Thursday, March 28, 2024

ನವೀನ ಭಟ್ಟರ ನವೀನ ಶೈಲಿಯ ಕೃತಿ ಕಥಾಗತ

ನವೀನ ಭಟ್ಟ ಗಂಗೋತ್ರಿಯವರ ನವೀನ ಪುಸ್ತಕ ಕಥಾಗತ ಇತ್ತೀಚೆಗೆ ಬಿಡುಗಡೆಯಾದ ಒಂದು ವಿಶಿಷ್ಟ ಪುಸ್ತಕ. ಹೊತ್ತಿಗೆಯ ಹೆಸರೇ ಹೇಳುವಂತೆ ಕಥೆಯಲ್ಲಿ ಅಡಕವಾದ ಇನ್ನೇನೋ ಇಲ್ಲಿ ಮಹತ್ತ್ವವನ್ನು ಹೊಂದಿದೆ. ವಿಷಯ ನಿರೂಪಣೆಗೆ ಸಹಾಯಕವಾಗಿ ಕಥೆ ಕೆಲಸ ಮಾಡುತ್ತದೆ.

ಲೇಖಕರು ನಮ್ಮ ರಾಷ್ಟ್ರದ ಇತಿಹಾಸದ ಕುರಿತಾಗಿ ಅನೇಕ ಗ್ರಂಥಗಳನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ಬರೆದ ವಿಶಿಷ್ಟ ಪುಸ್ತಕ ಇದು. ಇತಿಹಾಸ ಎಂದರೆ ಕೇವಲ ಅಂಕಿ-ಅಂಶಗಳಲ್ಲ. ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸಕ್ಕೆ ಅದರದೇ ಮಹತ್ತ್ವವಿದೆ. ನಮ್ಮ ಕಲೆ, ಧರ್ಮ, ಸಂಸ್ಕೃತಿಗಳ ವಿಕಾಸ ಇತಿಹಾಸದ ಅವಿಭಾಜ್ಯ ಅಂಗ. ಆದರೆ ಇವೆಲ್ಲ ಇತಿಹಾಸದ ಬೋಧನೆಯ ಭಾಗವಾಗದೆ ಇರುವುದು ನಮ್ಮ ದೌರ್ಭಾಗ್ಯ. ಹಾಗಾಗಿ ಲೇಖಕರು ತಮ್ಮದೇ ಆದ ಶೈಲಿಯಲ್ಲಿ ನಮ್ಮ ರಾಷ್ಟ್ರದ ಇತಿಹಾಸದ ಕೆಲವು ಅಂಶಗಳನ್ನು ಇಲ್ಲಿ ನಿರೂಪಿಸಿದ್ದಾರೆ.

೧೪೨ ಪುಟಗಳಲ್ಲಿ ಎಂಟು ಅಧ್ಯಾಯಗಳಲ್ಲಿ ವಿಸ್ತರಿಸಿದೆ ಈ ಕಥನ. ’ನೆನೆವುದೆನ್ನ ಮನಂ’ ಎಂಬ ಮೊದಲ ಅಧ್ಯಾಯ ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯಸ್ಥಾಪಕರಾದ ಕದಂಬರಿಗೆ ಸಂಬಂಧಿಸಿದ್ದು. ’ಕಾಂಚೀ ಕಾಂತಿಮತೀ’ ಎಂಬ ಎರಡನೆಯ ಅಧ್ಯಾಯದಲ್ಲಿ ತಮಿಳು ಹಾಗೂ ಸಂಸ್ಕೃತದ ಮಧ್ಯೆ ಇರುವ ತರತಮವಾದವನ್ನು ಉಲ್ಲೇಖಿಸುತ್ತ ಕಥೆಯನ್ನು ಪಲ್ಲವರ ಶಿಲ್ಪಕಲಾಪೋಷಣೆಯತ್ತ ಹೊರಳಿಸಿದ್ದಾರೆ. ಬಹಳ ಆಸಕ್ತಿಯಿಂದ ಓದಿಸಿಕೊಂಡು ಹೋಗುವಂತೆ ಕಥೆಯನ್ನು ಹೆಣೆದಿದ್ದಾರೆ ಈ ಅಧ್ಯಾಯದಲ್ಲಿ.

