Sunday, August 4, 2019

ದೇವುಡು ಅವರ ಮಹಾಕೃತಿ 'ಮಹಾಬ್ರಾಹ್ಮಣ'.



ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಓದಿನ ಹುಚ್ಚನ್ನು ಹಿಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ತಾವು ಓದಿದ ಪುಸ್ತಕದ ಬಗ್ಗೆ ಬರೆದು ಇತರರನ್ನೂ ಪ್ರೇರೇಪಿಸುವ ಅನೇಕ ಓದುಗರಿದ್ದಾರೆ. ಯಕ್ಷಗಾನ ತಾಳಮದ್ದಳೆ ಎಂಬ ಜ್ಞಾನತಾಣದಲ್ಲಿ ಒಂದಿನ ದೇವುಡು ನರಸಿಂಹ ಶಾಸ್ತ್ರಿಗಳ ’ಮಹಾಬ್ರಾಹ್ಮಣ’ ಕೃತಿಯ ಬಗ್ಗೆ ಬಿಸಿ ಬಿಸಿ ಚರ್ಚೆಯಾಯಿತು. ಈಗಾಗಲೇ ಆ ಕೃತಿಯ ಬಗ್ಗೆ ಕೇಳಿದ್ದೆ. ನನ್ನ ಭವಿಷ್ಯದ ಓದಿನ ಪಟ್ಟಿಯಲ್ಲಿ ಅದೂ ಇತ್ತು. ಆದರೆ ಈ ಚರ್ಚೆಯ ನಂತರ ಕುತೂಹಲ ತಡೆಯಲಾರದೆ ಮೈಸೂರಿನ ಶ್ರೀನಿಧಿ ಸುಬ್ರಹ್ಮಣ್ಯ ಅವರಲ್ಲಿ ದೇವುಡು ಅವರ ಮೂರೂ ’ಮಹಾ’ ಪುಸ್ತಕಗಳನ್ನು ಕಳಿಸುವಂತೆ ಕೋರಿದೆ. ಅವುಗಳಲ್ಲಿ ಮಹಾಬ್ರಾಹ್ಮಣವನ್ನು ಓದಿ ಮುಗಿಸಿದ್ದೇನೆ.

ಈಗಾಗಲೇ ಗೊತ್ತಿರುವ ಪುರಾಣದ ಕಥೆಯನ್ನು ಆಧರಿಸಿ ಕಾದಂಬರಿಯನ್ನು ರಚಿಸುವುದು ಸುಲಭದ ಮಾತಲ್ಲ. ಲೇಖಕ ಮಾಡುವ ಮಾರ್ಪಾಡುಗಳು ಸಹೃದಯರಿಗೆ ಪಥ್ಯವಾದರೆ ಮಾತ್ರ ಕಾದಂಬರಿ ಯಶಸ್ವಿಯಾಗುತ್ತದೆ. ಮಾರ್ಪಾಡನ್ನು ಮಾಡದೆ ಹೋದರೆ ಅದು ಕೇವಲ ಸಂಕಥನವಾದೀತು. ಆ ನಿಟ್ಟಿನಲ್ಲಿ ’ಮಹಾಬ್ರಾಹ್ಮಣ’ ಕಾದಂಬರಿ ಯಶಸ್ವಿಯಾಗಿದೆ ಎಂಬುದು ನಿಸ್ಸಂಶಯ.

