರಣ ಬೆರಗು ತರಿಸುವಂಥದ್ದು. ಹೇಳಬೇಕಾದ ಸಂದರ್ಭದಲ್ಲಿಯೂ ಹೇಳದ ಸತ್ಯವನ್ನು ಯುದ್ಧ ಸಮಯದಲ್ಲಿ ಹೇಳಿ ಅವನನ್ನು ನಿರ್ವೀರ್ಯನನ್ನಾಗಿ ಮಾಡಿದ. ಕುಂತಿಯನ್ನು ಕಳಿಸಿ ಇಮೋಶನಲ್ ಬ್ಲ್ಯಾಕ್ ಮೇಲ್ ಮಾಡಿದ. ಅದೇ ಸತ್ಯವನ್ನು ಪಾಂಡವರಿಗೆ ಹೇಳಲಿಲ್ಲ. ಅವರಿಗೆ ಕರ್ಣನ ಮೇಲಿರುವ ದ್ವೇಷ ಉದ್ದೀಪನಗೊಳ್ಳುವ ಎಲ್ಲ ಸಂದರ್ಭಗಳನ್ನೂ ಸೃಷ್ಟಿಸಿದ. ಅಭಿಮನ್ಯುವಿನ ವಧೆಯಲ್ಲಿ ಕರ್ಣನನ್ನೇ ತಪ್ಪಿತಸ್ಥನನ್ನಾಗಿ ಮಾಡಿ ಅರ್ಜುನ ಅವನನ್ನು ಕೊಲ್ಲುವಂತೆ ಮಾಡಿದ. ಅದರಲ್ಲೂ ಶಸ್ತ್ರಹೀನನಾಗಿದ್ದಾಗ.

ಭೀಷ್ಮ-ದ್ರೋಣರ ವಿಷಯದಲ್ಲಿ ಕೃಷ್ಣ ಅನುಸರಿಸಿದ್ದೂ ಇಮೋಶನಲ್ ಬ್ಲ್ಯಾಕ್ ಮೇಲ್ ತಂತ್ರವೇ.

ಅದಿರಲಿ, ತನ್ನದೇ ಪಕ್ಷದವರನ್ನಾದರೂ ಬಿಟ್ಟಿದ್ದಾನೆಯೆ? ಇಲ್ಲ. ಕೃಷ್ಣನ ರಾಜಕಾರಣಕ್ಕೆ ಅಭಿಮನ್ಯು, ಘಟೋತ್ಕಚ, ಉಪಪಾಂಡವರು, ದೃಷ್ಟದ್ಯುಮ್ನ ಹೀಗೆ ಅನೇಕ ಸ್ವಪಕ್ಷೀಯರೂ ತುತ್ತಾಗಿ ಪ್ರಾಣ ಕಳೆದುಕೊಂಡರು. ಅರ್ಜುನನ್ನು ಉದ್ದೇಶಪೂರ್ವಕವಾಗಿ ಇನ್ನೊಂದೆಡೆ ಕರೆದೊಯ್ದು, ಜಯದ್ರಥನ ವರ ಅಂದೇ ಫಲಿಸುವಂತೆ ಮಾಡಿ, ಪ್ರವೇಶತಂತ್ರವನ್ನು ಮಾತ್ರ ತಾನೇ ಉಪದೇಶಿಸಿದ್ದ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ. ಅಭಿಮನ್ಯು ಕೃಷ್ಣನನ್ನು ಮುಗಿಸಲು ಹವಣಿಸಿದ್ದನಂತೆ. ಅದಕ್ಕೆ ಇದು ಪ್ರತಿತಂತ್ರವಂತೆ.

ರಾಕ್ಷಸನಾದ ಘಟೋತ್ಕಚನನ್ನು ಉಪಯೋಗಿಸಿಕೊಂಡು ಕರ್ಣ ಅರ್ಜುನನಿಗಾಗಿ ತೆಗೆದಿರಿಸಿದ್ದ ಒಂದೇ ಬಾರಿ ಪ್ರಯೋಗಿಸಬಲ್ಲ ಶಕ್ತ್ಯಾಯುಧವನ್ನು ಹಾಳು ಮಾಡಿದ್ದೂ ಒಂದು ರಾಜಕಾರಣ. ಯುದ್ಧ ಮುಗಿದ ದಿನ ದೃಷ್ಟದ್ಯುಮ್ನಾದಿಗಳನ್ನಷ್ಟೇ ಡೇರೆಯಲ್ಲಿ ಬಿಟ್ಟು ಪಾಂಡವರನ್ನು ದೂರ ಕರೆದೊಯ್ದು ರಕ್ತರಾತ್ರಿಯಲ್ಲಿ ಡೇರೆಯಲ್ಲಿದ್ದವರೆಲ್ಲ ಸಾಯುವಂತೆ ಮಾಡಿದ್ದು ರಾಜಕಾರಣವೇ ಅಲ್ಲವೆ?