ಮೂರನೆಯ ಅಧ್ಯಾಯ ’ಮಾಗಧಿಯ ಕಂಗಳಲ್ಲಿ’ ಎಂಬ ಹೆಸರಿನೊಂದಿಗೆ ನಲಂದಾ ವಿಶ್ವವಿದ್ಯಾಲಯದ ಏಳು ಬೀಳುಗಳ ಬಗ್ಗೆ, ಮಗಧಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ. ನನಗೆ ಅತ್ಯಂತ ಹೆಚ್ಚು ಖುಷಿ ಕೊಟ್ಟ ಅಧ್ಯಾಯ ಇದು. ನಾಲ್ಕನೆಯ ಅಧ್ಯಾಯದ ಹೆಸರು ’ಚಿನ್ನದ ಅಂಚಿನ ರೇಶಿಮೆ ದಾರಿ’. ಚೀನಾದಿಂದ ರೇಶಿಮೆ ಸಾಗಿ ಬಂದ ದಾರಿಯನ್ನು ವಿಶ್ಲೇಷಿಸುತ್ತ ಅದೊಂದು  ವಾಣಿಜ್ಯ ವ್ಯವಹಾರವಾಗಿರದೆ ಸಾಂಸ್ಕೃತಿಕ ಪಯಣವಾಗಿದೆ ಎಂದು ಸುಂದರವಾಗಿ ನಿರೂಪಿಸಿದ್ದಾರೆ. ಹ್ಯು-ಎನ್-ತ್ಸಾಂಗ್ ಎಂದು ಪ್ರಸಿದ್ಧನಾದ ಸುಅಂಗ್ಸಾಂಗ್ ನ ಪ್ರಯಾಣವನ್ನು ಸೊಗಸಾಗಿ ವರ್ಣಿಸಿದ್ದಾರೆ.

ಐದನೆಯ ಅಧ್ಯಾಯ ’ಕಣ್ಣು ಕೋರೈಸಿ ಪೊಣ್ಮಿದುದು ಅಗ್ನಿಚಿತ್ತ’ ಎಂಬ ಹೆಸರಿನೊಂದಿಗೆ ಹೊಯ್ಸಳರು ಚೆನ್ನಕೇಶವದೇವಾಲಯದ ನಿರ್ಮಾಣ ಮಾಡಿದ ರೋಚಕ ಕಥೆಯನ್ನು ತೆರೆದಿಡುತ್ತದೆ. ’ಆನೆ ಬಂತೊಂದಾನೆ’ ಎಂಬ ಆರನೆಯ ಅಧ್ಯಾಯ   ವಿಜಯನಗರ ಸಾಮ್ರಾಜ್ಯದ ವೈಭವ ಹಾಗೂ ಪತನಕ್ಕೆ ಸಂಬಂಧಿಸಿದ ಕಥೆಯನ್ನು ಒಳಗೊಂಡಿದೆ. ’ಭಾಗಮತಿಯೆಂಬ ಶಾಯರಿ’ ಎಂಬ ಶೀರ್ಷಿಕೆಯ ಏಳನೆಯ ಅಧ್ಯಾಯ ಹೈದರಾಬಾದ್ ನಗರದ ಇತಿಹಾಸಕ್ಕೆ ಸಂಬಂಧಿದ್ದು. ಎಂಟನೆಯ ಕೊನೆಯ ಅಧ್ಯಾಯದಲ್ಲಿ ’ಸಾವಿರದೊಂದನೆಯ ದೇವರು’ ಎಂಬ ಶೀರ್ಷಿಕೆಯಡಿ ಯಹೂದಿಗಳ ಜೀವಕ್ಕೆ ಬಂದ ಅಪಾಯ, ಗೋವಾದ ಇಂಕ್ವಿಸಿಶನ್, ಕಾಶ್ಮೀರದ ಜೆನೊಸೈಡ್ ಮುಂತಾದ ಅನೇಕ ವಿಷಯಗಳು ಕಥಾರೂಪದಲ್ಲಿ ನಿರೂಪಿತವಾಗಿವೆ. 