ಕೌಶಿಕ ಎಂಬ ಲೋಭಿ ರಾಜ ವಿಶ್ವಾಮಿತ್ರನೆಂಬ ಲೋಕೋಪಕಾರಿ ಮುನಿಯಾಗುವುದು ಈ ಕಾದಂಬರಿಯ ಕಥಾ ವಸ್ತು. ವಸಿಷ್ಠರ ಮೇಲಿನ ದ್ವೇಷವು ಪ್ರೀತಿಯಾಗಿ ಪರಿವರ್ತನೆಯಾಗಿ ಮುಂದೆ ಲೋಕೋಪಕಾರಕ್ಕಾಗಿಯೇ ತ್ರಿಶಂಕು ಸ್ವರ್ಗದ ನಿರ್ಮಾಣ, ಮೇನಕೆ ಹಾಗೂ ಘೃತಾಚಿಯರೊಂದಿಗೆ ಸಮಾಗಮ, ಶುನಶ್ಶೇಫನ ಉದ್ಧಾರ, ಸ್ವಪುತ್ರರ ಬಲಿದಾನ ಹಾಗೂ ಕೊನೆಯಲ್ಲಿ ಗಾಯತ್ರೀ ಮಂತ್ರದ ಸಾಕ್ಷಾತ್ಕಾರವಾಗಿ ವಿಶ್ವಾಮಿತ್ರ ಬ್ರಹ್ಮರ್ಷಿತ್ವ ಪಡೆಯಲು ಕ್ರಮಿಸಿದ ದುರ್ಗಮ ಮಾರ್ಗ ಸುಂದರವಾಗಿ ಚಿತ್ರಿತವಾಗಿದೆ. ಆನುಷಂಗಿಕವಾಗಿ ಬರುವ ಗಾರ್ಗಿ ವಾಚಕ್ನವಿ ಹಾಗೂ ಲೋಪಾಮುದ್ರೆಯರ ಪಾತ್ರಗಳು ವೈದಿಕ ಕಾಲದ ಬ್ರಹ್ಮವಾದಿನಿಯರ ಗರಿಮೆಯನ್ನು ಸಾರುತ್ತವೆ.

ಕೌಶಿಕನು ವಿಶ್ವಾಮಿತ್ರನಾಗುವಾಗ ಅವನಲ್ಲಿ ಆಗುವ ಅಂತರಂಗದ ಪರಿವರ್ತನೆಯ ನಿರೂಪಣೆ ತುಂಬಾ ಹೃದ್ಯವಾಗಿದೆ. ಆ ಪರಿವರ್ತನೆಯಲ್ಲಿ ದೇವತೆಗಳ ಪಾತ್ರ ಸ್ಪಷ್ಟವಾಗಿ ತೋರಿದರೂ ಅದೊಂದು ಅತಿಮಾನುಷ ಪರಿವರ್ತನೆ ಎನಿಸದೆ ಮಾನವಮಾತ್ರರೂ ಸಾಧಿಸಬಹುದಾದದ್ದು ಎನಿಸುತ್ತದೆ. ದುರ್ಗಮವಾದ ವೇದಾಂತತತ್ತ್ವವೂ ಪ್ರಕೃತಿಯೊಂದಿಗೆ ಸಮನ್ವಯಗೊಂಡು ಚೇತೋಹಾರಿ ಮಣಿಗಳಂತೆ ಅಲ್ಲಲ್ಲಿ ಪೋಣಿಸಲ್ಪಟ್ಟಿವೆ. ಕಥೆ ಹಳೆಯದೇ ಆದರೂ ಸಾಂಪ್ರದಾಯಿಕ ಭಾಷಾ ಶೈಲಿಯನ್ನು ಬಳಸದೆ ಸಮಕಾಲೀನ ಶೈಲಿಯನ್ನು ಅನುಸರಿಸಿರುವುದು ಹೆಚ್ಚು ಆಪ್ಯಾಯಮಾನವೆನಿಸುತ್ತದೆ.

ದೇವುಡು ಅವರದು ಅತ್ತ ಬಲು ಕಠಿಣವೂ ಅಲ್ಲದ ಇತ್ತ ಬಹು ಸರಳವೂ ಅಲ್ಲದ ’ವೈದರ್ಭೀ’ ಶೈಲಿ. ಓಜಸ್ಸು, ಮಾಧುರ್ಯ ಹಾಗೂ ಪ್ರಸಾದ ಗುಣಗಳ ಹದವಾದ ಮಿಶ್ರಣ ಶೃಂಗಾರಾದಿ ನವರಸಗಳೊಂದಿಗೆ ಬೆರೆತು ಸಿದ್ಧವಾದ ರಸಪಾಕ ಈ ಕಾದಂಬರಿ.

