Thursday, March 25, 2021

ಸಿದ್ಧಿಧಾತ್ರಿ

 ಸರ್ವಬಾಧಾಪ್ರಶಮನಂ ತ್ರೈಲೋಕಸ್ಯಾಖಿಲೇಶ್ವರಿ|

ಏವಮೇವ ತ್ವಯಾ ಕಾರ್ಯಮಸ್ಮದ್ವೈರಿವಿನಾಶನಮ್||

ನವಗುರ್ಗೆಯರಲ್ಲಿ ಕೊನೆಯವಳು ಸಿದ್ಧಿಧಾತ್ರಿ. ಒಂಭತ್ತನೆಯ ದಿನ ಆರಾಧನೆಗೊಳ್ಳುವ ಆದಿಶಕ್ತಿಯ ದಿವ್ಯ ಸೌಮ್ಯ ಸ್ವರೂಪ.

ಸಿದ್ಧಿ ಎಂಬ ಶಬ್ದಕ್ಕೆ ದೇವೀಪುರಾಣದಲ್ಲಿ ಸಾಧನಾತ್ ಸಿದ್ಧಿರಿತ್ಯುಕ್ತಾ ಸಾಧಿಕಾ ವಾಥ ಈಶ್ವರೀ ಎಂದು ನಿಷ್ಪತ್ತಿಯನ್ನು ಹೇಳಿದ್ದಾರೆ. ಮಾರ್ಕಂಡೇಯ ಪುರಾಣದಲ್ಲಿ ಎಂಟು ಸಿದ್ಧಿಗಳ ಉಲ್ಲೇಖ ಇದೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ ಪ್ರಾಕಾಮ್ಯ, ಈಶಿತ್ವ ವಶಿತ್ವ. ಇವು ಅಷ್ಟಸಿದ್ಧಿಗಳು. ಬ್ರಹ್ಮವೈವರ್ತಪುರಾಣದ ಪ್ರಕಾರ ಹದಿನೆಂಟು ಸಿದ್ಧಿಗಳಿವೆ. ಈ ಎಲ್ಲ ಸಿದ್ಧಿಗಳನ್ನು ಹೊಂದಿರುವವಳು ಹಾಗೂ ಸಾಧಕರಿಗೆ ದಯಪಾಲಿಸುವವಳು ಸಿದ್ಧಿಧಾತ್ರಿ.

ಸಿದ್ಧಿಧಾತ್ರಿಯನ್ನು ಸ್ತುತಿಸುವ ಶ್ಲೋಕ ಹೀಗಿದೆ:

ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ|

ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ||

ಸಿದ್ಧರಿಂದ, ಗಂಧರ್ವರಿಂದ, ಯಕ್ಷರಿಂದ, ಎಲ್ಲ ದೇವತೆಗಳು ಹಾಗೂ ಅಸುರರಿಂದ ಪೂಜೆಯನ್ನು ಕೊಂಬವಳು ಈ ದೇವಿ. ಅವಳ ಹೆಸರೇ ಹೇಳುವಂತೆ ಸಕಲಸಿದ್ಧಿಗಳನ್ನೂ ದಯಪಾಲಿಸುವ ಜಗದಂಬಿಕೆ ಅವಳು.

ಸಿದ್ಧಿಧಾತ್ರಿದೇವಿಯು ತನ್ನ ನಾಲ್ಕು ಕರಗಳಲ್ಲಿ ಶಂಖ, ಚಕ್ರ, ಗದಾ ಪದ್ಮಗಳನ್ನು ಧರಿಸಿದ್ದಾಳೆ. ಕಮಲದ ಹೂವಿನ ಮೇಲೆ ವಿರಾಜಮಾನಳಾಗಿದ್ದಾಳೆ. ಸೌಮ್ಯಸ್ವರೂಪಳಾಗಿದ್ದಾಳೆ. ಅವಳನ್ನು ಭಕ್ತಿಯಿಂದ ಆರಾಧಿಸಿ ಲೌಕಿಕ ಹಾಗೂ ಪಾರಲೌಕಿಕ ಸಿದ್ಧಿಗಳನ್ನು ಪಡೆದುಕೊಂಡು ಕೃತಾರ್ಥರಾಗೋಣ.

