Thursday, March 28, 2024

ಯುವಕರಿಗೆ ಬೇಕು ಆತ್ಮಸ್ತೈರ್ಯ ಮತ್ತು ಸಮಚಿತ್ತತೆ

ಶೈಶವದಿಂದ ಕೌಮಾರ್ಯ, ಯೌವನಾವಸ್ಥೆಗಳಿಗೆ ವಯಸ್ಸು ಹೊರಳುವ ಹೊತ್ತಿಗೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿಗಳು ಪರಿವರ್ತನೆಯನ್ನು ಹೊಂದುತ್ತವೆ. ಅಂತಹ ಪರಿವರ್ತನೆ ನೈಸರ್ಗಿಕವೇ ಆದರೂ ಸರಿಯಾದ ಮಾರ್ಗದಲ್ಲಿ ಆಗದಿದ್ದರೆ ವಿಕಾಸದ ಹೊಸ್ತಿಲಲ್ಲಿ ವಿಕಾರದ ದರ್ಶನವಾಗುವ ಸಂಭವವಿರುತ್ತದೆ.

ಇಪ್ಪತ್ತೊಂದನೆಯ ಶತಮಾನದ ಯುವಕರಿಗೆ ಬೆಟ್ಟವನ್ನೇ ಎತ್ತಿ ಹಾಕುವ ಸಾಮರ್ಥ್ಯವಿದೆ. ಎದುರಿಗೆ ಬಂದ ಶತ್ರುಗಳನ್ನು ಕೊಚ್ಚಿಹಾಕುವ ಅಧ್ಭುತ ಶೌರ್ಯವಿದೆ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕೆಚ್ಚೆದೆಯಿದೆ. ಆದರೆ ತನ್ನ ಒಳಗೆ ತನ್ನ ಆತ್ಮವನ್ನು ತಿನ್ನುವ ಸಣ್ಣ ಕ್ರಿಮಿಯ ವಿರುದ್ಧ ಹೋರಾಡುವ ಸಾಮರ್ಥ್ಯ ಕ್ಷೀಣಿಸುತ್ತಿದೆ. ಕಾರಣ ಏನು? ಚಿಂತಿಸಬೇಕಾದ ವಿಷಯ.

ಮಕ್ಕಳು ಹದಿನಾಲ್ಕು-ಹದಿನೈದು ವರ್ಷ ವಯಸ್ಸನ್ನು ತಲುಪಿದಾಗ ಇಂದು ಪಾಲಕರು ಕಟ್ಟೆಚ್ಚರ ವಹಿಸಬೇಕಾದ ಪರಿಸ್ಥಿತಿ ಇದೆ. ಅದು ಬಾಹ್ಯ ಆಕ್ರಮಣದ ಹೆದರಿಕೆಯಿಂದಲ್ಲ. ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯ ತುಮುಲಗಳು ನಡೆಯುತ್ತವೆ ಎಂದು ತಿಳಿಯದೆ ಮೂಡುವ ಭಯ. ಈ ಜಗತ್ತಿನಲ್ಲಿ ಪ್ರತಿ ೪೫ ಸೆಕೆಂಡುಗಳಿಗೆ ಒಂದು ಆತ್ಮಹತ್ಯೆ ನಡೆಯುತ್ತದಂತೆ. ಅದರಲ್ಲಿ ಹದಿಹರೆಯದವರ ಸಂಖ್ಯೆಯೇ ಹೆಚ್ಚು.

