Tuesday, March 28, 2017

ಮಮತಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೨೯

ಮಮತಾ

ಬೃಹಸ್ಪತಿಯ ಸೋದರನ ಹೆಸರು ಉಚ್ಯಥ. ಅವನ ಪತ್ನಿಯೇ ಮಮತಾ. ವಿದ್ಯಾಸಂಪನ್ನೆ, ಗುಣವತಿ ಹಾಗೂ ರೂಪವತಿಯಾಗಿದ್ದಳು. ಅವಳು ಗರ್ಭಿಣಿಯಾಗಿದ್ದಾಗ ಬೃಹಸ್ಪತಿಯ ಕಾಮ ದೃಷ್ಟಿ ಅವಳ ಮೇಲೆ ಬಿತ್ತು. ಸೋದರನ ಪತ್ನಿಯು ಪಂಚಮಾತೆಯರಲ್ಲಿ ಒಬ್ಬಳು ಎಂಬುದನ್ನು ಮರೆತ. (ಮಿತ್ರಪತ್ನೀ ಗುರೋರ್ಪತ್ನೀ ಭ್ರಾತೃಪತ್ನೀ ತಥೈವ ಚ | ಪತ್ನೀಮಾತಾ ಸ್ವಮಾತಾ ಚ ಪಂಚೈತೇ ಮಾತರ: ಸ್ಮೃತಾ:||) ಕಾಮಕೇಳಿಗೆ ಕರೆದ. ಮಮತಾ ದಿಗ್ಭ್ರಾಂತಳಾದಳು. ತಿಳಿ ಹೇಳಿದಳು. ಕೇಳಲಿಲ್ಲ;ಕಾಮ ಅವನನ್ನು ಕಿವುಡಾಗಿಸಿತ್ತು. ಕೈಮುಗಿದು ಅಂಗಲಾಚಿದಳು. ಕಾಣಲಿಲ್ಲ; ಕಾಮಾಂಧನಾಗಿದ್ದ. ಆಕ್ರಮಿಸಿದ. ಆದರೆ ಮಮತಾಳ ಹೊಟ್ಟೆಯಲ್ಲಿದ್ದ ಗರ್ಭ ಅವನನ್ನು ತಡೆಯಿತು. ಕಾಮ ತಣಿಯದೆ ಕೋಪದ ರೂಪವನ್ನು ತಾಳಿತು. ’ಕಾಮಾತ್ ಕ್ರೋಧೋಭಿಜಾಯತೇ’ ಎನ್ನುವುದು ನಿಜವಾಯಿತು. ಸಿಟ್ಟಿನಿಂದ ’ನೀನು ಜನ್ಮಾಂಧನಾಗು’ ಎಂದು ಆ ಭ್ರೂಣಕ್ಕೆ ಶಾಪಕೊಟ್ಟ. ಆ ತಾಯಿ ಕಣ್ಣೀರು ಹಾಕಿದಳು. ತನ್ನದಲ್ಲದ ತಪ್ಪಿಗೆ ಆ ಮಗುವಿಗೆ ಈ ಶಿಕ್ಷೆ!

ಹುಟ್ಟಿದ ಮಗು ಸುಂದರವಾಗಿತ್ತು. ಆದರೆ ದೃಷ್ಟಿಹೀನವಾಗಿತ್ತು. ಮಮತಾ ಮರುಗಿದಳು. ಆದರೆ ಮಗುವಿನ ಮೇಲಿನ ಮಮತೆ ಕಡಿಮೆಯಾಗಲು ಸಾಧ್ಯವೆ? ಅವನಿಗೆ ತಾನೇ ದೃಷ್ಟಿಯಾದಳು. ಅವನ ಅಂತರ್ದೃಷ್ಟಿಯನ್ನು ತೆರೆಸಿದಳು. ಕೊಡಬೇಕಾದ ಸಂಸ್ಕಾರದಲ್ಲಿ ಎಳ್ಳಿನಿತೂ ಲೋಪ ಮಾಡಲಿಲ್ಲ. ಅದು ಶ್ರುತಿಕಾಲ. ಅಧ್ಯಯನಕ್ಕೆ ಕಣ್ಣಿಗಿಂತ ಕಿವಿ ಮುಖ್ಯವಾಗಿತ್ತು. ಹಾಗಾಗಿ ಮಗು ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳಲಿಲ್ಲ. ತಾಯಿಯ ಬೆಂಗಾವಲಿತ್ತು. ತಪಸ್ಸು ಮಾಡಿದ ಕೊನೆಗೆ ದೃಷ್ಟಿಹೀನನಾಗಿದ್ದರೂ ವೇದದೃಷ್ಟಾರನಾದ. ಅವನೇ ದೀರ್ಘತಮನೆಂಬ ಮಹರ್ಷಿ.


ವಿಕಲಚೇತನಮಗುವಿನ ತಾಯಿಯಾಗಿ ಮಮತಾಮಯಿ ಮಮತಾ ಮಾಡಿದ ಕಾರ್ಯ ಅಂತಹ ನೂರಾರು ತಾಯಿಯರಿಗೆ ಪ್ರೇರಣಾಸ್ಥಾನ.

ಮಹಾಬಲ ಭಟ್, ಗೋವಾ

No comments:

ನಾರೀವಿಧೇಯರು - ರಾಮ (ಉತ್ತರರಾಮಚರಿತಮ್)

ಭವಭೂತಿಯ ’ಉತ್ತರರಾಮಚರಿತಮ್’ ಕರುಣರಸಪೂರ್ಣವಾದ ನಾಟಕ. ಅದರ ನಾಯಕ ರಾಮ, ನಾಯಿಕೆ ಸೀತೆ. ರಾಮನಿಗೆ ಸೀತೆಯಲ್ಲಿರುವ ನಿರ್ವ್ಯಾಜ ಪ್ರೇಮ  ಈ ನಾಟಕದಲ್ಲಿ ಸುವ್ಯಕ್ತವಾಗಿದೆ. ರ...