ಮಿತ್ರರೇ, ಆಶ್ವೀನ ಮಾಸದ ಶುಕ್ಲಪ್ರತಿಪದೆಯಿಂದ ನವಮಿಯವರೆಗೆ ಪೂಜೆಯನ್ನು ಸ್ವೀಕರಿಸುವ ಜಗನ್ಮಾತೆಯ ವಿವಿಧರೂಪಗಳ ಅನುಸಂಧಾನವನ್ನು ನಾವು ಒಂಭತ್ತು ದಿನಗಳ ಕಾಲ ಮಾಡುತ್ತ ಬಂದಿದ್ದೇವೆ. ಮಹಾಮಾತೆ ಸೌಮ್ಯಸ್ವರೂಪಳೂ ಹೌದು ಉಗ್ರರೂಪಳೂ ಹೌದು. ಸೃಷ್ಟಿಯ ವಿನಾಶಕ್ಕೆ ಹವಣಿಸುವ ಸ್ವಾರ್ಥಪರರಾದ ದುಷ್ಟರ ಪಾಲಿಗೆ ಅವಳು ಭಯಂಕರಿ. ಭಕ್ತಿಯಿಂದ ಭಜಿಸುವ ಸಾತ್ತ್ವಿಕ ಭಕ್ತರಿಗೆ ಅವಳು ಶುಭಕರಿ. ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದವರೆಗೂ ಸಂಚರಿಸುತ್ತ ಯೋಗಮಾರ್ಗಸಾಧಕರಿಗೆ ಸಿದ್ಧಿಯನ್ನು ಈಯುವ ಯೋಗೇಶ್ವರಿ. ಸತ್ತ್ವ ರಜಸ್ತಮೋಗುಣಗಳ ಅಧಿಷ್ಠಾತ್ರಿಯಾಗಿ ಸೃಷ್ಟಿಸ್ಥಿತಿಲಯಗಳನ್ನು ತನ್ನಿಚ್ಛೆಯಂತೆ ನಡೆಸುವ ಸರ್ವೇಶ್ವರಿ ಅವಳು. ಅವಳ ಸ್ವರೂಪಾನುಸಂಧಾನ ಹಾಗೂ ಭಕ್ತಿಯ ಆರಾಧನೆ ನಮ್ಮ ಬಾಳಿನಲ್ಲೂ ಉತ್ಕರ್ಷಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ,

ಒಂಭತ್ತು ದಿನಗಳ ಕಾಲ ಪೂಜೆಗೊಂಡ ದೇವಿಯ ವಿಸರ್ಜನೆ ಹತ್ತನೆಯ ದಿನ ನಡೆಯುತ್ತದೆ, ಹತ್ತನೆಯ ದಿನಕ್ಕೆ ವಿಜಯದಶಮಿ ಎಂದು ಹೆಸರು. ಮಹಿಷಾಸುರಮರ್ದಿನಿ ಮಹಿಷನನ್ನು ವಧಿಸಿ ವಿಜಯವನ್ನು ಸಾಧಿಸಿದ ದಿನವದು. ಶ್ರೀರಾಮ ರಾವಣನನ್ನು ಕೊಂದು ಲೋಕಕಲ್ಯಾಣವನ್ನು ಮಾಡಿದ ದಿನವೂ ಹೌದು. ಪಾಂಡವರು ಅಜ್ಞಾತವಾಸ ಮುಗಿಸಿ ಪ್ರಕಟವಾದದ್ದೂ ಇದೇ ದಿನ. ಶುಭಕಾರ್ಯಗಳಿಗೂ ವಿದ್ಯಾರಂಭಕ್ಕೂಅತ್ಯಂತ ಪ್ರಶಸ್ತವಾದ ದಿನವಿದು. ದಶಹರಾ ಅಥವಾ ದಸರಾ ಎಂದು ಪ್ರಸಿದ್ಧವಾಗಿರುವ ಈ ಪರ್ವಕಾಲದಲ್ಲಿ ಬನ್ನಿ ವಿನಿಮಯದ ಮೂಲಕ ಶುಭಾಶಯ ಹೇಳುವ ಸಂಪ್ರದಾಯವಿದೆ.

ಒಂಬತ್ತು ದಿನಗಳ ಕಾಲ ಈ ಜ್ಞಾನಸತ್ರವನ್ನು ಆಯೋಜಿಸಿ ಪ್ರಪಂಚದ ತುಂಬೆಲ್ಲ ಪ್ರಸಾರ ಮಾಡಿದ ಕೆ ಎಲ್ ಇ ಧ್ವನಿ ಸಮುದಾಯ ಬಾನುಲಿ ಕೇಂದ್ರ ಹಾಗೂ ರೇಡಿಯೋ ಮಿರ್ಚಿ ಅಂತರ್ಜಾಲ ಬಾನುಲಿ ಕೇಂದ್ರಗಳ ಕಾರ್ಯ ಅತ್ಯಂತ ಶ್ಲಾಘನೀಯ ಇಂತಹ ಅವಕಾಶವನ್ನು ನನಗೆ ಒದಗಿಸಿ ಕೊಟ್ಟಿದ್ದಕ್ಕೆ ನಾನು ಅವರಿಗೆ ಕೃತಜ್ಞ. ಒಂಬತ್ತು ದಿನಗಳ ಕಾಲ ದೇವಿಯ ಮಹಿಮೆಯ ಶ್ರವಣವನ್ನು ಮಾಡಿ ಮನನ ಮಾಡುವ ಮೂಲಕ ಈ ಸತ್ರದಲ್ಲಿ ಪಾಲ್ಗೊಂಡ ತಮಗೆಲ್ಲ ಜಗನ್ಮಾತೆಯ ಸಂಪೂರ್ಣ ಅನುಗ್ರಹವಾಗಲಿ ಎಂದು ಆಶಿಸುತ್ತ, ನಾಹಂ ಕರ್ತಾ ಕಾರಯಸಿ ತ್ವಂ ಎಂಬ ವಿನಮ್ರ ಭಾವದಿಂದ ಸೊನ್ನೆಯಾದ ನನ್ನಿಂದ ಸನ್ನೆಯಾಗಿ ಈ ಕಾರ್ಯವನ್ನು ಮಾಡಿಸಿದ ಜಗನ್ಮಾತೆಯ ಚರಣಕಮಲಗಳಲ್ಲಿ ಸರ್ವವನ್ನೂ ಅರ್ಪಿಸಿ ವಿರಮಿಸುತ್ತೇನೆ.

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...