ಇದಕ್ಕೆಲ್ಲ ಕಾರಣಗಳನ್ನು ಹುಡುಕುತ್ತ ಹೋದರೆ ಒಬ್ಬೊಬ್ಬರದು ಒಂದೊಂದು ಕಾರಣ. ಒಬ್ಬನ ಕಾರಣವನ್ನು ಇನ್ನೊಬ್ಬರಿಗೆ ಅನ್ವಯಿಸುವಂತಿಲ್ಲ. ಕೆಲವೊಂದು ಬಾಹ್ಯ ಕಾರಣಗಳಾದರೆ ಇನ್ನು ಕೆಲವು ಆಂತರಿಕ. ಎಣೆಯಿಲ್ಲದೆ ವಿಶಾಲವಾಗುತ್ತಿರುವ ಸಮಾಜ ಒಂದೆಡೆಯಾದರೆ ಈ ಸಮಾಜದಲ್ಲಿ ’ನಾನು’ ಏನು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಅಸಹಾಯಕ ಸ್ಥಿತಿ ಇನ್ನೊಂದೆಡೆ.

ಕಾಲ ಬದಲಾಗಿದೆ. ತಂತ್ರಜ್ಞಾನ ಎಂಬ ದೈವೀ ಗುಣವನ್ನೂ ಆಸುರೀಗುಣವನ್ನೂ ಒಟ್ಟಿಗೇ ಹೊಂದಿರುವ ಮಾಯೆ ಜಗತ್ತನ್ನು ಆವರಿಸಿದೆ. ’ವಸುಧೈವ ಕುಟುಂಬಕಮ್’ ಎಂಬ ನಮ್ಮ ಪೂರ್ವಜರ ಪರಿಕಲ್ಪನೆಗೆ ಹೊಸ ಭಾಷ್ಯವನ್ನು ಈ ತಂತ್ರಜ್ಞಾನ ಬರೆಯುತ್ತಿದೆ. ’ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಎಂಬ ನುಡಿಯನ್ನು ಅನುಸರಿಸಿ ತಮ್ಮ ಅರಿವನ್ನು ಸಂಪೂರ್ಣ ಜಗತ್ತಿಗೆ ವಿಸ್ತರಿಸುವ ಭರದಲ್ಲಿ ಒಳ್ಳೆಯದೂ ಕೆಟ್ಟದ್ದೂ ನಮ್ಮೊಳಗೆ ಪ್ರವೇಶಿಸಿ ನೀರಕ್ಷೀರವಿಭಾಗ ಸಾಮರ್ಥ್ಯದ ಅಭಾವದಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿದೆ.

’ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ’ ಎಂಬ ಗೀತೆಯ ನುಡಿ ಇಂಥವರಿಗೇ ಅನ್ವಯಿಸುವಂಥದ್ದು. ಅತಿಯಾದ ಮೊಬೈಲ್ ಬಳಕೆ, ಆಹಾರಪದ್ಧತಿ, ಜೀವನಕ್ರಮಗಳಿಂದ ಮನುಷ್ಯನಲ್ಲಿ ಸಾತ್ತ್ವಿಕಗುಣ ಕ್ಷೀಣಿಸುತ್ತಿದೆ. ಅದರ ಸ್ಥಾನವನ್ನು ರಜೋಗುಣ ಆಕ್ರಮಿಸಿಕೊಳ್ಳುತ್ತಿದೆ. ಮನಸ್ಸು ಚಂಚಲವಾಗುತ್ತಿದೆ, ವ್ಯಗ್ರವಾಗುತ್ತಿದೆ. ಅದನ್ನು ನಿಯಂತ್ರಿಸುವ ದಾರಿ ಇಂದಿನ ಯುವ ಜನತೆಗೆ ತೋರುತ್ತಿಲ್ಲ. ಮಿತ್ರಸಮ್ಮಿತವಾಗಿ ಮಾರ್ಗದರ್ಶನ ಮಾಡುವ ಕೃಷ್ಣರನ್ನು ಕಾಣದೆ ಈ ಅರ್ಜುನರು ಪರಿತಪಿಸುತ್ತಿದ್ದಾರೆ.