ರಾಜಕೀಯ ಚದುರಂಗದಾಟದಲ್ಲಿ ಕೃಷ್ಣನ ದೂರದರ್ಶಿತ್ವಕ್ಕೆ ಯಾರಾದರೂ ಮೆಚ್ಚಲೇಬೇಕು. ಮುಂದಿನ ಸಂದರ್ಭವನ್ನು ಊಹಿಸಿ ಮೊದಲೇ ಅದಕ್ಕೊಂದು ದಾಳವನ್ನು ಸಿದ್ಧವಾಗಿಡುವುದು ಅವನ ಜಾಣ್ಮೆ. ಅವನು ನಿಶ್ಶಸ್ತ್ರನಾಗಿ ಕೌರವರನ್ನು ಗೆದ್ದಿದ್ದೇ ಹಾಗೆ. ಅದರಲ್ಲೂ ತಾನು ನಿಯಮಬಾಹಿರನಾಗಿ ವರ್ತಿಸಬೇಕಾಗಿ ಬಂದಾಗ ಶತ್ರುವಿನ ಕೈಯಲ್ಲಿ ಮೊದಲು ತಪ್ಪು ಮಾಡಿಸಿ ಅದಕ್ಕೆ ಪ್ರತೀಕಾರ ಎಂಬಂತೆ ನಿಯಮಬಾಹಿರ ಕೃತ್ಯ ಮಾಡಿದ್ದುಂಟು. ಅದು ಕೃಷ್ಣನ ರಾಜಕೀಯ ಜಾಣ್ಮೆ. ಅಭಿಮನ್ಯುವಿನ ಬಿಲ್ಲನ್ನು ಹಿಂದಿನಿಂದ ಕತ್ತರಿಸಿದ ಎಂಬ ಕಾರಣಕ್ಕಾಗಿ ನಿಶ್ಶಸ್ತ್ರನಾದ ಕರ್ಣನ ಮೇಲೆ ಬಾಣ ಪ್ರಯೋಗಿಸುವಂತೆ ಪ್ರೇರೇಪಿಸುತ್ತಾನೆ.

ತನ್ನ ಕುಟುಂಬದಲ್ಲಿಯೂ ಕೃಷ್ಣ ಸಾಕಷ್ಟು ರಾಜಕಾರಣ ಮಾಡಿದ್ದಾನೆ. ಸುಭದ್ರಾ ಕಲ್ಯಾಣ ಸಂದರ್ಭದಲ್ಲಿ, ಕನಕಾಂಗಿ ಕಲ್ಯಾಣ ಸಂದರ್ಭಗಳಲ್ಲಿ ಅವನ ರಾಜಕಾರಣವನ್ನು ಕಾಣಬಹುದು.

ಏನೇ ಆದರೂ ಕೃಷ್ಣ ಮಾಡಿದ ರಾಜಕಾರಣ ದುಷ್ಟ ಶಿಕ್ಷಣ ಮತ್ತು ಶಿಷ್ಟರಕ್ಷಣ ಉದ್ದೇಶದಿಂದ ಕೂಡಿದ್ದು. ಭೂಭಾರ ಇಳಿಸುವ ತನ್ನ ಕರ್ತವ್ಯಕ್ಕೆ ಬದ್ಧನಾಗಿ ತನ್ನ ಪಕ್ಷದವರನ್ನೂ ಯಮಪುರಿಗೆ ಕಳಿಸಿದವನು ಅವನು. ಕಲಿಯುಗದಲ್ಲಿ ಚಾಣಕ್ಯ ರಾಜಕಾರಣಕ್ಕೆ ಪ್ರಸಿದ್ಧನಾದರೂ ಕೃಷ್ಣನ ಮಟ್ಟಕ್ಕೆ ಏರಲು ಸಾಧ್ಯವಾಗಲಿಕ್ಕಿಲ್ಲ. ನಮ್ಮ ಇತರ ರಾಜಕಾರಣಿಗಳಂತೂ ಸ್ವಾರ್ಥಕ್ಕಾಗಿ ಮಾತ್ರ ರಾಜಕಾರಣ ಮಾಡುವವರು. ದೇಶದ ವಿಚಾರ ಬಂದಾಗ ಎಡೆಗೆನ್ನೆಗೆ ಹೊಡೆದರೆ ಬಲಗೆನ್ನೆಯ ತೋರುವ ಸಭ್ಯರು! ಕೃಷ್ಣಾಷ್ಟಮಿಯ ದಿನದಂದಾದರೂ ಅವರು ಸ್ವಲ್ಪ ಕೃಷ್ಣನ ನೆನಪು ಮಾಡಿಕೊಳ್ಳಬಾರದೆ?

|| ಕೃಷ್ಣಂ ವಂದೇ ಜಗದ್ಗುರುಮ್ ||

 

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...