ಲೇಖಕ ನವೀನ ಭಟ್ಟರು ಕೊಯಮತ್ತೂರಿನ ಅಮೃತಾ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ತಮ್ಮ ಸಂಶೋಧನೆ ಹಾಗೂ ಸಂಶೋಧನೆಯ ಮಾರ್ಗದರ್ಶನದ ಅನುಭವಗಳನ್ನು ಈ ಕೃತಿಯಲ್ಲಿ ಎರಕ ಹೊಯ್ದಿದ್ದಾರೆ. ನಿರೂಪಣೆಯ ವಿಷಯಕ್ಕೆ ತಕ್ಕಂತಹ ಗಟ್ಟಿಯಾದ ಭಾಷೆ ಇವರದ್ದು. ಅನೇಕ ಕೃತಿಗಳ ರಚನೆಯಿಂದ ಮಾಗಿದ ಶೈಲಿ. ಪ್ರತಿಯೊಂದು ಅಧ್ಯಾಯವನ್ನು ಓದಿದಾಗಲೂ ಈ ವಿಷಯದಲ್ಲಿ ಇನ್ನಷ್ಟು ಬರೆಯಬಹುದಿತ್ತು ಎನಿಸುತ್ತದೆ. ಆದರೆ ಹೇಳಬೇಕಾದ ವಿಷಯವನ್ನು ಎಳೆದು ಜಗ್ಗಾಡದೆ ಸಂಕ್ಷಿಪ್ತವಾಗಿಯೇ ನಿರೂಪಿಸಿದ್ದಾರೆ. ಅಲ್ಲಲ್ಲಿ ಸಂಸ್ಕೃತಭೂಯಿಷ್ಠ ಪದಗಳು ಓದುಗರಿಗೆ ಕಾಠಿನ್ಯಭಾವವನ್ನು ಉಂಟುಮಾಡಿದರೆ ಆಶ್ಚರ್ಯವಿಲ್ಲ. ಬೆರಳೆಣಿಕೆಯಷ್ಟು ಕಡೆಗಳಲ್ಲಿ ಕಂಡು ಬರುವ ’ಉಪವಿಷ್ಟ ಭಂಗಿಯ ಮೂರ್ತಿ’ ಮುಂತಾದ ಪ್ರಯೋಗಗಳನ್ನು ನಿವಾರಿಸಬಹುದಿತ್ತು. ಒಟ್ಟಿನಲ್ಲಿ ಉತ್ತಮ ಗ್ರಂಥವೊಂದನ್ನು ಓದಿದ ಭಾವದೊಂದಿಗೆ ಮುಗಿಸಬಹುದಾದ ಕೃತಿ. ನಮ್ಮ ಮನೆಯ ಗ್ರಂಥಾಲಯಕ್ಕೂ ಶೋಭೆಯನ್ನು ಒದಗಿಸುವ ಉತ್ತಮ ಹೊತ್ತಿಗೆ.

ಕುಮಟಾದ ಸ್ವಸ್ತಿ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಪ್ರಕಾಶನದ ದಶಮಾನೋತ್ಸವ ಪ್ರಕಟಣೆ ಇದು. ಸುಂದರ ಮುಖಚಿತ್ರ, ತಪ್ಪಿಲ್ಲದ ಮುದ್ರಣ ಕೃತಿಯ ಮೌಲಿಕತೆಯನ್ನು ಹೆಚ್ಚಿಸಿದೆ.   ಬೆಲೆ ೧೫೦ ರೂಪಾಯಿಗಳು. ಇಂತಹ ಕೃತಿಗಳನ್ನು ಓದಿ ಮಥಿಸಿ, ಚರ್ಚಿಸಬೇಕಾದ್ದು ಇಂದಿನ ಆವಶ್ಯಕತೆ. ಆಸಕ್ತರು 9483617879  ಈ ಸಂಖ್ಯೆಯನ್ನು ಸಂಪರ್ಕಿಸಿ ಪುಸ್ತಕವನ್ನು ತರಿಸಿಕೊಳ್ಳಬಹುದು.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...