ಇಂದಿನ ಯುವ ಜನತೆಯಲ್ಲಿ ದೇವರ ವಿಷಯದಲ್ಲಿ, ಆಧ್ಯಾತ್ಮ ವಿಷಯದಲ್ಲಿ ಏನೊ ಅಸಡ್ಡೆ. ಅವೆಲ್ಲ ನಿವೃತ್ತರಾದ ವೃದ್ಧರ ಸಮಯಯಾಪನೆಯ ಸಾಧನ ಎಂಬುದು ಕೆಲವರ ಅಭಿಪ್ರಾಯ. ಇಂದಿನ ಅವಾಂತರಗಳಿಗೆ ಅದೂ ಒಂದು ಕಾರಣ. ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಸ್ವಲ್ಪ ಕಾಲವನ್ನಾದರೂ ಇಂತಹ ಕೆಲಸಗಳಿಗೆ ಮೀಸಲಿಟ್ಟರೆ ಮನಸ್ಸನ್ನು ಸುಲಭವಾಗಿ ನಿಯಂತ್ರಿಸಬಹುದು. ಡಿ.ವಿ.ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಇದನ್ನು ಸೊಗಸಾಗಿ ಹೇಳಿದ್ದಾರೆ.

ದೇವಮಂದಿರ ಭಜನೆ ಪೂಜೆ ಪ್ರಸಾದಗಳು

ಜೀವನದಲಂಕಾರ ಮನಸಿನುದ್ಧಾರ|

ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲಕೊಯ್ವು

ದಾವುದಾದೊಡಮೊಳಿತು - ಮಂಕುತಿಮ್ಮ ||

ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಆತ್ಮನಿರ್ವಹಣೆ (Self-Management) ಯ ವಿಷಯದಲ್ಲಿ ಸಾಕಷ್ಟು ವಿಚಾರಗಳು ಸಿಗುತ್ತವೆ. ನಮ್ಮ ಉಪನಿಷತ್ತುಗಳು ಹಾಗೂ ಭಗವದ್ಗೀತೆ ಪ್ರಣೀತವಾದದ್ದು ಈ ಉದ್ದೇಶದಿಂದಲೇ. ಕಠೋಪನಿಷತ್ತಿನ ನಚಿಕೇತನಾಗಲಿ, ಛಾಂದೋಗ್ಯ ಉಪನಿಷತ್ತಿನ ಶ್ವೇತಕೇತುವಾಗಲೀ ಭಗವದ್ಗೀತೆಯ ಅರ್ಜುನನಾಗಲೀ ವಿಭಿನ್ನ ಸಂದರ್ಭಗಳಲ್ಲಿ ನಮ್ಮನ್ನೇ ಪ್ರತಿನಿಧಿಸುತ್ತಾರೆ. ಇಂದು ಇಂತಹ ಕಥೆಗಳ ಅನುಸಂಧಾನ ಮನೆಗಳಲ್ಲಿ ನಡೆಯುತ್ತಿಲ್ಲ. ಎಲ್ಲವನ್ನೂ ಟಿ.