ವ್ಯಕ್ತಿಯೊಬ್ಬನನ್ನು ಅರಿಯುವುದರ ಬಗ್ಗೆ ಲೇಖಕರು ಬರೆದಿದ್ದು ಮನತಟ್ಟಿತು. – “ನಾವು ಒಬ್ಬರನ್ನು ಬಲ್ಲೆವು ಎನ್ನುವುದು ಏನು? ಅವನ ಆಶೋತ್ತರಗಳು, ಅವನ ಬೇಕು-ಬೇಡಗಳು ಇಷ್ಟೇ ನಮಗೆ ತಿಳಿದಿರುವುದು. ಅಲ್ಲಿಂದಾಚೆಗೆ ನಮಗೆ ತಿಳಿದಿರುವುದೇನು? ಹಾಗಾದರೆ ಬೇಕು ಬೇಡ ಎರಡೂ ಬಿಟ್ಟರೆ ವ್ಯಕ್ತಿಯಲ್ಲಿ ಏನೂ ಉಳಿದೇ ಇಲ್ಲವೇನು?” ಇಂತಹ ಸರಳ ಸುಂದರ ಜೀವನ ಸತ್ಯಗಳು ಅಲ್ಲಲ್ಲಿ ದೃಗ್ಗೋಚರವಾಗುತ್ತವೆ.

ಗ್ರಂಥದ ಕೊನೆಯಲ್ಲಿ ಸಂಧ್ಯಾವಂದನೆಯ ಬಗ್ಗೆ ವಿಚಾರಪೂರ್ಣ ಬರಹವಿದೆ. ದೇವುಡು ಪ್ರತಿಷ್ಠಾನ ಪ್ರಕಟಿಸಿರುವ ಈ ಗ್ರಂಥದಲ್ಲಿ ೩೦೯ ಪುಟಗಳಿವೆ. ಬೆಲೆ ಕೇವಲ ೨೦೦ ರೂಪಾಯಿಗಳು. ಪ್ರತಿ ಪುಟದಲ್ಲೂ ಹೇರಳವಾಗಿ ದೊರಕುವ ಮುದ್ರಣದೋಷಗಳು ಓದಿನ ಆನಂದಕ್ಕೆ ತಡೆಯೊಡ್ಡುತ್ತವೆ. ದೇವುಡು ಪ್ರತಿಷ್ಠಾನ ಕರಡು ತಿದ್ದುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ.

ಕೊನೆಗೊಂದು ಜಿಜ್ಞಾಸೆ:

ಈ ಜಿಜ್ಞಾಸೆ ಇರುವುದು ಕೃತಿಯ ಹೆಸರಿನ ವಿಷಯದಲ್ಲಿ. ಈ ಶ್ಲೋಕವನ್ನು ಗಮನಿಸಿ –

ಶಂಖೇ ತೈಲೇ ತಥಾ ಮಾಂಸೇ ವೈದ್ಯೇ ಜ್ಯೌತಿಷಕೇ ದ್ವಿಜೇ |
ಯಾತ್ರಾಯಾಂ ಪಥಿ ನಿದ್ರಾಯಾಂ ಮಹಚ್ಛಬ್ದೋ ನ ದೀಯತೇ ||

ಈ ಶ್ಲೋಕದ ಮೂಲ ತಿಳಿದಿಲ್ಲ. ಆದರೆ ಇದರ ಪ್ರಕಾರ ಬ್ರಾಹ್ಮಣ ವಾಚ್ಯ ಶಬ್ದಗಳೊಂದಿಗೆ ’ಮಹಾ’ ಶಬ್ದವನ್ನು ಬಳಸಬಾರದು. ’ಮಹಾಬ್ರಾಹ್ಮಣ’ ಎಂಬ ಪದ ನಿಂದಾವಚನವಾಗುತ್ತದೆ. ಸ್ವಪ್ನವಾಸವದತ್ತ ನಾಟಕದ ಎರಡನೆಯ ಅಂಕದಲ್ಲಿ ಉದಯನ ಮಹಾರಾಜ ವಿದೂಷಕನನ್ನು ಈ ಪದದ ಮೂಲಕ ನಿಂದಿಸುತ್ತಾನೆ. ಹಾಗಿರುವಾಗ ತನ್ನ ಸಾಧನೆಯ ಮೂಲಕ ಬ್ರಾಹ್ಮಣ್ಯವನ್ನು ಪಡೆದ ವಿಶ್ವಾಮಿತ್ರನನ್ನು ಮಹಾಬ್ರಾಹ್ಮಣನೆಂದು ಕರೆದಿದ್ದು ಎಷ್ಟು ಸರಿ?

ದಯವಿಟ್ಟು ಬಲ್ಲವರು ತಿಳಿಸಿ.

ಪುಸ್ತಕಾನುಸಂಧಾನ: ಮಹಾಬಲ ಭಟ್, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...