Thursday, November 15, 2018

ಪುರಾಣವೈರಾಗ್ಯನ್ಯಾಯ


ಪುರಾಣವೈರಾಗ್ಯನ್ಯಾಯ

ಪುರಾಣಾಂತೇ ಶ್ಮಶಾನಾಂತೇ ಮೈಥುನಾಂತೇ ಚ ಯಾ ಮತಿ:|
ಸಾ ಮತಿಃ ಸರ್ವದಾ ಸ್ಯಾತ್ ಚೇತ್ ಕೋ ನ ಮುಚ್ಯೇತ ಬಂಧನಾತ್||

ದೇವ ಮಂದಿರ, ಭಜನೆ ಪ್ರಸಾದಗಳು ಜೀವನದ ಅಲಂಕಾರಗಳು. ಮನಸ್ಸನ್ನು ಉದ್ಧರಿಸಬಲ್ಲವು. ನಮ್ಮ ಭಾವವನ್ನು ಕ್ಷುಲ್ಲಕ ಜಗತ್ತಿನಿಂದ ಒಂದು ಕ್ಷಣ ಮೇಲಕ್ಕೊಯ್ಯುವವು ಎನ್ನುತ್ತಾರೆ ಡಿವಿಜಿ. ಪ್ರಾಪಂಚಿಕ ನಶ್ವರತೆಯನ್ನು ಮನದಟ್ಟು ಮಾಡಿಸಿ ಪರಮಾರ್ಥ ಚಿಂತನೆಯತ್ತ ಮಾನವನನ್ನು ಒಯ್ಯುವ ಕಾರ್ಯವನ್ನು ಪುರಾಣಗಳು ಮಾಡುತ್ತವೆ. ಪುರಾಣಶ್ರವಣಕ್ಕೆ ಕುಳಿತಾಗ ಪುರಾಣಿಕರ ಮಾತನ್ನು ಕೇಳಿ ಒಂದು ನಿಟ್ಟುಸಿರು ತೆಗೆದು ’ಹೌದಲ್ವೆ? ಈ ಜೀವನ ನಶ್ವರ’ ಎಂಬ ಭಾವ ಬರುತ್ತದೆ. ದೇವಾಲಯದಲ್ಲಿ ಪುರಾಣವನ್ನು ಕೇಳಿ ಮನೆಗೆ ಬರುವಷ್ಟರಲ್ಲಿ ಆ ವೈರಾಗ್ಯಭಾವ ಮಾಯವಾಗಿ ಮತ್ತೆ ಸಂಸಾರದ ಮೋಹ ಆವರಿಸಿರುತ್ತದೆ.

ಶ್ಮಶಾನಕ್ಕೆ ಹೆಣ ಸುಡಲು ಹೋದವರ ಅವಸ್ಥೆಯೂ ಹೀಗೆಯೇ. ಅಂತ್ಯೇಷ್ಟಿಯ ಕೆನ್ನಾಲಿಗೆಯಂತೆ ಮನದಲ್ಲಿ ಪ್ರಜ್ವಲಿಸುವ ವೈರಾಗ್ಯಭಾವವು ಚಿತೆಯ ಬಿಸಿ ಆರುವ ಮೊದಲೇ ಮಾಯವಾಗಿರುತ್ತದೆ.

ಭೋಗದ ಕೊನೆಯಲ್ಲೂ ಜುಗುಪ್ಸೆಯ ವೈರಾಗ್ಯ ಆವರಿಸುತ್ತದೆ. ಅದೂ ಕೂಡ ಕ್ಷಣ ಭಂಗುರವೇ.

ವೈರಾಗ್ಯ ಸ್ಥಿರವಾಗಿದ್ದರೆ ಚೆನ್ನ. ”ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ’ ಎಂದು ಬೇಡಿದ ಆಚಾರ್ಯ ಶಂಕರರನ್ನು ಅನುಸರಿಸೋಣ.  ಸರ್ವದನಾದ ಭಗವಂತನಲ್ಲಿ ಬೊಗಸೆ ಭತ್ತ ಬೇಡುವ ಬದಲು ಅನಂತ ವೈರಾಗ್ಯವನ್ನು ಬೇಡೋಣ.

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...