ವಿ. ಎಂಬ ಮಾಯಾ ಪೆಟ್ಟಿಗೆ, ಧಾರಾವಾಹಿಯೆಂಬ ಮನೆಹಾಳು ಕಥೆಗಳ ಪ್ರವಾಹ ಕೊಚ್ಚಿಹಾಕುತ್ತಿದೆ. ಮಕ್ಕಳಿಗೆ ಸ್ವಲ್ಪಮಟ್ಟಿಗಾದರೂ ಆಧ್ಯಾತ್ಮದಲ್ಲಿ, ನಮ್ಮ ಪ್ರಾಚೀನ ಸಂಸ್ಕೃತಿಯ ವಿಷಯದಲ್ಲಿ ಮಾರ್ಗದರ್ಶನ ದೊರೆತರೆ ಸಮಾಜದ ಪಿಡುಗು ಕಡಿಮೆಯಾಗಬಹುದು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ “ಉದ್ಧರೇದಾತ್ಮನಾತ್ಮಾನಂ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ತನ್ನನ್ನು ತಾನೇ ಉದ್ಧರಿಸಿಕೊಳ್ಳಬೇಕು. ’ನಾನು’ ಎನ್ನುವ ಕಲ್ಪನೆ ಮೂಡುವ ಹದಿಹರೆಯದಲ್ಲಿ ಈ ಮಾತು ಗಮನಾರ್ಹವಾಗುತ್ತದೆ. ಅಹಂಕಾರವಾಗಿ ಪರಿವರ್ತನೆಯಾಗಬಾರದ ಸ್ವಾಭಿಮಾನ ರೂಪುಗೊಳ್ಳುವ ಹೊತ್ತದು. ತಾನು ಮುಂದೆ ಜೀವನದಲ್ಲಿ ಏನು ಮಾಡಬೇಕು ಎಂಬುದು ಮೂರ್ತಸ್ವರೂಪವನ್ನು ಪಡೆದುಕೊಳ್ಳುವ ಸಮಯವದು. ಹಾಗಾಗಿ ಆ ವಯಸ್ಸು ಅತ್ಯಂತ ಮಹತ್ತ್ವದ್ದೆನಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮನಸ್ಸನ್ನು ದೌರ್ಬಲ್ಯಕ್ಕೆ ಜಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ಆ ಹೊತ್ತಿನಲ್ಲಿ “ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ” ಎನ್ನುವ ಗೀತಾಚಾರ್ಯನ ಗರ್ಜನೆ ಮನದಲ್ಲಿ ಮೊಳಗಬೇಕು. ಜಗತ್ತಿನ ವಿಶ್ವರೂಪತೆಯನ್ನು ಕಂಡು ಸಂಭ್ರಾಂತರಾಗುವ ಬದಲು ತಾನು ’ಅತ್ಯತಿಷ್ಠದ್ದಶಾಂಗುಲಮ್’ ಎಂಬಂತೆ ತ್ರಿವಿಕ್ರಮನಾಗಿ ಬೆಳೆಯಲು ಯೋಜನೆಯನ್ನು ಹಾಕಬೇಕು.

ಬೆಳೆಯನ್ನು ಬೆಳೆಯುವಾಗ ಕಳೆಯನ್ನು ಕೀಳಬೇಕಾದ್ದು ಅನಿವಾರ್ಯ. ಇಲ್ಲವಾದರೆ ಕಳೆಯೇ ಬೆಳೆಯನ್ನು ನಾಶಪಡಿಸುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗವೆಂಬ ಕಳೆಗಳನ್ನು ಕಿತ್ತೊಗೆಯದಿದ್ದರೆ ಸಂಸ್ಕಾರದ ಬೆಳೆ ಬೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿಯೂ ಯುವ ಜನತೆ ಯೋಚಿಸಬೇಕಾದ ಆವಶ್ಯಕತೆಯಿದೆ.

ತಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದ ಗುರಿಯನ್ನು ಇಟ್ಟುಕೊಳ್ಳುವುದು ಹಾಗೂ ಅದನ್ನು ಮುಟ್ಟಲು ಸಾಧ್ಯವಾಗದೇ ಇದ್ದಾಗ ನಿರಾಶರಾಗುವುದು ಇಂದಿನ ಯುವ ಪೀಳಿಗೆಯ ಇನ್ನೊಂದು ಲಕ್ಷಣ. ಲಾಭಾಲಾಭಗಳಲ್ಲಿ, ಜಯಾಪಜಯಗಳಲ್ಲಿ ಸಮಚಿತ್ತತೆಯನ್ನು ಕಾಯ್ದುಕೊಳ್ಳುವ ಮನಸ್ಥಿತಿ ಎಲ್ಲರ ಆವಶ್ಯಕತೆ. ಮುಳುಗಿದ ಸೂರ್ಯ ಮತ್ತೆ ಉದಯಿಸುವಂತೆ, ಕ್ಷೀಣನಾದ ಚಂದ್ರ ಮತ್ತೆ ಪೂರ್ಣನಾಗುವಂತೆ, ಕತ್ತರಿಸಲ್ಪಟ್ಟ ಮರ ಮತ್ತೆ ಚಿಗಿತು ಬರುವಂತೆ ಸೋಲಿನಿಂದ ಗೆಲುವಿಗೆ ಹೋಗಬಹುದು ಎಂಬುದನ್ನು ಮರೆಯಬಾರದು. ಸಣ್ಣ ಸಣ್ಣ ಕಾರಣಗಳಿಗೆಲ್ಲ ಜೀವವನ್ನು ತೆಗೆದುಕೊಳ್ಳುವಷ್ಟು ದುರ್ಬಲರು ನಾವಾಗಬಾರದು. ಅಪಮಾನವನ್ನೂ ವಿಜಯವನ್ನಾಗಿ ಪರಿವರ್ತಿಸಿಕೊಳ್ಳುವ ಚಾಣಕ್ಯರು ನಾವಾಗಬೇಕು. ಅದರಂತೆಯೇ ಪುರಸ್ಕಾರ ಗೌರವಗಳನ್ನು ಪಡೆದಾಗ ಅತಿಯಾಗಿ ಬೀಗಬಾರದು. ಡಿವಿಜಿಯವರು ಮ್ಯಾಕ್ ಬೆತ್ ನಾಟಕದ ಅನುವಾದದ ಮುನ್ನುಡಿಯಲ್ಲಿ ಹೇಳುವಂತೆ

ಉತ್ಸವದೊಳೆಚ್ಚರಿರು

ಹೂ ಬನದ ತಳದಲ್ಲಿ ಹಾವು ಹರಿದೀತು

ಪ್ರೋತ್ಸಹನೆ ಕೇಳಿಬರೆ

ಪರೀಕ್ಷಿಸಿಕೋ ನಿನ್ನ

ಮೆಚ್ಚು ಮಿತಿಮೀರಲ್

ಹುಚ್ಚು ಹುಚ್ಚಾಯ್ತು

ಪ್ರೀತಿಯಲಿ ನೀತಿ ಸೆಲೆ

ಮರೆತು ಹೋದೀತು

ಗೆಲುವಿನಾತುರದಿ ಕಾಲ್

ಜಾರಿ ಕುಸಿದೀತು

ಉಪಸಂಹಾರ: ಯುವಜನತೆಯ ಇಂದಿನ ಸಮಸ್ಯೆಗೆ ಎದೆಗುಂದದ ಆತ್ಮಸ್ತೈರ್ಯ ಮತ್ತು ಸಮಚಿತ್ತತೆಯೇ ಪರಿಹಾರ. ಅದಕ್ಕೆ ಹಿರಿಯರ ಮಾರ್ಗದರ್ಶನವೂ ಅಗತ್ಯ. ಪಾಲಕರು ಮಕ್ಕಳಿಗೆ ಇದನ್ನು ಮಾತಿನಿಂದ ಬೋಧಿಸದೇ ತಾವೇ ಉದಾಹರಣೆಯಾಗಿ ನಿಲ್ಲಬೇಕು. ತಂದೆ ತಾಯಿಗಳೇ ನಿಜವಾದ ಹೀರೋ ಹೀರೋಯಿನ್ ಆಗಬೇಕು. ಶಾಲೆಯ ಶಿಕ್ಷಕರೂ ಕೇವಲ ಮಾಹಿತಿಯ ಪೆಟ್ಟಿಗೆಯಾಗದೆ ಮಾರ್ಗದರ್ಶನ ಮಾಡುವ ಸಮಾಲೋಚಕರಾಗಬೇಕು. ಆರೋಗ್ಯವಂತ ಸಮಾಜದ ನಿರ್ಮಾಣ ಎಲ್ಲರ ಹೊಣೆ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...